ಹಿಮಂತ ಬಿಸ್ವಾ ಶರ್ಮಾ ಪತ್ನಿ ವಿರುದ್ಧದ ಆರೋಪ ಮುಳುವಾಯಿತೇ..? ಪವನ್ ಖೇರಾಗೆ ಗುವಾಹಟಿ ಹೈಕೋರ್ಟ್‌ನಲ್ಲೂ ಹಿನ್ನಡೆ! | Pawan Khera

Pawan Khera | ಪವನ್ ಖೇರಾಗೆ ಗುವಾಹಟಿ ಹೈಕೋರ್ಟ್‌ನಲ್ಲೂ ಹಿನ್ನಡೆ!
Pawan Khera | ಪವನ್ ಖೇರಾಗೆ ಗುವಾಹಟಿ ಹೈಕೋರ್ಟ್‌ನಲ್ಲೂ ಹಿನ್ನಡೆ!
Published on
ದಿಸ್ಪೂರ್​: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ದಾಖಲಿಸಿರುವ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ನಾಯಕ ಪವನ್ ಖೇರಾಗೆ (Pawan Khera) ಶುಕ್ರವಾರ ಗುವಾಹಟಿ ಹೈಕೋರ್ಟ್‌ನಲ್ಲಿ ಮತ್ತೊಂದು ಕಾನೂನು ಹಿನ್ನಡೆಯಾಗಿದ್ದು, ಖೇರಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.
ಈ ಪ್ರಕರಣದ ಕುರಿತು ಕಳೆದ ಮಂಗಳವಾರ ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಮೂರ್ತಿ ಪಾರ್ಥಿವಜ್ಯೋತಿ ಸೈಕಿಯಾ, ತಮ್ಮ ತೀರ್ಪನ್ನು ಕಾಯ್ದಿರಿಸಿದ್ದರು. ಶುಕ್ರವಾರ ಆದೇಶ ಪ್ರಕಟಿಸಿದ ನ್ಯಾಯಮೂರ್ತಿಗಳು, ಕಾಂಗ್ರೆಸ್ ನಾಯಕನಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದಾರೆ. ರಿನಿಕಿ ಭುಯಾನ್ ಶರ್ಮಾ ನೀಡಿದ ದೂರಿನ ಆಧಾರದ ಮೇಲೆ ದಾಖಲಾಗಿರುವ ಈ ಪ್ರಕರಣವು ಪವನ್ ಖೇರಾಗೆ ದೊಡ್ಡ ಸಂಕಷ್ಟ ತಂದೊಡ್ಡಿದೆ.

ಕಾನೂನು ಹೋರಾಟದ ಹಿನ್ನಲೆ!

ಇತ್ತೀಚೆಗಷ್ಟೇ ಪವನ್ ಖೇರಾರ ಟ್ರಾನ್ಸಿಟ್ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಕೂಡ ತಿರಸ್ಕರಿಸಿತ್ತು. ಈ ಪ್ರಕರಣದ ವಿಚಾರಣೆಯನ್ನು ಅಸ್ಸಾಂ ನ್ಯಾಯಾಲಯವೇ ನಡೆಸಲಿದ್ದು, ಅದರಲ್ಲಿ ಸುಪ್ರೀಂ ಕೋರ್ಟ್ ಅಥವಾ ತೆಲಂಗಾಣ ಹೈಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ದೇಶದ ಅತ್ಯುನ್ನತ ನ್ಯಾಯಾಲಯ ಈ ಹಿಂದೆಯೇ ಸ್ಪಷ್ಟಪಡಿಸಿತ್ತು. ಅಸ್ಸಾಂ ನ್ಯಾಯಾಲಯದ ಪ್ರಕ್ರಿಯೆಗಳಿಗೆ ಅಡ್ಡಿಪಡಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದ ಬೆನ್ನಲ್ಲೇ ಈಗ ಹೈಕೋರ್ಟ್ ಕೂಡ ಜಾಮೀನು ನೀಡಲು ನಿರಾಕರಿಸಿರುವುದು ಖೇರಾಗೆ ನುಂಗಲಾರದ ತುತ್ತಾಗಿದೆ.

ಬಿಜೆಪಿ ಖಂಡನೆ..

ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ಲಾ ತಮ್ಮ ಎಕ್ಸ್​ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಪವನ್ ಖೇರಾ ಬಳಸಿದ ದಾಖಲೆಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ. ಖೇರಾ ಅವರು ಶರ್ಮಾ ಕುಟುಂಬದ ವಿರುದ್ಧ ಬಳಸಿದ ದಾಖಲೆಗಳು ನಕಲಿ, ಫೋಟೋಶಾಪ್ ಮಾಡಲಾದವು ಮತ್ತು ಎಐನಿಂದ ನಿರ್ಮಿಸಲಾಗಿದೆ. ಈಗ ಅರ್ಧ ಗಂಟೆಯಲ್ಲೇ ಇಡೀ ಸತ್ಯಾಂಶ ಹೊರಬಂದಿದೆ ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷವು ಕೇವಲ ರಾಜಕೀಯ ಲಾಭಕ್ಕಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಂವಿಧಾನಿಕ ಹುದ್ದೆಯಲ್ಲಿರುವವರ ಚಾರಿತ್ರ್ಯ ಹರಣ ಮಾಡುತ್ತಿದೆ ಎಂದು ಪೂನವಾಲ್ಲಾ ಆರೋಪಿಸಿದ್ದು, ನ್ಯಾಯಾಲಯವು ಜಾಮೀನು ನಿರಾಕರಿಸಿರುವುದು ಕಾಂಗ್ರೆಸ್‌ನ ಈ ನಕಲಿ ಅಭಿಯಾನಕ್ಕೆ ಬಿದ್ದ ದೊಡ್ಡ ಹೊಡೆತ ಎಂದಿದ್ದಾರೆ.
ಹಿಮಂತ ಬಿಸ್ವಾ ಶರ್ಮಾ ಪತ್ನಿ ವಿದೇಶಿ ಪಾಸ್‌ಪೋರ್ಟ್ ಹೊಂದಿದ್ದಾರೆ ಎಂಬ ಆರೋಪವನ್ನು ಖೇರಾ ಮಾಡಿದ್ದರು. ಆದರೆ ಈ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಕಪೋಲಕಲ್ಪಿತ ಎಂದು ಬಿಜೆಪಿ ಮೊದಲಿನಿಂದಲೂ ವಾದಿಸುತ್ತಾ ಬಂದಿದೆ. ಈಗ ನ್ಯಾಯಾಲಯದ ಆದೇಶವು ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ಮತ್ತಷ್ಟು ಆಕ್ರಮಣಕಾರಿ ದಾಳಿ ನಡೆಸಲು ರಾಜಕೀಯ ಅಸ್ತ್ರವನ್ನು ನೀಡಿದಂತಾಗಿದೆ.

ಕಾಂಗ್ರೆಸ್​ ವಿರುದ್ಧ ಶರ್ಮಾ ಗರಂ..

ತಮ್ಮ ಪತ್ನಿಯ ವಿರುದ್ಧದ ಕೈ​ ನಾಯಕರ ಆರೋಪಗಳನ್ನು ಅಲ್ಲಗಳೆದಿರುವ ಸಿಎಂ ಹಿಮಂತ ಬಿಸ್ವಾ ಶರ್ಮಾ, ಕಾಂಗ್ರೆಸ್ ಪಕ್ಷವು ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಗುಂಪುಗಳಿಂದ ಬಂದ ತಪ್ಪು ಮಾಹಿತಿಯನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ಕಳೆದ 10 ದಿನಗಳಲ್ಲಿ ಪಾಕಿಸ್ತಾನದ ಚಾನೆಲ್‌ಗಳು ಅಸ್ಸಾಂ ಚುನಾವಣೆ ಬಗ್ಗೆ ಹತ್ತಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿ, ಕಾಂಗ್ರೆಸ್ ಗೆಲ್ಲಬೇಕು ಎಂದು ಆಶಿಸುತ್ತಿವೆ ಎಂದು ಶರ್ಮಾ ದೂರಿದ್ದಾರೆ.
ಈ ಪಾಕಿಸ್ತಾನಿ ಕನೆಕ್ಷನ್ ಬಗ್ಗೆ ತನಿಖಾ ಸಂಸ್ಥೆಗಳು ಗಮನ ಹರಿಸಲಿವೆ ಎಂದು ಹೇಳಿರುವ ಮುಖ್ಯಮಂತ್ರಿಗಳು ತಮ್ಮ ಪತ್ನಿಯ ಹೆಸರನ್ನು ಎಳೆದು ತಂದಿರುವ ಗೊಗೊಯ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ ವಿದೇಶಗಳಲ್ಲಿ ಕಂಪನಿಗಳನ್ನು ನೋಂದಾಯಿಸುವುದು ಕೇವಲ 199 ಡಾಲರ್ ಪಾವತಿಸುವಷ್ಟು ಸುಲಭದ ಕೆಲಸವಾಗಿದ್ದು, ವಿರೋಧಿಗಳು ತಮ್ಮ ಪತ್ನಿಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ ಎನ್ನುವುದು ಶರ್ಮಾ ವಾದ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net