ಭಾರತೀಯ ವಾಯುಯಾನ ಕ್ಷೇತ್ರವು ಜಾಗತಿಕ ಮಟ್ಟದಲ್ಲಿ ಒಂದು ದೊಡ್ಡ ಮಾರುಕಟ್ಟೆಯಾಗಿದ್ದರೂ, ಪೈಲಟ್ಗಳು ಎದುರಿಸುತ್ತಿರುವ ಸಮಸ್ಯೆಗಳು ಗಂಭೀರವಾಗಿವೆ. ಒತ್ತಡ, ದೀರ್ಘ ಕೆಲಸದ ಗಂಟೆಗಳು, ಅನಿಯಮಿತ ಶಿಫ್ಟ್ಗಳು, ಆರ್ಥಿಕ ಒತ್ತಡ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಪೈಲಟ್ಗಳು ಬಳಲುತ್ತಿದ್ದಾರೆ. ಈ ವಾಸ್ತವ ವಿಮಾನಯಾನ ಸಂಸ್ಥೆಗಳಿಗೆ ಗೊತ್ತಿಲ್ಲ ಎಂದೇನಲ್ಲ. ಆದರೆ, ಕನಿಷ್ಠ ಸಿಬ್ಬಂದಿ ಇರಿಸಿಕೊಂಡು ಕಾರ್ಯಾಚರಣೆಯನ್ನು ನಡೆಸುವ ಮೂಲಕ ಪ್ರಯಾಣಿಕರ ಮತ್ತು ಪೈಲಟ್ಗಳ ಸುರಕ್ಷತೆಯನ್ನು ಕಡೆಗಣಿಸುತ್ತಿವೆ. ಶೇಕಡ 61ರಷ್ಟು ವಿಮಾನಗಳ ಸಂಚಾರ ರದ್ದತಿಗೆ ಆಯಾ ವಿಮಾನಯಾನ ಸಂಸ್ಥೆಗಳು ನೀಡುವ ಕಾರಣ ‘ಸಿಬ್ಬಂದಿ ಕೊರತೆ’. ಆದರೆ, ನೈಜ ಕಾರಣ ಸಿಬ್ಬಂದಿಯ ಕೊರತೆಯಲ್ಲ. ಮೂಲ ಸಮಸ್ಯೆ ಇರುವುದು ಅತಿಯಾದ ಕೆಲಸದ ಒತ್ತಡದಿಂದ ಪೈಲಟ್ಗಳು ಬಳಲಿರುವುದು. ಈ ಕಾರಣವನ್ನು ವಿಮಾನಯಾನ ಸಂಸ್ಥೆಗಳು ಹೇಳುವುದಿಲ್ಲ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಕೇಳುವುದಿಲ್ಲ. ಹಾಗಾಗಿಯೇ, ಧುತ್ತನೇ ಸಮಸ್ಯೆ ಎದುರಾದಾಗ ವ್ಯವಸ್ಥೆಯ ಲೋಪಗಳು ಸ್ಪಷ್ಟವಾಗಿ ಬೆಳಕಿಗೆ ಬರುತ್ತವೆ. ಸೇಫ್ಟಿ ಮ್ಯಾಟರ್ಸ್ ಫೌಂಡೇಷನ್ 2022 ಮತ್ತು 2024ರಲ್ಲಿ ಎರಡು ಪ್ರತ್ಯೇಕ ಸಮೀಕ್ಷೆಗಳನ್ನು ನಡೆಸಿದ್ದು, ಅದರ ವರದಿಯಲ್ಲಿ ಪೈಲಟ್ಗಳ ಮೇಲಿನ ಕಾರ್ಯಭಾರ, ಕೆಲಸ ಹಂಚಿಕೆಯಲ್ಲಿನ ಅಸಮತೋಲನದ ಅಂಶಗಳನ್ನು ಎತ್ತಿ ತೋರಿಸಲಾಗಿದೆ. 95% ಪೈಲಟ್ಗಳು ‘ಅಸುರಕ್ಷಿತ ದಣಿವು/ಬಳಲಿಕೆ’ಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ ಸಿಬ್ಬಂದಿ ಕರ್ತವ್ಯ ಅವಧಿ ಮಿತಿ (ಎಫ್ಡಿಟಿಎಲ್) ನಿಯಮಗಳನ್ನು ಡಿಜಿಸಿಎ ಬದಲಿಸಿತ್ತಾದರೂ, ಇಂಡಿಗೋ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2026ರ ಫೆಬ್ರವರಿ 16ರವರೆಗೆ ಸಡಿಲಿಸಿದೆ.