ಐರ್ಲೆಂಡ್‌ ವಿರುದ್ಧ ಭಾರತಕ್ಕೆ ಶಾಕ್: ಕೊಹ್ಲಿ, ಗಿಲ್ ಸಾಲಿಗೆ ಸೇರಿದ ನಾಯಕ ಶ್ರೇಯಸ್ ಅಯ್ಯರ್; ಏನದು ಬೇಡದ ದಾಖಲೆ..? | Shreyas Iyer

Shreyas Iyer
Shreyas Iyer
Published on
Shreyas Iyer: ಐರ್ಲೆಂಡ್ ಪ್ರವಾಸ ಕೈಗೊಂಡಿರುವ ಭಾರತ ಟಿ20 ತಂಡಕ್ಕೆ ಮೊದಲ ಪಂದ್ಯದಲ್ಲೇ ಆತಿಥೇಯರು ಭಾರಿ ಆಘಾತ ನೀಡಿದ್ದಾರೆ. ನಿನ್ನೆ (ಜೂನ್ 26) ಬೆಲ್‌ಫಾಸ್ಟ್‌ನ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್ ತಂಡವು ಭಾರತದ ವಿರುದ್ಧ 34 ರನ್‌ಗಳ ಜಯ ಸಾಧಿಸಿದೆ. ಭಾರತ ತಂಡದ ಪೂರ್ಣಾವಧಿ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಶ್ರೇಯಸ್ ಅಯ್ಯರ್ ಸೋಲಿನ ಕಹಿ ಅನುಭವಿಸಬೇಕಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 182 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಲೋರ್ಕನ್ ಟಕರ್ ಅವರ ಆಕರ್ಷಕ ಅರ್ಧಶತಕ (50 ರನ್) ಮತ್ತು ಗರೆಥ್ ಡೆಲಾನಿ ಅವರ ಸ್ಫೋಟಕ ಆಟದ (49 ರನ್) ನೆರವಿನಿಂದ ಐರ್ಲೆಂಡ್ ತಂಡ ಆರಂಭದಲ್ಲಿ ಭಾರತೀಯ ಬೌಲರ್‌ಗಳು ಉತ್ತಮ ಪೈಪೋಟಿ ನೀಡಿದರೂ, ಮಧ್ಯಮ ಓವರ್‌ಗಳಲ್ಲಿ ಆತಿಥೇಯರು ಪಾರಮ್ಯ ಸಾಧಿಸಿದರು.

ಗುರಿ ತಲುಪಲು ವಿಫಲವಾದ ಭಾರತ

183 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಬಿರುಸಿನ ಆರಂಭ ನೀಡಿದರು. ಕೇವಲ 20 ಎಸೆತಗಳಲ್ಲಿ 49 ರನ್ ಚಚ್ಚಿದ ಅಭಿಷೇಕ್ ಭರವಸೆ ಮೂಡಿಸಿದರಾದರೂ, ಉಳಿದ ಬ್ಯಾಟರ್‌ಗಳಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಶಿವಂ ದುಬೆ ಗಳಿಸಿದ 25 ರನ್‌ಗಳೇ ತಂಡದ ಎರಡನೇ ಗರಿಷ್ಠ ಸ್ಕೋರಾಗಿತ್ತು. ಐರ್ಲೆಂಡ್ ಬೌಲರ್‌ಗಳ ನಿಖರ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಅಂತಿಮವಾಗಿ 148 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಆಘಾತಕಾರಿ ಸೋಲು ಅನುಭವಿಸಿತು.

ಸೋಲಿನ ಬಳಿಕ ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದೇನು?

ನಾಯಕನಾಗಿ ಮೊದಲ ಪಂದ್ಯದಲ್ಲೇ ಸೋತ ಬೇಸರದಲ್ಲಿದ್ದ ಶ್ರೇಯಸ್ ಅಯ್ಯರ್ ಪಂದ್ಯದ ನಂತರ ಮಾತನಾಡಿ ಬೌಲರ್‌ಗಳ ಯೋಜನೆ ವೈಫಲ್ಯವನ್ನು ಒಪ್ಪಿಕೊಂಡರು. ಆರಂಭದಲ್ಲಿ ನಮ್ಮ ಬೌಲರ್‌ಗಳು ಚೆನ್ನಾಗಿಯೇ ಬೌಲಿಂಗ್ ಮಾಡಿದರು. ಪಿಚ್‌ನಿಂದ ಮೂವ್‌ಮೆಂಟ್ ಸಿಗುತ್ತಿತ್ತು ಮತ್ತು ಒಂದೆರಡು ವಿಕೆಟ್‌ಗಳನ್ನೂ ಪಡೆದರು. ನಮಗೆ ಅತ್ಯುತ್ತಮ ಆರಂಭವೇ ಸಿಕ್ಕಿತ್ತು, ಆದರೆ ಮಧ್ಯಮ ಓವರ್‌ಗಳಲ್ಲಿ ನಾವು ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಲು ವಿಫಲರಾದೆವು. ಮೈದಾನದ ಮುಂಭಾಗದ ಬೌಂಡರಿಗಳು ಚಿಕ್ಕದಾಗಿವೆ ಎಂದು ನಮಗೆ ತಿಳಿದಿದ್ದರೂ, ಎದುರಾಳಿ ಬ್ಯಾಟರ್‌ಗಳು ನೇರವಾಗಿ ಶಾಟ್‌ಗಳನ್ನು ಬಾರಿಸಲು ನಮ್ಮ ಬೌಲರ್‌ಗಳು ಅವಕಾಶ ಮಾಡಿಕೊಟ್ಟರು. ಆದರೂ, ಕೊನೆಯ ಓವರ್‌ಗಳಲ್ಲಿ ರನ್ ನಿಯಂತ್ರಿಸುವಲ್ಲಿ ಬೌಲರ್‌ಗಳು ಕಮ್​ಬ್ಯಾಕ್​ ಮಾಡಿದರು ಎಂದು ತಿಳಿಸಿದ್ದಾರೆ.

ಮೊದಲ ಪಂದ್ಯದಲ್ಲೇ ಸೋತ ಭಾರತೀಯ ನಾಯಕರ ಪಟ್ಟಿ ಸೇರಿದ ಅಯ್ಯರ್

ಈ ಸೋಲಿನೊಂದಿಗೆ ಶ್ರೇಯಸ್ ಅಯ್ಯರ್ ಟಿ20 ಮಾದರಿಯಲ್ಲಿ ನಾಯಕರಾಗಿ ತಮ್ಮ ಮೊದಲ ಪಂದ್ಯದಲ್ಲೇ ಸೋಲು ಕಂಡ ದುರದೃಷ್ಟಕರ ಭಾರತೀಯ ನಾಯಕರ ಪಟ್ಟಿಗೆ ಸೇರಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ, ರಿಷಭ್ ಪಂತ್ ಮತ್ತು ಶುಭಮನ್ ಗಿಲ್ ಕೂಡ ನಾಯಕರಾಗಿ ತಮ್ಮ ಚೊಚ್ಚಲ ಟಿ20 ಪಂದ್ಯದಲ್ಲೇ ಸೋಲನ್ನು ಅನುಭವಿಸಿದ್ದರು.
ವಿರಾಟ್ ಕೊಹ್ಲಿ - ವಿರುದ್ಧ ಇಂಗ್ಲೆಂಡ್ (ಕಾನ್ಪುರ, 2017)
ರಿಷಭ್ ಪಂತ್ - ವಿರುದ್ಧ ದಕ್ಷಿಣ ಆಫ್ರಿಕಾ (ದೆಹಲಿ, 2022)
ಶುಭಮನ್ ಗಿಲ್ - ವಿರುದ್ಧ ಜಿಂಬಾಬ್ವೆ (ಹರಾರೆ, 2024)
ಶ್ರೇಯಸ್ ಅಯ್ಯರ್ - ವಿರುದ್ಧ ಐರ್ಲೆಂಡ್ (ಬೆಲ್‌ಫಾಸ್ಟ್, 2026).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net