ಜ್ಯೋತಿಷ್ಯದ ಹೆಸರಲ್ಲಿ ಕಾಮದಾಟ: 58 ಮಹಿಳೆಯರ ಮೇಲೆ ಅತ್ಯಾಚಾರ, ಗುಪ್ತ ಕ್ಯಾಮೆರಾದಲ್ಲಿ ಸೆರೆಯಾಯ್ತು ಅಸಹ್ಯ ಕೃತ್ಯ! | Astrology

Astrology
Astrology
Published on
ಮುಂಬೈ: ಆಧ್ಯಾತ್ಮದ(Astrology) ಹೆಸರಿನಲ್ಲಿ ಮಹಿಳೆಯರನ್ನು ನಂಬಿಸಿ, ವಶೀಕರಣದ ಮೂಲಕ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಘೋರ ಪ್ರಕರಣವೊಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬೆಳಕಿಗೆ ಬಂದಿದೆ. ಪ್ರಭಾವಿ ಜ್ಯೋತಿಷಿ ಹಾಗೂ ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿ ಅಶೋಕ್ ಖರಾತ್ (67) ಅಲಿಯಾಸ್ 'ಕ್ಯಾಪ್ಟನ್' ಎಂಬುವವನ ಕರಾಳ ಮುಖವಾಡ ಈಗ ಕಳಚಿದೆ.
ಈ ಭಯಾನಕ ಪ್ರಕರಣವು 35 ವರ್ಷದ ಸಂತ್ರಸ್ತ ಮಹಿಳೆಯೊಬ್ಬರು ನೀಡಿದ ದೂರಿನಿಂದ ಆರಂಭವಾಯಿತು. ಆಧ್ಯಾತ್ಮಿಕ ವಿಧಿವಿಧಾನಗಳ ಹೆಸರಿನಲ್ಲಿ ಖರಾತ್ ತನಗೆ ಅಮಲು ಪದಾರ್ಥ ನೀಡಿ, ಸಂಮೋಹನ (Hypnotism) ವಿದ್ಯೆ ಬಳಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದಷ್ಟೇ ಅಲ್ಲದೆ, ಪತಿಯ ಸಾವಿನ ಭಯ ತೋರಿಸಿ ಹಾಗೂ ಮಾಟ-ಮಂತ್ರದ ಬೆದರಿಕೆ ಹಾಕಿ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎಂದು ಅವರು ಎಫ್‌ಐಆರ್‌ನಲ್ಲಿ ದಾಖಲಿಸಿದ್ದಾರೆ.

ತನಿಖೆಯಲ್ಲಿ ಬಯಲಾದ 58 ಮಹಿಳೆಯರ ವಿಡಿಯೋಗಳು!

ಪೊಲೀಸರು ಈತನ ಕಚೇರಿ ಮತ್ತು ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದಾಗ ಲಭ್ಯವಾದ ಪುರಾವೆಗಳು ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿವೆ.ಖರಾತ್ ತನ್ನ ಕಚೇರಿಯಲ್ಲಿ ರಹಸ್ಯ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದನು. ಪೊಲೀಸರು ವಶಪಡಿಸಿಕೊಂಡ ಪೆನ್ ಡ್ರೈವ್‌ನಲ್ಲಿ ಬರೋಬ್ಬರಿ 58 ಮಹಿಳೆಯರೊಂದಿಗೆ ನಡೆಸಿದ ಅಸಭ್ಯ ಕೃತ್ಯಗಳ ವಿಡಿಯೋ ಕ್ಲಿಪ್‌ಗಳು ಪತ್ತೆಯಾಗಿವೆ.
ವ್ಯವಹಾರದ ಹೆಸರಿನಲ್ಲಿ ಅಪರಾಧ: ನಾಸಿಕ್‌ನ ಕೆನಡಾ ಕಾರ್ನರ್ ಪ್ರದೇಶದಲ್ಲಿ ಈತ 'ಓಕಸ್ ಪ್ರಾಪರ್ಟಿ ಡೀಲರ್ಸ್' ಎಂಬ ರಿಯಲ್ ಎಸ್ಟೇಟ್ ಕಚೇರಿ ನಡೆಸುತ್ತಿದ್ದರೂ, ಅದರ ಒಳಗೆ ನಡೆಯುತ್ತಿದ್ದುದು ಮಾತ್ರ ಆಧ್ಯಾತ್ಮಿಕ ವಂಚನೆ ಮತ್ತು ಲೈಂಗಿಕ ಶೋಷಣೆ.

ಪೊಲೀಸರ ಫಿಲ್ಮಿ ಸ್ಟೈಲ್ ಕಾರ್ಯಾಚರಣೆ

ಖರಾತ್ ಅತೀವ ರಾಜಕೀಯ ಪ್ರಭಾವ ಹೊಂದಿದ್ದರಿಂದ, ಆತನ ಬಂಧನದ ಮಾಹಿತಿ ಸೋರಿಕೆಯಾಗದಂತೆ ಪೊಲೀಸರು ಅತೀ ಗೋಪ್ಯ ಕಾರ್ಯಾಚರಣೆ ನಡೆಸಿದರು. ಮಧ್ಯರಾತ್ರಿ ಈತನ ಫಾರ್ಮ್‌ಹೌಸ್ ಮುಂದೆ ಪೊಲೀಸರು "ಕಳ್ಳ ಬಂದಿದ್ದಾನೆ, ಕಳ್ಳ.." ಎಂದು ಜೋರಾಗಿ ಕೂಗುತ್ತಾ ಗದ್ದಲ ಸೃಷ್ಟಿಸಿದರು. ಈ ಗದ್ದಲ ಏನೆಂದು ನೋಡಲು ಖರಾತ್ ಮನೆಯ ಬಾಗಿಲು ತೆರೆದಾಗ, ಪೊಲೀಸರು ಒಳನುಗ್ಗಿ ಆತನ ಬೆಡ್‌ರೂಮ್‌ನಲ್ಲೇ ಬಂಧಿಸಿದ್ದಾರೆ.
ದಾಳಿಯ ವೇಳೆ ಫಾರ್ಮ್‌ಹೌಸ್‌ನಲ್ಲಿ ಪಿಸ್ತೂಲ್, ಜೀವಂತ ಗುಂಡುಗಳು ಮತ್ತು ಶಂಕಾಸ್ಪದ ದಾಖಲೆಗಳು ಪತ್ತೆಯಾಗಿವೆ. ಮಿರಗಾಂವ್‌ನಲ್ಲಿ ಈತ 'ಈಶಾನ್ಯೇಶ್ವರ ದೇಗುಲ' ಮತ್ತು ಐಷಾರಾಮಿ ರೆಸಾರ್ಟ್ ಹೊಂದಿದ್ದು, ಇಲ್ಲಿಗೆ ಗಣ್ಯಾತಿಗಣ್ಯರು ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.

SIT ರಚನೆ ಮತ್ತು ರಾಜಕೀಯ ಬಿರುಗಾಳಿ

ಈ ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ಮಹಾರಾಷ್ಟ್ರ ಸರ್ಕಾರವು ಐಪಿಎಸ್ ಅಧಿಕಾರಿ ತೇಜಸ್ವಿನಿ ಸತ್ಪುತೆ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಖರಾತ್ ದೆಹಲಿಯಿಂದ ಮುಂಬೈವರೆಗೆ ರಾಜಕೀಯ ಸಂಪರ್ಕ ಹೊಂದಿದ್ದಾನೆ ಎಂಬ ವದಂತಿಗಳು ಇಡೀ ರಾಜ್ಯದಲ್ಲಿ ರಾಜಕೀಯ ಸಂಚಲನ ಮೂಡಿಸಿವೆ.
ಉದ್ಧವ್ ಠಾಕ್ರೆ ಬಣದ ಸುಷ್ಮಾ ಅಂಧಾರೆ ಅವರು ಉಪಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, "ಮಹಿಳೆಯರನ್ನು ಶೋಷಿಸುವ ಇಂತಹ ಕಾಮುಕರ ಪಾದ ಪೂಜೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ" ಎಂದು ಆಗ್ರಹಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net