'ಗಾಯದ ಮೇಲೆ ಉಪ್ಪು ಸವರಿದರು, ಕರೆಂಟ್ ಶಾಕ್ ಕೊಟ್ರು'; ಚಿನ್ನ ಕದ್ದಿರುವ ಆರೋಪದ ಮೇಲೆ ಮನೆಕೆಲಸದವರಿಗೆ ಚಿತ್ರಹಿಂಸೆ, BJP ಶಾಸಕನ ವಿರುದ್ಧ ದೂರು

'ಗಾಯದ ಮೇಲೆ ಉಪ್ಪು ಸವರಿದರು, ಕರೆಂಟ್ ಶಾಕ್ ಕೊಟ್ರು'; ಚಿನ್ನ ಕದ್ದಿರುವ ಆರೋಪದ ಮೇಲೆ ಮನೆಕೆಲಸದವರಿಗೆ ಚಿತ್ರಹಿಂಸೆ, BJP ಶಾಸಕನ ವಿರುದ್ಧ ದೂರು
Published on: 
  • ಉತ್ತರ ಪ್ರದೇಶದ ಮೊರಾದಾಬಾದ್​ನ BJP ಶಾಸಕರ ಮನೆಯಲ್ಲಿ ಚಿನ್ನ ಕದ್ದ ಆರೋಪ.

  • ಮೂವರು ಯುವಕರನ್ನು ಅಕ್ರಮವಾಗಿ ಕಟ್ಟಿ ಹಾಕಿ ಹಲ್ಲೆ ನಡೆಸಿದ ಆರೋಪ.

  • ನಾವು ಪ್ರಶ್ನೆ ಮಾಡಿದ್ದೆವು ಅಷ್ಟೇ ಹಲ್ಲೆ ಮಾಡಿಲ್ಲ ಎಂದ ಬಿಜೆಪಿ ಶಾಸಕ ಸುಶಾಂತ್​ ಸಿಂಗ್

'ತಲೆ ಕೆಳಕ್ಕೆ ಇರುವಂತೆ ಕಟ್ಟಿ ಹಾಕಿ ಬೆಲ್ಟ್​ನಿಂದ ಹೊಡೆದ್ರು, ಗಾಯದ ಮೇಲೆ ಉಪ್ಪು ಸವರಿ ಚಿತ್ರ ಹಿಂಸೆ ಕೊಟ್ಟರು. ಕರೆಂಟ್​ ಶಾಕ್​ ಕೊಟ್ಟು ಮಗನಿಗೆ ಚಿತ್ರೆ ಹಿಂಸೆ ಕೊಟ್ಟಿದ್ದಾರೆ. ಹೀಗೆಂದು ಸಾಲು ಸಾಲು ಆರೋಪವನ್ನು ಬಿಜೆಪಿ ಶಾಸಕ ಸುಶಾಂತ್ ಸಿಂಗ್ ಅವರ ಮೇಲೆ ಸಂತ್ರಸ್ತ ಯುವಕರ ತಾಯಿಯೊಬ್ಬರು ಮಾಡಿದ್ದು.

ಹೌದು, ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಬಿಜೆಪಿ ಶಾಸಕ ಸುಶಾಂತ್ ಸಿಂಗ್ ಅವರ ಮನೆಯಲ್ಲಿ ಚಿನ್ನದ ಬ್ರೇಸ್​ಲೇಟ್ ಕದಿಯಾಲಾಗಿದೆ ಎಂದು ಆರೋಪಿಸಿ ಮನೆ ಕೆಲಸ ಮಾಡ್ತಿದ್ದ ಯುವಕರನ್ನು ಕಟ್ಟಿ ಹಾಕಿ, ಚಿತ್ರಹಿಂಸೆ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.

ಮನೆಗೆಲಸದವರ ಮೇಲೆ ಚಿನ್ನ ಕದ್ದ ಆರೋಪ

ಶಾಸಕರ ಮನೆಯಲ್ಲಿ ಮನೆ ಕೆಲಸಗಾರರಾಗಿ ಅತುಲ್, ಲವೇಶ್ ಕೆಲಸ ಮಾಡುತ್ತಿದ್ದರು. ಮಗನ ಚಿನ್ನದ ಬ್ರೇಸ್​ಲೆಟ್ ಕಾಣೆಯಾಗಿತ್ತು. ಇದನ್ನು ಮನೆಗೆಲಸ ಮಾಡುತ್ತಿದ್ದ ಅತುಲ್​ ಮತ್ತು ಲವೇಶ್​ ಮೇಲೆ ಹೊರಿಸಿ ಅಕ್ರಮವಾಗಿ ಬಂಧಿಸಲಾಗಿತ್ತು. ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಸಂತ್ರಸ್ತ ರಾಮು ತಾಯಿ ಹೇಳಿದ್ದಿಷ್ಟು

ರಾಮು ತಾಯಿ ಕೊಟ್ಟ ಮಾಹಿತಿ ಪ್ರಕಾರ, ಅಕ್ಟೋಬರ್ 7 ರಂದು ಶಾಸಕರ ಬೆಂಬಲಿಗರೊಬ್ಬರು ಮಗ ರಾಮುನನ್ನು ಕರೆದುಕೊಂಡು ಹೋದರು. ಆದರೆ ಅತುಲ್ ಮತ್ತು ಲವೇಶ್ ಈಗಾಗಲೇ ನಿವಾಸದಲ್ಲಿ ಬಂಧನದಲ್ಲಿದ್ದರು. ಮೂವರನ್ನು ತಲೆಕೆಳಕ್ಕೆ ಹಾಕಿ ಕಟ್ಟಿ ಹಾಕಿದರು. ಬೆಲ್ಟ್‌ಗಳಿಂದ ಹೊಡೆದು, ಕರೆಂಟ್​ ಶಾಕ್​ ಕೊಟ್ಟು, ಗಾಯಗಳಿಗೆ ಉಪ್ಪು ಸವರಿ ಹಿಂಸೆ ಕೊಟ್ಟಿದ್ದಾರೆ ರಾಮು ತಾಯಿ ಅತ್ತರು. ಸದ್ಯ ಮೂವರನ್ನೂ ಕಾಶಿಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮು ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಶಾಸಕ ಸಮರ್ಥನೆ ಕೊಟ್ಟಿದ್ದೇನು?

ಈ ಬಗ್ಗೆ ಶಾಸಕ ಸುಶಾಂತ್​ ಸಿಂಗ್ ಮಾತನಾಡಿದ್ದು, 'ಇದು ಸುಳ್ಳು ಆರೋಪ. ಮನೆ ಕೆಲಸಗಾರರ ಬಳಿ ಕಾಣೆಯಾದ ಬಳೆ ಬಗ್ಗೆ ಮಾತ್ರ ಪ್ರಶ್ನೆ ಮಾಡಿದ್ದರು ಅಷ್ಟೇ. ಯಾರ ಮೇಲೆಯೂ ಹಲ್ಲೆ ನಡೆಸಲಾಗಿಲ್ಲ. ಸುಳ್ಳು ಸುದ್ದಿ ಹಬ್ಬಿಸಲಾಗಿದೆ' ಎಂದು ಸುಶಾಂತ್ ಸಿಂಗ್ ಹೇಳಿದ್ದಾರೆ.

ಪೊಲೀಸರು ಹೀಗಂದ್ರು

ಶಾಸಕ ಸುಶಾಂತ್ ಸಿಂಗ್ ಬೆಂಬಲಿಗರು ಪೊಲೀಸ್​ ಠಾಣೆಗೆ ದೌಡಾಯಿಸಿ, ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಕೇಳಿಕೊಂಡಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಮೊರಾದಾಬಾದ್ ಎಸ್‌ಪಿ (ಗ್ರಾಮೀಣ) ಕುನ್ವರ್ ಆಕಾಶ್ ಸಿಂಗ್ ಹೇಳಿದ್ದಾರ. ತನಿಖೆಯ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿತ್ತು.

ಇನ್ನು ಮೊರಾದಾಬಾದ್​ ಸಂಸದೆ, ಸಮಾಜವಾದಿ ಪಕ್ಷದ ನಾಯಕಿ ರುಚಿ ವೀರ ಮಾತನಾಡಿ, ಸಂತ್ರಸ್ತರಿಗೆ ತಕ್ಷಣ ನ್ಯಾಯ ಒದಗಿಸಬೇಕು ಮತ್ತು ಹೊಣೆಗಾರರ ​​ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net