ಶಿವಾಜಿ ಮಹಾರಾಜರ ಶೌರ್ಯ, ಆಡಳಿತ ನಮಗೆಲ್ಲಾ ಮಾರ್ಗದರ್ಶನ; ಸ್ವರಾಜ್ಯದ ಹರಿಕಾರನಿಗೆ ಪ್ರಧಾನಿ ಮೋದಿ ಭಕ್ತಿಪೂರ್ವಕ ನಮನ! Shivaji Jayanti

ಛತ್ರಪತಿ ಶಿವಾಜಿ ಮಹಾರಾಜ್, ಪ್ರಧಾನಮಂತ್ರಿ ನರೇಂದ್ರ ಮೋದಿ
ಛತ್ರಪತಿ ಶಿವಾಜಿ ಮಹಾರಾಜ್, ಪ್ರಧಾನಮಂತ್ರಿ ನರೇಂದ್ರ ಮೋದಿ
Published on

ಪ್ರಮುಖ ಮುಖ್ಯಾಂಶಗಳು

  • ದೇಶಾದ್ಯಂತ ಶಿವಾಜಿ ಜಯಂತಿ ಆಚರಣೆ
  • ಶಿವಾಜಿ ಮಹಾರಾಜರ ಶೌರ್ಯ ಮತ್ತು ಆಡಳಿತ ಕೌಶಲ್ಯ ಅನುಕರಣೀಯ ಎಂದ ಪ್ರಧಾನಿ ಮೋದಿ
  • ಛತ್ರಪತಿ ಶಿವಾಜಿ ಜಯಂತಿಯ ಪ್ರಯುಕ್ತ ದೇಶದ ನಾಗರಿಕರಿಗೆ ಶುಭ ಕೋರಿದ ಪ್ರಧಾನ ಮಂತ್ರಿ
ನವದೆಹಲಿ: ಗುರುವಾರ (ಫೆ.19) ರಂದು ಭಾರತದಾದ್ಯಂತ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ (Shivaji Jayanti) ಯನ್ನು ಆಚರಿಸಲಾಗುತ್ತಿದ್ದು, ಶಿವಾಜಿ ಮಹಾರಾಜರು ಒಬ್ಬ ದಕ್ಷ ಆಡಳಿತಗಾರ ಮತ್ತು ದಾರ್ಶನಿಕ ನಾಯಕರಾಗಿದ್ದು, ಅವರ ಶೌರ್ಯ ಮತ್ತು ಧೈರ್ಯ ನಮಗೆ ಮಾರ್ಗದರ್ಶಶವಾಗಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಶಿವಾಜಿ ಜಯಂತಿ ಪ್ರಯುಕ್ತ ದೇಶದ ಎಲ್ಲಾ ನಾಗರಿಕರಿಗೆ ಶುಭ ಕೋರಿದ ಪ್ರಧಾನಿ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು, ನಾವು ದೂರದೃಷ್ಟಿಯ ನಾಯಕ, ಅಸಾಧಾರಣ ಆಡಳಿತಗಾರ, ಕಾರ್ಯತಂತ್ರದ ಚಿಂತಕ ಮತ್ತು ಸ್ವರಾಜ್ಯದ ಪ್ರತಿಪಾದಕರಿಗೆ ಗೌರವ ಸಲ್ಲಿಸುತ್ತೇವೆ.
ಅವರ ಧೈರ್ಯ ನಮಗೆ ಸ್ಫೂರ್ತಿ ನೀಡಲಿ, ಅವರ ಆಡಳಿತವು ನಮಗೆ ಮಾರ್ಗದರ್ಶನ ನೀಡಲಿ ಮತ್ತು ಅವರ ನ್ಯಾಯ ಮತ್ತು ಸ್ವಾಭಿಮಾನದ ಮನೋಭಾವವು ನಮ್ಮ ಸಮಾಜವನ್ನು ಬಲಪಡಿಸಲಿ ಎಂದು ಮೋದಿ ತಮ್ಮ ಎಕ್ಸ್​ (ಟ್ವಿಟರ್​) ನಲ್ಲಿ ಬರೆದಿದ್ದಾರೆ.
ಶಿವಾಜಿ ಮಹಾರಾಜರ ಬಗ್ಗೆ
ಶಿವಾಜಿ ಮಹಾರಾಜರು ಇಂದಿನ ಪುಣೆಯ ಶಿವನೇರಿ ದುರ್ಗದಲ್ಲಿ ಫೆ.19, 1630 ರಂದು ಜನಿಸಿದರು. ಇವರ ತಂದೆ ಶಹಾಜಿ ಭೋಸ್ಲೆ, ತಾಯಿ ಜೀಜಾಭಾಯಿ. ಇವರ ತಂದೆ ಬಿಜಾಪುರದ ಆದಿಲ್​ ಶಾಹಿಗಳ ಸೇನೆಯಲ್ಲಿ ಅಧಿಕಾರಿಯಾಗಿದ್ದರು. ಶಿವಾಜಿ ಮಹಾರಾಜರಿಗೆ ಎಂಟು ಜನ ಪತ್ನಿಯರಿದ್ದು, ಅವರಲ್ಲಿ ಸಾಯಿಬಾಯಿ (ಸಂಭಾಜಿ ತಾಯಿ) ಮತ್ತು ಸೋಯರಾಬಾಯಿ (ರಾಜಾರಾಮನ ತಾಯಿ) ಪ್ರಮುಖರಾಗಿದ್ದಾರೆ.
ಸ್ವತಂತ್ರ ಮರಾಠಾ ಸಾಮ್ರಾಜ್ಯ ಮತ್ತು ಹಿಂದೂ ಸ್ವರಾಜ್ಯದ ಕಲ್ಪನೆ ಹೊಂದಿದ್ದ ಶಿವಾಜಿ, ಅಂದಿನ ಕಾಲದಲ್ಲಿ ಭಾರತದ ಬಹುಪಾಲನ್ನು ಆಕ್ರಮಿಸಿಕೊಂಡಿದ್ದ ಮೊಘಲರ ವಿರುದ್ಧ ನಿರಂತರ ಯುದ್ಧ ಸಾರುವ ಮೂಲಕ ಸ್ವತಂತ್ರ ಹಿಂದೂ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದರು.
ತನ್ನ ಗೆರಿಲ್ಲಾ ಯುದ್ಧತಂತ್ರದ ಮೂಲಕ ಮೊಘಲರ ಸೇನೆಯನ್ನು ಸದೆಬಡಿದು, ಸುಮಾರು 300 ಕ್ಕೂ ಅಧಿಕ ಕೋಟೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡನು. ಆದರೆ 1665 ರಲ್ಲಿ ಪುರಂದರ ಒಪ್ಪಂದದ ಅನ್ವಯ ಶಿವಾಜಿ ತನ್ನೆಲ್ಲಾ ಕೋಟೆಗಳನ್ನು ಮೊಘಲ್​ ಬಾದಷಾ ಔರಂಗಜೇಬನಿಗೆ ಬಿಟ್ಟುಕೊಡಬೇಕಾಯಿತು.
ದೆಹಲಿ ದರ್ಬಾರ್​ಗೆ ತೆರಳಿದ್ದ ಶಿವಾಜಿ ಮತ್ತು ಮಗ ಸಂಭಾಜಿಯನ್ನು ಔರಂಗಜೇಬ ಅವಮಾನಿಸಿ ತನ್ನ ಸೆರೆಯಲ್ಲಿ ಇಟ್ಟಿದ್ದ. ಈ ಸಂದರ್ಭದಲ್ಲಿ ಹಣ್ಣಿನ ಬುಟ್ಟಿಯಲ್ಲಿ ಕುಳಿತುಕೊಂಡು ಶಿವಾಜಿ ಮೊಘಲರ ಕೈಯಿಂದ ತಪ್ಪಿಸಿಕೊಂಡ ಘಟನೆ ರೋಮಾಂಚಕವಾಗಿದೆ.
ಪುಣೆಗೆ ಮರಳಿದ ಶಿವಾಜಿ ಮತ್ತೆ ಮೊಘಲರ ಮೇಲೆ ದಾಳಿ ಮಾಡಿ ತಾನು ಕಳೆದುಕೊಂಡಿದ್ದ ಎಲ್ಲಾ ಕೋಟೆಗಳನ್ನು ಮರಳಿಪಡೆದು 1674 ರಲ್ಲಿ ರಾಯಗಢ ಕೋಟೆಯಲ್ಲಿ ಛತ್ರಪತಿ ಎಂಬ ಬಿರುದನ್ನು ಧರಿಸಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ನೆರವೇರಿತು. ನಂತರ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಿವಾಜಿ ಮಹಾರಾಜರು 3 ಎಪ್ರಿಲ್​ 1680 ರಂದು ಮರಣ ಹೊಂದಿದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net