ಸಿಂಧೂರವು ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಬೋಧನೆಗಳಿಂದ ಪ್ರೇರಿತವಾಗಿದೆ: ರಾಜನಾಥ್ ಸಿಂಗ್ | Rajnath Singh

Rajnath Singh | ರಕ್ಷಣಾ ಸಚಿವ ರಾಜನಾಥ್ ಸಿಂಗ್
Rajnath Singh | ರಕ್ಷಣಾ ಸಚಿವ ರಾಜನಾಥ್ ಸಿಂಗ್
Published on
ಚಂಡೀಗಢ: ಆಪರೇಷನ್ ಸಿಂಧೂರವು ಭಗವಾನ್​ ಶ್ರೀಕೃಷ್ಣ ಪಾಂಡವರಿಗೆ ನೀಡಿದ ಸಂದೇಶದಿಂದ ಪ್ರೇರಿತವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಸೋಮವಾರ (ನ.24) ಹೇಳಿದ್ದಾರೆ.
ಈ ಬಗ್ಗೆ ಹರಿಯಾಣದ ಕುರುಕ್ಷೇತ್ರದಲ್ಲಿ 10 ನೇ ಅಂತರರಾಷ್ಟ್ರೀಯ ಗೀತಾ ಸಮ್ಮೇಳನವನ್ನು ಉದ್ಘಾಟಿಸಿದ ನಂತರ ಮಾತನಾಡಿದ ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್, ಧರ್ಮದ ಮಾರ್ಗವನ್ನು ಅನುಸರಿಸುವ ವ್ಯಕ್ತಿಯು ಎಂದಿಗೂ ಭಯಪಡಬಾರದು ಎಂದು ಶ್ರೀಕೃಷ್ಣ ಅರ್ಜುನನಿಗೆ ಕಲಿಸಿದನು. ಅಲ್ಲದೆ, ಕಳೆದ ಏಪ್ರೀಲ್​ನಲ್ಲಿ ನಡೆದ ಪಹಲ್ಗಾಮ್​ ಉಗ್ರ ದಾಳಿಯು ಭಾರತದ ಶಾಂತಿಪ್ರಿಯ ಸ್ವಭಾವವನ್ನು ಪ್ರಶ್ನಿಸಿದ್ದಲ್ಲದೆ, ಭಯೋತ್ಪಾದಕರು ಮತ್ತು ಅವರ ಪೋಷಕರು ಭಾರತದ ನಾಗರಿಕತೆಯೇ ದೌರ್ಬಲ್ಯ ಎಂದು ಭಾವಿಸಿದ್ದರು. ಆದರೆ, ಭಾರತವು ಗೀತೆಯ ಭೂಮಿ ಎಂಬುದನ್ನು ಅವರು ಮರೆತಿದ್ದಾರೆ. ಇಲ್ಲಿ ಯುದ್ಧಭೂಮಿಯಲ್ಲಿ ಧರ್ಮವನ್ನು ರಕ್ಷಿಸಲು ಕರುಣೆ ಮತ್ತು ಸ್ಫೂರ್ತಿ ಇದೆ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಸಿಂಗ್, ಭಾರತ ಯುದ್ಧವನ್ನು ಬಯಸುವುದಿಲ್ಲ. ಆದರೆ, ಅವರೆ ಯುದ್ಧವನ್ನು ಬಯಸಿದರೆ ನಾವು ಬಲವಾದ ಪ್ರತಿಕ್ರಿಯೆಯನ್ನು ನೀಡುತ್ತೇವೆ ಎಂದು ನಾವು ಜಗತ್ತಿಗೆ ತೋರಿಸಿದ್ದೇವೆ. ಆಪರೇಷನ್ ಸಿಂಧೂರ ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಬದಲಾಗಿ ಭಾರತದ ಸ್ವಯಂ ಬದ್ಧತೆ, ಸ್ವಾಭಿಮಾನ ಮತ್ತು ಆತ್ಮವಿಶ್ವಾಸದ ಘೋಷಣೆಯಾಗಿದೆ. ಭಗವಾನ್ ಕೃಷ್ಣನು ಪಾಂಡವರಿಗೆ ಯುದ್ಧವನ್ನು ಪ್ರತೀಕಾರ ಅಥವಾ ಮಹತ್ವಾಕಾಂಕ್ಷೆಗಾಗಿ ಮಾಡಬಾರದು. ಬದಲಾಗಿ ನೀತಿವಂತ ಆಡಳಿತವನ್ನು ಸ್ಥಾಪಿಸಲು ಎಂದು ಕಲಿಸಿದನು ಎಂದು ತಿಳಿಸಿದ್ದಾರೆ.
ಆಪರೇಷನ್ ಸಿಂಧೂರವು ಸಮಯದಲ್ಲಿ, ನಾವು ಶ್ರೀಕೃಷ್ಣನ ಸಂದೇಶವನ್ನು ಅನುಸರಿಸಿದ್ದೇವೆ. ಈ ಕಾರ್ಯಾಚರಣೆಯು ಭಾರತವು ಭಯೋತ್ಪಾದನೆಯ ವಿರುದ್ಧ ಮೌನವಾಗಿರುವುದಿಲ್ಲ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ರವಾನಿಸಿದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ಶ್ರೀ ಕೃಷ್ಣನು ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಧರ್ಮವನ್ನು ಕೇವಲ ಬೋಧನೆಗಳಿಂದ ಸಂರಕ್ಷಿಸಲಾಗುವುದಿಲ್ಲ. ಇದು ಕ್ರಿಯೆಗಳಿಂದ ಸಂರಕ್ಷಿಸಲ್ಪಡುತ್ತದೆ ಮತ್ತು ಆಪರೇಷನ್ ಸಿಂಧೂರವು ನಾವು ಅಳವಡಿಸಿಕೊಂಡ ಧರ್ಮಾಧಾರಿತ ಕ್ರಮವಾಗಿದೆ. ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದವರಲ್ಲಿ ಹರಿಯಾಣ ಸಚಿವ ಅನಿಲ್ ವಿಜ್ ಮತ್ತು ಸ್ವಾಮಿ ಜ್ಞಾನಾನಂದ ಮಹಾರಾಜ್ ಕೂಡ ಇದ್ದರು. ಸಮ್ಮೇಳನವನ್ನು ಕುರುಕ್ಷೇತ್ರ ವಿಶ್ವವಿದ್ಯಾಲಯ ಮತ್ತು ಕುರುಕ್ಷೇತ್ರ ಅಭಿವೃದ್ಧಿ ಮಂಡಳಿ ಜಂಟಿಯಾಗಿ ಆಯೋಜಿಸಿದ್ದವು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net