ದಾದಾ ಇಲ್ಲದೆ ಮಹಾರಾಷ್ಟ್ರ ರಾಜಕೀಯ ಅಪೂರ್ಣ..ಅಜಿತ್ ಪವಾರ್​ ನಿಧನಕ್ಕೆ ಸಂಜಯ್ ರಾವತ್ ಕಂಬನಿ Sanjay Raut

Sanjay Raut  (ಚಿತ್ರ X)
Sanjay Raut (ಚಿತ್ರ X)
Published on
ಪುಣೆ: ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ನಿಧನವನ್ನು ರಾಜ್ಯ ರಾಜಕಾರಣದ 'ಕರಾಳ ದಿನ' (Sanjay Raut) ಎಂದಿರುವ ಶಿವಸೇನೆ (ಯುಬಿಟಿ) ಹಿರಿಯ ನಾಯಕ ಸಂಜಯ್ ರಾವತ್, ಅವರ ಅಗಲಿಕೆಯಿಂದ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್, ಅಜಿತ್ ಪವಾರ್ ಅವರನ್ನು ಪ್ರೀತಿಯಿಂದ ದಾದಾ ಎಂದೇ ಕರೆಯುತ್ತಿದ್ದೆವು. ದಾದಾ ಇಲ್ಲದೇ ಮಹಾರಾಷ್ಟ್ರದ ರಾಜಕೀಯ ಭೂದೃಶ್ಯವೇ ಅಪೂರ್ಣವಾಗಿದೆ. ಅವರು ಎಂತಹ ಸಂದರ್ಭದಲ್ಲೂ ಜನತೆಯ ಪರವಾಗಿ ನಿಲ್ಲುತ್ತಿದ್ದರು.
ಪಕ್ಷಾತೀತವಾಗಿ ಪ್ರತಿಯೊಬ್ಬ ಕಾರ್ಯಕರ್ತರೂ ಅವರನ್ನು ಗೌರವಿಸುತ್ತಿದ್ದರು ಎಂದು ಹೇಳಿದರು.
ವಿಮಾನ ಅಪಘಾತದ ಸುದ್ದಿ ಹೊರ ಬೀಳುತ್ತಿದ್ದಂತೆಯೇ ದಾದಾ ಅವರು ಸುರಕ್ಷಿತವಾಗಿ ಊರಿಗೆ ಬರಲಿ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸಿದ್ದೆವು. ಯಾವುದಾದರೂ ಪವಾಡ ನಡೆಯಲಿ, ಅದರಿಂದ ಆದರೂ ಅವರು ಬದುಕಿ ಬರಲಿ ಎಂಬುದು ನಮ್ಮ ಆಶಯವಾಗಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಈ ದುರಂತವನ್ನು ಈವರೆಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಂಜಯ್​ ಭಾವುಕರಾದರು.
ರಾಜಕೀಯದಲ್ಲಿ ನಮ್ಮ ಸಿದ್ಧಾಂತಗಳು ಹಾಗೂ ಅವರ ಸಿದ್ಧಾಂತಗಳು ಬೇರೆಯಾಗಿರಬಹುದು, ಪರಸ್ಪರ ಟೀಕೆಗಳು ವ್ಯಕ್ತವಾಗುತ್ತಿದ್ದವು. ಆದರೆ, ಅಜಿತ್ ಅವರ ಕೆಲಸದ ಶೈಲಿ ಮತ್ತು ಆಡಳಿತಾತ್ಮಕ ಹಿಡಿತದ ಬಗ್ಗೆ ನಮಲ್ಲರಿಗೂ ಹೆಮ್ಮೆಯಿತ್ತು. ಮಹಾರಾಷ್ಟ್ರದ ಇಂಚಿಂಚು ಭೂಮಿಯ ಬಗ್ಗೆ ಮತ್ತು ಜನರ ಸಮಸ್ಯೆಗಳ ಬಗ್ಗೆ ಅವರಿಗೆ ಸಂಪೂರ್ಣ ಜ್ಞಾನವಿತ್ತು ಎಂದರು.
ಪವಾರ್ ಅವರನ್ನು ಮಹಾರಾಷ್ಟ್ರದ ಬೆನ್ನೆಲುಬು ಎಂದು ಕರೆಯಲಾಗುತ್ತಿತ್ತು. ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಗೌರವನ್ನು ನೀಡಿದ್ದಾರೆ. ಶರದ್ ಪವಾರ್ ಅವರನ್ನು ಅವಲಂಬಿಸದೆ ಪವಾರ್ ರಾಜಕೀಯಕ್ಕೆ ಕಾಲಿಟ್ಟರು. ಆದರೆ, ಅವರ ಪ್ರಯಾಣ ಈ ರೀತಿಯಾಗಿ ಕೊನೆಗೊಳ್ಳುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಯಾವ ಬಿಕ್ಕಟ್ಟು ಉಂಟಾಗಿದೆ?

ಮಹಾರಾಷ್ಟ್ರದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ, ಅಜಿತ್ ಪವಾರ್ ಅನಿರೀಕ್ಷಿತವಾಗಿ ನಿಧನರಾಗಿದ್ದಾರೆ. ಅವರು ಈ ಮೊದಲು ಆರು ಬಾರಿ ಉಪ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಕಾರ್ಯನಿರ್ವಹಿಸಿದ್ದಾರೆ. ದಾದಾ ಮುಖ್ಯಮಂತ್ರಿಯಾಗಿದ್ದರೆ, ರಾಜ್ಯವು ತನ್ನ ಶ್ರೇಷ್ಠ ನಾಯಕರಲ್ಲಿ ಒಬ್ಬರನ್ನು ಪಡೆಯುತ್ತಿತ್ತು. ಆದರೆ, ಅವರ ಅಕಾಲಿಕ ಸಾವಿನಿಂದ ಶಿವಸೇನಾ ಯುಬಿಟಿ ಕುಟುಂಬವು ತೀವ್ರವಾಗಿ ದುಃಖಿತವಾಗಿದೆ ಎಂದರು.

ದುರಂತ ಹೇಗಾಯಿತು?

ಜಿಲ್ಲಾ ಪರಿಷತ್ ಚುನಾವಣೆಯ ಪ್ರಚಾರ ಸಭೆಗಳು ಬಾರಾಮತಿಯಲ್ಲಿ ನಡೆಯುತ್ತಿರುವ ಹಿನ್ನಲೆ ಅಜಿತ್ ಪವಾರ್ ಬುಧವಾರ (ಜ.28) ಬೆಳಿಗ್ಗೆ ಮುಂಬೈನಿಂದ ವಿಶೇಷ ವಿಮಾನದಲ್ಲಿ ಬಾರಾಮತಿಗೆ ತೆರಳುತ್ತಿದ್ದರು. ವಿಮಾನವು ನಿಲ್ದಾಣದ ರನ್‌ವೇಯಲ್ಲಿ ಇಳಿಯುತ್ತಿದ್ದಾಗ, ಹಠಾತ್ ತಾಂತ್ರಿಕ ದೋಷ ಸಂಭವಿಸಿದೆ. ಪೈಲಟ್ ನಿಯಂತ್ರಣ ಕಳೆದುಕೊಂಡು ವಿಮಾನ ಅಪಘಾತಕ್ಕೀಡಾಯಿತು.
ಪ್ರಾಥಮಿಕ ವರದಿಗಳ ಪ್ರಕಾರ, ಅಜಿತ್​ ಪವಾರ್​ ಸೇರಿದಂತೆ ಎಲ್ಲಾ ಆರು ಮಂದಿ ಪ್ರಯಾಣಿಕರು ಈ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮೂಲಗಳು ದೃಢಪಡಿಸಿವೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net