ಕೇರಳದಲ್ಲಿ ಕಮಲಕ್ಕೆ ನೆಲೆ....ಚುನಾವಣೆಗೂ ಮುನ್ನವೇ ಬಿಜೆಪಿಯ ಭವಿಷ್ಯ ನುಡಿದ ಶಶಿ ತರೂರ್ | Shashi Tharoor

Shashi Tharoor | ಕಾಂಗ್ರೆಸ್‌ನ ಹಿರಿಯ ಸಂಸದ ಶಶಿ ತರೂರ್
Shashi Tharoor | ಕಾಂಗ್ರೆಸ್‌ನ ಹಿರಿಯ ಸಂಸದ ಶಶಿ ತರೂರ್
Published on
ತಿರುವನಂತಪುರಂ: ಏಪ್ರಿಲ್ 9 ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯ ಪ್ರಚಾರದ ಕಾವು ಏರುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್‌ನ ಹಿರಿಯ ಸಂಸದ ಶಶಿ ತರೂರ್ (Shashi Tharoor) ಬಿಜೆಪಿಯ ಕುರಿತು ಪ್ರತಿಕ್ರಿಯೆ ನೀಡಿದ್ದು, ಕಮಲದ ಆಟ ಇಲ್ಲಿ ನಡೆಯುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವ ಮುನ್ನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ತರೂರ್, ಕೇರಳದ ರಾಜಕೀಯದಲ್ಲಿ ಬಿಜೆಪಿ ಇಂದಿಗೂ ಒಂದು ಬಾಹ್ಯ ಶಕ್ತಿ ಎಂದು ಕರೆಯುವ ಮೂಲಕ, ಈ ಬಾರಿಯೂ ಕಿಂಗ್‌ಮೇಕರ್ ಆಗುವ ಶಕ್ತಿ ಕೇಸರಿ ಪಡೆಗೆ ಇಲ್ಲ ಎಂದಿದ್ದಾರೆ.
ಕೇರಳದ ಚುನಾವಣೆಯಲ್ಲಿ ಇದು ತ್ರಿಕೋನ ಸ್ಪರ್ಧೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಇಲ್ಲಿ ಯಾವಾಗಲೂ ಆಡಳಿತಾರೂಢ ಎಡರಂಗ ಮತ್ತು ವಿರೋಧ ಪಕ್ಷವಾದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗದ ನಡುವೆಯೇ ನೇರ ಹಣಾಹಣಿ ಇರಲಿದ್ದು, ಸದ್ಯ ವಿಧಾನಸಭೆಯಲ್ಲಿ ಬಿಜೆಪಿಯ ಒಬ್ಬರು ಶಾಸಕರು ಇಲ್ಲ, ಒಂದು ವೇಳೆ ಈ ಚುನಾವಣೆಯಲ್ಲಿ ಒಂದೆರಡು ಸ್ಥಾನ ಗೆದ್ದರೂ ಅದನ್ನು ದೊಡ್ಡ ವಿಜಯದಂತೆ ಬಿಂಬಿಸಿಕೊಳ್ಳುತ್ತಾರೆ ಹೊರತು, ಅದರಿಂದ ಯಾವುದೇ ರಾಜಕೀಯ ಬದಲಾವಣೆ ಸಾಧ್ಯವಿಲ್ಲ ಎಂದರು.

ಬಿಜೆಪಿಯ ಮತ ಹಂಚಿಕೆ

ಕಳೆದ 17 ವರ್ಷಗಳಲ್ಲಿ ಬಿಜೆಪಿಯ ಮತ ಹಂಚಿಕೆ ಶೇ. 6 ರಿಂದ ಶೇ. 13 ಕ್ಕೆ ಏರಿರಬಹುದು. ಲೋಕಸಭೆಯಲ್ಲಿ ಶೇ. 19 ರಷ್ಟು ತಲುಪಿರಬಹುದು. ಆದರೆ ಕೇರಳದಂತಹ ರಾಜ್ಯದಲ್ಲಿ ಒಂದು ಕ್ಷೇತ್ರವನ್ನು ಗೆಲ್ಲಲು ಕನಿಷ್ಠ ಶೇ. 35 ರಷ್ಟು ಮತಗಳ ಅಗತ್ಯವಿದೆ. ಬಿಜೆಪಿ ಈ ಗುರಿಯಿಂದ ಬಹಳ ದೂರವಿದೆ ಎಂದು ಶಶಿ ತರೂರ್​ ತಿಳಿಸಿದ್ದಾರೆ.
ಸಮೀಕ್ಷೆಗಳು ಯುಡಿಎಫ್ ಮತ್ತು ಎಲ್‌ಡಿಎಫ್ ನಡುವೆ ದೊಡ್ಡ ಮಟ್ಟದ ಪೈಪೋಟಿ ಇರುವುದನ್ನು ತೋರಿಸುತ್ತಿದ್ದು, ನಾವು ಬಿಜೆಪಿಯನ್ನು ಕಡೆಗಣಿಸುತ್ತಿಲ್ಲ, ಹಾಗೆಯೇ ಗೆದ್ದೇ ಗೆಲ್ಲುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲೂ ಇಲ್ಲ. ಪ್ರತಿ ಮತವೂ ನಮಗೆ ಮುಖ್ಯ ಎಂದು ತರೂರ್ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.

ಹಳೆಯ ಇತಿಹಾಸ ಮತ್ತು ಹೊಸ ತಂತ್ರ

2021 ರ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ 99 ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಅಂದು ಅಬ್ಬರದ ಪ್ರಚಾರ ನಡೆಸಿದ್ದರೂ ಬಿಜೆಪಿ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ಬಾರಿ ಬಿಜೆಪಿ ಕ್ರಿಶ್ಚಿಯನ್ ಸಮುದಾಯವನ್ನು ಸೆಳೆಯಲು ಸೈರೋ-ಮಲಬಾರ್ ಬೆಲ್ಟ್‌ನಲ್ಲಿ ವಿಶೇಷ ತಂತ್ರ ರೂಪಿಸಿದೆ ಎಂದು ವರದಿಯಾಗಿದೆ. ತ್ರಿಶೂರ್‌ನಲ್ಲಿ ಸುರೇಶ್ ಗೋಪಿ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿರುವುದು ಬಿಜೆಪಿಯ ಆತ್ಮವಿಶ್ವಾಸ ಹೆಚ್ಚಿಸಿದೆ, ಆದರೆ ವಿಧಾನಸಭಾ ಚುನಾವಣೆ ಸಂಪೂರ್ಣ ಭಿನ್ನ ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ.
ಮೇ 4 ರಂದು ಹೊರಬೀಳಲಿರುವ ಫಲಿತಾಂಶವು ಕೇರಳದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ. ಶಶಿ ತರೂರ್ ಲೆಕ್ಕಾಚಾರದಂತೆ ಕೇರಳ ರಾಜಕೀಯ ಸಂಪ್ರದಾಯ ಮುಂದುವರಿಯುತ್ತದೆಯೇ ಅಥವಾ ಬಿಜೆಪಿ ಹೊಸ ಇತಿಹಾಸ ಬರೆಯುತ್ತದೆಯೇ ಕಾದು ನೋಡಬೇಕಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net