ಪ್ರಧಾನಿ ಮೋದಿಗೆ ಶುಭ ಕೋರುವಾಗ ಸಂಸದ ಶಶಿ ತರೂರ್ ಎಡವಟ್ಟು: ಮ್ಯಾಟ್ರಿಕ್ಸ್‌ನಲ್ಲೇ ದೋಷವಿದೆ ಎಂದು ಕಾಲೆಳೆದ ನೆಟ್ಟಿಗರು! | Shashi Tharoor

Shashi Tharoor | ಇಂಗ್ಲಿಷ್ ಮಾಸ್ಟರ್ ಶಶಿ ತರೂರ್ ಗ್ರ್ಯಾಮರ್ ಮಿಸ್ಟೇಕ್!
Shashi Tharoor | ಇಂಗ್ಲಿಷ್ ಮಾಸ್ಟರ್ ಶಶಿ ತರೂರ್ ಗ್ರ್ಯಾಮರ್ ಮಿಸ್ಟೇಕ್!
Published on
ನವದೆಹಲಿ: ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತ, ನಿಖರತೆ ಮತ್ತು ವಿದ್ವತ್ತಿಗೆ ಹೆಸರುವಾಸಿಯಾದ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಕೂಡ ಕೆಲವೊಮ್ಮೆ ತಪ್ಪು ಮಾಡಬಹುದು ಎಂಬುದಕ್ಕೆ ಸಾಕ್ಷಿಯೊಂದು ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಜನ್ಮದಿನದ ಶುಭಾಶಯ ಕೋರುವಾಗ ತರೂರ್ ಸಣ್ಣ ವ್ಯಾಕರಣ ದೋಷವನ್ನು ಮಾಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದ ಸಂಸದ ತರೂರ್, on his 76th birthday ಎಂದು ಬರೆಯುವ ಬದಲಾಗಿ, in his 76th birthday ಎಂದು ಬರೆದಿದ್ದರು. ಈ ತಪ್ಪನ್ನು ನೆಟ್ಟಿಗರು ತಕ್ಷಣವೇ ಕಂಡುಹಿಡಿದಿದ್ದಾರೆ.
Prime Minister @narendramodi ಅವರ 76ನೇ ಜನ್ಮದಿನದಂದು (in his 76th birthday) ಅವರಿಗೆ ಹಾರ್ದಿಕ ಶುಭಾಶಯಗಳು. ಅವರಿಗೆ ಶುಭದಿನ ಹಾಗೂ ಮುಂಬರುವ ವರ್ಷದಲ್ಲಿ ಉತ್ತಮ ಆರೋಗ್ಯ ಸಿಗಲಿ ಎಂದು ಹಾರೈಸುತ್ತೇನೆ. ನಮ್ಮ ಪ್ರೀತಿಯ ದೇಶಕ್ಕೆ ನಿರಂತರ ಸಾರ್ವಜನಿಕ ಸೇವೆ ಸಲ್ಲಿಸಲು ಈ ಶುಭ ಸಂದರ್ಭದಲ್ಲಿ ಅವರಿಗೆ ನನ್ನ ಶುಭ ಹಾರೈಕೆಗಳು ಎಂದು ಪೋಸ್ಟ್ ಮಾಡಿದ್ದರು.
ಬಳಕೆದಾರರೊಬ್ಬರು ಈ ತಪ್ಪನ್ನು ಎತ್ತಿ ತೋರಿಸುತ್ತಾ, ಶಶಿ ತರೂರ್ ಅವರಂತಹವರೂ ತಪ್ಪು ಮಾಡಲು ಸಾಧ್ಯ ಎಂದಿದ್ದಾರೆ. ಶಶಿ ಜಿ ವ್ಯಾಕರಣ ದೋಷ ಮಾಡಿದ್ದಾರೆ! ಎಂದು ಬರೆದುಕೊಂಡಿದ್ದಾರೆ. ಈ ತಪ್ಪನ್ನು ಒಪ್ಪಿಕೊಂಡ ತರೂರ್, ಹೌದು, on birthday ಎಂಬುದು in ಆಗಿದೆ. ಅಯ್ಯೋ, ಇದು ಯಾವಾಗಲೂ ನಡೆಯುತ್ತಲೇ ಇರುತ್ತದೆ ಎಂದು ಹಾಸ್ಯಮಯವಾಗಿ ಉತ್ತರಿಸಿದ್ದಾರೆ.

ಮ್ಯಾಟ್ರಿಕ್ಸ್‌ನಲ್ಲಿ ತಾಂತ್ರಿಕ ದೋಷ

ಸಂಸದ ತರೂರ್ ತಮ್ಮ ತಪ್ಪನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ್ದಕ್ಕೆ ಸ್ಪಂದಿಸಿದ ನೆಟ್ಟಿಗರು, ಶಶಿ ತರೂರ್ ಅವರೇ ವ್ಯಾಕರಣ ದೋಷ ಮಾಡುತ್ತಿದ್ದಾರೆ ಎಂದರೆ ಮ್ಯಾಟ್ರಿಕ್ಸ್‌ನಲ್ಲೇ ಏನೋ ತಾಂತ್ರಿಕ ದೋಷವಿರಬೇಕು ಎಂದು ತಮಾಷೆ ಮಾಡಿದ್ದಾರೆ. ಇದು ಮ್ಯಾಟ್ರಿಕ್ಸ್‌ನಲ್ಲಿ ಉಂಟಾದ ದೋಷವೇ ಇರಬೇಕು. ನಾವು ಸಿಮ್ಯುಲೇಶನ್‌ನಲ್ಲಿ ಜೀವಿಸುತ್ತಿದ್ದೇವೆ ಎಂಬುದು ಈಗ ನನಗಂತೂ ಖಚಿತವಾಗಿದೆ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ಇದನ್ನು ಲೂವ್ರೆ ಅಥವಾ ಭಾರತ ಮಂಟಪದಲ್ಲಿ ಫ್ರೇಮ್ ಮಾಡಿ ಹಾಕಿ ಎಂದು ತಮಾಷೆ ಮಾಡಿದ್ದಾರೆ.
ಮೂರನೇ ಬಳಕೆದಾರರು, ನಿಮ್ಮ ಪ್ರತಿಯೊಂದು ಪದವನ್ನು ಎಷ್ಟು ಆಳವಾಗಿ ಗಮನಿಸಲಾಗುತ್ತದೆ, ನೋಡಲಾಗುತ್ತದೆ, ಗ್ರಹಿಸಲಾಗುತ್ತದೆ, ಅರ್ಥೈಸಲಾಗುತ್ತದೆ, ತಪ್ಪಾಗಿ ಅರ್ಥೈಸಲಾಗುತ್ತದೆ, ಸ್ವೀಕರಿಸಲಾಗುತ್ತದೆ, ಮೆಚ್ಚಲಾಗುತ್ತದೆ, ಚರ್ಚಿಸಲಾಗುತ್ತದೆ ಮತ್ತು ಎತ್ತಿ ತೋರಿಸಲಾಗುತ್ತದೆ ಎಂಬುದನ್ನು ನೋಡಿ ಎಂದು ಕಾಮೆಂಟ್ ಮಾಡಿದ್ದಾರೆ. ನಾಲ್ಕನೇ ಬಳಕೆದಾರರು, ತಪ್ಪುಗಳನ್ನು ಮಾಡುವುದು ತಪ್ಪಲ್ಲ ಎಂಬುದಕ್ಕೆ ಇದು ನಿಜಕ್ಕೂ ಪ್ರೋತ್ಸಾಹದಾಯಕವಾಗಿದೆ. ಸ್ವತಃ ಡಾ. ಶಶಿ ತರೂರ್ ಅವರೇ ತಪ್ಪುಗಳನ್ನು ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿ ಮೋದಿ 76ನೇ ಜನ್ಮದಿನ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ದೇಶಾದ್ಯಂತ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 17 ರವರೆಗೆ ಸೇವಾ ಸಂಕಲ್ಪ ಅಭಿಯಾನವನ್ನು ಆಯೋಜಿಸುತ್ತಿದ್ದು, ಸರಣಿ ಸೇವಾ ಆಧಾರಿತ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಂಪರ್ಕ ಉಪಕ್ರಮಗಳನ್ನು ಹಮ್ಮಿಕೊಂಡಿದೆ. ಸಾರ್ವಜನಿಕ ಸೇವೆಯಲ್ಲಿ ಪ್ರಧಾನಿ ಮೋದಿ ಕಾರ್ಯವನ್ನು ಗುರುತಿಸುವ ಅಂಗವಾಗಿ ಮನೆಗಳಲ್ಲಿ ದೀಪಗಳನ್ನು ಬೆಳಗಿಸಲಾಗುವುದು ಎಂದು ಬಿಜೆಪಿ ಘೋಷಿಸಿದೆ.
ಬಿಜೆಪಿಯ ಈ ಅಭಿಯಾನವು ಒಂದು ತಿಂಗಳ ಕಾಲ ಮುಂದುವರಿಯಲು ಯೋಜಿಸಲಾಗಿದ್ದು, ಸೇವಾ ಆಧಾರಿತ ಚಟುವಟಿಕೆಗಳು ಮತ್ತು ಸಾರ್ವಜನಿಕ ಸಂಪರ್ಕವನ್ನು ಒಳಗೊಂಡಿದೆ. ರಕ್ತದಾನ ಶಿಬಿರಗಳು, ಪ್ರದರ್ಶನಗಳು, ವಿಚಾರ ಸಂಕಿರಣಗಳು, ಸ್ವಚ್ಛತಾ ಅಭಿಯಾನಗಳು, ಯುವಜನ ಕಾರ್ಯಕ್ರಮಗಳು ಮತ್ತು ಇತರ ಉಪಕ್ರಮಗಳನ್ನು ಯೋಜಿತ ಚಟುವಟಿಕೆಗಳಲ್ಲಿ ಸೇರಿಸಲಾಗಿದೆ.
1950ರ ಸೆಪ್ಟೆಂಬರ್ 17 ರಂದು ಗುಜರಾತ್‌ನ ವಡ್‌ನಗರದಲ್ಲಿ ಜನಿಸಿದ ಪ್ರಧಾನಿ ಮೋದಿ ಅವರು ಗುರುವಾರ 76ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು ಅಕ್ಟೋಬರ್ 7 ರಂದು ಸಾರ್ವಜನಿಕ ಅಧಿಕಾರದಲ್ಲಿ ಸತತ 25 ವರ್ಷಗಳನ್ನು ಪೂರೈಸಲಿದ್ದಾರೆ. 2001 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಪ್ರಾರಂಭವಾದ ಅವರ ರಾಜಕೀಯ ಪಯಣ, 2014 ರಲ್ಲಿ ಪ್ರಧಾನಿಯಾಗುವ ಮೂಲಕ ಮುಂದುವರಿಯಿತು. ಅವರು 2014 ರಲ್ಲಿ ಭಾರತದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net