ಸಂಪಾದಕೀಯ: ಗಂಭೀರ ಲೋಪ

Serious omission
Serious omission
Published on
ಈ ಸಾಲಿನ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರ ದೇಶದಲ್ಲಿ ವ್ಯಾಪಕ ಆಕ್ರೋಶವನ್ನು ಉಂಟುಮಾಡಿದೆ. ಇದು ಸಹಜ ಕೂಡ. ಏಕೆಂದರೆ, ವೈದ್ಯಕೀಯ ಕೋರ್ಸ್​ಗಳಿಗೆ ಪ್ರವೇಶ ಪಡೆಯಲು ದೇಶವ್ಯಾಪಿ ನಡೆಯುವ ಈ ಪರೀಕ್ಷೆ ಅತ್ಯಂತ ಕಠಿಣವಾದುದು ಮತ್ತು ಅತೀವ ಸ್ಪರ್ಧಾತ್ಮಕವಾಗಿರುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳು ಶ್ರಮದಿಂದ ಓದಿರುತ್ತಾರೆ. ಈ ಬಾರಿ 22 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ ಎಂಬುದೇ ಇದರ ವ್ಯಾಪಕತೆಗೆ ಸಾಕ್ಷಿ. ಮೇ 3 ರಂದು ಪರೀಕ್ಷೆ ನಡೆದಿದ್ದು, ಅದಕ್ಕೆ ಮುನ್ನವೇ ನೀಟ್ ಗೆಸ್ ಪೇಪರ್ ಹೆಸರಿನಲ್ಲಿ 410 ಪ್ರಶ್ನೆಗಳಿದ್ದ 15 ಪುಟಗಳ ಪಿಡಿಎಫ್ ಫೈಲ್ ಅನ್ನು ಅಂತರ್ಜಾಲದಲ್ಲಿ ಹರಿಬಿಡಲಾಗಿತ್ತು. ಇದರಲ್ಲಿ 120 ಪ್ರಶ್ನೆಗಳು ಪರೀಕ್ಷೆಯಲ್ಲಿ ಬಂದಿದ್ದವು. ರಾಜಸ್ಥಾನದಲ್ಲಿ ಇದು ಮೊದಲು ಗೊತ್ತಾಗಿ ತನಿಖೆ ಶುರುವಾಯಿತು.
ನೀಟ್ ಪರೀಕ್ಷೆಯ ಹೊಣೆಹೊತ್ತಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್​ಟಿಎ) ಮರುಪರೀಕ್ಷೆ ನಡೆಸಲು ನಿರ್ಧರಿಸಿದ್ದು, ದಿನಾಂಕವನ್ನು ಮುಂದೆ ಪ್ರಕಟಿಸಲಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ದೇಶದಲ್ಲಿ ವೈದ್ಯರ ಸಂಖ್ಯೆ ಹೆಚ್ಚಬೇಕೆಂಬ ಉದ್ದೇಶದಿಂದ ಕಳೆದ ವರ್ಷ ದಾಖಲೆಯ ಪ್ರಮಾಣದಲ್ಲಿ ವೈದ್ಯಕೀಯ ಕಾಲೇಜುಗಳಿಗೆ ಮತ್ತು ವೈದ್ಯಕೀಯ ಸೀಟುಗಳಿಗೆ ಅನುಮೋದನೆ ನೀಡಲಾಗಿದೆ. ಪ್ರಸ್ತುತ ದೇಶದಲ್ಲಿ 1,29,603 ವೈದ್ಯಕೀಯ ಸೀಟುಗಳಿವೆ. ವೈದ್ಯಕೀಯ ಮಾತ್ರ ಎಂದಲ್ಲ, ಯಾವುದೇ ಕೋರ್ಸ್ ಇದ್ದರೂ, ಪರೀಕ್ಷೆಯನ್ನು ಪಾರದರ್ಶಕವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಸುವುದು ಆಯಾ ಸಂಸ್ಥೆಯ ಹೊಣೆಗಾರಿಕೆ. ಹಾಗೆ ಆಗದಿದ್ದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ; ಅವರ ಕನಸಿನ ಜತೆ ವ್ಯವಸ್ಥೆ ಆಟವಾಡಿದಂತಾಗುತ್ತದೆ. ನೀಟ್ ಅನ್ನೇ ತೆಗೆದುಕೊಂಡರೆ, ಇದು ಆರಂಭವಾದ ಮೊದಲ ವರ್ಷವೇ ಸವೋಚ್ಚ ನ್ಯಾಯಾಲಯವು ರದ್ದುಪಡಿಸಿತ್ತು.
2016ರಲ್ಲಿ ಶಾಸನಬದ್ಧವಾಗಿ ಜಾರಿಗೆ ತರಲಾಯಿತು. ನಂತರದಲ್ಲಿಯೂ ಪರೀಕ್ಷಾ ಅಕ್ರಮದ ಪ್ರಕರಣ ನಡೆದಿದ್ದರೂ ಮರುಪರೀಕ್ಷೆ ನಡೆಸಿರಲಿಲ್ಲ. ಈ ಬಾರಿ ಮರುಪರೀಕ್ಷೆ ನಡೆಸುವುದಾಗಿ ಎನ್​ಟಿಎ ಹೇಳಿದೆ. ಪ್ರಶ್ನೆಪತ್ರಿಕೆ ಸೋರಿಕೆಯು ಕೆಲವೇ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಕ್ರಮ ಮಾರ್ಗದಿಂದ ಹೆಚ್ಚು ಅಂಕ ಪಡೆಯಲು ಅನುಕೂಲ ಮಾಡಿಕೊಡುತ್ತದೆ. ಇದರಿಂದ, ಶ್ರಮಪಟ್ಟು ಓದಿದ ಇತರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತೆಯೇ ಸರಿ. ಇದಲ್ಲದೆ, ಇಂಥ ಘಟನೆಗಳು ಮರುಕಳಿಸಿದರೆ, ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ವ್ಯವಸ್ಥೆಯ ಮೇಲಿನ ನಂಬಿಕೆ ಕ್ಷೀಣಿಸುತ್ತದೆ. ಇದು ಬಹಳ ಅಪಾಯಕಾರಿ. ಏಕೆಂದರೆ, ಪರೀಕ್ಷೆ ಮಾತ್ರ ಎಂದಲ್ಲ, ಎಲ್ಲ ವ್ಯವಸ್ಥೆಗಳೂ ಸಾರ್ವಜನಿಕ ವಿಶ್ವಾಸಾರ್ಹತೆಯನ್ನು ಹೊಂದಿರುವುದು ಬಹಳ ಮುಖ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿ ಹಾಗೂ ಸರ್ಕಾರಿ ನೇಮಕಾತಿಗೆ ಸಂಬಂಧಿಸಿ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತವೆ.
ಇಂಥವುಗಳಲ್ಲಿ ಬಹುತೇಕವು ಸ್ವಾಯತ್ತ ಸ್ಥಾನಮಾನ ಹೊಂದಿರುತ್ತವೆ. ಈ ಸಂಸ್ಥೆಗಳು ಪ್ರಾಮಾಣಿಕತೆಯಿಂದ ಮತ್ತು ನೈಜ ಕಾಳಜಿಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಅವುಗಳ ಸ್ಥಾಪನೆಯ ಮೂಲೋದ್ದೇಶ ಈಡೇರುತ್ತದೆ. ಇಂಥ ಸಂಸ್ಥೆಗಳ ಕಾರ್ಯವಿಧಾನದ ಬಗ್ಗೆ ಬೇರೆ ಬರೆ ರಾಜ್ಯಗಳಲ್ಲಿ ಆಗೀಗ ಆಪಾದನೆಗಳು ವರದಿಯಾಗುತ್ತಿರುತ್ತವೆ. ಈಗಿನ ನೀಟ್ ಪ್ರಕರಣ ಎಲ್ಲ ಸಂಸ್ಥೆಗಳಿಗೂ ಒಂದು ಪಾಠವಾಗಲಿ, ಮುಂದೆ ಇಂಥದು ಸಂಭವಿಸದಂತೆ ಕಟ್ಟೆಚ್ಚರ ವಹಿಸಲು ದಾರಿಯಾಗಲಿ. ಸಿಬಿಐ ತನಿಖೆ ಸರಿಯಾದ ಕ್ರಮದಲ್ಲಿ ನಡೆದು, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಿ, ಒಂದು ಬಲವಾದ ಸಂದೇಶ ನೀಡುವಂತಾಗಲಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net