ಬೆಳಗ್ಗೆಯಾದ್ರೆ ಬ್ಯೂಟಿ ಪಾರ್ಲರ್ ರಾತ್ರಿಯಾದ್ರೆ... ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆಯ ನಿಜ ಬಣ್ಣ ಬಯಲು! Madam Zeher ​

ಖುಸ್ನುಮಾ ಅನ್ಸಾರಿ ಅಲಿಯಾಸ್​ (Madam Zeher ​)
ಖುಸ್ನುಮಾ ಅನ್ಸಾರಿ ಅಲಿಯಾಸ್​ (Madam Zeher ​)
Published on

ಪ್ರಮುಖ ಮುಖ್ಯಾಂಶಗಳು

  • ಖತರ್ನಾಕ್​ ಲೇಡಿ ಡಾನ್​ ಬಂಧಿಸಿದ ದೆಹಲಿ ಪೊಲೀಸ್​ ಸ್ಪೆಷಲ್​ ಸೆಲ್​ ಕೌಂಟರ್​ ಇಂಟೆಲಿಜೆನ್ಸ್
  • ಕುಖ್ಯಾತ ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​ ಪರವಾಗಿ ಡ್ರಗ್ಸ್​ ಸಿಂಡಿಕೇಟ್​ ನಿರ್ವಹಿಸುತ್ತಿದ್ದ ಮಹಿಳೆ
  • ಹೆಸರಿಗೆ ಮಾತ್ರ ಈಶಾನ್ಯ ದೆಹಲಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ನೇಹಾ
Madam Zeher ​ : ಕುಖ್ಯಾತ ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​ ಪರವಾಗಿ ಡ್ರಗ್ಸ್​ ಸಿಂಡಿಕೇಟ್​ ನಿರ್ವಹಿಸುತ್ತಿದ್ದ ಖತರ್ನಾಕ್​ ಮಹಿಳೆಯೊಬ್ಬಳನ್ನು ದೆಹಲಿ ಪೊಲೀಸ್​ ಸ್ಪೆಷಲ್​ ಸೆಲ್​ ಕೌಂಟರ್​ ಇಂಟೆಲಿಜೆನ್ಸ್ ನಿನ್ನೆ (ಫೆ.19) ರಾತ್ರಿ​ ಬಂಧಿಸಿದೆ.
ಬಂಧಿತಳನ್ನು ಖುಸ್ನುಮಾ ಅನ್ಸಾರಿ ಅಲಿಯಾಸ್​ ನೇಹಾ ಎಂದು ಗುರುತಿಸಲಾಗಿದೆ. ಈ ನೇಹ, ಬಿಷ್ಣೋಯ್​ ಗ್ಯಾಂಗ್​ನ ಹೈ-ಪ್ರೊಫೈಲ್ ಗನ್​ಮ್ಯಾನ್​ ಮತ್ತು ಶಸ್ತ್ರಾಸ್ತ್ರ ಪೂರೈಕೆದಾರ ಬಾಬಿ ಕಬುತಾರ್​ನ ಬಹುಕಾಲದ ಪಾರ್ಟ್ನರ್​​​. ನೇಹಾ ಜತೆಯಲ್ಲಿ ಕಬುತಾರ್​ನನ್ನೂ ಬಂಧಿಸಲಾಗಿದೆ. ಅಲ್ಲದೆ, ಇನ್ನಿಬ್ಬರು ಆರೋಪಿಗಳನ್ನು ಸಹ ಬಂಧಿಸಲಾಗಿದೆ. 
ಬಾಬಿ ಕಬುತಾರ್​ನ ನಿಜವಾದ ಹೆಸರು ಮಹ್ಫೂಜ್. ಈತ ಲಾರೆನ್ಸ್ ಬಿಷ್ಣೋಯ್ ಮತ್ತು ಹಾಶಿಮ್ ಬಾಬಾ ಗ್ಯಾಂಗ್‌ಗಳಿಗೆ ಪ್ರಾಥಮಿಕ ಲಾಜಿಸ್ಟಿಕ್ಸ್ ಲಿಂಕ್ ಆಗಿ ಕಾರ್ಯನಿರ್ವಹಿಸುತ್ತಿದ್ದನು ಎಂದು ಆರೋಪಿಸಲಾಗಿದೆ. ಈ ಕಬುತಾರ್​, ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿರುವ ಅತಿದೊಡ್ಡ ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರಿ ಎಂದೇ ಖ್ಯಾತಿ ಪಡೆದಿರುವ ಸಲೀಂ ಪಿಸ್ತೂಲ್‌ ಎಂಬಾತನಿಂದ ಉನ್ನತ ದರ್ಜೆಯ ಬಂದೂಕುಗಳನ್ನು ಖರೀದಿಸಿದ್ದಾನೆಂದು ತನಿಖಾಧಿಕಾರಿಗಳು ಹೇಳಿದ್ದಾರೆ.​​
ಇದೇ ಶಸ್ತ್ರಾಸ್ತ್ರಗಳಿಂದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಮೇಲಿನ ಗುಂಡಿನ ದಾಳಿ, ನಟಿ ದಿಶಾ ಪಟಾನಿ ನಿವಾಸದ ಹೊರಗೆ ಗುಂಡು ಹಾರಿಸಿದ್ದು, ದೆಹಲಿಯಲ್ಲಿ ನಾದಿರ್ ಶಾ ಹತ್ಯೆ ಮತ್ತು ಸೀಲಾಂಪುರ ಜೋಡಿ ಕೊಲೆಗಳು ಸೇರಿದಂತೆ ಹಲವಾರು ಹೈ-ಪ್ರೊಫೈಲ್​ ಅಪರಾಧಗಳಲ್ಲಿ ಬಳಸಲಾಗಿದೆ ಎಂದು ವರದಿಯಾಗಿದೆ.
ಇನ್ನು ಬಿಷ್ಣೋಯ್ ಗ್ಯಾಂಗ್‌ನಲ್ಲಿ ಮಹಿಳೆಯರು ಕೂಡ ಭಾಗಿಯಾಗುತ್ತಿರುವ ಟ್ರೆಂಡ್​ ಹೆಚ್ಚಾಗುತ್ತಿದೆ ಎಂಬುದು ನೇಹಾ ಬಂಧನ ಸಾಬೀತು ಮಾಡಿದೆ. ದೀಪಾ ಮತ್ತು ಜೋಯಾ ಖಾನ್ (ದರೋಡೆಕೋರ ಹಾಶಿಮ್ ಬಾಬಾನ ಪತ್ನಿ) ನಂತರ ಇತ್ತೀಚೆಗೆ ಬಂಧಿಸಲ್ಪಟ್ಟ ಬಿಷ್ಣೋಯ್​ ಗ್ಯಾಂಗ್​ ಸಿಂಡಿಕೇಟ್‌ಗೆ ಸಂಬಂಧಿಸಿದ ಮೂರನೇ "ಲೇಡಿ ಡಾನ್" ಈ ನೇಹಾ. ಈಕೆ ಹೆಸರಿಗೆ ಮಾತ್ರ ಈಶಾನ್ಯ ದೆಹಲಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು. ಏಕೆಂದರೆ, ಬಿಷ್ಣೋಯ್​ ಗ್ಯಾಂಗ್‌ನ ಕಾನೂನುಬಾಹಿರ ಚಟುವಟಿಕೆಗಳನ್ನು ಮರೆಮಾಚಲು ಮತ್ತು ಗ್ಯಾಂಗ್​ನ ಮಾದಕವಸ್ತು ವಿತರಣಾ ಜಾಲವನ್ನು ನಿರ್ವಹಿಸಲು ಬ್ಯೂಟಿ ಪಾರ್ಲರ್​ ಒಂದು ರಕ್ಷಣಾ ಗೋಡೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. 
ನೇಹಾ ಮತ್ತು ಬಾಬಿ ಕಳೆದ ಏಳು ವರ್ಷಗಳಿಂದ ಸಂಬಂಧ ಹೊಂದಿದ್ದಾರೆ. ಮಹಿಪಾಲಪುರ ಫ್ಲೈಓವರ್ ಬಳಿ ಆಕೆಯ ಬಂಧನದ ಸಮಯದಲ್ಲಿ, ಪೊಲೀಸರು ಗಮನಾರ್ಹ ಪ್ರಮಾಣದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು 2022ರಲ್ಲಿ ನಡೆದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಸಂಬಂಧಿಸಿದಂತೆ ಹೊಸ ವಿವರಗಳು ಹೊರಹೊಮ್ಮಿವೆ. ಪೊಲೀಸ್ ಮೂಲಗಳ ಪ್ರಕಾರ, ಬಾಬಿ ಕಬುತಾರ್, ಮೂಸೆವಾಲಾ ಅವರ ಚಲನವಲನಗಳು ಮತ್ತು ಮಾರ್ಗಗಳನ್ನು ಪತ್ತೆಹಚ್ಚಿ, ನಿರ್ಣಾಯಕ ಗುಪ್ತಚರ ಮಾಹಿತಿಯನ್ನು ಶೂಟರ್‌ಗಳಿಗೆ ರವಾನಿಸಿದರು ಎಂದು ತಿಳಿದುಬಂದಿದೆ. ಬಾಬಿ, ಅನೇಕ ತಿಂಗಳುಗಳಿಂದ ನಕಲಿ ಗುರುತಿನ ಚೀಟಿಗಳನ್ನು ಬಳಸಿಕೊಂಡು ಮತ್ತು ಆಗಾಗ್ಗೆ ತನ್ನ ಸ್ಥಳವನ್ನು ಬದಲಾಯಿಸುವ ಮೂಲಕ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ. ಆದರೆ, ಪೊಲೀಸರು ತಾಂತ್ರಿಕ ಕಣ್ಗಾವಲು ಮತ್ತು ಗುಪ್ತಚರ ಮಾಹಿತಿಗಳನ್ನು ಬಳಸಿಕೊಂಡು ಆತನನ್ನು ಬಂಧಿಸಿದ್ದಾರೆ. 
ಸದ್ಯ ಬಾಬಿ ಮತ್ತು ನೇಹಾ ಇಬ್ಬರೂ ಬಂಧನದಲ್ಲಿದ್ದು, ಗ್ಯಾಂಗ್‌ನ ಆರ್ಥಿಕ ಜಾಡು ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಅವರ ಉಳಿದ ಸ್ಲೀಪರ್ ಸೆಲ್‌ಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ಪೊಲೀಸರು ಈಗ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ, (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net