ವರ್ಷಾಂತ್ಯದಲ್ಲಿ 93 ಸಾವಿರಕ್ಕೆ ತಲುಪಲಿದೆ ಸೆನ್ಸೆಕ್ಸ್

Sensex
Sensex
Published on
ನವದೆಹಲಿ: ಭಾರತೀಯ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಈ ವರ್ಷದ ಡಿಸೆಂಬರ್ ವೇಳೆಗೆ 93,918 ಅಂಕಗಳನ್ನು ತಲುಪುವ ಸಾಧ್ಯತೆ ಇದೆ ಎಂದು ವೆಲ್ತ್ ಮ್ಯಾನೇಜ್​ವೆುಂಟ್ ಸಂಸ್ಥೆಯಾದ ಕ್ಲೈಂಟ್ ಅಸೋಸಿಯೇಟ್ಸ್ (ಸಿಎ) ಹೇಳಿದೆ.
ಪ್ರಸ್ತುತ 84,805ರ ಮಟ್ಟದಲ್ಲಿರುವ ಸೆನ್ಸೆಕ್ಸ್, ಮುಂದಿನ 2 ವರ್ಷಗಳಲ್ಲಿ ಶೇ. 11ರಷ್ಟು ಬೆಳವಣಿಗೆ ಕಾಣಲಿದೆ ಎಂದು ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ಅಂದಾಜಿಸಲಾಗಿದೆ. ಜಾಗತಿಕ ಅನಿಶ್ಚಿತತೆ ಮತ್ತು ಷೇರುಗಳ ಮೌಲ್ಯ ಏರಿಕೆಯ ನಡುವೆ, ಹೂಡಿಕೆದಾರರು ತಮ್ಮ ಪೋರ್ಟ್​ಫೋಲಿಯೊದಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಪ್ರಮುಖ ವೈವಿಧ್ಯಮಯ ಹೂಡಿಕೆಗಳಾಗಿ ಬಳಸಿಕೊಳ್ಳಬೇಕು ಎಂದು ಸಂಸ್ಥೆ ಸಲಹೆ ನೀಡಿದೆ. ದೇಶದ ಆಂತರಿಕ ಆರ್ಥಿಕ ಶಕ್ತಿಯೇ ಮಾರುಕಟ್ಟೆಗೆ ಬೆಂಬಲ ನೀಡಲಿದೆ. ದೇಶದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇ. 6.8ಕ್ಕೆ ಏರಿಸಲಾಗಿದ್ದು, ಉತ್ಪಾದನೆ ಮತ್ತು ಸೇವಾ ವಲಯದ ಚಟುವಟಿಕೆಗಳು ಸುಧಾರಿಸುತ್ತಿವೆ. ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯಿಂದಾಗಿ, ಹೂಡಿಕೆದಾರರು ಶಿಸ್ತುಬದ್ಧ ಹೂಡಿಕೆ ಕ್ರಮ ಅನುಸರಿಸುವುದು ಅಗತ್ಯ ಎಂದು ಸಂಸ್ಥೆಯ ಹೂಡಿಕೆ ಸಂಶೋಧನಾ ವಿಭಾಗದ ಮುಖ್ಯಸ್ಥ ನಿತಿನ್ ಅಗರ್ವಾಲ್ ತಿಳಿಸಿದ್ದಾರೆ.

3ನೇ ದಿನ ಷೇರುಪೇಟೆ ಕುಸಿತ

ಮುಂಬೈ: ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಅಮೆರಿಕದ ಸುಂಕ ಏರಿಕೆ ಸಾಧ್ಯತೆ ಬಗ್ಗೆ ಹೂಡಿಕೆದಾರರಲ್ಲಿ ಮೂಡಿರುವ ಆತಂಕದಿಂದಾಗಿ ಬುಧವಾರ ಸತತ ಮೂರನೇ ದಿನವೂ ಷೇರು ಮಾರುಕಟ್ಟೆ ಇಳಿಕೆ ಕಂಡಿದೆ. ವಿದೇಶಿ ಬಂಡವಾಳದ ನಿರಂತರ ಹೊರಹರಿವು ಕೂಡ ಮಾರುಕಟ್ಟೆಯ ಕುಸಿತಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ 445.85 ಅಂಕ ಕುಸಿದು 84,617.49ಕ್ಕೆ ತಲುಪಿದ್ದ ಸೆನ್ಸೆಕ್ಸ್ 102.20 ಅಂಕ ಕುಸಿದು 84,961.14 ಮಟ್ಟದಲ್ಲಿ ಸ್ಥಿರವಾಯಿತು. ನಿಫ್ಟಿ 37.95 ಅಂಕ ಇಳಿಕೆಯೊಂದಿಗೆ 26,140.75ಕ್ಕೆ ತಲುಪಿತು. ಮಂಗಳವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 107.63 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು 1,749.35 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ ಬೆಲೆ ಶೇ. 0.81ರಷ್ಟು ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್​ಗೆ 60.21 ಡಾಲರ್​ಗೆ ತಲುಪಿದೆ.

ಚಿನ್ನ, ಬೆಳ್ಳಿ ಏರಿಕೆ ಅಬಾಧಿತ

2025ರಲ್ಲಿ ದುರ್ಬಲ ಡಾಲರ್ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಚಿನ್ನ ಮತ್ತು ಬೆಳ್ಳಿ ಬೆಲೆ ಸಾಕಷ್ಟು ಏರಿಕೆಯಾಗಿದ್ದು, ಇದು 2026ರಲ್ಲಿಯೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಕ್ಲೈಂಟ್ ಅಸೋಸಿಯೇಟ್ಸ್ ವರದಿಯಲ್ಲಿ ತಿಳಿಸಲಾಗಿದೆ. ಕ್ಲೈಂಟ್ ಅಸೋಸಿಯೇಟ್ಸ್ ಪ್ರಸ್ತುತ 1,100ಕ್ಕೂ ಹೆಚ್ಚು ಶ್ರೀಮಂತ ಹೂಡಿಕೆದಾರರ ಸುಮಾರು 7 ಶತಕೋಟಿ ಡಾಲರ್ ಆಸ್ತಿಯನ್ನು ನಿರ್ವಹಿಸುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net