ಉತ್ಖನನ ವೇಳೆ ಪತ್ತೆಯಾಯಿತು ಬೃಹತ್ ಶಿವಲಿಂಗ!...ಮಹಾಕಾಲನ ನಗರಿ ಉಜ್ಜಯಿನಿಯಲ್ಲಿ ಪವಾಡ Ujjain Mahakal

Ujjain Mahakal (ಚಿತ್ರ X)
Ujjain Mahakal (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದ ಆವರಣದ ಸಮೀಪ ಶುಕ್ರವಾರ ಬೆಳಿಗ್ಗೆ ನಡೆದ ಉತ್ಖನನ
  • 2028ರಲ್ಲಿ ನಡೆಯಲಿರುವ ಸಿಂಹಸ್ಥ ಕುಂಭಮೇಳದ ಪೂರ್ವಸಿದ್ಧತೆಗಾಗಿ ನಡೆಯುತ್ತಿದ್ದ ನಿರ್ಮಾಣ ಕಾರ್ಯ
  • ಭೂಮಿ ತೆರವುಗೊಳಿಸುವ ಸಂದರ್ಭದಲ್ಲಿ ಈ ಅಪರೂಪದ ಪುರಾತನ ಶಿವಲಿಂಗ ಹೊರಬಂದಿದೆ
  • ಪುರೋಹಿತರು ಮತ್ತು ಸ್ಥಳೀಯ ನಿವಾಸಿಗಳಲ್ಲಿ ವ್ಯಾಪಕ ಆಸಕ್ತಿ ಮತ್ತು ಭಕ್ತಿಯನ್ನು ಹುಟ್ಟುಹಾಕಿದೆ
ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯ (Ujjain Mahakal) ಮಹಾಕಾಳೇಶ್ವರ ದೇವಾಲಯದ ಆವರಣದ ಸಮೀಪ ಶುಕ್ರವಾರ (ಮೇ 1) ಬೆಳಿಗ್ಗೆ ನಡೆದ ಉತ್ಖನನದ ವೇಳೆ ಬೃಹತ್ ಗಾತ್ರದ ಶಿವಲಿಂಗವೊಂದು ಪತ್ತೆಯಾಗಿದ್ದು, 2028ರಲ್ಲಿ ನಡೆಯಲಿರುವ ಸಿಂಹಸ್ಥ ಕುಂಭಮೇಳದ ಪೂರ್ವಸಿದ್ಧತೆಗಾಗಿ ನಡೆಯುತ್ತಿದ್ದ ನಿರ್ಮಾಣ ಕಾರ್ಯ ಮತ್ತು ಭೂಮಿ ತೆರವುಗೊಳಿಸುವ ಸಂದರ್ಭದಲ್ಲಿ ಈ ಅಪರೂಪದ ಪುರಾತನ ಶಿವಲಿಂಗ ಹೊರಬಂದಿದೆ.
ಈ ಆವಿಷ್ಕಾರವು ಅಧಿಕಾರಿಗಳು, ಪುರೋಹಿತರು ಮತ್ತು ಸ್ಥಳೀಯ ನಿವಾಸಿಗಳಲ್ಲಿ ವ್ಯಾಪಕ ಆಸಕ್ತಿ ಮತ್ತು ಭಕ್ತಿಯನ್ನು ಹುಟ್ಟುಹಾಕಿದ್ದು, ಅನೇಕರು ಶೀಘ್ರದಲ್ಲಿ ಸ್ಥಳದಲ್ಲೇ ಜಮಾಯಿಸಿ ಶಿವಲಿಂಗಕ್ಕೆ ಪ್ರಾರ್ತನೆ ಸಲ್ಲಿಸಿದರು. ಆದಾಗ್ಯೂ, ದೇವಾಲಯದ ವಿಸ್ತರಣಾ ಯೋಜನೆಗಾಗಿ ನೆಲವನ್ನು ಹದಗೊಳಿಸಲು ಯಂತ್ರೋಪಕರಣಗಳನ್ನು ಬಳಸುತ್ತಿದ್ದಾಗ ಶಿವಲಿಂಗ ಪತ್ತೆಯಾಗಿದೆ.
ಮಹಾಕಾಳೇಶ್ವರ ದೇವಾಲಯದ ಆವರಣದ ಬಳಿ ಶಿವಲಿಂಗ ಪತ್ತೆಯಾದ ತಕ್ಷಣ ಮುನ್ನೆಚ್ಚರಿಕೆ ಕ್ರಮವಾಗಿ ಉತ್ಖನನ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು ಮತ್ತು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 2028ರ ಮಾರ್ಚ್ ಅಂತ್ಯದಿಂದ ಮೇ ತಿಂಗಳವರೆಗೆ ಸಿಂಹಸ್ಥ ಕುಂಭಮೇಳ ನಡೆಯಲಿದ್ದು, ಮೇಷ ಸಂಕ್ರಾಂತಿಯ ಆಸುಪಾಸಿನಲ್ಲಿ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ಈ ಭವ್ಯ ಕಾರ್ಯಕ್ರಮಕ್ಕಾಗಿ ಸದ್ಯ ಉಜ್ಜಯಿನಿಯಲ್ಲಿ ದೊಡ್ಡ ಮಟ್ಟದ ಮೂಲಸೌಕರ್ಯ ನವೀಕರಣ ಮತ್ತು ಸೌಂದರ್ಯೀಕರಣ ಕಾರ್ಯಗಳು ಭರದಿಂದ ಸಾಗುತ್ತಿವೆ.
ದೇವಸ್ಥಾನದ ಆವರಣದ ಪ್ರಿಪೇಯ್ಡ್ ಬೂತ್ ಬಳಿ ಉತ್ಖನನ ನಡೆಸುತ್ತಿದ್ದಾಗ ಶಿವಲಿಂಗ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ನಿರ್ಮಾಣ ಕಾರ್ಯದ ವೇಗವನ್ನು ತಗ್ಗಿಸಲಾಗಿದೆ. ಒಂದು ವೇಳೆ ಈ ಸ್ಥಳದಲ್ಲಿ ಹೆಚ್ಚಿನ ಪುರಾತನ ಅವಶೇಷಗಳು ಪತ್ತೆಯಾದರೆ, ಅವುಗಳ ರಕ್ಷಣೆಗಾಗಿ ಪುರಾತತ್ವ ಇಲಾಖೆಯ ನಿಯಮಾವಳಿಗಳ ಪ್ರಕಾರ ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಲಾಗುವುದು ಎಂದು ಮಹಾಕಾಳೇಶ್ವರ ದೇವಾಲಯದ ಸಹಾಯಕ ಆಡಳಿತಾಧಿಕಾರಿ ಆಶಿಶ್ ಫಲ್ವಾಡಿಯಾ ತಿಳಿಸಿದ್ದಾರೆ.
ಪುರೋಹಿತರು ಮತ್ತು ಸ್ಥಳೀಯ ನಿವಾಸಿಗಳು ಈ ಕ್ಷಣವನ್ನು ಆಧ್ಯಾತ್ಮಿಕವಾಗಿ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ಇದು ಶಿವ ಮತ್ತು ಪ್ರಾಚೀನ ಸಂಪ್ರದಾಯಗಳೊಂದಿಗೆ ದೀರ್ಘಕಾಲ ಸಂಬಂಧ ಹೊಂದಿರುವ ನಗರವಾದ ಉಜ್ಜಯಿನಿಯ ಆಳವಾದ ಧಾರ್ಮಿಕ ಮಹತ್ವವನ್ನು ಪ್ರತಿಬಿಂಬಿಸುತ್ತದೆ.

ದೇವಾಲಯದ ಅರ್ಚಕರು ಹೇಳಿದ್ದೇನು..?

ಉತ್ಖನನದ ಸಮಯದಲ್ಲಿ ಪತ್ತೆಯಾದ ಈ ಪವಿತ್ರ ಶಿವಲಿಂಗಕ್ಕೆ ನಮಸ್ಕರಿಸಲು ನಾವು ಇಲ್ಲಿಗೆ ಬಂದಿದ್ದೇವೆ. ಇದು ಅತ್ಯಂತ ವಿಶೇಷವಾದ ಕ್ಷಣ. ಉಜ್ಜಯಿನಿಯ ಪ್ರತಿಯೊಂದು ಮೂಲೆಯಲ್ಲೂ ಬಾಬಾ ಮಹಾಕಾಳ ಮತ್ತು ಶಿವನ ಅವಶೇಷಗಳಿವೆ ಎಂಬ ನಂಬಿಕೆಗೆ ಈ ಆವಿಷ್ಕಾರ ಸಾಕ್ಷಿಯಾಗಿದೆ. ಇಂದು ಈ ಬೃಹತ್ ಶಿವಲಿಂಗದ ದರ್ಶನ ಪಡೆದಿರುವುದು ನಿಜಕ್ಕೂ ಅದ್ಭುತ. ಇದು ನಮ್ಮ ಸನಾತನ ಧರ್ಮದ ಭವ್ಯ ಸಂಸ್ಕೃತಿ ಮತ್ತು ಪ್ರಾಚೀನ ಪರಂಪರೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಮಹಾಕಾಳೇಶ್ವರ ದೇವಾಲಯದ ಅರ್ಚಕ ಆಕಾಶ್ ಶರ್ಮಾ ಹರ್ಷ ವ್ಯಕ್ತಪಡಿಸಿದರು.

ಸ್ಥಳಿಯರು ಏನಂತಾರೆ..?

ಹಲವಾರು ವರ್ಷಗಳಿಂದ ಜನರು ಉಜ್ಜಯಿನಿಗೆ ಬರುತ್ತಿದ್ದಾರೆ. ಇಂದು ಈ ದೇವರ ಮೂರ್ತಿ ಪಡೆದಿರುವ ನಾವು ತುಂಬಾ ಅದೃಷ್ಟಶಾಲಿಗಳು. ಉತ್ಖನನ ನಡೆದಾಗಲೆಲ್ಲಾ ಇಲ್ಲಿ ಕೆಲವು ವಿಗ್ರಹಗಳು ಕಂಡುಬರುತ್ತವೆ. ಪ್ರತಿಯೊಬ್ಬರೂ ಈ ವಿಗ್ರಹಗಳನ್ನು ನೋಡಿ ಆನಂದಿಸುತ್ತಾರೆ ಎಂದು ಸ್ಥಳೀಯರಾದ ಲೇಶ್ ಮಿಶ್ರಾ ಪ್ರಾರ್ಥನೆ ಸಲ್ಲಿಸಿದ ನಂತರ ಹೇಳಿದರು.
ಪತ್ತೆಯಾಗಿರುವ ಶಿವಲಿಂಗದ ಕಾಲ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ನಿರ್ಧರಿಸಲು ಪುರಾತತ್ವ ಇಲಾಖೆಯಿಂದ ಶೀಘ್ರದಲ್ಲೇ ವೈಜ್ಞಾನಿಕ ಪರೀಕ್ಷೆಗಳು ನಡೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದು, ಉಜ್ಜಯಿನಿಯ ಶ್ರೀಮಂತ ಧಾರ್ಮಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಗಮನಿಸಿದರೆ, ಈ ಆವಿಷ್ಕಾರವು ನಗರದ ಇತಿಹಾಸಕ್ಕೆ ಮತ್ತೊಂದು ಮಹತ್ವದ ಅಧ್ಯಾಯವನ್ನು ಸೇರಿಸುವ ನಿರೀಕ್ಷೆಯಿದೆ. ಸದ್ಯಕ್ಕೆ ಈ ಸ್ಥಳವು ಭಕ್ತರ ಪಾಲಿಗೆ ದರ್ಶನ ಪಡೆಯುವ ಪವಿತ್ರ ತಾಣವಾಗಿದ್ದರೆ, ಅಧಿಕಾರಿಗಳ ಪಾಲಿಗೆ ಎಚ್ಚರಿಕೆಯ ವೀಕ್ಷಣಾ ಕೇಂದ್ರವಾಗಿದೆ. 2028ರ ಭವ್ಯ ಸಿಂಹಸ್ಥ ಕುಂಭಮೇಳದ ಸಿದ್ಧತೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಪುರಾತತ್ವ ಇಲಾಖೆ ಹಾಗೂ ಆಡಳಿತ ಮಂಡಳಿಯು ಅತ್ಯಂತ ಎಚ್ಚರಿಕೆಯಿಂದ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net