ಪ್ರಶ್ನೆಪತ್ರಿಕೆ ಸೋರಿಕೆಗೆ ಕಠಿಣ ಶಿಕ್ಷೆ: 10 ವರ್ಷ ಜೈಲು, 10 ಕೋಟಿ ರೂ. ದಂಡ ವಿಧಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ | question paper leaks

ಕೇಂದ್ರ ಸಚಿವ ಸಂಪುಟ ಸಭೆ
ಕೇಂದ್ರ ಸಚಿವ ಸಂಪುಟ ಸಭೆ
Published on
ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ಮಧ್ಯೆ, ಇಂದು(ಜು. 24) ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ(question paper leaks) ಮತ್ತು ವಂಚನೆಯ ವಿರುದ್ಧ 3 ತಿಂಗಳೊಳಗೆ ಕ್ರಮ, 10 ಕೋಟಿ ರೂ. ದಂಡ, 10 ವರ್ಷ ಜೈಲು ಶಿಕ್ಷೆ ವಿಧಿಸುವ ಮಸೂದೆಗೆ ಅನುಮೋದನೆ ನೀಡಿದೆ.
ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಸಂಸತ್ ಭವನದ ಸಂಕೀರ್ಣದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರವು ಪಬ್ಲಿಕ್ ಪರೀಕ್ಷೆಗಳ(ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ- 2024ಕ್ಕೆ ತಿದ್ದುಪಡಿ ಮಾಡಿ ಬಲ ನೀಡಲು ಮುಂದಾಗಿದ್ದು, ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರು ಆರೋಪಿಗಳಿಗೆ ಕಠಿಣ ಶಿಕ್ಷೆಗಳನ್ನು ವಿಧಿಸುವ ಕರಡು ಮಸೂದೆ ಮಂಡಿಸಲು ನಿರ್ಣಯಿಸಲಾಗಿದೆ.
ಮುಂದಿನ ಗುರುವಾರ ಸಂಸತ್​ನಲ್ಲಿ ಹೊಸ ಮಸೂದೆ ಮಂಡಿಸಲಿದೆ ಎನ್ನಲಾಗಿದೆ. ನೂತನ ತಿದ್ದುಪಡಿ ಮಸೂದೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪಿಗಳಿಗೆ ಜೈಲು ಶಿಕ್ಷೆ ಮತ್ತು ಆರ್ಥಿಕ ದಂಡ ಎರಡನ್ನೂ ಹೆಚ್ಚಿಸಲಿದೆ. 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಕೋಟಿ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಮೂರು ತಿಂಗಳಲ್ಲೇ ಎಲ್ಲವನ್ನೂ ತನಿಖೆ ಮಾಡಿ ಕ್ರಮಕೈಗೊಳ್ಳುವ ಬಗ್ಗೆ ಸೇರಿಸಲಾಗಿದೆ. ಪ್ರಸ್ತುತ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಅಪರಾಧ ಸಾಬೀತಾದರೆ ವ್ಯಕ್ತಿಗಳು 3 ರಿಂದ 5 ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ.
ಇನ್ನೂ ಪ್ರಧಾನಿ ನರೇಂದ್ರ ಮೋದಿಯವರು ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ತಡರಾತ್ರಿಯ ವೀಡಿಯೊ ಸಂದೇಶದಲ್ಲಿ ಕಠಿಣ ಕ್ರಮಗೊಳ್ಳುವ ಭರವಸೆ ನೀಡಿದ್ದರು. ಸಂಭಾವ್ಯ ಬದಲಾವಣೆಗಳನ್ನು ಪಟ್ಟಿ ಮಾಡುತ್ತಾ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ವಿಚಾರಣೆ ಮಾಡಲು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ, ಪರೀಕ್ಷಾ ಅಕ್ರಮಗಳಿಗೆ ಹೊಣೆಗಾರಿಕೆ, ಶಿಕ್ಷಣ ವ್ಯವಸ್ಥೆಯಲ್ಲಿನ ಸುಧಾರಣೆಗಳು ಮತ್ತು ಮೇ ತಿಂಗಳಲ್ಲಿ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರವನ್ನು ಒತ್ತಾಯಿಸಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ಘೋಷಣೆ ಹೊರಬಿದ್ದಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net