ಮಮತಾಗೆ ಆಘಾತ! ವಿಭಜನೆಯ ಹೊಸ್ತಿಲಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಒಂದೂವರೆ ದಶಕಗಳ ಕಾಲ ಅಧಿಪತ್ಯ ಸ್ಥಾಪಿಸಿದ್ದ ತೃಣಮೂಲ ಕಾಂಗ್ರೆಸ್ ಪಕ್ಷವು ತೀವ್ರ ಆಂತರಿಕ ಬಿಕ್ಕಟ್ಟಿನಿಂದ ವಿಭಜನೆಯ ಹಂತವನ್ನು ತಲುಪಿದೆ. 2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಬಹುಮತ ಸಾಧಿಸಿ ಅಧಿಕಾರಕ್ಕೇರುತ್ತಿದ್ದಂತೆ, ಟಿಎಂಸಿಯ 15 ವರ್ಷಗಳ ಆಡಳಿತಕ್ಕೆ ತೆರೆ ಬಿದ್ದಿದೆ. ಈ ಹೀನಾಯ ಸೋಲಿನ ಬೆನ್ನಲ್ಲೇ ಪಕ್ಷದ ಒಳಗೆ ಭುಗಿಲೆದ್ದಿರುವ ಅಸಮಾಧಾನ ಮತ್ತು ಬಂಡಾಯ, ಪಕ್ಷವನ್ನು ಪತನದತ್ತ ತಳ್ಳಿದೆ. ಪಕ್ಷ ಎರಡು ಬಣಗಳಾಗಿ ವಿಭಜನೆಯಾಗುವ ಸಾಧ್ಯತೆಯಿದ್ದು, ಟಿಎಂಸಿಯ 80 ಶಾಸಕರ ಪೈಕಿ 50ಕ್ಕೂ ಹೆಚ್ಚು ಶಾಸಕರು ಮಮತಾ ಬ್ಯಾನರ್ಜಿ ವಿರುದ್ಧ ಸಿಡಿದೆದ್ದಿದ್ದಾರೆ. ಸ್ವಹಿತಾಸಕ್ತಿಯನ್ನೇ ಮುಖ್ಯವಾಗಿಸಿಕೊಂಡ ಮಮತಾ ಅಧಿಕಾರ ಕಳೆದುಕೊಂಡ ಬಳಿಕ, ಈಗ ಪಕ್ಷ ವಿಭಜನೆಯ ಆತಂಕ ಎದುರಿಸುತ್ತಿದ್ದು, ಟಿಎಂಸಿ ರಾಜಕೀಯ ಹಾದಿಯ ಏರಿಳಿತದ ವಿವರ ಇಲ್ಲಿದೆ.

ಪಶ್ಚಿಮ ಬಂಗಾಳದ ರಾಜಕಾರಣ ಮತ್ತೊಂದು ಮಹತ್ವದ ತಿರುವಿನಲ್ಲಿ ಬಂದು ನಿಂತಿದೆ. ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು ಅಧಿಕೃತವಾಗಿ ಎರಡು ಹೋಳುಗಳಾಗುವ ಹಂತಕ್ಕೆ ಬಂದು ತಲುಪಿದೆ. ಪಕ್ಷದಿಂದ ಇತ್ತೀಚೆಗಷ್ಟೇ ಉಚ್ಚಾಟನೆಗೊಂಡಿರುವ ಹಿರಿಯ ನಾಯಕ ರಿಜು ದತ್ತಾ ಪ್ರಯೋಗಿಸಿರುವ ರಾಜಕೀಯ ದಾಳವು ಬಂಗಾಳದ ರಾಜಕೀಯ ವಲ ಯದಲ್ಲಿ ತಲ್ಲಣ ಮೂಡಿಸಿದೆ. ಒಟ್ಟು 80 ಟಿಎಂಸಿ ಶಾಸಕರ ಪೈಕಿ 50ಕ್ಕೂ ಹೆಚ್ಚು ಶಾಸಕರು ಒಟ್ಟಾಗಿ ತಾವೇ ಅಸಲಿ ತೃಣಮೂಲ ಕಾಂಗ್ರೆಸ್ ಎಂದು ಘೊಷಿಸಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ರಿಜು ದತ್ತಾ ಬಹಿರಂಗಪಡಿಸಿದ್ದಾರೆ. ಈ ಹಿಂದೆ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್​ಸಿಪಿ) ಇದೇ ರೀತಿ ಆಂತರಿಕ ಭಿನ್ನಮತದಿಂದಾಗಿ ವಿಭಜನೆಗೊಂಡಿವೆ.

ಪ್ರಸ್ತುತ ಸ್ಥಿತಿ

ಚುನಾವಣಾ ಸೋಲಿನ ಬೆನ್ನಲ್ಲೇ ಟಿಎಂಸಿ ಶಾಸಕರ ಸಭೆಗಳನ್ನು ರದ್ದುಗೊಳಿಸಲಾಗುತ್ತಿದ್ದು, ಹಲವು ಶಾಸಕರು ಸಭೆಗಳಿಗೆ ಗೈರುಹಾಜರಾಗುತ್ತಿದ್ದಾರೆ. ಇತ್ತೀಚೆಗೆ ಅಭಿಷೇಕ್ ಬ್ಯಾನರ್ಜಿ ಅವರ ಮೇಲಾದ ದಾಳಿ ಮತ್ತು ಪಕ್ಷದ ಇಬ್ಬರು ಶಾಸಕರನ್ನು ಮಮತಾ ಬ್ಯಾನರ್ಜಿ ವಜಾಗೊಳಿಸಿರುವುದು ಪಕ್ಷದ ಒಳಗಿನ ಬಿರುಕನ್ನು ಜಗಜ್ಜಾಹೀರು ಮಾಡಿದೆ. ಹಲವಾರು ಹಾಲಿ ಮತ್ತು ಮಾಜಿ ಶಾಸಕರು ಕಮಲ ಪಾಳಯದತ್ತ ಮುಖ ಮಾಡುತ್ತಿದ್ದು, ಪಕ್ಷವು ಶೀಘ್ರದಲ್ಲೇ ಅಧಿಕೃತವಾಗಿ ಸೋದರಳಿಯನ ಬಣ ಮತ್ತು ದೀದಿಯ ಹಳೆಯ ನಿಷ್ಠಾವಂತರ ಬಣ ಎಂದು ಎರಡು ಭಾಗಗಳಾಗಿ ವಿಭಜನೆಯ ಹಂತಕ್ಕೆ ಬಂದು ನಿಂತಿದೆ.

ಸಂವಿಧಾನ ಏನು ಹೇಳುತ್ತದೆ?

ಸಂವಿಧಾನದ ನಿಯಮಗಳ ಪ್ರಕಾರ, ಯಾವುದೇ ರಾಷ್ಟ್ರೀಯ ಅಥವಾ ಪ್ರಾದೇಶಿಕ (ರಾಜ್ಯ ಮಟ್ಟದ) ಪಕ್ಷದ ಶಾಸಕರು ಬಂಡಾಯ ಎದ್ದ ತಕ್ಷಣವೇ ನೇರವಾಗಿ ಮೂಲ ಪಕ್ಷದ ಮೇಲೆ ಹಕ್ಕು ಸಾಧಿಸಲು ಸಾಧ್ಯವಿಲ್ಲ. ಈ ಇಡೀ ಪ್ರಕ್ರಿಯೆಯು ಪ್ರಮುಖವಾಗಿ ಸಂವಿಧಾನದ 10ನೇ ಅನುಸೂಚಿ ಅಡಿಯಲ್ಲಿ ಬರುವ ಪಕ್ಷಾಂತರ ನಿಷೇಧ ಕಾಯ್ದೆ, ಆಯಾ ಪಕ್ಷದ ಆಂತರಿಕ ಸಂವಿಧಾನ ಮತ್ತು ಭಾರತೀಯ ಚುನಾವಣಾ ಆಯೋಗದ ನಿಯಮಾವಳಿಗಳ ಆಧಾರದ ಮೇಲೆ ನಿರ್ಧಾರವಾಗುತ್ತದೆ.

  • ಮೂಲ ಪಕ್ಷದಿಂದ ಹೊರಬರಲು ನಿರ್ಧರಿಸುವ ಶಾಸಕರ ಸಂಖ್ಯೆಯು ಒಟ್ಟು ಶಾಸಕರ ಬಲದಲ್ಲಿ ಮೂರನೇ ಎರಡರಷ್ಟು ಇರಬೇಕು. ಇಷ್ಟು ಸಂಖ್ಯೆಯ ಶಾಸಕರು ಒಟ್ಟಾಗಿ ಬೇರೆ ಪಕ್ಷದೊಂದಿಗೆ ವಿಲೀನವಾದರೆ ಅಥವಾ ಪ್ರತ್ಯೇಕ ಗುಂಪಾಗಿ ಗುರುತಿಸಿಕೊಂಡರೆ ಮಾತ್ರ ಅವರಿಗೆ ಸಂವಿಧಾನದ ಅಡಿಯಲ್ಲಿ ಅನರ್ಹತೆಯಿಂದ ವಿನಾಯಿತಿ ಸಿಗುತ್ತದೆ.
  • ‘ನಿಜವಾದ ಪಕ್ಷ ಮತ್ತು ಚಿಹ್ನೆ ನಮ್ಮದೇ’ ಎಂಬ ವಿವಾದ ಉಂಟಾದಾಗ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇರುವುದು ಭಾರತೀಯ ಚುನಾವಣಾ ಆಯೋಗಕ್ಕೆ ಮಾತ್ರ. ಇದಕ್ಕಾಗಿ ಆಯೋಗವು 4 ಪ್ರಮುಖ ಅಂಶಗಳನ್ನು ಪರಿಶೀಲಿಸುತ್ತದೆ. 1) ದೇಶಾದ್ಯಂತ ಅಥವಾ ರಾಜ್ಯಾದ್ಯಂತ ಇರುವ ಪಕ್ಷದ ತಳಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಯಾರನ್ನು ಬೆಂಬಲಿಸುತ್ತಿದ್ದಾರೆ? 2) ಪಕ್ಷದ ಅತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ರಾಷ್ಟ್ರೀಯ ಅಥವಾ ರಾಜ್ಯ ಕಾರ್ಯಕಾರಿಣಿ ಸಮಿತಿಯ ಬಹುತೇಕ ಸದಸ್ಯರು ಯಾರ ಪರವಾಗಿದ್ದಾರೆ? 3) ಪಕ್ಷವನ್ನು ಸ್ಥಾಪಿಸುವಾಗ ರೂಪಿಸಲಾದ ಆಂತರಿಕ ಸಂವಿಧಾನದಲ್ಲಿ ನಾಯಕತ್ವದ ಆಯ್ಕೆ ಮತ್ತು ಶಿಸ್ತುಕ್ರಮದ ಕುರಿತು ಯಾವ ನಿಯಮಗಳಿವೆ? 4) ಪ್ರಸ್ತುತ ಸದನದಲ್ಲಿರುವ ಪಕ್ಷದ ಜನಪ್ರತಿನಿಧಿಗಳ (ಶಾಸಕರು ಮತ್ತು ಸಂಸದರು) ಬಹುಮತದ ಬೆಂಬಲ ಯಾರಿಗೆ ಇದೆ?

ಐತಿಹಾಸಿಕ ಜಯ (2011): 2011ರ ವಿಧಾನಸಭಾ ಚುನಾವಣೆಯಲ್ಲಿ 34 ವರ್ಷಗಳ ಕಮ್ಯುನಿಸ್ಟ್ ಆಡಳಿತವನ್ನು ಕಿತ್ತೊಗೆದ ಮಮತಾ ಬ್ಯಾನರ್ಜಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ನಂತರ 2016 ಮತ್ತು 2021ರ ಚುನಾವಣೆಗಳಲ್ಲೂ ಭರ್ಜರಿ ಜಯ ಸಾಧಿಸಿ 15 ವರ್ಷಗಳ ಕಾಲ (ಮೂರು ಅವಧಿ) ಬಂಗಾಳವನ್ನು ಆಳಿದರು.

ಉದಯದಿಂದ ಪತನದವರೆಗಿನ ರಾಜಕೀಯ ಪಥ

  • ಕಾಂಗ್ರೆಸ್​ನಿಂದ ಹೊರಬಂದ ಮಮತಾ (1998): ಪಶ್ಚಿಮ ಬಂಗಾಳದಲ್ಲಿ ದಶಕಗಳ ಕಾಲ ಆಡಳಿತ ನಡೆಸುತ್ತಿದ್ದ ಎಡರಂಗ ಸರ್ಕಾರದ ವಿರುದ್ಧ ಕಾಂಗ್ರೆಸ್ ಮೃದು ಧೋರಣೆ ತಳೆದಿದೆ ಎಂದು ಆರೋಪಿಸಿ, ಮಮತಾ ಬ್ಯಾನರ್ಜಿ 1998ರಲ್ಲಿ ಕಾಂಗ್ರೆಸ್ ತೊರೆದು ‘ಅಖಿಲ ಭಾರತ ತೃಣಮೂಲ ಕಾಂಗ್ರೆಸ್’ ಸ್ಥಾಪಿಸಿದರು. ‘ಜೋರಾ ಘಾಸ್ ಫೂಲ್’ (ಹುಲ್ಲಿನ ನಡುವಿನ ಎರಡು ಹೂವುಗಳು) ಪಕ್ಷದ ಗುರುತಾಯಿತು.
  • ಸಿಂಗೂರು-ನಂದಿಗ್ರಾಮ ಚಳವಳಿ (2006-2007): ಟಿಎಂಸಿ ಇತಿಹಾಸದಲ್ಲಿ ಇದು ಪ್ರಮುಖ ತಿರುವು. ಎಡರಂಗ ಸರ್ಕಾರವು ಕೈಗಾರಿಕೆಗಳಿಗಾಗಿ ರೈತರ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದರ ವಿರುದ್ಧ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಹೋರಾಟಗಳು ನಡೆದವು. ನಂದಿಗ್ರಾಮದಲ್ಲಿ ನಡೆದ ಪೊಲೀಸ್ ಗುಂಡಿನ ದಾಳಿ ಮತ್ತು ರೈತರ ಸಾವು ಇಡೀ ಬಂಗಾಳವನ್ನು ತಲ್ಲಣಗೊಳಿಸಿತು. ಮಾ, ಮಾಟಿ, ಮಾನುಷ್ (ತಾಯಿ, ಭೂಮಿ ಮತ್ತು ಮನುಷ್ಯ) ಎಂಬ ಘೊಷಣೆ ಜನರ ಮನಗೆದ್ದಿತು.
  • ಹಳಬರು ವರ್ಸಸ್ ಹೊಸಬರ ಜಗಳ: 2026ರ ಚುನಾವಣಾ ಸೋಲು ಮತ್ತು ಪಕ್ಷದ ಇಂದಿನ ವಿಭಜನೆಯ ಸ್ಥಿತಿಗೆ ವಿರೋಧ ಪಕ್ಷಗಳ ಬಲ ಮಾತ್ರವಲ್ಲ; ಟಿಎಂಸಿ ಒಳಗಿನ ಆಂತರಿಕ ಹುಳುಕುಗಳೇ ಕಾರಣ. ಟಿಎಂಸಿಯ ಇಂದಿನ ಬಿಕ್ಕಟ್ಟು ಗಂಭೀರ ಮಟ್ಟಕ್ಕೆ ತಲುಪಿರುವುದು ನಾಯಕತ್ವದಲ್ಲಿನ ಭಿನ್ನಾಭಿಪ್ರಾಯದಿಂದ. ಮಮತಾ ಬ್ಯಾನರ್ಜಿ ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿ, ತಮ್ಮ ಉತ್ತರಾಧಿಕಾರಿಯನ್ನಾಗಿ ಬಿಂಬಿಸಿದರು. ಪಕ್ಷದ ಆರಂಭದ ದಿನಗಳಿಂದಲೂ ಕಷ್ಟಪಟ್ಟಿದ್ದ ಹಿರಿಯ ನಾಯಕರನ್ನು ಬದಿಗೆ ತಳ್ಳಿ, ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಹತ್ತಿರದ ಕಾರ್ಪೆರೇಟ್ ಶೈಲಿಯ ತಂಡಕ್ಕೆ ಹೆಚ್ಚಿನ ಆದ್ಯತೆ ನೀಡಲಾಯಿತು. ಇದರಿಂದ ಹಿರಿಯ ಶಾಸಕರು ಮತ್ತು ನಾಯಕರು ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ. ಚುನಾವಣೆಯ ಸೋಲಿನ ನಂತರ ಹಿರಿಯ ನಾಯಕರು ಬಹಿರಂಗವಾಗಿಯೇ ಅಭಿಷೇಕ್ ಬ್ಯಾನರ್ಜಿ ಅವರ ಅಹಂಕಾರದ ನಡವಳಿಕೆ ಮತ್ತು ಪಕ್ಷದ ವೈಫಲ್ಯದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ.

ಸಂಖ್ಯಾಬಲದ ಲೆಕ್ಕಾಚಾರ

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಒಟ್ಟು 80 ಶಾಸಕರನ್ನು ಹೊಂದಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಸ್ಪೀಕರ್ ಅವರಿಂದ ಹೊಸ ಬಣವಾಗಿ ಮಾನ್ಯತೆ ಪಡೆಯಬೇಕಾದರೆ, ಒಟ್ಟು ಶಾಸಕರಲ್ಲಿ 54 ಶಾಸಕರ ಬೆಂಬಲ ಅತ್ಯಗತ್ಯವಾಗಿದೆ. ಒಂದು ವೇಳೆ ಬಂಡಾಯ ಬಣದ ಸಂಖ್ಯಾಬಲವು 54ಕ್ಕಿಂತ ಕಡಿಮೆ ಇದ್ದರೆ, ಸ್ಪೀಕರ್ ಈ ಹೊಸ ಬಣಕ್ಕೆ ಮಾನ್ಯತೆ ನೀಡುವುದಿಲ್ಲ ಮತ್ತು ಶಾಸಕತ್ವ ರದ್ದಾಗುವ ಭೀತಿಯೂ ಇರುತ್ತದೆ.

ಬಂಡಾಯ ಬಣದ ವಾದಗಳು

ನಾವೇ ನಿಜವಾದ ಮತ್ತು ಅಧಿಕೃತ ತೃಣಮೂಲ ಕಾಂಗ್ರೆಸ್ ಪಕ್ಷ.

-ನಮ್ಮ ಬಳಿ ಶಾಸಕರ ಎರಡು ತೃತೀಯಾಂಶದಷ್ಟು ಸ್ಪಷ್ಟ ಬಹುಮತ ಇರುವುದರಿಂದ, ಪಕ್ಷದ ಅಧಿಕೃತ ಚುನಾವಣಾ ಚಿಹ್ನೆ ನಮಗೇ ಸಿಗಬೇಕು.

ವಿವಾದದ ಹಾದಿ

ಮೇ 20: ಪಕ್ಷದ ಪ್ರತಿಭಟನೆಗೆ ಬಂದಿದ್ದು ಕೇವಲ 35 ಶಾಸಕರು

ಕೋಲ್ಕತ್ತದ ವಿಧಾನಸಭಾ ಸಂಕೀರ್ಣದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಟಿಎಂಸಿ ಶಾಸಕರು ಜಂಟಿಯಾಗಿ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದರು. ಚುನಾವಣೋತ್ತರ ಹಿಂಸಾಚಾರ ವಿರೋಧಿಸಿ, ಚುನಾವಣಾ ಸೋಲಿನ ನಂತರ ಪಕ್ಷ ಹಮ್ಮಿಕೊಂಡಿದ್ದ ಮೊದಲ ದೊಡ್ಡ ಸಂಘಟಿತ ಪ್ರತಿಭಟನೆ ಇದಾಗಿತ್ತು. ಆದರೆ, ಪಕ್ಷದ ಅಸ್ತಿತ್ವದ ಹೋರಾಟದ ಈ ಧರಣಿಗೂ 35 ಶಾಸಕರು ಮಾತ್ರ ಹಾಜರಾಗುವ ಮೂಲಕ ಪಕ್ಷದಲ್ಲಿ ನಾಯಕತ್ವದ ಹಿಡಿತ ತಪ್ಪುತ್ತಿರುವುದನ್ನು ಸಾಬೀತುಪಡಿಸಿದರು.

ಮೇ 27: ಘೊಷ್ ರಾಜೀನಾಮೆ

ಬಾರಾಸಾತ್ ಕ್ಷೇತ್ರದ ಟಿಎಂಸಿ ಸಂಸದೆಯಾಗಿರುವ ಕಾಕೋಲಿ ಘೊಷ್ ದಸ್ತಿದಾರ್ ಪಕ್ಷದ ಎಲ್ಲ ಅಧಿಕೃತ ಹುದ್ದೆಗಳಿಗೆ ರಾಜೀನಾಮೆ ನೀಡುವ ಮೂಲಕ ‘ದೀದಿ’ಗೆ ಶಾಕ್ ನೀಡಿದರು. ವಿಶೇಷವೆಂದರೆ, ರಾಜೀನಾಮೆ ನೀಡುವ ಕೆಲವೇ ಗಂಟೆಗಳ ಮುನ್ನ ಕಾಕೋಲಿ ಅವರು ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ನೇತೃತ್ವದಲ್ಲಿ ನಡೆದ ಪ್ರಮುಖ ಸಭೆಯೊಂದರಲ್ಲಿ ಭಾಗವಹಿಸಿದ್ದರು.

ಮೇ 30: ಬ್ಯಾನರ್ಜಿ ಮೇಲೆ ಹಲ್ಲೆ

ಮಮತಾ ಬ್ಯಾನರ್ಜಿ ಅವರ ಸೋದರಳಿಯ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ದಕ್ಷಿಣ ಸೋನಾರ್​ಪುರದಲ್ಲಿ ಹಲ್ಲೆ ನಡೆಸಲಾಯಿತು. ಪ್ರತಿಭಟನಾಕಾರರು ಬ್ಯಾನರ್ಜಿ ಮೇಲೆ ಮೊಟ್ಟೆ ಎಸೆದರು. ‘ಇದು ನನ್ನನ್ನು ಕೊಲ್ಲಲು ನಡೆದ ಸಂಚು’ ಎಂದು ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೇ 31: ಸಭೆಗೆ ಶಾಸಕರು ಗೈರು!

ಪಕ್ಷದ ಸುಪ್ರೀಂ ನಾಯಕಿ ಮಮತಾ ಬ್ಯಾನರ್ಜಿ ಟಿಎಂಸಿ ಶಾಸಕರ ತುರ್ತು ಸಭೆಯೊಂದನ್ನು ಕರೆದಿದ್ದರು. ಆದರೆ, 80 ಶಾಸಕರ ಪೈಕಿ ಸಭೆಗೆ ಹಾಜರಾಗಿದ್ದು 20 ಶಾಸಕರು ಮಾತ್ರ! ಬರೋಬ್ಬರಿ 60 ಶಾಸಕರು ಸಭೆಗೆ ಬಾರದೇ ಬಂಡಾಯದ ಬಾವುಟ ಹಾರಿಸಿದ್ದರಿಂದ, ಅನಿವಾರ್ಯವಾಗಿ ಸಭೆಯನ್ನು ಮುಂದೂಡಲಾಯಿತು. ಆದರೆ ಪಕ್ಷದ ಒಳಗಿನ ಭಿನ್ನಮತವನ್ನು ಮುಚ್ಚಿಹಾಕಲು ಯತ್ನಿಸಿದ ಟಿಎಂಸಿ ವಕ್ತಾರ ಕುನಾಲ್ ಘೊಷ್, ‘ಅಭಿಷೇಕ್ ಬ್ಯಾನರ್ಜಿ ಅವರ ಮೇಲಾದ ದಾಳಿಯನ್ನು ಪ್ರತಿಭಟಿಸುವ ಸಿದ್ಧತೆಯಲ್ಲಿ ಶಾಸಕರು ನಿರತರಾಗಿದ್ದರಿಂದ ಸಭೆಗೆ ಬರಲು ಸಾಧ್ಯವಾಗಿಲ್ಲ’ ಎಂದು ಸಮರ್ಥಿಸಿಕೊಂಡರು.

ಮೇ 31: ಸಂಸದ ಕಲ್ಯಾಣ್ ಮೇಲೆ ಹಲ್ಲೆ

ಹೂಗ್ಲಿಯ ಪೊಲೀಸ್ ಠಾಣೆಯೊಂದರ ಹೊರಗಡೆ ತಮ್ಮ ಮೇಲೆ ಬಿಜೆಪಿ ಬೆಂಬಲಿಗರು ದಾಳಿ ನಡೆಸಿದ್ದಾರೆ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಗಂಭೀರ ಆರೋಪ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net