

ಪೆಟ್ರೋಲಿಯಂ ಸಚಿವಾಲಯದ ‘ಸಮುದ್ರಮಂಥನ’ ಯೋಜನೆಗೆ ಕೇಂದ್ರ ಸಂಪುಟ ಜುಲೈ 31ರಂದು ಹಸಿರು ನಿಶಾನೆ ನೀಡುವ ಮೂಲಕ, ಭಾರತದ ಇಂಧನ ಭದ್ರತೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. ಇದು ಭಾರತದ ಅತ್ಯಂತ ದೊಡ್ಡ ‘ನ್ಯಾಷನಲ್ ಆಫ್ಶೋರ್ ಎಕ್ಸ್ಪ್ಲೋರೇಷನ್ ಪ್ರಾಜೆಕ್ಟ್’ ಆಗಿದ್ದು, ಸಮುದ್ರದ ಆಳದ ಪ್ರದೇಶಗಳಲ್ಲಿ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಹುಡುಕುವ ಬೃಹತ್ ಯೋಜನೆಯಾಗಿದೆ. ಭಾರತದ ಕರಾವಳಿ ತೀರಕ್ಕೆ ಹೊಂದಿಕೊಂಡಿರುವ 10 ಲಕ್ಷ ಚದರ ಕಿ.ಮೀ.ಗಿಂತಲೂ ಹೆಚ್ಚಿನ ‘ವಿಶೇಷ ಆರ್ಥಿಕ ವಲಯ’ ವ್ಯಾಪ್ತಿಯಲ್ಲಿ ಈ ಅನ್ವೇಷಣೆ ನಡೆಯಲಿದೆ ಎಂಬುದು ಗಮನಾರ್ಹ.
2031ರ ಮಾರ್ಚ್ವರೆಗಿನ ಯೋಜನೆಯ ಮೊದಲ ಹಂತದಲ್ಲಿ ಒಟ್ಟು -ಠಿ;84,084 ಕೋಟಿ ವೆಚ್ಚವಾಗಲಿದೆ. ಇದರಲ್ಲಿ -ಠಿ;28,500 ಕೋಟಿಯನ್ನು ಸಿಸ್ಮಿಕ್ ಡೇಟಾ ಸಂಗ್ರಹಿಸಲು ಮತ್ತು -ಠಿ;43,200 ಕೋಟಿ ವೆಚ್ಚದಲ್ಲಿ ಆಳ ಸಮುದ್ರದಲ್ಲಿ 60 ಅನ್ವೇಷಣಾ ಬಾವಿಗಳನ್ನು ಕೊರೆಯಲು ಮೀಸಲಿಡಲಾಗಿದೆ. ಸಮುದ್ರದಲ್ಲಿ ಕೊರೆಯುವ ಪ್ರತಿ ಬಾವಿಗೆ ಸರ್ಕಾರ ಗರಿಷ್ಠ -ಠಿ;675 ಕೋಟಿ ಅಥವಾ ಒಟ್ಟು ವೆಚ್ಚದ ಶೇ.50ರಷ್ಟು ಹಣಕಾಸಿನ ನೆರವು ನೀಡಲಿದೆ. ಉಳಿದ ವೆಚ್ಚವನ್ನು ಯೋಜನೆಯಲ್ಲಿ ಭಾಗವಹಿಸುವ ತೈಲ ಕಂಪನಿ ಭರಿಸಬೇಕಾಗುತ್ತದೆ.
ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವು ಸಮುದ್ರ ಹಾಗೂ ನದಿಗಳ ಆಳವಾದ ನೀರಿನ ಅಡಿಯಲ್ಲಿರುವ ಬಂಡೆಗಳ ನಡುವೆ ಸಿಗುತ್ತದೆ. ಮೃತಪಟ್ಟ ಸಮುದ್ರ ಜೀವಿಗಳು, ಸಸ್ಯಗಳು ಸಮುದ್ರದ ತಳಭಾಗದಲ್ಲಿ ಸಿದ್ಧಗೊಂಡ ಬಂಡೆಗಳ ಅಡಿಯಲ್ಲಿ ಕೋಟ್ಯಂತರ ವರ್ಷಗಳ ಕಾಲ ಸಿಲುಕಿ ದೀರ್ಘಕಾಲದ ತಾಪಮಾನ ಮತ್ತು ಒತ್ತಡಕ್ಕೆ ಒಳಗಾದಾಗ ಹೈಡ್ರೋಕಾರ್ಬನ್ಗಳು ರೂಪುಗೊಳ್ಳುತ್ತವೆ. ಇವುಗಳಿಂದಲೇ ಕಚ್ಚಾ ತೈಲ ಮತ್ತು ಗ್ಯಾಸ್ ಉತ್ಪತ್ತಿಯಾಗುತ್ತದೆ. ಮುಂದೆ ತೈಲ ಸಂಸ್ಕರಣಾ ಕಂಪನಿಗಳು ಇವುಗಳನ್ನು ಸಂಸ್ಕರಿಸಿ ಪೆಟ್ರೋಲ್, ಡೀಸೆಲ್ ಮತ್ತು ಅನಿಲವಾಗಿ ಪರಿವರ್ತಿಸುತ್ತವೆ.
ಸಮುದ್ರದಡಿಯಿಂದ ತೈಲ-ಗ್ಯಾಸ್ ಪತ್ತೆ ಹಚ್ಚಿ, ಉತ್ಪಾದನೆ ಮಾಡುವ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ 4 ಹಂತಗಳಿವೆ.
ಸರ್ವೆ ಹಡಗುಗಳ ಮೂಲಕ ತೈಲದ ಶೋಧನೆ (ಸಿಸ್ಮಿಕ್ ಸರ್ವೆ)
ತೈಲ ಹುಡುಕಾಟದ ಮೊದಲ ಹಂತದಲ್ಲಿ ಸಿಸ್ಮಿಕ್ ಸರ್ವೆ ನಡೆಸುವ ವಿಶೇಷ ಹಡಗುಗಳನ್ನು ಬಳಸಲಾಗುತ್ತದೆ. ಈ ಹಡಗುಗಳು ಉದ್ದನೆಯ ಕೇಬಲ್ಗಳ ಮೂಲಕ ನೀರಿನೊಳಗೆ ಏರ್-ಗನ್ ಅರೇ ಸಿಸ್ಟಮ್ (ಗಾಳಿಯ ಒತ್ತಡದ ಯಂತ್ರಗಳು) ಹಾಕಿ ಸಮುದ್ರದಲ್ಲಿ ಚಲಿಸುತ್ತವೆ. ಈ ಯಂತ್ರಗಳು ನೀರಿನ ಅಡಿಯಲ್ಲಿ ತೀವ್ರ ಧ್ವನಿಯುಳ್ಳ ಶಬ್ದ ತರಂಗಗಳನ್ನು ಹೊರಸೂಸುತ್ತವೆ. ಈ ಧ್ವನಿ ತರಂಗಗಳು ಸಮುದ್ರದ ಅಡಿಯ ಬಂಡೆಗಳಿಗೆ ಅಪ್ಪಳಿಸಿ ಮತ್ತೆ ಮೇಲ್ಮೈಗೆ ಹಿಂತಿರುಗುತ್ತವೆ.