ಸರ್ಪದೋಷಕ್ಕೆ ನಿನ್ನ 2ನೇ ಮಗ ಸಾಯ್ತಾನೆ! ಮಹಿಳೆಗೆ ಚಳ್ಳೆಹಣ್ಣು ತಿನ್ನಿಸಿದ ಖತರ್ನಾಕ್ ಕಳ್ಳಿಯರು ಖಾಕಿ ಮುಂದೆ ಕಣ್ಣೀರು

ಆರೋಪಿಗಳಾದ ರೋಜಾ ಮತ್ತು ಸುಜಾತಾ
ಆರೋಪಿಗಳಾದ ರೋಜಾ ಮತ್ತು ಸುಜಾತಾ
Published on

ಪ್ರಮುಖ ಮುಖ್ಯಾಂಶಗಳು

  • ಅಡುಗೆ ಎಣ್ಣೆ ಮಾರುವ ನೆಪದಲ್ಲಿ ಮನೆಗೆ ಬಂದ ಇಬ್ಬರು ಖತರ್ನಾಕ್​ ಕಳ್ಳಿಯರು
  • ಮನೆಯಲ್ಲಿದೆ ಸರ್ಪದೋಷ! ಎರಡು ದಿನಗಳಲ್ಲಿ ಮಗ ಹಾವು ಕಡಿತಕ್ಕೆ ಬಲಿ
  • ಪರಿಹಾರದ ನೆಪದಲ್ಲಿ 52 ಗ್ರಾಂ ಚಿನ್ನಾಭರಣ ಹಾಗೂ 6,500 ರೂ. ಪಡೆದು ಪರಾರಿ
ತ್ರಿಶೂರ್: ನೀವಿರುವ ಮನೆಗೆ ಸರ್ಪದೋಷವಿದೆ (Serpent curse). ಇನ್ನೆರೆಡು ದಿನಗಳಲ್ಲಿ ನಿಮ್ಮ ದ್ವಿತೀಯ ಪುತ್ರ ಹಾವಿನ ಕಡಿತಕ್ಕೆ ಬಲಿಯಾಗುತ್ತಾನೆ ಎಂದು ಮಹಿಳೆಯನ್ನು ನಂಬಿಸಿ, ಆಕೆಯಿಂದ ಚಿನ್ನ, ನಗದನ್ನು ಲಪಟಾಯಿಸಿದ ಇಬ್ಬರು ಖತರ್ನಾಕ್ ಕಳ್ಳಿಯರು ಕಡೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಳ್ಳಿಯರನ್ನು ವೆಂಬಲ್ಲೂರ್ ಮೂಲದ ಸುಜಾತಾ (28) ಮತ್ತು ಪಪ್ಪಿನಿವಟ್ಟಂ ಮೂಲದ ರೋಜಾ (43) ಎಂದು ಗುರುತಿಸಲಾಗಿದ್ದು, ಆಗಸ್ಟ್​ 06ರ ಮಧ್ಯಾಹ್ನ ಸುಮಾರು 1:20ರ ಆಸುಪಾಸಿನಲ್ಲಿ, ಅಮಾಯಕ ಮಹಿಳೆಯ ಮನೆಗೆ ಅಡುಗೆ ಎಣ್ಣೆಯನ್ನು ಮಾರುವ ನೆಪದಲ್ಲಿ ಹೋಗಿ, ಚಿನ್ನ ಮತ್ತು ಹಣವನ್ನು ಪಡೆದು ಪರಾರಿಯಾಗಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ. 

ಸುಳ್ಳು ಕಥೆ ಕಟ್ಟಿದ ಕಳ್ಳಿಯರು

ಕಂಜಾನಿ ಪುತ್ತನ್‌ಕುಲಂ ನಿವಾಸಿಯಾದ ಸ್ವರ್ಣಲತಾ ಎಂಬುವರ ಮನೆಗೆ ಈ ಇಬ್ಬರು ಕಿಲಾಡಿ ಹೆಂಗಸರು ಅಡುಗೆ ಎಣ್ಣೆ ಮಾರುವ ನೆಪದಲ್ಲಿ ಹೋಗಿದ್ದಾರೆ. ಮಾತು ಬೆಳೆಸುತ್ತಾ ವೃದ್ಧೆಯ ಮನೆ ಮತ್ತು ಜಾಗದ ಬಗ್ಗೆ ವಿಚಿತ್ರವಾಗಿ ಮಾತನಾಡಿದ ಕಳ್ಳಿಯರು, ಅಯ್ಯೋ, ಈ ಜಾಗ ಸರಿಯಿಲ್ಲ. ಇಲ್ಲಿ ಭಯಂಕರ ಸರ್ಪದೋಷವಿದೆ. ಮುಂದಿನ ಎರಡು ದಿನಗಳಲ್ಲಿ ನಿಮ್ಮ ಎರಡನೇ ಮಗ ಹಾವು ಕಡಿತದಿಂದ ಸಾಯುತ್ತಾನೆ. ದೋಷ ಪರಿಹಾರ ಮಾಡಿಸಿಕೊಂಡರೆ ಒಳ್ಳೆಯದು. ಇಲ್ಲವೇ, ಸಾವೇ ಗತಿ ಎಂದು ವಿಪರೀತ ಭಯ ಹುಟ್ಟಿಸಿದ್ದಾರೆ.

ಪರಿಹಾರದ ಹೆಸರಲ್ಲಿ ಚಿನ್ನ-ನಗದು ಲೂಟಿ

ಖತರ್ನಾಕ್ ಕಳ್ಳಿಯರ ಮಾತಿಗೆ ತೀರ ಹೆದರಿದ ಸ್ವರ್ಣಲತಾ, ಮಗನ ಪ್ರಾಣ ಉಳಿಸಿಕೊಳ್ಳಲು ಪರಿಹಾರ ಕೇಳಿದ್ದಾಳೆ. ಇದಕ್ಕೆ ಕಾಯುತ್ತಿದ್ದ ಕಿಲಾಡಿಗಳು, "ಈ ಸರ್ಪದೋಷ ತೀರಬೇಕಾದರೆ ನೀನು ಹಾವಿನ ಚಿನ್ನದ ಮೊಟ್ಟೆ ಮತ್ತು ಸರ್ಪದ ವಿಗ್ರಹವನ್ನು ಅರ್ಪಿಸಬೇಕು ಎಂದಿದ್ದಾರೆ. ಅವರ ಮಾತಿನ ಬೆನ್ನಲ್ಲೇ ಸೊಸೆಯ ಚಿನ್ನದ ಸರ ಸೇರಿದಂತೆ ಸುಮಾರು 52 ಗ್ರಾಂ ಚಿನ್ನಾಭರಣ ಹಾಗೂ 6,500 ರೂ. ಹಣವನ್ನು ಪೂಜೆಯ ಅರ್ಪಣೆಯ ರೂಪದಲ್ಲಿ ಕೊಟ್ಟಿದ್ದಾರೆ. ಸಾಮಗ್ರಿಗಳನ್ನು ತರುವ ನೆಪದಲ್ಲಿ ಅವರು ಕಾಲ್ಕಿತ್ತ ಬಳಿಕವೇ ತಾನು ಮೋಸ ಹೋಗಿದ್ದೇನೆ ಎಂಬುದು ಮಹಿಳೆಗೆ ತಡವಾಗಿ ಅರಿವಾಗಿದೆ. 
ಚಿನ್ನ ಮತ್ತು ನಗದು ಕೈಸೇರುತ್ತಿದ್ದಂತೆಯೇ ಕಿರಾತಕಿಯರು,  ಚಾಣಾಕ್ಷತನದಿಂದ ಜಾಗ ಖಾಲಿ ಮಾಡಿದ್ದಾರೆ. ಅವರು ಮನೆಯಿಂದ ಹೋದ ಕೆಲ ಸಮಯಗಳ ಬಳಿಕ ತಾನು ಮೋಸ ಹೋಗಿರುವುದನ್ನು ಅರಿತ ಸ್ವರ್ಣಲತಾ, ಕೂಡಲೇ ಅಂತಿಕ್ಕಾಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಖಾಕಿ ಪಡೆ, ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಅವರು ಚಿನ್ನದಂಗಡಿಗೆ ಮಾರಿದ್ದ ಎಲ್ಲ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡು, ಸ್ವರ್ಣಲತಾ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net