ಹರಿಹರಸುತನ ಕಾಣಲು ಹರಿದು ಬಂದ ಭಕ್ತ ಸಾಗರ..41 ದಿನದಲ್ಲಿ 332 ಕೋಟಿ ರೂ. ಆದಾಯ ಸಂಗ್ರಹ! | Sabarimala

 Sabarimala | ಶಬರಿಮಲೆ ದೇವಸ್ಥಾನ
Sabarimala | ಶಬರಿಮಲೆ ದೇವಸ್ಥಾನ
Published on
Sabarimala: ಕಾರ್ತಿಕ ಮಾಸದ ಅಂಗವಾಗಿ ಶಬರಿಮಲೆಗೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಮಂಡಲ ಪೂಜಾ ಋತು ಆರಂಭವಾಗಿ 41 ದಿನಗಳಾಗಿದ್ದು, ಇದುವರೆಗೆ 30.56 ಲಕ್ಷಕ್ಕೂ ಹೆಚ್ಚು ಭಕ್ತರು ಅಯ್ಯಪ್ಪನ ದರ್ಶನ ಪಡೆದಿದ್ದಾರೆ, ಒಟ್ಟು 332.77 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಕೆ. ಜಯಕುಮಾರ್ ಶನಿವಾರ ತಿಳಿಸಿದ್ದಾರೆ.

ಆದಾಯದ ವಿವರ..

ತಿರುವಾಂಕೂರು ದೇವಸ್ವಂ ಬೋರ್ಡ್ (TDB) ಬಿಡುಗಡೆ ಮಾಡಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, 41 ದಿನಗಳ ಮಂಡಲ ಪೂಜೆ ಅವಧಿಯಲ್ಲಿ ಶಬರಿಮಲೆ ದೇವಸ್ಥಾನದ ಒಟ್ಟು ಆದಾಯವು 332.77 ಕೋಟಿ ರೂಪಾಯಿಗಳನ್ನು ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 297.06 ಕೋಟಿ ರೂಪಾಯಿ ಆದಾಯ ಬಂದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸುಮಾರು 35.70 ಕೋಟಿ ರೂಪಾಯಿಗಳ ಭಾರಿ ಏರಿಕೆ ಕಂಡುಬಂದಿದೆ.
41 ದಿನಗಳ ಮಂಡಲ ಪೂಜೆಯನ್ನು ವೀಕ್ಷಿಸಲು ಶನಿವಾರ ಸಾವಿರಾರು ಭಕ್ತಾದಿಗಳು ಸನ್ನಿಧಾನದಲ್ಲಿ ನೆರೆದಿದ್ದರು. ಶುಕ್ರವಾರ ಸಂಜೆ ಮೆರವಣಿಗೆಯ ಮೂಲಕ ತರಲಾದ ಪವಿತ್ರ ಚಿನ್ನದ ವಸ್ತ್ರವಾದ "ಥಂಕ ಅಂಕಿ" (ಚಿನ್ನದ ಅಂಗಿ) ಯಿಂದ ಅಯ್ಯಪ್ಪ ದೇವರ ವಿಗ್ರಹವನ್ನು ಅಲಂಕರಿಸಿದ ಬಳಿಕ ಮಂಡಲ ಪೂಜೆಯನ್ನು ನಡೆಸಲಾಯಿತು.
ಟಿಡಿಬಿ ಅಧ್ಯಕ್ಷ ಜಯಕುಮಾರ್ ಹೇಳಿಕೆಯೊಂದನ್ನು ನೀಡಿದ್ದು, ಹೆಚ್ಚುತ್ತಿರುವ ಭಕ್ತರ ಸಂಖ್ಯೆಯೂ ಅವರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದರು. ಶನಿವಾರ ಮಧ್ಯಾಹ್ನದವರೆಗೆ 30,56,871 ಯಾತ್ರಿಕರು ದರ್ಶನ ಪಡೆದರು. ಶುಕ್ರವಾರ, 37,521 ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಿದರು.
ಟಿಡಿಬಿ ಬಿಡುಗಡೆ ಮಾಡಿದ ಅಧಿಕೃತ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಋತುವಿನಲ್ಲಿ ಇದುವರೆಗೆ ಒಟ್ಟು ಆದಾಯ 332,77,05,132 ರೂ.ಗಳನ್ನು ತಲುಪಿದ್ದು, ಇದರಲ್ಲಿ ಕಾಣಿಕೆ (ಹುಂಡಿ ಸಂಗ್ರಹ), ಅಪ್ಪಂ ಮತ್ತು ಅರವಣ (ಪ್ರಸಾದ), ಕೊಠಡಿ ಬಾಡಿಗೆ ಮತ್ತು ಹರಾಜು ಸೇರಿದಂತೆ ಇತರ ಮೂಲಗಳಿಂದ ಬರುವ ಆದಾಯವೂ ಸೇರಿದೆ. ಒಟ್ಟು ಆದಾಯದಲ್ಲಿ, 83.17 ಕೋಟಿ ರೂ.ಗಳನ್ನು ಕಾಣಿಕ ಮೂಲಕ ಪಡೆಯಲಾಗಿದೆ. ಕಳೆದ ಋತುವಿಗೆ ಹೋಲಿಸಿದರೆ ಇದು ಗಮನಾರ್ಹ ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2024ರ ಡಿಸೆಂಬರ್​ನಲ್ಲಿ 80.25 ಕೋಟಿ ರೂ.ಗಳಷ್ಟಿತ್ತು.
ಜನದಟ್ಟಣೆಯ ನಡುವೆಯೂ ಸಹ ಯಾತ್ರಾರ್ಥಿಗಳಿಗೆ ಸುಗಮ ದರ್ಶನವನ್ನು ಟಿಡಿಬಿ ಖಚಿತಪಡಿಸಿದ್ದು, ಋತುವಿನ ಮೊದಲ ದಿನದ ಕೆಲವು ಆರಂಭಿಕ ಗೊಂದಲಗಳನ್ನು ಹೊರತುಪಡಿಸಿದರೆ, ಪೊಲೀಸರು ಮತ್ತು ದೇವಾಲಯದ ಸಿಬ್ಬಂದಿಯ ಸಂಘಟಿತ ಪ್ರಯತ್ನಗಳಿಂದಾಗಿ ಯಾತ್ರೆ ಸರಾಗವಾಗಿ ಮುಂದುವರೆದಿದೆ ಎಂದು ಜಯಕುಮಾರ್ ತಿಳಿಸಿದ್ದಾರೆ. ಯಾತ್ರಿಕರಿಗೆ ಉತ್ತಮ ಆಹಾರವನ್ನು ನೀಡುವ ಉದ್ದೇಶದಿಂದ ಮಂಡಳಿಯು ಅನ್ನದಾನ (ಉಚಿತ ಊಟ) ವ್ಯವಸ್ಥೆಯಲ್ಲಿ ಸಾಧ್ಯಾ ಎಂಬ ಪದಾರ್ಥವನ್ನು ಸೇರಿಸುವ ಮೂಲಕ ಸಣ್ಣಪುಟ್ಟ ಮಾರ್ಪಾಡುಗಳನ್ನು ಪರಿಚಯಿಸಿದೆ ಎಂದು ಅವರು ಹೇಳಿದರು. ಕಾರ್ಯನಿರ್ವಾಹಕ ಅಧಿಕಾರಿಯ ನೇತೃತ್ವದಲ್ಲಿ ಮಂಡಳಿ ಮತ್ತು ಸಿಬ್ಬಂದಿ ದೂರುಗಳನ್ನು ತ್ವರಿತವಾಗಿ ಪರಿಹರಿಸಿದರು.
ಅರವಣ ಪ್ರಸಾದದ ವಿಷಯವನ್ನು ಉಲ್ಲೇಖಿಸಿದ ಜಯಕುಮಾರ್, ಆರಂಭದಲ್ಲಿ 30 ಮತ್ತು 40 ಟಿನ್ ಗಳ ವಿತರಣೆಯನ್ನು ನಂತರ ಪ್ರತಿ ವ್ಯಕ್ತಿಗೆ 20 ಮತ್ತು ನಂತರ 10 ಟಿನ್ ಗಳಿಗೆ ಇಳಿಸಲಾಯಿತು, ಇದು ಭಕ್ತರಿಗೆ ನಿರಾಶೆ ಮೂಡಿಸಿದ್ದು, ಶನಿವಾರ ದೇವಾಲಯ ಮುಚ್ಚಿದ ಬಳಿಕ ಅರವಣ ಉತ್ಪಾದನೆಯನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು. ಮಂಡಲ ಪೂಜಾ ಋತುವಿನ ಅಂತ್ಯವನ್ನು ಸೂಚಿಸುವ ಮೂಲಕ ಶನಿವಾರ ರಾತ್ರಿ 10 ಗಂಟೆಗೆ ಹರಿವರಾಸನಂ ಪಠಣದ ನಂತರ ಶಬರಿಮಲೆ ದೇವಸ್ಥಾನವನ್ನು ಮುಚ್ಚಲಾಯಿತು. ಮಕರವಿಳಕ್ಕು ಹಬ್ಬಕ್ಕಾಗಿ ಡಿಸೆಂಬರ್ 30 ರಂದು ಸಂಜೆ 5 ಗಂಟೆಗೆ ದೇವಾಲಯವು ಮತ್ತೆ ತೆರೆಯಲಾಗುತ್ತದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net