ದೇಶದ ಆತ್ಮ ಸಾಕ್ಷಿ ಎಚ್ಚರಿಸಿದ್ದೀರಿ, ದಯವಿಟ್ಟು ಉಪವಾಸ ನಿಲ್ಲಿಸಿ!...ಸೋನಂ ವಾಂಗ್ಚುಕ್‌ಗೆ ಪತ್ರ ಬರೆದ ಸಂಸದ ತರೂರ್ | Shashi Tharoor

Shashi Tharoor | ಕಾಂಗ್ರೆಸ್​​ ಸಂಸದ ತರೂರ್
Shashi Tharoor | ಕಾಂಗ್ರೆಸ್​​ ಸಂಸದ ತರೂರ್
Published on
ನವದೆಹಲಿ: ಇಲ್ಲಿನ ಜಂತರ್ ಮಂತರ್‌ನಲ್ಲಿ ಕಳೆದ 18 ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್​ಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಪತ್ರದ ಮೂಲಕ ಮನವಿ ಮಾಡಿದ್ದಾರೆ.
ನಿಮ್ಮ ಈ ಹೋರಾಟ ಈಗಾಗಲೇ ದೇಶದ ಜಾಗೃತ ಮನಸ್ಸನ್ನು ಬಡಿದೆಬ್ಬಿಸಿದೆ ಎಂದು ಶ್ಲಾಘಿಸಿರುವ ತರೂರ್​​, ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನಡೆಯುತ್ತಿರುವ ಈ ಹೋರಾಟವನ್ನು ಇನ್ನು ಮುಂದೆ ಸಂಸತ್ತಿನೊಳಗೆ ಕೊಂಡೊಯ್ಯಬೇಕಾಗಿದೆ ಎಂದು ಹೇಳಿದ್ದಾರೆ.

ಸೋನಂ ವಾಂಗ್ಚುಕ್‌ಗೆ ಶಶಿ ತರೂರ್ ಪತ್ರ

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಬಹಿರಂಗ ಪತ್ರ ಬರೆದಿರುವ ಶಶಿ ತರೂರ್, ಸೋನಂ ವಾಂಗ್ಚುಕ್ ಅವರಿಗೆ ವಿಶೇಷ ವಿನಂತಿ ಮಾಡಿಕೊಂಡಿದ್ದಾರೆ. ಶ್ರೀ ಸೋನಂ ವಾಂಗ್ಚುಕ್ ಜಿ ಅವರಿಗೆ ನನ್ನ ಹೃತ್ಪೂರ್ವಕ ಮನವಿ, ದಯವಿಟ್ಟು ನಿಮ್ಮ ಉಪವಾಸವನ್ನು ಕೊನೆಗೊಳಿಸಿ. ಉಪವಾಸ ಸತ್ಯಾಗ್ರಹದ ಮುಖ್ಯ ಉದ್ದೇಶವೇ ದೇಶದ ಜಾಗೃತ ಮನಸ್ಸನ್ನು ಎಚ್ಚರಿಸುವುದಾಗಿದೆ, ಅದನ್ನು ನೀವು ಈಗಾಗಲೇ ಯಶಸ್ವಿಯಾಗಿ ಮಾಡಿದ್ದೀರಿ.
ಮುಂಬರುವ ಸುದೀರ್ಘ ಹೋರಾಟದ ಹಾದಿಗೆ ಭಾರತಕ್ಕೆ ನಿಮ್ಮ ಧ್ವನಿಯ ಅಗತ್ಯವಿದೆ ಎಂದು ತರೂರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮುಂದಿನ ಸೋಮವಾರದಿಂದ ಸಂಸತ್ತಿನ ಅಧಿವೇಶನ ಪುನರಾರಂಭಗೊಳ್ಳಲಿದ್ದು, ನಮ್ಮ ಪ್ರಜಾಪ್ರಭುತ್ವದ ಅತ್ಯುನ್ನತ ವೇದಿಕೆಯಲ್ಲಿ ದೇಶದ ಯುವಜನತೆ ಮತ್ತು ವಿದ್ಯಾರ್ಥಿಗಳ ಆತಂಕಗಳನ್ನು ಎತ್ತಿಹಿಡಿಯಲು ಜನಪ್ರತಿನಿಧಿಗಳಿಗೆ ಸೂಕ್ತ ಅವಕಾಶ ಸಿಗಲಿದೆ. ಸಾವು ತಂದುಕೊಳ್ಳುವ ಉಪವಾಸದ ಬದಲಿಗೆ ಸಂಸತ್ತಿನೊಳಗೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ.

ಆರೋಗ್ಯ ಹದಗೆಡುತ್ತಿದ್ದರೂ ಮಣಿಯದ ವಾಂಗ್ಚುಕ್

ಕಳೆದ 18 ದಿನಗಳಿಂದ ನಿರಂತರ ಉಪವಾಸದಲ್ಲಿರುವ ಸೋನಂ ವಾಂಗ್ಚುಕ್ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದರೂ ಅವರು ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ. ಅವರ ದೇಹದ ತೂಕ ಈಗಾಗಲೇ 8.5 ಕೆಜಿಯಷ್ಟು ಇಳಿಕೆಯಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಅವರ ಜೀವಕ್ಕೆ ತೀವ್ರ ಅಪಾಯ ಎದುರಾಗಬಹುದು ಎಂದು ಕಳವಳ ವ್ಯಕ್ತಪಡಿಸಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ವಾಂಗ್ಚುಕ್ ಪ್ರಾಣ ಉಳಿಸಲು ಅವರಿಗೆ ಬಲವಂತವಾಗಿ ಆಹಾರ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಈ ಮಧ್ಯೆ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಹಿರಿಯ ನಟಿ ಜೀನತ್ ಅಮಾನ್ ಸೇರಿದಂತೆ ಹಲವು ಗಣ್ಯರು ವಾಂಗ್ಚುಕ್ ಅವರಿಗೆ ಉಪವಾಸ ಕೈಬಿಡುವಂತೆ ಮನವಿ ಮಾಡಿದ್ದಾರೆ. ಭಾರತವು ತನ್ನ ಅತ್ಯುತ್ತಮ ಚಿಂತಕನೊಬ್ಬನನ್ನು ಹೋರಾಟಕ್ಕೆ ಬಲಿ ಕೊಟ್ಟು ಸುಮ್ಮನೆ ಕೂರಬಾರದು, ಕೇಂದ್ರ ಸರ್ಕಾರ ತಕ್ಷಣವೇ ಮಾತುಕತೆ ಆರಂಭಿಸಬೇಕು ಎಂದು ಜೀನತ್ ಅಮಾನ್ ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಶಶಿ ತರೂರ್ ಕಿವಿಮಾತು

ಪ್ರತಿಭಟನಾಕಾರರ ಇಷ್ಟೊಂದು ದೊಡ್ಡ ಆಕ್ರೋಶವನ್ನು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಬಾರದು ಎಂದು ಎಚ್ಚರಿಸಿರುವ ಶಶಿ ತರೂರ್, ದೇಶದ ಯುವ ನಾಗರಿಕರೊಂದಿಗೆ ತಕ್ಷಣವೇ ಮಾತುಕತೆ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಪ್ರಧಾನಿ ಮೋದಿಯವರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಯುವಕರೊಂದಿಗೆ ಸಂವಾದ ನಡೆಸುವುದು ಸರ್ಕಾರದ ದೌರ್ಬಲ್ಯವಲ್ಲ, ಬದಲಿಗೆ ಅದು ದೇಶದ ಉನ್ನತ ಮುತ್ಸದ್ದಿತನದ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.
ತಮ್ಮದೇ ಮಧ್ಯಮ ವರ್ಗದ ಹಿನ್ನೆಲೆಯನ್ನು ನೆನಪಿಸಿಕೊಂಡ ತರೂರ್, ಪ್ರಾಮಾಣಿಕ ಮತ್ತು ಅರ್ಹತೆಯ ಆಧಾರದ ಮೇಲೆ ನಡೆಯುವ ಪರೀಕ್ಷೆಗಳು, ವಿದ್ಯಾರ್ಥಿವೇತನಗಳು ದೇಶದ ಕೋಟ್ಯಂತರ ಸಾಮಾನ್ಯ ಕುಟುಂಬಗಳ ಯುವಕರಿಗೆ ಇರುವ ಏಕೈಕ ಆಶಾಕಿರಣಗಳಾಗಿವೆ. ಯಾವಾಗ ಪರೀಕ್ಷಾ ಪೇಪರ್‌ಗಳು ಲೀಕ್ ಆಗುತ್ತವೆಯೋ, ಪರೀಕ್ಷೆಗಳು ರದ್ದಾಗುತ್ತವೆಯೋ ಆಗ ದೇಶದ ಶ್ರೀಮಂತರಲ್ಲ, ಬದಲಿಗೆ ಬಡ ಮತ್ತು ಮಧ್ಯಮ ವರ್ಗದ ಸಾಮಾನ್ಯ ಕುಟುಂಬಗಳು ದೊಡ್ಡ ಬೆಲೆ ತೆರಬೇಕಾಗುತ್ತದೆ. ವ್ಯವಸ್ಥೆಯ ಈ ದ್ರೋಹದ ವಿರುದ್ಧ ಯುವ ಪೀಳಿಗೆಯಲ್ಲಿ ಮೂಡಿರುವ ಆಕ್ರೋಶ ಮತ್ತು ಹತಾಶೆ ಸಂಪೂರ್ಣವಾಗಿ ನ್ಯಾಯಯುತವಾಗಿದೆ ಎಂದು ಅವರು ವಿದ್ಯಾರ್ಥಿ ಸಮೂಹಕ್ಕೆ ತಮ್ಮ ಬೆಂಬಲ ಘೋಷಿಸಿದ್ದಾರೆ.

ಸಿಜೆಪಿ 5 ಅಂಶಗಳ ಚಾರ್ಟರ್ ಬಿಡುಗಡೆ

ಇದೇ ವೇಳೆ, ದೇಶದ ನೀಟ್ (NEET) ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆಯು 25ನೇ ದಿನಕ್ಕೆ ಕಾಲಿಟ್ಟಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ತರ ಸುಧಾರಣೆಗಳನ್ನು ತರಬೇಕೆಂದು ಆಗ್ರಹಿಸಿ ಸಿಜೆಪಿ ಐದು ಪ್ರಮುಖ ಅಂಶಗಳ ಚಾರ್ಟರ್ ಅನ್ನು ಬಿಡುಗಡೆ ಮಾಡಿದೆ. ಈ ಹೋರಾಟಕ್ಕೆ ದೇಶದ ವಿವಿಧ ರಾಜಕೀಯ ಪಕ್ಷಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಒಂದೆಡೆ ವಾಂಗ್ಚುಕ್ ಅವರ ಲಡಾಖ್ ಮತ್ತು ವಿದ್ಯಾರ್ಥಿ ಕೇಂದ್ರಿತ ಹೋರಾಟ, ಮತ್ತೊಂದೆಡೆ ಸಿಜೆಪಿಯ ಪರೀಕ್ಷಾ ಸುಧಾರಣೆಯ ಆಗ್ರಹಗಳು ಜಂತರ್ ಮಂತರ್ ಅನ್ನು ಹೋರಾಟದ ಕೇಂದ್ರವನ್ನಾಗಿಸಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net