ವಿಮಾನ ಪ್ರಯಾಣಿಕರ ಗೋಳು ಕೇಳುವವರಾರು..? ಲಗೇಜ್ ಮ್ಯಾನೇಜ್‌ಮೆಂಟ್ ಲೋಪದ ವಿರುದ್ಧ ಸಂಸದ ಖಂಡೇಲ್ವಾಲ್ ಕಿಡಿ | Praveen Khandelwal

Praveen Khandelwal | ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್
Praveen Khandelwal | ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್
Published on
ನವದೆಹಲಿ: ಇಂಡಿಗೋ ವಿಮಾನಯಾನ ಸಂಸ್ಥೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್, ದೆಹಲಿಯಿಂದ ಕರ್ನಾಟಕದ ಬೆಳಗಾವಿಗೆ ಪ್ರಯಾಣಿಸುವಾಗ ತಮ್ಮ ಬ್ಯಾಗ್‌ಗಳು ನಾಪತ್ತೆಯಾಗಿರುವ ಕುರಿತು ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಘಟನೆಯ ಹಿನ್ನಲೆ..

ಸಂಸದ ಪ್ರವೀಣ್ ಖಂಡೇಲ್ವಾಲ್ ದೆಹಲಿಯಿಂದ ಬೆಳಗಾವಿಗೆ (Flight 6E-5237) ವಿಮಾನದಲ್ಲಿ ಪ್ರಯಾಣಿಸಿದ್ದರು. ಬೆಳಗಾವಿ ತಲುಪಿದಾಗ ಅವರು ಸುರಕ್ಷಿತವಾಗಿ ಇಳಿದರಾದರೂ, ಅವರು ಚೆಕ್-ಇನ್ ಮಾಡಿದ್ದ ಸಾಮಾನುಗಳು ಮಾತ್ರ ವಿಮಾನ ನಿಲ್ದಾಣಕ್ಕೆ ತಲುಪಲಿಲ್ಲ ಎನ್ನಲಾಗಿದ್ದು, ತಮ್ಮ ಲಗೇಜ್ ಎಲ್ಲಿದೆ ಎಂಬ ಕುರಿತಾಗಿ ವಿಮಾನಯಾನ ಸಿಬ್ಬಂದಿಯಿಂದ ಸ್ಪಷ್ಟ ಮಾಹಿತಿ ನೀಡಲಿಲ್ಲ, ಇದರಿಂದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದುಹೋದ ವಸ್ತುಗಳಲ್ಲಿ ಪ್ರಮುಖ ದಾಖಲೆಗಳು ಕೂಡ ಇದ್ದು, ಪರಿಸ್ಥಿತಿಯನ್ನು ಇನ್ನಷ್ಟು ದುಃಖಕರವಾಗಿಸಿದೆ ಎಂದು ಸಂಸದರು ಹೇಳಿಕೊಂಡಿದ್ದು, ಸಂಸತ್ತಿನ ಸದಸ್ಯರಿಗೆ ಈ ರೀತಿಯಾದರೆ ಸಾಮಾನ್ಯ ಪ್ರಯಾಣಿಕರ ಗತಿ ಏನು ಎಂದು ಪ್ರಶ್ನಿಸಿದ್ದಾರೆ. ಇದಷ್ಟೆ ಅಲ್ಲದೇ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್​​ರನ್ನು ಈ ಬಗ್ಗೆ ತಕ್ಷಣದ ವಿವರಣೆ ನೀಡುವಂತೆ ಸೂಚನೆ ನೀಡಿದ್ದಾರೆ.

ನಾಗರಿಕ ವಿಮಾನಯಾನ ಸಚಿವರಿಗೂ ಮನವಿ

ಘಟನೆಯ ಬಳಿಕ ಸಂಸದ ಖಂಡೇಲ್ವಾಲ್ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಅವರಿಗೆ ಟ್ಯಾಗ್ ಮಾಡಿ ಪೋಸ್ಟ್​​ ಹಂಚಿಕೊಂಡಿದ್ದು, ಮಧ್ಯಪ್ರವೇಶಿಸುವಂತೆ ಮನವಿ ಒತ್ತಾಯಿಸಿದ್ದಾರೆ. ಇಂಡಿಗೋದ ಕಾರ್ಯಾಚರಣೆಯ ಗುಣಮಟ್ಟ ಕುಸಿಯುತ್ತಿದ್ದು, ಪ್ರಯಾಣಿಕರ ಹಿತಾಸಕ್ತಿ ಕಾಪಾಡಲು ಸರ್ಕಾರವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net