ಸಿವಿ ಕಳುಹಿಸಿ, ಉದ್ಯೋಗ ಪಡೆಯಿರಿ: ಬಂಕಿಪುರದ ನಿರುದ್ಯೋಗಿ ಯುವಕರಿಗೆ ಗುಡ್​ ನ್ಯೂಸ್​ ನೀಡಿದ ಪ್ರಶಾಂತ್ ಕಿಶೋರ್! | Prashant Kishor

Prashant Kishor > ಬಂಕಿಪುರದ ನಿರುದ್ಯೋಗಿ ಯುವಕರಿಗೆ ಗುಡ್​ ನ್ಯೂಸ್​ ನೀಡಿದ ಪ್ರಶಾಂತ್ ಕಿಶೋರ್!
Prashant Kishor > ಬಂಕಿಪುರದ ನಿರುದ್ಯೋಗಿ ಯುವಕರಿಗೆ ಗುಡ್​ ನ್ಯೂಸ್​ ನೀಡಿದ ಪ್ರಶಾಂತ್ ಕಿಶೋರ್!
Published on

ಬಂಕಿಪುರದಲ್ಲಿ ಮೂರು ದಶಕಗಳ ಕಾಲ ನಡೆದಿದ್ದ ಬಿಜೆಪಿಯ ಆಳ್ವಿಕೆಯನ್ನು ಇತ್ತೀಚೆಗೆ ಕೊನೆಗಾಣಿಸಿರುವ ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ (Prashant Kishor), ಕ್ಷೇತ್ರದ ಯುವಕರಿಗಾಗಿ ಬೃಹತ್ ಉದ್ಯೋಗ ಅಭಿಯಾನವನ್ನು ಘೋಷಿಸಿದ್ದಾರೆ. ಮುಂದಿನ ಒಂದೆರಡು ವರ್ಷಗಳಲ್ಲಿ ಕನಿಷ್ಠ 10,000 ಯುವಕರಿಗೆ ಉದ್ಯೋಗ ಕಂಡುಕೊಳ್ಳಲು ಸಹಾಯ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ಶಿಕ್ಷಣ ಪಡೆದರೂ ನಿರುದ್ಯೋಗಿಗಳಾಗಿರುವ ತಮ್ಮ ಮಕ್ಕಳ ಬಯೋಡೇಟಾ ಮತ್ತು ಸಿವಿಗಳನ್ನು ತಮ್ಮ ಕಚೇರಿಗೆ ಕಳುಹಿಸುವಂತೆ ಕುಟುಂಬಗಳಿಗೆ ಮನವಿ ಮಾಡಿದ್ದಾರೆ.

ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಜಯಗಳಿಸಿದ ನಂತರ ಪ್ರಶಾಂತ್ ಕಿಶೋರ್ ಮಂಗಳವಾರ ಮೊದಲ ಬಾರಿಗೆ ಬಂಕಿಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘೋಷಣೆ ಮಾಡಿದರು. ಕೃತಜ್ಞತಾ ಸಮರ್ಪಣಾ ಅಭಿಯಾನದ ಭಾಗವಾಗಿ ಅವರು ಕ್ಷೇತ್ರದಲ್ಲಿ ಸಂಚರಿಸಿದರು ಮತ್ತು ತಮ್ಮ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತದಾರರಿಗೆ ಧನ್ಯವಾದ ಹೇಳಿದರು. ಚುನಾವಣಾ ಗೆಲುವಿನ ಬಳಿಕ ಐದಾರು ದಿನಗಳ ಕಾಲ ಅವರು ಕ್ಷೇತ್ರದಿಂದ ದೂರವಿದ್ದರು ಎಂಬ ಟೀಕೆಗಳಿಗೆ ಪ್ರತಿಕ್ರಿಯಿಸಿದ ಕಿಶೋರ್, ನಾನು ಎಲ್ಲಿಗೂ ಪ್ರಯಾಣಿಸುತ್ತಿಲ್ಲ. ನಾನು ನಿಮಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಹೊರರಾಜ್ಯಗಳಿಗೆ ತೆರಳುವ ಅನಿವಾರ್ಯತೆ

ಬಿಹಾರದಲ್ಲಿ ಜನ ಸುರಾಜ್ ಪಕ್ಷ ಅಧಿಕಾರಕ್ಕೆ ಬಂದರೆ ಪರಿಸ್ಥಿತಿ ಬದಲಾಗಬಹುದು ಎಂದಿರುವ ಕಿಶೋರ್, ಆ ಸಂದರ್ಭದಲ್ಲಿ, ಯುವಕರು ಉದ್ಯೋಗ ಅರಸಿ ಬಿಹಾರ ಬಿಟ್ಟು ಹೋಗದಂತೆ ರಾಜ್ಯದೊಳಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದೇ ಪ್ರಮುಖ ಗಮನವಾಗಿರುತ್ತದೆ ಎಂದು ತಿಳಿಸಿದರು.

ಬಂಕಿಪುರ ಉಪಚುನಾವಣೆಯಲ್ಲಿ ಐತಿಹಾಸಿಕ ಗೆಲುವು

ಬಂಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನೀರಜ್ ಕುಮಾರ್ ಸಿನ್ಹಾರನ್ನು 19,324 ಮತಗಳ ಅಂತರದಿಂದ ಸೋಲಿಸುವ ಮೂಲಕ ಪ್ರಶಾಂತ್ ಕಿಶೋರ್ ಅವರು ಜನ ಸುರಾಜ್ ಪಕ್ಷಕ್ಕೆ ಮೊದಲ ಚುನಾವಣಾ ಜಯವನ್ನು ತಂದುಕೊಟ್ಟ ಬೆನ್ನಲ್ಲೇ ಈ ಉದ್ಯೋಗ ಭರವಸೆ ಹೊರಬಿದ್ದಿದೆ. ಕಿಶೋರ್ ಅವರು 64,151 ಮತಗಳನ್ನು ಪಡೆದರೆ, ಸಿನ್ಹಾ ಅವರು 44,827 ಮತಗಳನ್ನು ಗಳಿಸಿದರು. ಇನ್ನು ಆರ್ ಜೆಡಿಯ (RJD) ರೇಖಾ ಗುಪ್ತಾ ಅವರು 14,273 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಈ ಗೆಲುವಿನೊಂದಿಗೆ ಬಿಹಾರದಲ್ಲಿ ಬಿಜೆಪಿಯ ಅತ್ಯಂತ ಬಲವಾದ ಭದ್ರಕೋಟೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದ್ದ ಬಂಕಿಪುರದ ಮೇಲಿನ ಮೂವತ್ತು ವರ್ಷಗಳ ಹಿಡಿತವು ಅಂತ್ಯಗೊಂಡಿತು. ಆರಂಭಿಕ ಮತ ಎಣಿಕೆಯ ಪ್ರವೃತ್ತಿಗಳಲ್ಲಿಯೇ ಮುನ್ನಡೆ ಸಾಧಿಸಿದ್ದ ಕಿಶೋರ್, ಹಂತ ಹಂತವಾಗಿ ತಮ್ಮ ಮುನ್ನಡೆಯನ್ನು ಹೆಚ್ಚಿಸಿಕೊಂಡರು. 32 ಸುತ್ತುಗಳ ಮತ ಎಣಿಕೆಯ ಪೈಕಿ 15 ನೇ ಸುತ್ತಿನ ವೇಳೆಗೆ ಫಲಿತಾಂಶವು ಬಹುತೇಕ ಖಚಿತಗೊಂಡಿತ್ತು.

ಆ ಸಂದರ್ಭದಲ್ಲಿ ನಿರೀಕ್ಷೆಗಳನ್ನು ಹತೋಟಿಯಲ್ಲಿರಿಸಿದ್ದ ಪ್ರಶಾಂತ್​ ಕಿಶೋರ್​, ತಮ್ಮ ಗೆಲುವಿನಿಂದ ಬಂಕಿಪುರವು ರಾತ್ರೋರಾತ್ರಿ ಬೆಂಗಳೂರು ಆಗುವುದಿಲ್ಲ ಎಂದು ಹೇಳಿದ್ದರು. ಆದಾಗ್ಯೂ, ಮುಂದಿನ ಕೆಲವು ತಿಂಗಳುಗಳಲ್ಲಿ ಸುಧಾರಣೆಗಳು ಆಗಲಿವೆ ನಿವಾಸಿಗಳಿಗೆ ಭರವಸೆ ನೀಡಿದ್ದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net