'MGR ಮಡಿಲಲ್ಲಿ ಆಡಿ ಬೆಳೆದವ ನಾನು.. ಎಂದಿಗೂ ಅವರ ಹೆಸರು ರಾಜಕೀಯಕ್ಕೆ ಬಳಸಿಕೊಂಡಿಲ್ಲ'; Kamal Hassan
Kamal Haasan
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಾನು ಬಾಲ್ಯದಿಂದ ಸಿನಿಮಾದಲ್ಲಿದ್ದೇನೆ ಹೀಗೆ ಯಾವತ್ತು ನಡೆದುಕೊಂಡಿಲ್ಲ
ಎಂಜಿಆರ್, ಶಿವಾಜಿ ಗಣೇಶನ್ ಹೆಸರು ರಾಜಕೀಯಕ್ಕೆ ಬಳಸಿಕೊಂಡಿಲ್ಲ
ಡಿಎಂಕೆ ಪರ ಪ್ರಚಾರದ ವೇಳೆ ವಿಜಯ್ ವಿರುದ್ಧ ಕಮಲ್ ಹಾಸನ್ ಬೇಸರ
ಚೆನ್ನೈ: 'ನಾನು ಸಹ ಸಣ್ಣವನಿದ್ದಾಗಿನಿಂದಲೇ ಸಿನಿಮಾ ರಂಗಕ್ಕೆ ಬಂದವನು. ಎಂಜಿ ರಾಮಚಂದ್ರನ್(MG Ramachandran), ಶಿವಾಜಿ ಗಣೇಶನ್ ಅವರ ಮಡಿಲಲ್ಲಿ ಬೆಳೆದಾತ. ನಾನೆಂದರೇನೆ ಅವರಿಗೆ ಅಪಾರ ಅಚ್ಚುಮೆಚ್ಚು. ಇಷ್ಟಿದ್ದರೂ ಸಹ ರಾಜಕೀಯವಾಗಿ ಅವರನ್ನು ಎಂದಿಗೂ ಬಳಕೆ ಮಾಡಿಕೊಂಡಿಲ್ಲ' ಎಂದು ನಟ ಹಾಗೂ ಮಕ್ಕಳ್ ನೀಧಿ ಮೈಯಂನ ಅಧ್ಯಕ್ಷ ಕಮಲ್ ಹಾಸನ್ ಅವರು ನಟ ವಿಜಯ್(TVK VIjay) ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಏಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ(Tamil Nadu Assembly Election) ರಾಜಕೀಯ ಪಕ್ಷಗಳು ಪ್ರಚಾರ ನಡೆಸಿಕೊಂಡಿವೆ. ಡಿಎಂಕೆ ಮತ್ತು ಟಿವಿಕೆ ನಡುವೆ ವಾಕ್ಸಮರ ಜೋರಾಗಿಯೇ ಇದೆ. ನಟ ವಿಜಯ್ಗೆ ರಾಜಕೀಯದ ಆಳ-ಅಗಲ ಹಾಗೂ ಇತಿಹಾಸ ಗೊತ್ತಿಲ್ಲ. ಹೀಗಿದ್ದಾಗ್ಯೂ ನೇರ ಅವರಿಗೆ ಸಿಎಂ ಪಟ್ಟ ಕೊಡೋದ್ ಹೇಗೆ ಎಂದು ಪ್ರಕಾಶ್ ರಾಜ್ ಅವರು ಕಿಡಿಕಾರಿದ್ದರು. ಈ ಮಧ್ಯೆ ವಿಜಯ್ ತಾನು ಎಂಜಿಆರ್ ಅವರ ಉತ್ತರಾಧಿಕಾರಿ ಎಂದು ಹೇಳಿಕೊಂಡಿರುವುದು ಕಮಲ್ ಹಾಸನ್ ಕೆರಳಲು ಕಾರಣವಾಗಿದೆ.
ನಾನು ಎಂಜಿಆರ್ ಮಡಿಲಲ್ಲಿ ಬೆಳೆವ
ಡಿಎಂಕೆಯ ತಿರುಚಿರಾಪಳ್ಳಿ ಪೂರ್ವ ಕ್ಷೇತ್ರದ ಅಭ್ಯರ್ಥಿ ಇನಿಗೋ ಎಸ್ ಇರುದಯರಾಜ್ ಪರ ಪ್ರಚಾರ ನಡೆಸುತ್ತಿದ್ದ ವೇಳೆ ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ವಿರುದ್ಧ ಕಮಲ್ ಹಾಸನ್ ಬೇಸರ ವ್ಯಕ್ತಪಡಿಸಿದರು.
'ನಟ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ ಅವರಂತೆ(ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ಮಾತನಾಡಿ) ನಾನು ಚಿತ್ರರಂಗಕ್ಕೆ ಬಾಲ್ಯದಲ್ಲೇ ಕಾಲಿಟ್ಟೆ. ಹಿರಿಯ ಸಿನಿಮಾ ನಟರನ್ನು ನಾನು ಬಲ್ಲೆ. ಎಂದಿಗೂ ಅವರನ್ನು ದುರುಪಯೋಗಪಡಿಸಿಕೊಂಡಿಲ್ಲ. ಶಿವಾಜಿ ಗಣೇಶನ್ ಅವರ ಮಡಿಲಲ್ಲಿ ಕುಳಿತುಕೊಳ್ಳುತ್ತಿದ್ದೆ. ಎಂಜಿಆರ್ ಅವರಿಗೆ ನಾನು ಎಂದರೆ ಬಹಳ ಪ್ರೀತಿ' ಎಂದು ಕಮಲ್ ಹಾಸನ್ ವಿವರಿಸಿದರು.
ಸಿನಿಮಾ ಬಿಟ್ಬಿಡ್ತೀನಿ
ರಾಜಕೀಯಕ್ಕೆ ನನ್ನ ಸಿನಿಮಾ ವೃತ್ತಿ ಜೀವನವೇ ಅಡ್ಡಿಯಾಗುತ್ತಿದೆ ಎಂದರೆ, ನಾನು ಸಿನಿಮಾ ಮಾಡುವುದನ್ನೇ ತ್ಯಜಿಸುತ್ತೇನೆ. ಜನಸೇವೆಗೆ ಅಡ್ಡಿಯಾದರೆ, ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳ ಶೂಟಿಂಗ್ ಮುಗಿಸಿ, ನನ್ನೆಲ್ಲ ಜೀವನವನ್ನು ಜನರಿಗಾಗಿ ಮುಡಿಪಾಗಿಡುತ್ತೇನೆ ಎಂದು ಕಮಲ್ ಹಾಸನ್ ಹೇಳಿದ್ದರು.
MGR ಯಾರು?
ಮಧುರನ್ ಗೋಪಾಲನ್ ರಾಮಚಂದ್ರನ್ ಅವರು ತಮಿಳುನಾಡಿನ ಅತ್ಯಂತ ಪ್ರಭಾವಶಾಲಿ ರಾಜಕಾರಿಣಿ. ಎಐಎಡಿಎಂಕೆಯ ಸಂಸ್ಥಾಪಕರು. 1977 ರಿಂದ 1987 ತಮಿಳುನಾಡಿನ ಸಿಎಂ ಆಗಿದ್ದರು. ಇವರ ಕ್ರಾಂತಿಕಾರಿ ರಾಜಕೀಯಕ್ಕೆ ಭಾರತ ರತ್ನ ಪ್ರಶಸ್ತಿ ಲಭಿಸಿದೆ.
ಎಂಜಿಆರ್ ಜೊತೆಗೆ ಕಮಲ್ ಹಾಸನ್ ಅವರು ಆನಂದ ಜೋಡಿ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕನಾಗಿ ಕೆಲಸ ಮಾಡುವ ಆನಂದ್ ಪಾತ್ರಧಾರಿ ಎಂಜಿಆರ್ ಸುಳ್ಳು ಆರೋಪಕ್ಕೆ ಸಿಲುಕುತ್ತಾರೆ. ಇದರಿಂದ ಅವರು ಹೊರಬರುವುದು ಹೇಗೆ ಎನ್ನುವುದು ಚಿತ್ರದ ಕತೆ. (ಏಜೆನ್ಸೀಸ್).