

Machchhar Injury Marks: ಫ್ಲೈದುಬೈ ವಿಮಾನದ ಕಾಕ್ ಪಿಟ್ನಲ್ಲಿ ನಡೆದ ಭೀಕರ ದಾಳಿಯಲ್ಲಿ ಪವಾಡಸದೃಶ ಎಂಬಂತೆ ಜೀವಾಪಾಯದಿಂದ ಪಾರಾಗಿರುವ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಅವರ ಧೈರ್ಯದ ಕಥೆ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಒಮಾನ್ ಮೂಲದ ಕೋ ಪೈಲಟ್ ಕೊಡಲಿಯಿಂದ ತಲೆಯ ಮೇಲೆ ಪದೇ ಪದೇ ದಾಳಿ ನಡೆಸಿದ್ದರಿಂದ ಮಚ್ಚಾರ್ ಗಂಭೀರವಾಗಿ ಗಾಯಗೊಂಡಿದ್ದರು.
ನಿನ್ನೆ (ಬುಧವಾರ) ಯುಎಇ ಅಧ್ಯಕ್ಷರಿಂದ ಸನ್ಮಾನ ಸ್ವೀಕರಿಸುವ ವೇಳೆ ಅವರ ತಲೆಯ ಮೇಲಿದ್ದ ಆಳವಾದ ಗಾಯದ ಗುರುತುಗಳು ಹಾಗೂ ಶಸ್ತ್ರಚಿಕಿತ್ಸೆಯ ಸ್ಟೇಪಲ್ಸ್ಗಳು ವೈದ್ಯಕೀಯ ವಲಯದಲ್ಲೂ ಅಚ್ಚರಿಗೆ ಕಾರಣವಾಗಿದ್ದು, ಆ ಮೂಲಕ ಅವರು ಮೃತ್ಯುವಿನ ದವಡೆಯಿಂದ ಹೇಗೆ ಪಾರಾಗಿ ಬಂದರು ಎಂಬುದು ಈಗ ವೈದ್ಯರ ವಿಶ್ಲೇಷಣೆಯಿಂದ ಬಹಿರಂಗವಾಗಿದೆ.
ಕಳೆದ ಸೆಪ್ಟೆಂಬರ್ 30 ರಂದು ದುಬೈನಿಂದ ಟೆಲ್ ಅವೀವ್ ಕಡೆಗೆ ಹೊರಟಿದ್ದ ಫ್ಲೈದುಬೈ ಫ್ಲೈಟ್ FZ1073 ವಿಮಾನದಲ್ಲಿ ಈ ಘಟನೆ ನಡೆದಿತ್ತು. ವಿಮಾನದ ಕೋ ಪೈಲಟ್ ಹಮಾಮ್ ಅಲ್-ಹಮ್ಮಮಿ, ಅಲ್-ಖೈದಾ ಉಗ್ರರ ಸಿದ್ಧಾಂತಕ್ಕೆ ಪ್ರಭಾವಿತನಾಗಿ ಕಾಕ್ಪಿಟ್ ಒಳಗೆ ತುರ್ತು ಸಂದರ್ಭದಲ್ಲಿ ಬಳಸುವ ಕೊಡಲಿಯಿಂದ ಮಚ್ಚಾರ್ ಅವರ ತಲೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದನು. ತೀವ್ರ ರಕ್ತಸ್ರಾವವಾಗಿ, ಕಣ್ಣು ಮಂದಗೊಂಡು, ಪ್ರಜ್ಞೆ ತಪ್ಪುವ ಹಂತದಲ್ಲಿದ್ದರೂ ಧೃತಿಗೆಡದ ಮಚ್ಚಾರ್, ಹೇಗೋ ಕಾಕ್ಪಿಟ್ ಬಾಗಿಲು ತೆಗೆದು ಪ್ರಯಾಣಿಕರ ಸಹಾಯದಿಂದ ಉಗ್ರ ಕೋ ಪೈಲಟ್ನನ್ನು ಮಟ್ಟಹಾಕಿ ದೊಡ್ಡ ದುರಂತವನ್ನು ತಪ್ಪಿಸಿದ್ದರು.
ಆದರೆ, ಕೇವಲ ಕಾಕ್ಪಿಟ್ ದಾಳಿಯಷ್ಟೇ ಅಲ್ಲದೆ, ಆಪರೇಷನ್ ಥಿಯೇಟರ್ನಲ್ಲೂ ಮಚ್ಚಾರ್ ಎರಡನೇ ಬಾರಿ ಸಾಕ್ಷಾತ್ ಮೃತ್ಯುವಿನ ವಿರುದ್ಧ ಹೋರಾಡಿ ಗೆದ್ದುಬಂದಿದ್ದಾರೆ ಎಂದು ನರಶಸ್ತ್ರಚಿಕಿತ್ಸಕರು ತಿಳಿಸಿದ್ದಾರೆ.
ಅಬುಧಾಬಿಯಲ್ಲಿ ಅಕ್ಟೋಬರ್ 27 ರಂದು ನಡೆದ ಸಮಾರಂಭದಲ್ಲಿ ಯುಎಇ ಅಧ್ಯಕ್ಷ ಶೇಕ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಹಾಗೂ ಅವರ ಸಿಬ್ಬಂದಿಗೆ ಫಸ್ಟ್ ಕ್ಲಾಸ್ ಆರ್ಡರ್ ಆಫ್ ಜಾಯೆದ್ II ಪ್ರಶಸ್ತಿ ನೀಡಿ ಗೌರವಿಸಿದ್ದರು. ಈ ವೇಳೆ ಮಚ್ಚರ್ ತಲೆಯ ಮೇಲಿದ್ದ ಗುರುತುಗಳನ್ನು ಕಂಡ ಅಮೆರಿಕದ ಟೆನ್ನೆಸಿ ಮೂಲದ ನರಶಸ್ತ್ರಚಿಕಿತ್ಸಕ ಡಾ. ಸನಾತ್ ದೀಕ್ಷಿತ್, ಇದು ಅತ್ಯಂತ ಗಂಭೀರವಾದ ಆಕ್ಸಿಪಿಟಲ್ ಕಾಂಪೌಂಡ್ ಡಿಪ್ರೆಸ್ಡ್ ಸ್ಕಲ್ ಫ್ರಾಕ್ಚರ್ (ತಲೆಬುರುಡೆ ಮುರಿತ) ಎಂದು ವಿವರಿಸಿದ್ದಾರೆ. ಸಿಡ್ನಿ ಮೂಲದ ಡಾ. ಸೋನು ಭಾಸ್ಕರ್ ಕೂಡ ಇದು ತೀವ್ರ ಸ್ವರೂಪದ ಮೆದುಳಿನ ಗಾಯ ಹಾಗೂ ಕನಿಷ್ಠ ಎರಡು ದೊಡ್ಡ ಶಸ್ತ್ರಚಿಕಿತ್ಸೆಗಳ ಕಥೆಯನ್ನು ಹೇಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೊಡಲಿಯ ಹೊಡೆತಕ್ಕೆ ತಲೆಬುರುಡೆಯ ಮೂಳೆಯ ಚೂರುಗಳು ಒಳಮುಖವಾಗಿ ಮೆದುಳಿನ ಒಳಗೆ ಬಿದ್ದಿದ್ದವು. ಈ ರೀತಿಯ ಗಾಯಗಳು ಮೆದುಳಿನ ಪ್ರಮುಖ ರಕ್ತನಾಳಗಳಿಗೆ (ಸೈನಸ್) ಹಾನಿ ಮಾಡುವ ಅಪಾಯವಿರುತ್ತದೆ. ಅಂತಹ ರಕ್ತನಾಳಗಳಿಗೆ ಪೆಟ್ಟಾದರೆ ಶಸ್ತ್ರಚಿಕಿತ್ಸೆ ವೇಳೆ ಕೇವಲ ಒಂದು ನಿಮಿಷದಲ್ಲಿ ಎರಡು ಲೀಟರ್ವರೆಗೆ ರಕ್ತ ಸೋರುವ ಅಥವಾ ಸಾವು ಸಂಭವಿಸುವ ಸಾಧ್ಯತೆ ಶೇ. 40ಕ್ಕೂ ಹೆಚ್ಚಿರುತ್ತದೆ. ಮುರಿದ ಮೂಳೆಯ ತುಂಡನ್ನು ಮೇಲಕ್ಕೆತ್ತುವ ಸಂದರ್ಭದಲ್ಲೇ ತೀವ್ರ ರಕ್ತಸ್ರಾವವಾಗಿ ಜೀವಕ್ಕೆ ಕುತ್ತು ಬರುವ ಸಾಧ್ಯತೆಯಿರುತ್ತದೆ. ಆದರೆ ಅತ್ಯಂತ ಜೋಪಾನವಾಗಿ ಈ ಸವಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ತಲೆಗೆ ತಗಲುವ ಪೆಟ್ಟುಗಳು ಮೇಲ್ನೋಟಕ್ಕೆ ಚಿಕ್ಕದಾಗಿ ಕಂಡುಬಂದರೂ, ಒಳಗಿನ ಅನಾಹುತಗಳು ಗಂಭೀರವಾಗಿರಬಹುದು ಎಂದು ನವದೆಹಲಿಯ ಐಎಸ್ಐಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ನರವಿಜ್ಞಾನಿ (Consultant Neurologist) ಡಾ. ರಾಹುಲ್ ಚಾವ್ಲಾ ಎಚ್ಚರಿಸಿದ್ದಾರೆ. ಇಂಡಿಯಾ ಟುಡೆ ಡಿಜಿಟಲ್ ಸಹೋದರ ಸಂಸ್ಥೆಯಾದ ದಿ ಲಲ್ಲಂಕಾಪ್ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಹತ್ವದ ವೈದ್ಯಕೀಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮೇಲ್ಮೈ ಗಾಯದಿಂದಲೇ ಗಾಯದ ತೀವ್ರತೆಯನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಡಾ. ಚಾವ್ಲಾ, ತಲೆಗೆ ಬಡಿಯುವ ಪೆಟ್ಟು ಕೆಲವೊಮ್ಮೆ ಕೇವಲ ಬಾಹ್ಯ ಗಾಯಕ್ಕೆ ಮಾತ್ರ ಸೀಮಿತವಾಗಿರಬಹುದು. ಆದರೆ ಕೆಲವು ಸಂದರ್ಭಗಳಲ್ಲಿ ಇದು ಆಂತರಿಕ ರಕ್ತಸ್ರಾವ, ತಲೆಬುರುಡೆ ಮುರಿತ ಅಥವಾ ಮೆದುಳಿಗೆ ಗಂಭೀರ ಹಾನಿಯನ್ನುಂಟುಮಾಡಬಹುದು ಎಂದು ತಿಳಿಸಿದ್ದಾರೆ.
ಗುರುಗ್ರಾಮ್ನ ಮೇರೆಂಗೋ ಏಷ್ಯಾ ಹಾಸ್ಪಿಟಲ್ಸ್ನ ಹಿರಿಯ ಕ್ಲಿನಿಕಲ್ ಡೈರೆಕ್ಟರ್ ಹಾಗೂ ನರಶಸ್ತ್ರಚಿಕಿತ್ಸಾ ವಿಭಾಗದ ಪ್ರೊಫೆಸರ್ ಡಾ. (ಏರ್ ಕಮಾಂಡರ್) ಕೃಷ್ಣ ಕುಮಾರ್ ಯಾದವ್ ಅವರು ಈ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯ ಕುರಿತು ದಿ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಸಮಗ್ರವಾದ ವಿಶ್ಲೇಷಣೆ ನೀಡಿದ್ದಾರೆ.
ಡಿಪ್ರೆಸ್ಡ್ ಸ್ಕಲ್ ಫ್ರಾಕ್ಚರ್ (Depressed Skull Fracture) ಅಂದರೆ ತಲೆಬುರುಡೆಯ ಮುರಿತವು ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ. ಸರಳವಾಗಿ ಹೇಳುವುದಾದರೆ, ಇದರಲ್ಲಿ ತಲೆಬುರುಡೆಯ ಒಂದು ಭಾಗವು ಒಳಮುಖವಾಗಿ ಅಂದರೆ ನೇರವಾಗಿ ಮೆದುಳಿನ ಕಡೆಗೆ ಒತ್ತಲ್ಪಟ್ಟಿರುತ್ತದೆ ಎಂದು ಡಾ. ಕೃಷ್ಣ ಕುಮಾರ್ ಯಾದವ್ ವಿವರಿಸಿದ್ದಾರೆ.
ಇಂತಹ ಗಾಯಗಳಿಗೆ ಚಿಕಿತ್ಸೆ ನೀಡುವುದು ವೈದ್ಯರಿಗೆ ಕತ್ತಿಯ ಮೇಲೆ ನಡೆದಂತೆ. ಶಸ್ತ್ರಚಿಕಿತ್ಸೆಯ ಹಂತಗಳ ಕುರಿತು ಮಾತನಾಡಿರುವ ಡಾ. ಯಾದವ್, ಶಸ್ತ್ರಚಿಕಿತ್ಸಕರು ಅತ್ಯಂತ ಎಚ್ಚರಿಕೆಯಿಂದ ಒಳಮುಖವಾಗಿ ಒತ್ತಲ್ಪಟ್ಟ ಮೂಳೆಯ ತುಂಡನ್ನು ಮೇಲಕ್ಕೆತ್ತುತ್ತಾರೆ ಅಥವಾ ತೆಗೆದುಹಾಕುತ್ತಾರೆ. ನಂತರ ಮೆದುಳಿನ ಸುತ್ತಲಿರುವ ರಕ್ಷಣಾತ್ಮಕ ಪೊರೆಯನ್ನು (protective membrane) ಪರಿಶೀಲಿಸಿ, ಗಾಯವನ್ನು ಸ್ವಚ್ಛಗೊಳಿಸಿ ಹಾನಿಗೊಳಗಾದ ರಚನೆಗಳನ್ನು ಸರಿಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದು ಅತ್ಯಂತ ಸೂಕ್ಷ್ಮವಾದ ಕೆಲಸ. ಆದರೆ ಇದಕ್ಕಾಗಿಯೇ ನಾವು ವಿಶೇಷ ತರಬೇತಿ ಪಡೆದಿದ್ದು, ಅನೇಕ ರೋಗಿಗಳು ಈ ಶಸ್ತ್ರಚಿಕಿತ್ಸೆಯ ನಂತರ ಅತ್ಯಂತ ಯಶಸ್ವಿಯಾಗಿ ಚೇತರಿಸಿಕೊಳ್ಳುತ್ತಾರೆ ಎಂದು ಅವರು ಧೈರ್ಯದ ಮಾತುಗಳನ್ನಾಡಿದ್ದಾರೆ
ಸೌದಿ ಅರೇಬಿಯಾದಲ್ಲಿ ತುರ್ತು ಚಿಕಿತ್ಸೆ ಪಡೆದು, ಬಳಿಕ ಯುಎಇಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದ ಮಚ್ಚಾರ್ ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ದಂತವೈದ್ಯ ಡಾ. ಶೋಟಾ ಮುಸೇವ್ ಸಮಯೋಚಿತವಾಗಿ ಗಾಯದ ಮೇಲೆ ಒತ್ತಡ ಹಾಕಿ ರಕ್ತಸ್ರಾವ ತಡೆಯಲು ಸಹಾಯ ಮಾಡಿದ್ದರು. ಒಟ್ಟಾರೆ ವೈದ್ಯರ ಜಾಣತನ ಇಂದು ಪೈಲಟ್ ಜೀವ ಉಳಿಯುವಂತೆ ಮಾಡಿದೆ(ಏಜೆನ್ಸೀಸ್).