ಚೆನ್ನೈ: ತಮಿಳುನಾಡಿನ ತಿರುಪರಂಕುಂದ್ರಂ ಬೆಟ್ಟದ ದೀಪಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಲು ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ. ಆದರೂ, ನವೆಂಬರ್ 24 ರಂದು ನಡೆಯಲಿರುವ ದೀಪೋತ್ಸವಕ್ಕೆ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಸರ್ವೋಚ್ಛ ನ್ಯಾಯಾಲಯ ವಿಶೇಷ ಅನುಮತಿ ನೀಡಿದೆ.
ಈ ಮಧ್ಯಂತರ ಅನುಮತಿಯನ್ನು ಸಂಪ್ರದಾಯದ ಅಂತಿಮ ಮಾನ್ಯತೆ ಎಂದು ಪರಿಗಣಿಸಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದು, ಇದಷ್ಟೇ ಅಲ್ಲದೆ, ಈ ಆದೇಶದ ಆಧಾರದ ಮೇಲೆ ಬೆಟ್ಟದ ಮೇಲೆ ಪ್ರವೇಶಿಸುವ, ಸ್ವಾಧೀನಪಡಿಸಿಕೊಳ್ಳುವ ಅಥವಾ ನಿಯಂತ್ರಣ ಸಾಧಿಸುವ ಯಾವುದೇ ಹೆಚ್ಚುವರಿ ಹಕ್ಕುಗಳನ್ನು ಕೇಳುವಂತಿಲ್ಲ ಎಂದು ಕೋರ್ಟ್ ಕಟ್ಟುನಿಟ್ಟಾಗಿ ಹೇಳಿದೆ.
ನವೆಂಬರ್ 24 ರಂದು ದೀಪಸ್ತಂಭದಲ್ಲಿ ದೀಪ ಬೆಳಗಲು ದೇವಸ್ಥಾನದ ಅಧಿಕೃತ ಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ಸೀಮಿತ ತಂಡಕ್ಕೆ ಮಾತ್ರ ಅವಕಾಶ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದ್ದು, ಈ ಧಾರ್ಮಿಕ ವಿಧಿವಿಧಾನವನ್ನು ವೀಕ್ಷಿಸಲು ಅಥವಾ ದೀಪ ಬೆಳಗುವ ಸ್ಥಳಕ್ಕೆ ಭೇಟಿ ನೀಡಲು ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ಪ್ರವೇಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಒಟ್ಟಾರೆಯಾಗಿ, ಧಾರ್ಮಿಕ ಆಚರಣೆಗೆ ಅಡ್ಡಿಯಾಗದಂತೆ ಎಚ್ಚರ ವಹಿಸಿರುವ ಸುಪ್ರೀಂ ಕೋರ್ಟ್, ಬೆಟ್ಟದ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಮಧ್ಯಂತರ ವ್ಯವಸ್ಥೆ ಮಾಡಿದೆ.
ದೀಪ ಬೆಳಗುವ ತಂಡದ ಗಾತ್ರ ಮತ್ತು ಸದಸ್ಯರ ಆಯ್ಕೆಯ ಸಂಪೂರ್ಣ ಜವಾಬ್ದಾರಿಯನ್ನು ಮಧುರೈ ಜಿಲ್ಲಾಧಿಕಾರಿಗಳಿಗೆ ವಹಿಸಿರುವ ನ್ಯಾಯಾಲಯ, ಬೆಟ್ಟದ ಮೇಲಿರುವ ದರ್ಗಾ ಮತ್ತು ಮಸೀದಿಯಲ್ಲಿ ನಡೆಯುವ ಪ್ರಾರ್ಥನೆಗೆ ಯಾವುದೇ ರೀತಿಯ ಅಡ್ಡಿಯಾಗಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆಚರಣೆಯ ಎಲ್ಲಾ ವ್ಯವಸ್ಥೆಗಳನ್ನು ಜಿಲ್ಲಾಧಿಕಾರಿಗಳೇ ಮೇಲ್ವಿಚಾರಣೆ ಮಾಡಲಿದ್ದು, ಸ್ಥಳೀಯ ಪೊಲೀಸರು ಭದ್ರತೆ ಒದಗಿಸಲಿದ್ದಾರೆ. ಅಗತ್ಯವಿದ್ದಲ್ಲಿ ಮತ್ತು ಸಾಧ್ಯವಾದರೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಲು ನ್ಯಾಯಾಲಯ ಸೂಚಿಸಿದೆ.
ಇದರೊಂದಿಗೆ, ನ್ಯಾಯಾಲಯ ವಿಧಿಸಿರುವ ಸುರಕ್ಷತಾ ಕ್ರಮಗಳ ಹೊರತಾಗಿ ಯಾವುದೇ ಕಾನೂನು, ಭದ್ರತಾ ಅಡಚಣೆಗಳು ಎದುರಾದರೆ ತಕ್ಷಣ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಅಲ್ಲದೆ, ಹಬ್ಬ ಮುಗಿದ ಮೂರು ದಿನಗಳಲ್ಲಿ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಆದೇಶಿಸಲಾಗಿದೆ.
ತಿರುಪರಂಕುಂದ್ರಂ ಬೆಟ್ಟದ ದರ್ಗಾ ಸಮೀಪ ಕಾರ್ತಿಕ ದೀಪ ಬೆಳಗುವ ವಿಚಾರ ತಮಿಳುನಾಡಿನಲ್ಲಿ ದೊಡ್ಡ ಕಾನೂನು ಮತ್ತು ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಬೆಟ್ಟದ ಮೇಲಿನ ದೀಪಸ್ತಂಭದಲ್ಲಿ ದೀಪ ಬೆಳಗಲು ಭಕ್ತರಿಗೆ ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ 2025ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿತ್ತು. ರಾಜ್ಯ ಅಧಿಕಾರಿಗಳ ಆಕ್ಷೇಪದ ನಡುವೆಯೂ ದೇವಸ್ಥಾನದ ಐತಿಹಾಸಿಕ ಹಕ್ಕನ್ನು ಎತ್ತಿಹಿಡಿದಿದ್ದ ಹೈಕೋರ್ಟ್, ಆದೇಶ ಜಾರಿಗೆ ವಿಳಂಬ ಮಾಡಿದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮದ ಎಚ್ಚರಿಕೆಯನ್ನೂ ನೀಡಿತ್ತು ಮತ್ತು ಸಿಐಎಸ್‌ಎಫ್ ಭದ್ರತೆಗೆ ಅನುಮತಿ ನೀಡಿತ್ತು.
ಇದು ರಾಜ್ಯದಲ್ಲಿ ಪ್ರತಿಭಟನೆ ಹಾಗೂ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಎಂ ಕೆ ಸ್ಟಾಲಿನ್ ಅವರು, ರಾಜಕೀಯ ವಿರೋಧಿಗಳು ಆಡಳಿತದ ಬದಲು ಧಾರ್ಮಿಕ ವಿಷಯಗಳಿಗೆ ಒತ್ತು ನೀಡುತ್ತಿದ್ದಾರೆ ಎಂದು ಟೀಕಿಸಿದ್ದರು. ಸದ್ಯ ಸುಪ್ರೀಂ ಕೋರ್ಟ್ ನವೆಂಬರ್ 24ರ ಆಚರಣೆಗೆ ತಾತ್ಕಾಲಿಕ ಅನುಮತಿ ನೀಡಿದ್ದು, ಬೆಟ್ಟದ ಮಾಲೀಕತ್ವ ಮತ್ತು ಸಂಪ್ರದಾಯದ ಕುರಿತಾದ ವಿಸ್ತೃತ ಕಾನೂನು ಪ್ರಶ್ನೆಗಳನ್ನು ಮುಂದಿನ ವಿಚಾರಣೆಗೆ ಕಾಯ್ದಿರಿಸಿದೆ(ಏಜೆನ್ಸೀಸ್).