

ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ 2026ರ ಏಪ್ರಿಲ್ 17 ಒಂದು ಮಹತ್ವದ ದಿನವಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವ ಮಹಿಳೆಯರಿಗೆ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಸೋಲನ್ನಪ್ಪಿರುವುದು ದೇಶದ ಸ್ತ್ರೀಶಕ್ತಿಯ ಸಬಲೀಕರಣಕ್ಕೆ ಆದ ಹಿನ್ನಡೆ. 298 ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರೂ, ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ಸಿಗದ ಕಾರಣ ಮಸೂದೆ ಬಿದ್ದುಹೋಗಿರುವುದು ದುರದೃಷ್ಟಕರ.
ವಿರೋಧ ಪಕ್ಷಗಳ ನಿಲುವು ರಾಷ್ಟ್ರದ ಸಮಗ್ರ ಅಭಿವೃದ್ಧಿಗಿಂತ ಹೆಚ್ಚಾಗಿ ಕೇವಲ ರಾಜಕೀಯ ಲಾಭದತ್ತ ಮುಖ ಮಾಡಿರುವುದು ಸ್ಪಷ್ಟ. ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಯನ್ನು ಭರವಸೆಯಾಗಿ ಮಾತ್ರ ಉಳಿಸದೆ, ಅದನ್ನು 2029ರ ಸಾರ್ವತ್ರಿಕ ಚುನಾವಣೆಗಿಂತ ಮುಂಚೆಯೇ ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿತ್ತು. ಇದಕ್ಕಾಗಿ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ಮಹಿಳಾ ಮೀಸಲಾತಿಯೊಂದಿಗೆ ಜೋಡಿಸಿದ್ದು ಒಂದು ಕಾರ್ಯತಂತ್ರದ ಭಾಗವಾಗಿತ್ತು. ಸಂಸತ್ತಿನ ಸ್ಥಾನಗಳನ್ನು 543ರಿಂದ 850ಕ್ಕೆ ಹೆಚ್ಚಿಸುವ ಮೂಲಕ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗದಂತೆ ಮತ್ತು ಪ್ರಾತಿನಿಧ್ಯದ ಸಮತೋಲನ ಕಾಪಾಡುವ ದೂರದೃಷ್ಟಿ ಸರ್ಕಾರದ ಮುಂದಿತ್ತು.
ವಿರೋಧ ಪಕ್ಷಗಳು ಎತ್ತಿರುವ ಆಕ್ಷೇಪಣೆಗಳು ತಾಂತ್ರಿಕ ನೆಪಗಳಂತೆ ಕಾಣುತ್ತಿವೆ. ಕ್ಷೇತ್ರ ಮರುವಿಂಗಡಣೆ ಸಂವಿಧಾನಬದ್ಧ ಪ್ರಕ್ರಿಯೆಯಾಗಿದ್ದು, ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ನೀಡುವುದು ಪ್ರಜಾಪ್ರಭುತ್ವದ ಮೂಲತತ್ವ. ಇದನ್ನು ದಕ್ಷಿಣದ ವಿರುದ್ಧದ ಪಿತೂರಿ ಎಂದು ಬಣ್ಣಿಸುವುದು ಒಕ್ಕೂಟ ವ್ಯವಸ್ಥೆಯಲ್ಲಿ ಅನಗತ್ಯ ಭೀತಿಯನ್ನು ಬಿತ್ತುವ ಪ್ರಯತ್ನ. ಗೃಹ ಸಚಿವರು ಸದನದಲ್ಲಿ ನೀಡಿದ ಸ್ಪಷ್ಟನೆಯ ಹೊರತಾಗಿಯೂ, ವಿರೋಧ ಪಕ್ಷಗಳು ಮಸೂದೆಯ ವಿರುದ್ಧ ಮತ ಚಲಾಯಿಸಿರುವುದು ಅವರ ಸ್ತ್ರೀಪರ ಕಾಳಜಿಯ ಮುಖವಾಡವನ್ನು ಕಳಚಿದೆ.
ಹಿಂದಿನ ದಶಕಗಳಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಹರಿದು ಹಾಕಿದ, ಸದನದಲ್ಲಿ ಗದ್ದಲ ಎಬ್ಬಿಸಿ ತಡೆದ ಅದೇ ಶಕ್ತಿಗಳು ಇಂದು ಡಿಲಿಮಿಟೇಶನ್ ನೆಪದಲ್ಲಿ ಮೀಸಲಾತಿಯನ್ನು ವಿರೋಧಿಸುತ್ತಿವೆ. 2023ರಲ್ಲಿ ಈ ಮಸೂದೆಗೆ ಒಪ್ಪಿಗೆ ಸಿಕ್ಕಾಗ ಇಡೀ ದೇಶ ಸಂಭ್ರಮಿಸಿತ್ತು. ಈಗ ಅದರ ಅನುಷ್ಠಾನಕ್ಕೆ ಬೇಕಾದ ಸಾಂವಿಧಾನಿಕ ತಿದ್ದುಪಡಿಯನ್ನು ಪ್ರತಿಪಕ್ಷಗಳು ತಡೆದಿವೆ. ಮಹಿಳೆಯರಿಗೆ ರಾಜಕೀಯ ಅಧಿಕಾರ ನೀಡುವಲ್ಲಿ ಈ ರೀತಿಯ ಅಡೆತಡೆಗಳು ಪ್ರಗತಿಪರ ರಾಷ್ಟ್ರಕ್ಕೆ ಶೋಭೆ ತರುವುದಿಲ್ಲ.
ರಾಷ್ಟ್ರದ ಶಕ್ತಿಯು ಅದರ ಕುಟುಂಬ ವ್ಯವಸ್ಥೆ ಮತ್ತು ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆಯಲ್ಲಿದೆ. ಕೇಂದ್ರ ಸರ್ಕಾರವು ನಾರಿ ಶಕ್ತಿ ವಂದನ್ ಅಧಿನಿಯಮದ ಮೂಲಕ ಈ ದಿಕ್ಕಿನಲ್ಲಿ ಗಟ್ಟಿಯಾದ ಹೆಜ್ಜೆ ಇಟ್ಟಿತ್ತು. ಈಗ ಮಸೂದೆ ಬಿದ್ದುಹೋಗಿ ತಾತ್ಕಾಲಿಕ ಹಿನ್ನಡೆ ಆಗಿರಬಹುದು, ಆದರೆ ಮಹಿಳೆಯರು ಈ ರಾಜಕೀಯ ಆಟವನ್ನು ಗಮನಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸಂಖ್ಯೆಗಳು ಮುಖ್ಯವಾಗಬಹುದು, ಆದರೆ ಜನಾದೇಶವು ಅದಕ್ಕಿಂತ ಮಿಗಿಲಾದುದು. ಮಹಿಳಾ ಸಬಲೀಕರಣದ ವಿಷಯದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ಒಮ್ಮತ ಮೂಡಿಸಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ, ಇತಿಹಾಸವು ಈ ದಿನವನ್ನು ಅವಕಾಶವಾದಿ ರಾಜಕೀಯಕ್ಕಾಗಿ ಮಹಿಳಾ ಹಕ್ಕುಗಳನ್ನು ಬಲಿ ಕೊಟ್ಟ ದಿನ ಎಂದು ನೆನಪಿಟ್ಟುಕೊಳ್ಳಲಿದೆ.