ತರೂರ್ Vs ಕಾಂಗ್ರೆಸ್​​ ಹೈಕಮಾಂಡ್ ಸಂಘರ್ಷಕ್ಕೆ ಬ್ರೇಕ್.? ಖರ್ಗೆ-ರಾಹುಲ್​ರನ್ನು ಭೇಟಿ ಮಾಡಿದ ತರೂರ್ | Shashi Tharoor

 Shashi Tharoor | ಸಂಸದ ಶಶಿ ತರೂರ್
Shashi Tharoor | ಸಂಸದ ಶಶಿ ತರೂರ್
Published on
ದೆಹಲಿ: ಪಕ್ಷದ ಆಂತರಿಕ ವ್ಯವಸ್ಥೆಯಲ್ಲಿ ಕೆಲವು ಸಮಸ್ಯೆಗಳಿದ್ದು, ಅಧಿವೇಶನಕ್ಕೆ ದೆಹಲಿಗೆ ಹೋದಾಗ ನನ್ನ ಕಳವಳಗಳನ್ನು ಪಕ್ಷದ ನಾಯಕತ್ವಕ್ಕೆ ಸ್ಪಷ್ಟಪಡಿಸುತ್ತೇನೆ ಎಂದಿದ್ದ ಸಂಸದ ಶಶಿ ತರೂರ್​, ತಾವು ಹೇಳಿದಂತೆಯೇ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರನ್ನು ಸಂಸತ್ತಿನ ಅವರ ಕಚೇರಿಯಲ್ಲಿ ಭೇಟಿಯಾಗಿದ್ದಾರೆ.
ತಮ್ಮ ಪಕ್ಷದ ವರಿಷ್ಟರನ್ನು ಭೇಟಿಯಾದ ಬಳಿಕ ಮಾತನಾಡಿದ ಸಂಸದ ತರೂರ್, ನಾನು ಯಾವುದೇ ಹುದ್ದೆಗೆ ಅಭ್ಯರ್ಥಿಯಲ್ಲ, ಪಕ್ಷಕ್ಕಾಗಿ ಪ್ರಚಾರ ಮಾಡುತ್ತಿದ್ದೇನೆ. ಅದರ ಬಗ್ಗೆ ನನಗೆ ತುಂಬಾ ತೃಪ್ತಿ ಇದೆ, ನಾನು ಈಗ ಸಂಸತ್ತಿಗೆ ಹಾಜರಾಗಲಿದ್ದೇನೆ, ನಮ್ಮ ಪಕ್ಷದ ನಾಯಕನನ್ನು ಭೇಟಿಯಾಗುವುದರಲ್ಲಿ ವಿಶೇಷತೆ ಏನಿಲ್ಲ ಎಂದರು. ಸಂಸತ್ ಭವನದ ಸಂಕೀರ್ಣದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಕೊಠಡಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ತಮ್ಮ ಭೇಟಿಯ ಕುರಿತು ಎಕ್ಸ್​ ಖಾತೆಯಲ್ಲಿ ಸಭೆಯ ಪೋಸ್ಟ್​​ ಹಂಚಿಕೊಂಡಿರುವ ತರೂರ್, ತಮ್ಮ ಮತ್ತು ಕಾಂಗ್ರೆಸ್ ನಾಯಕರ ನಡುವೆ ಎಲ್ಲವೂ ಚೆನ್ನಾಗಿದೆ ಎಂದರು. ವಿವಿಧ ವಿಷಯಗಳ ಕುರಿತು ರಚನಾತ್ಮಕ ಚರ್ಚೆಗಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳು. ಭಾರತದ ಜನರ ಸೇವೆಯಲ್ಲಿ ಮುಂದುವರಿಯುವಾಗ ನಾವೆಲ್ಲರೂ ಒಂದೇ ಪುಟದಲ್ಲಿದ್ದೇವೆ ಎಂದು ಬರೆದುಕೊಂಡಿದ್ದಾರೆ.

17 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದೇನೆ: ತರೂರ್

ನಾನು ಕಳೆದ 17 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಇದ್ದೇನೆ, ಹೆಚ್ಚು ದೂರ ಹೋಗಬಾರದು, ನನ್ನ ಮಟ್ಟಿಗೆ ಹೇಳುವುದಾದರೆ, ಏನೇ ತಪ್ಪಾಗಿದ್ದರೂ ಅದನ್ನು ಪರಿಹರಿಸಬೇಕಾಗಿದೆ ಮತ್ತು ಅದನ್ನು ಸೂಕ್ತ ವೇದಿಕೆಯಲ್ಲಿ ಚರ್ಚಿಸಲಾಗುವುದು ಎಂದು ಪಿಟಿಐಗೆ ತಿಳಿಸಿದರು.

ತರೂರ್​ಗೆ ಅವಮಾನ..?

ಇತ್ತೀಚೆಗೆ ಎರ್ನಾಕುಲಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು, ಈ ಸಭೆಯಲ್ಲಿ ಸಂಸದ ತರೂರ್​ಗೆ ಸೂಕ್ತ ಗೌರವ ನೀಡಿಲ್ಲ ಎಂಬ ಮಾತುಗಳು ಕೇಳಿಬಂದಿದ್ದು, ಇದರಿಂದ ಬೇಸರಗೊಂಡಿರುವ ಅವರು ಪಕ್ಷದ ನಾಯಕರುಗಳ ಜೊತೆ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.
ರಾಜ್ಯ ನಾಯಕರು ಮತ್ತು ಹೈಕಮಾಂಡ್​​ನ ವರಿಷ್ಠರು ಸಂಪರ್ಕಿಸಲು ಪ್ರಯತ್ನಿಸಿದರೂ, ತರೂರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಮತ್ತು ಶನಿವಾರ ಕೋಝಿಕ್ಕೋಡ್‌ನಲ್ಲಿ ನಡೆಯಲಿರುವ ಕೇರಳ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net