ಏನಿದು 'ಸಂಚಾರ್​ ಸಾಥಿ​'? ಪ್ರತಿಯೊಬ್ಬರ ಫೋನ್​ನಲ್ಲಿ ಆ್ಯಪ್​ ಕಡ್ಡಾಯ ಏಕೆ? ಕೇಂದ್ರದ ವಿರುದ್ಧ 'ಕೈ' ಕಿಡಿ

ಸಂಚಾರ್​ ಸಾಥಿ​ ಆ್ಯಪ್​
ಸಂಚಾರ್​ ಸಾಥಿ​ ಆ್ಯಪ್​
Published on

ಪ್ರಮುಖ ಮುಖ್ಯಾಂಶಗಳು

  • ಸೈಬರ್ ಸೆಕ್ಯುರಿಟಿ ಅಪ್ಲಿಕೇಶನ್ ಆದ 'ಸಂಚಾರ್ ಸಾಥಿ'
  • ಇನ್​​ಬಿಲ್ಟ್​ ಆಗಿ ಸ್ಥಾಪಿಸಲು ಕೇಂದ್ರ ಸರ್ಕಾರ ಆದೇಶ
  • ಕೇಂದ್ರ ಸರ್ಕಾರದ ನಡೆಗೆ ಕಾಂಗ್ರೆಸ್​ ಕಿಡಿನುಡಿ
ನವದೆಹಲಿ: ದೇಶದ ಎಲ್ಲ ಮೊಬೈಲ್ ಫೋನ್ ತಯಾರಕರು ಟೆಲಿಕಾಂ ಇಲಾಖೆ ಅಭಿವೃದ್ಧಿಪಡಿಸಿದ ಸೈಬರ್ ಸೆಕ್ಯುರಿಟಿ ಅಪ್ಲಿಕೇಶನ್ ಆದ 'ಸಂಚಾರ್ ಸಾಥಿ'ಯನ್ನು ಇನ್​​ಬಿಲ್ಟ್​ ಆಗಿ ಸ್ಥಾಪಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ನಿರ್ದೇಶನವನ್ನು 90 ದಿನಗಳಲ್ಲಿ ಜಾರಿಗೆ ತರಬೇಕು ಮತ್ತು 120 ದಿನಗಳಲ್ಲಿ ಇಲಾಖೆಗೆ ವರದಿಯನ್ನು ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ನಕಲಿ ಹ್ಯಾಂಡ್‌ಸೆಟ್‌ಗಳು, ಒಂದೇ IMEI ಸಂಖ್ಯೆ ಬಳಸಿ ಹಲವು ಸ್ಮಾರ್ಟ್ಫೋನ್‌ಗಳ ಉಪಯೋಗ, ನಕಲಿ ಸಿಮ್ ಕಾರ್ಡ್‌ಗಳು, ಸಂಪರ್ಕಗಳನ್ನು ತಡೆಗಟ್ಟಲು ಈ ಆ್ಯಪ್​ ಅನ್ನು ವಿಶೇಷವಾಗಿ ಡಿಸೈನ್​ ಮಾಡಲಾಗಿದೆ.
ಈ ಆ್ಯಪ್​ ಬಳಕೆದಾರರಿಗೆ ಸ್ನೇಹಿಯಾಗಿರಬೇಕು. ಪ್ರಸ್ತುತ ಮಾರಾಟದಲ್ಲಿರುವ ಮಾದರಿಗಳಲ್ಲಿ ಸಾಫ್ಟ್‌ವೇರ್ ಅಪ್ಡೇಟ್​ಗಳ ಮೂಲಕ ಆ್ಯಪ್​ ಅನ್ನು ರನ್​ ಮಾಡಬೇಕು. ಭಾರತದಲ್ಲಿ ಮೊದಲ ಬಾರಿಗೆ ಪೂರ್ವ ಸ್ಥಾಪಿತ ಅಪ್ಲಿಕೇಶನ್ ಅನ್ನು ಕಡ್ಡಾಯಗೊಳಿಸುವುದರ ಬಗ್ಗೆ ಕೆಲವೆಡೆಯಿಂದ ಟೀಕೆಗಳು ವ್ಯಕ್ತವಾಗಿವೆ. ಸರ್ಕಾರವು ಸಂಚಾರ್ ಸಾಥಿ ಮೂಲಕ ಗ್ರಾಹಕರ ಫೋನ್ ಅನ್ನು ಟ್ರ್ಯಾಕ್ ಮಾಡಬಹುದಾಗಿದೆ ಎಂಬುದು ಕಾಂಗ್ರೆಸ್​ನ ದೊಡ್ಡ ಆರೋಪ. 
ಈ ವರ್ಷದ ನ.28ರಂದು ಹೊರಡಿಸಲಾದ ಆದೇಶದ ಪ್ರಕಾರ, ಯಾವುದೇ ಹೊಸ ಹ್ಯಾಂಡ್‌ಸೆಟ್‌ನ ಆರಂಭಿಕ ಸೆಟಪ್ ಸಮಯದಲ್ಲಿ ಸಂಚಾರಿ ಸಾಥಿ ಆ್ಯಪ್​ ಇನ್​ಸ್ಟಾಲ್​ ಆಗಿರಬೇಕು ಮತ್ತು ಬಳಸಲು ಸುಲಭವಾಗಿರಬೇಕು ಎಂದು ತಿಳಿಸಲಾಗಿದೆ. ತಯಾರಕರು ಅದರ ಯಾವುದೇ ವೈಶಿಷ್ಟ್ಯಗಳನ್ನು ಮರೆಮಾಡಲು, ನಿಷ್ಕ್ರಿಯಗೊಳಿಸಲು ಅಥವಾ ನಿರ್ಬಂಧಿಸಲು ಅನುಮತಿ ಇಲ್ಲ. ಕಂಪನಿಗಳು ಆದೇಶವನ್ನು ಫಾಲೋ ಮಾಡಲು 90 ದಿನಗಳು ಮತ್ತು ಅನುಸರಣೆಯ ವರದಿಯನ್ನು ಸಲ್ಲಿಸಲು 120 ದಿನಗಳು ಮಾತ್ರ ಉಳಿದಿವೆ. 

'ಸಂಚಾರ್ ಸಾಥಿ' ಕಾರ್ಯವೇನು?

ಸಂಚಾರ್ ಸಾಥಿ ಎಂಬುದು ಸೈಬರ್ ವಂಚನೆಯನ್ನು ಎದುರಿಸಲು ಮತ್ತು ದೂರಸಂಪರ್ಕ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ರಚಿಸಲಾದ ಅಪ್ಲಿಕೇಶನ್​. ಪೋರ್ಟಲ್ ಮತ್ತು ಆ್ಯಪ್​ ಮೂಲಕ ಬಳಕೆದಾರರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. 
1. ಮೊಬೈಲ್​ನ IMEI ಸಂಖ್ಯೆ ಬಳಸಿಕೊಂಡು ನೀವು ಬಳುಸುತ್ತಿರುವ ಫೋನ್​ ಅಸಲಿಯೇ ಎಂಬುದನ್ನು ಪರಿಶೀಲಿಸಬಹುದು
2. ಫೇಕ್​ ಕಾಲ್ಸ್ ಅಥವಾ ಸಂದೇಶಗಳು ಎಂದು ನಿಮಗೆ ಅನಿಸಿದ್ರೆ, ಅವುಗಳನ್ನು ತಕ್ಷಣವೇ ರಿಪೋರ್ಟ್​ ಮಾಡಬಹುದು
3. ಕಳೆದುಹೋದ ಅಥವಾ ಕದ್ದ ಫೋನ್‌ಗಳ ಬಗ್ಗೆ ರಿಪೋರ್ಟ್​ ಮಾಡಬಹುದು
4. ಫೋನ್​ ಯಾರ ಹೆಸರಿನಲ್ಲಿದೆ ಎಂಬ ಸಂಪೂರ್ಣ ವಿವರ ಹಾಗೂ ಸಂಪರ್ಕಗಳನ್ನು ಟ್ರಾಕ್​ ಮಾಡಬಹುದು

ಕೇಂದ್ರದ ವಿರುದ್ಧ 'ಕೈ' ಕಿಡಿ

ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಹೊಸ ಮೊಬೈಲ್ ಫೋನ್‌ಗಳಲ್ಲಿ ಮೊದಲೇ ಸ್ಥಾಪಿಸಬೇಕೆಂಬ ದೂರಸಂಪರ್ಕ ಇಲಾಖೆಯ ಆದೇಶವನ್ನು ಸೋಮವಾರ (ಡಿ.01) ಕಾಂಗ್ರೆಸ್ ಖಂಡಿಸಿದೆ. ಇದನ್ನು ಅಸಂವಿಧಾನಿಕ ಎಂದು ಕರೆದಿದ್ದಲ್ಲದೇ, ತಕ್ಷಣವೇ ಹಿಂಪಡೆಯಬೇಕೆಂದು ಒತ್ತಾಯಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಈ ಕ್ರಮವು ನಾಗರಿಕರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net