

ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ 10ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಿದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ(ಸೆ. 22) ನಂದನ್ ಯಾದವ್ ಎಂಬ ಪ್ರಮುಖ ಆರೋಪಿಯನ್ನು ಪೊಲೀಸರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಆರೋಪಿ ನಂದನ್ ಘಟನೆ ಬಳಿಕ ತಲೆ ಮರೆಸಿಕೊಂಡಿದ್ದನು. ಖಚಿತ ಮಾಹಿತಿ ಮೇರೆಗೆ ಮಡ್ವಾ ಬೆಟ್ಟದ ಬಳಿ ಇರುವುದು ಖಚಿತಪಡಿಸಿಕೊಂಡು ಬಂಧಿಸಲು ತೆರಳಿದ್ದಾಗ ಘರ್ಷಣೆ ನಡೆದಿದ್ದು, ಪೊಲೀಸರು ನಂದನ್ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಗಾಯಗೊಂಡ ಆತನನ್ನು ಜಮುಯಿ ಸದರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಕಾರ್ಯಾಚರಣೆಯ ವೇಳೆ ಪರಾರಿಯಾಗಲು ಯತ್ನಿಸಿದ ಮತ್ತೊಬ್ಬ ಆರೋಪಿ ಹರೇರಾಮ್ ಯಾದವ್ನನ್ನು ಬಂಧಿಸಿದ್ದು, ಗಾಯಗೊಂಡ ಹಿನ್ನೆಲೆ ಅವನನ್ನು ಅದೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಇನ್ನೂ ಘಟನೆ ಕುರಿತು ಮಾತನಾಡಿರುವ ಎಡಿಜಿ ಕೆ.ಸುಹೀತಾ ಅನುಪಮ್, ನಂದನ್ ಯಾದವ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಲು ಯತ್ನಿಸಿದಾಗ ಘರ್ಷಣೆ ನಡೆದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸೆ. 19ರಂದು ಜಮುಯಿ ಪಟ್ಟಣದ ನಿವಾಸಿಗಳಾದ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಸಂಜೆ ಟ್ಯೂಷನ್ ಬಳಿಕ ಮೋಟಾರ್ ಸೈಕಲ್‌ನಲ್ಲಿ ಮಡ್ವಾ ಬೆಟ್ಟಕ್ಕೆ ಹೋಗಿದ್ದರು. ಹಿಂತಿರುಗುವಾಗ, ಕೆಲವು ಯುವಕರು ಅವರನ್ನು ದಾರಿಯಲ್ಲಿ ತಡೆದು ಸಾಕಷ್ಟು ಸಮಯದವರೆಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಕಿರುಕುಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸರು ವೀಡಿಯೊಗಳನ್ನು ಆಧಾರಿಸಿ ಸ್ವಯಂಪ್ರೇರಿತವಾಗಿ ಪೋಕ್ಸೊ ಕಾಯ್ದೆ ಮತ್ತು ಬಿಎನ್‌ಎಸ್‌ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಬಿಹಾರ ಸರ್ಕಾರವೂ ತನಿಖೆಗೆ ಮಹಿಳಾ ಅಧಿಕಾರಿಗಳ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಿದೆ (ಏಜೆನ್ಸೀಸ್).