ಸತತ 3ನೇ ದಿನವೂ ಬೆಳ್ಳಿ ಬೆಲೆ ಭಾರಿ ಇಳಿಕೆ; ಚೇತರಿಸಿಕೊಂಡ ಷೇರು ಮಾರುಕಟ್ಟೆ

ಚಿನ್ನ-ಬೆಳ್ಳಿ ದರ, ಷೇರುಪೇಟೆ
ಚಿನ್ನ-ಬೆಳ್ಳಿ ದರ, ಷೇರುಪೇಟೆ
Published on

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಬೆಳ್ಳಿ ಬೆಲೆ ಸತತ ಮೂರನೇ ದಿನವೂ ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯ ಮಂದಗತಿ ಮತ್ತು ಅಮೆರಿಕನ್ ಡಾಲರ್ ಮೌಲ್ಯ ವೃದ್ಧಿಯ ನಡುವೆ ಬೆಳ್ಳಿಯ ಬೆಲೆ 52,000 ರೂ.ಗಳಷ್ಟು ಕುಸಿದು ಪ್ರತಿ ಕೆಜಿಗೆ 2.60 ಲಕ್ಷ ರೂ.ಗೆ ತಲುಪಿದೆ. ಇದೇ ವೇಳೆ ಚಿನ್ನದ ಬೆಲೆಯೂ ಪ್ರತಿ 10 ಗ್ರಾಂಗೆ 1.52 ಲಕ್ಷ ರೂ.ಗೆ ಇಳಿಕೆಯಾಗಿದೆ.

ಅಖಿಲ ಭಾರತ ಸರಾಫ ಸಂಘದ ಮಾಹಿತಿ ಪ್ರಕಾರ, ಬೆಳ್ಳಿಯ ಬೆಲೆ ಎಲ್ಲ ತೆರಿಗೆಗಳು ಸೇರಿದಂತೆ 52,000 ರೂ.ಗಳಷ್ಟು ಅಂದರೆ ಸುಮಾರು ಶೇ. 17ರಷ್ಟು ಭಾರಿ ಕುಸಿತ ಕಂಡು ಪ್ರತಿ ಕೆಜಿಗೆ 2,60,000 ರೂ.ಗೆ ಬಂದು ನಿಂತಿದೆ. ಕಳೆದ ಶನಿವಾರವಷ್ಟೇ ಬೆಳ್ಳಿಯ ಬೆಲೆ ಶೇ. 19ರಷ್ಟು ಅಂದರೆ 72,500 ರೂ.ಗಳಷ್ಟು ಇಳಿಕೆಯಾಗಿ 3.12 ಲಕ್ಷ ರೂ.ಗೆ ತಲುಪಿತ್ತು. ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಬೆಳ್ಳಿಯ ಬೆಲೆ ಒಟ್ಟಾರೆ 1,44,500 ರೂ.ಗಳಷ್ಟು ಕುಸಿದಿದೆ. ಜ. 29ರಂದು ದಾಖಲಾಗಿದ್ದ 4,04,500 ರೂ.ಗಳ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಇದು ಸುಮಾರು ಶೇ. 36ರಷ್ಟು ಇಳಿಕೆಯಾದಂತಾಗಿದೆ.

ಚಿನ್ನದ ಬೆಲೆಯೂ ಇಂದು ಭಾರಿ ಕುಸಿತ ಕಂಡಿದೆ. ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಸೋಮವಾರ 12,800 ರೂ.ಗಳಷ್ಟು ಅಂದರೆ ಶೇ. 7.73ರಷ್ಟು ಕುಸಿದು, 10 ಗ್ರಾಂಗೆ ಎಲ್ಲ ತೆರಿಗೆಗಳು ಸೇರಿ 1,52,700 ರೂ.ಗೆ ತಲುಪಿದೆ. ಹಿಂದಿನ ವಹಿವಾಟಿನ ದಿನ ಇದು 1,65,500 ರೂ.ಗಳಷ್ಟಿತ್ತು. ಜ. 29ರಂದು ದಾಖಲಾಗಿದ್ದ 1,83,000 ರೂ.ಗಳ ಗರಿಷ್ಠ ಮಟ್ಟದಿಂದ ಕಳೆದ 3 ದಿನಗಳಲ್ಲಿ ಚಿನ್ನದ ಬೆಲೆ ಸುಮಾರು 30,300 ರೂ.ಗಳಷ್ಟು ಅಂದರೆ ಶೇ. 17ರಷ್ಟು ಇಳಿಕೆಯಾಗಿದೆ. ಅತಿಯಾದ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಹೂಡಿಕೆದಾರರು ಲಾಭಾಂಶವನ್ನು ನಗದು ಮಾಡಿ ಕೊಳ್ಳಲು ಮುಂದಾಗಿರುವುದು ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

ಷೇರು ಮಾರುಕಟ್ಟೆ ಚೇತರಿಕೆ

ಕೇಂದ್ರ ಬಜೆಟ್ ದಿನವಾದ ಭಾನುವಾರ ಭಾರಿ ಕುಸಿತ ಅನುಭವಿಸಿದ್ದ ಷೇರು ಮಾರುಕಟ್ಟೆ ಸೋಮವಾರ ಚೇತರಿಕೆ ಕಂಡಿದೆ. ಪ್ರಮುಖ ತೈಲ ಮತ್ತು ಅನಿಲ, ಬ್ಯಾಂಕಿಂಗ್ ಮತ್ತು ಆಟೋಮೊಬೈಲ್ ವಲಯದ ಷೇರುಗಳನ್ನು ಖರೀದಿಸಲು ಹೂಡಿಕೆದಾರರು ಆಸಕ್ತಿ ತೋರಿದ್ದರಿಂದ ಸೆನ್ಸೆಕ್ಸ್ 943 ಅಂಕ ಏರಿಕೆ ಕಂಡಿದೆ. ಸೋಮವಾರದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 943.52 ಅಂಕ ಏರಿಕೆಯೊಂದಿಗೆ 81,666.46 ಮಟ್ಟದಲ್ಲಿ ಸ್ಥಿರಗೊಂಡಿತು. ದಿನದ ವಹಿವಾಟಿನ ಅವಧಿಯಲ್ಲಿ ಒಂದು ಹಂತದಲ್ಲಿ ಸೆನ್ಸೆಕ್ಸ್ 1,009.31 ಅಂಕ ಏರಿಕೆ ಕಂಡು 81,732.25ರವರೆಗೂ ತಲುಪಿತ್ತು. ನಿಫ್ಟಿ ಕೂಡ 262.95 ಅಂಕ ಗಳಿಸಿ 25,088.40 ಮಟ್ಟಕ್ಕೆ ಏರಿತು.

ವಹಿವಾಟಿನ ಮಧ್ಯೆ ನಿಫ್ಟಿ 282.65 ಅಂಕ ಜಿಗಿತದೊಂದಿಗೆ 25,108.10 ಮಟ್ಟವನ್ನು ಮುಟ್ಟಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾನುವಾರ 588.34 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದೇ ವೇಳೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆ ಕಂಡಿದ್ದು, ಬ್ರೆಂಟ್ ಕಚ್ಚಾ ತೈಲದ ದರ ಶೇ. 4.88ರಷ್ಟು ಕುಸಿದು ಪ್ರತಿ ಬ್ಯಾರೆಲ್​ಗೆ 65.94 ಅಮೆರಿಕನ್ ಡಾಲರ್​ಗೆ ತಲುಪಿದೆ.

ರೂಪಾಯಿ ಮೌಲ್ಯ 44 ಪೈಸೆ ಏರಿಕೆ

ಮುಂಬೈ: ಕೇಂದ್ರ ಬಜೆಟ್ ಮಂಡನೆಯ ಬೆನ್ನಲ್ಲೇ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿಯ ಮೌಲ್ಯ 44 ಪೈಸೆ ಚೇತರಿಕೆ ಕಂಡು 91.49ಕ್ಕೆ ತಲುಪಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಡೆಸಿದ ಪ್ರಯತ್ನಗಳು ಮತ್ತು ಕಚ್ಚಾ ತೈಲ ಬೆಲೆಯಲ್ಲಿನ ಕುಸಿತ ಈ ಏರಿಕೆಗೆ ಕಾರಣವಾಗಿವೆ. ಕಳೆದ ಶುಕ್ರವಾರವಷ್ಟೇ ರೂಪಾಯಿ ಮೌಲ್ಯ 92.02ರ ದಾಖಲೆ ಮಟ್ಟಕ್ಕೆ ಕುಸಿದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net