ಬೆಂಗ್ಳೂರಿಗೆ 2ನೇ ವಿಮಾನ ನಿಲ್ದಾಣ: 3 ಸ್ಥಳಗಳ ಅಧ್ಯಯನ ವರದಿ ರಾಜ್ಯ ಸರ್ಕಾರಕ್ಕೆ ರವಾನೆ, ಆದ್ರೆ ಉತ್ತರ ಬಂದಿಲ್ಲ ಎಂದ ಕೇಂದ್ರ! Second Airport for Bengaluru

ಬೆಂಗ್ಳೂರಿಗೆ 2ನೇ ವಿಮಾನ ನಿಲ್ದಾಣ: 3 ಸ್ಥಳಗಳ ಅಧ್ಯಯನ ವರದಿ ರಾಜ್ಯ ಸರ್ಕಾರಕ್ಕೆ ರವಾನೆ, ಆದ್ರೆ ಉತ್ತರ ಬಂದಿಲ್ಲ ಎಂದ ಕೇಂದ್ರ! Second Airport for Bengaluru
ಬೆಂಗ್ಳೂರಿಗೆ 2ನೇ ವಿಮಾನ ನಿಲ್ದಾಣ: 3 ಸ್ಥಳಗಳ ಅಧ್ಯಯನ ವರದಿ ರಾಜ್ಯ ಸರ್ಕಾರಕ್ಕೆ ರವಾನೆ, ಆದ್ರೆ ಉತ್ತರ ಬಂದಿಲ್ಲ ಎಂದ ಕೇಂದ್ರ! Second Airport for Bengaluru
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ ಕರ್ನಾಟಕದಿಂದ ಬಂದಿಲ್ಲ ಯಾವುದೇ ಅಧಿಕೃತ ಪ್ರಸ್ತಾವನೆ
  • ಮೂರು ಸ್ಥಳಗಳ ಅಧ್ಯಯನ ವರದಿ ರಾಜ್ಯ ಸರ್ಕಾರಕ್ಕೆ ರವಾನೆ ಮಾಡಿದರೂ ಯಾವುದೇ ಉತ್ತರ ಬಂದಿಲ್ಲ ಎಂದ ಕೇಂದ್ರ
  • ಎರಡನೇ ವಿಮಾನ ನಿಲ್ದಾಣಕ್ಕೆ ಗ್ರೀನ್‌ಫೀಲ್ಡ್ ನೀತಿಯಡಿ ಪ್ರಸ್ತಾವನೆ ಸಲ್ಲಿಸಲು ಕೇಂದ್ರದ ಸೂಚನೆ
  • ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಸ್ತರಣೆ ಹಾಗೂ ಪ್ರಯಾಣಿಕರ ನಿರ್ವಹಣೆಗೆ ಮಾಸ್ಟರ್ ಪ್ಲಾನ್
ನವದೆಹಲಿ/ಬೆಂಗಳೂರು: ದೇಶದ ಪ್ರಮುಖ ಐಟಿ ಹಬ್ ಆಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ಎರಡನೇ ವಿಮಾನ ನಿಲ್ದಾಣ ( Second Airport for Bengaluru ) ನಿರ್ಮಾಣದ ಚರ್ಚೆಗಳು ಜೋರಾಗಿವೆ. ಈ ಕುರಿತು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಕೇಂದ್ರದ ನಾಗರಿಕ ವಿಮಾನಯಾನ ಸಚಿವಾಲಯವು ಲಿಖಿತ ಉತ್ತರ ನೀಡಿದ್ದು, ಯೋಜನೆಯ ಪ್ರಸ್ತುತ ಸ್ಥಿತಿಗತಿ ಹಾಗೂ ಹಾಲಿ ವಿಮಾನ ನಿಲ್ದಾಣದ ವಿಸ್ತರಣೆಯ ಕುರಿತು ವಿವರವಾದ ಮಾಹಿತಿ ಹಂಚಿಕೊಂಡಿದೆ.
ಬೆಂಗಳೂರು ಸಂಸದ ಪಿ.ಸಿ. ಮೋಹನ್ ಅವರು ಕನಕಪುರ ರಸ್ತೆ ಹಾಗೂ ಕುಣಿಗಲ್ ರಸ್ತೆ ಸೇರಿದಂತೆ ಎರಡನೇ ವಿಮಾನ ನಿಲ್ದಾಣದ ಪ್ರಸ್ತಾವನೆ ಮತ್ತು ಪ್ರಸ್ತುತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆಯ ಕುರಿತು ಕೇಳಿದ ಪ್ರಶ್ನೆಗೆ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರ್ಲಿಧರ್ ಮೊಹೊಲ್ ಉತ್ತರ ನೀಡಿದ್ದಾರೆ. ಕರ್ನಾಟಕ ಸರ್ಕಾರದ ಮನವಿಯಂತೆ ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರವು (AAI) ಮೂರು ಸ್ಥಳಗಳಲ್ಲಿ ಪೂರ್ವ-ಸಾಧ್ಯತಾ ಅಧ್ಯಯನವನ್ನು (Pre-feasibility studies) ನಡೆಸಿ, ವರದಿಯನ್ನು ಈಗಾಗಲೇ ರಾಜ್ಯ ಸರ್ಕಾರಕ್ಕೆ ರವಾನಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಆದರೆ, ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳ ನೀತಿಯಡಿ (Greenfield Airports Policy) ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದಿಂದ ಅಥವಾ ಯಾವುದೇ ವಿಮಾನ ನಿಲ್ದಾಣ ಅಭಿವೃದ್ಧಿದಾರರಿಂದ ಕೇಂದ್ರ ಸರ್ಕಾರಕ್ಕೆ (GoI) ಇದುವರೆಗೆ ಯಾವುದೇ ಅಧಿಕೃತ ಪ್ರಸ್ತಾವನೆ ಬಂದಿಲ್ಲ ಎಂದು ಕೇಂದ್ರ ಸಚಿವಾಲಯ ಸ್ಪಷ್ಟಪಡಿಸಿದೆ. ಹೀಗಾಗಿ ಮುಂದಿನ ಹಂತದ ನಿರ್ಮಾಣ ಹಾಗೂ ಅನುಮೋದನೆ ಪ್ರಕ್ರಿಯೆಗಳು ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಆಧರಿಸಿರಲಿವೆ.
ಇದೇ ವೇಳೆ ಹಾಲಿ ಕಾರ್ಯನಿರ್ವಹಿಸುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕ್ಷಮತೆಯ ಮಾಹಿತಿಯನ್ನೂ ಹಂಚಿಕೊಳ್ಳಲಾಗಿದೆ. ಪ್ರಸ್ತುತ ಈ ವಿಮಾನ ನಿಲ್ದಾಣವು ವಾರ್ಷಿಕ 51.5 ಮಿಲಿಯನ್ ಹಾಗೂ ದಿನಕ್ಕೆ ಸರಾಸರಿ 1,41,000 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. 2026ರ ಜೂನ್‌ವರೆಗಿನ 2026-27ರ ಹಣಕಾಸು ವರ್ಷದ ಅಂಕಿಅಂಶಗಳ ಪ್ರಕಾರ, ನಿತ್ಯ ಸರಾಸರಿ 1,23,000 ಸಾವಿರ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಸುತ್ತಿದ್ದಾರೆ.
ಬೆಳೆಯುತ್ತಿರುವ ವಿಮಾನ ಸಂಚಾರಕ್ಕೆ ತಕ್ಕಂತೆ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ ಸಾಮರ್ಥ್ಯವನ್ನು 2023ರ ವೇಳೆಗೆ ವಾರ್ಷಿಕ 80 ಮಿಲಿಯನ್ ಪ್ರಯಾಣಿಕರಿಗೆ (MPPA) ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಟರ್ಮಿನಲ್ 2ರ ಎರಡನೇ ಹಂತದ (Phase 2) ವಿಸ್ತರಣೆ ಕೈಗೆತ್ತಿಕೊಳ್ಳಲಿದ್ದು, ಪ್ರಸ್ತುತ ಇರುವ 25 MPPA ಸಾಮರ್ಥ್ಯವನ್ನು 45 MPPA ಗೆ ಹೆಚ್ಚಿಸಲಾಗುತ್ತದೆ. ಗುತ್ತಿಗೆ ಒಪ್ಪಂದಗಳ ಪ್ರಕಾರ ಪ್ರಯಾಣಿಕರ ದಟ್ಟಣೆ ನಿಗದಿತ ಮಿತಿ ಮೀರಿದಾಗ ವಿಮಾನ ನಿಲ್ದಾಣ ನಿರ್ವಾಹಕರು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ವಿಸ್ತರಣಾ ಯೋಜನೆಗಳನ್ನು ಜಾರಿಗೊಳಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಉತ್ತರ ನೀಡಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net