ಅನ್ನದಾತನ ಪಾಲಿಗೆ ಮುನಿದ ವರುಣ; ಶೇ. 90ಕ್ಕೆ ಕುಸಿದ ಮುಂಗಾರು ಮುನ್ಸೂಚನೆ, ಹೆಚ್ಚಾಯ್ತು ಆತಂಕ! Monsoon 2026

Monsoon 2026 ಸಾಂದರ್ಭಿಕ ಚಿತ್ರ
Monsoon 2026 ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಈ ವರ್ಷ ದೇಶಾದ್ಯಂತ ಮುಂಗಾರು ಮಳೆಯ ಪ್ರಮಾಣವು ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಾಗುವ ಆತಂಕ ಎದುರಾಗಿದೆ
  • ಪ್ರಸಕ್ತ ವರ್ಷದಲ್ಲಿ ದೇಶಾದ್ಯಂತ ದೀರ್ಘಾವಧಿಯ ಸರಾಸರಿ ಶೇ. 90 ರಷ್ಟು ಮಾತ್ರ ಮಳೆಯಾಗುವ ಸಾಧ್ಯತೆ
  • ಜೂನ್ ತಿಂಗಳಿನಲ್ಲಿ ದುರ್ಬಲ 'ಎಲ್ ನಿನೋ' ಪರಿಸ್ಥಿತಿಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ
  • ಮುಂಗಾರು ಹಂಗಾಮಿನ ದ್ವಿತೀಯಾರ್ಧದ ಅವಧಿಯಲ್ಲಿ ಇದು ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ
ನವದೆಹಲಿ: ಈ ವರ್ಷ ದೇಶಾದ್ಯಂತ ಮುಂಗಾರು (Monsoon 2026) ಮಳೆಯ ಪ್ರಮಾಣವು ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಾಗುವ ಆತಂಕ ಎದುರಾಗಿದ್ದು, ಪ್ರಸಕ್ತ ವರ್ಷದಲ್ಲಿ ದೇಶಾದ್ಯಂತ ದೀರ್ಘಾವಧಿಯ ಸರಾಸರಿ (LPA) ಶೇಕಡಾ 90 ರಷ್ಟು ಮಾತ್ರ ಮಾನ್ಸೂನ್ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶುಕ್ರವಾರ (ಮೇ 29) ತಿಳಿಸಿದೆ.
ಜೂನ್ ತಿಂಗಳಿನಲ್ಲಿ ದುರ್ಬಲ 'ಎಲ್ ನಿನೋ' (El Nino) ಪರಿಸ್ಥಿತಿಗಳು ಉಂಟಾಗುವ ಸಾಧ್ಯತೆಯಿದ್ದು, ಮುಂಗಾರು ಹಂಗಾಮಿನ ದ್ವಿತೀಯಾರ್ಧದ ಅವಧಿಯಲ್ಲಿ ಇದು ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದೆ.
ದೇಶಾದ್ಯಂತ ನೈಋತ್ಯ ಮಾನ್ಸೂನ್ ಋತುಮಾನದ ಮಳೆಯು ದೀರ್ಘಾವಧಿಯ ಸರಾಸರಿ ಯ 90% ರಷ್ಟಿದ್ದು, 4 ಪ್ರತಿಶತದಷ್ಟು ಮಾದರಿ ದೋಷದೊಂದಿಗೆ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಆದಾಗ್ಯೂ, ಈಶಾನ್ಯ ಭಾರತದಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದ್ದರೆ, ವಾಯುವ್ಯ, ಮಧ್ಯ ಮತ್ತು ದಕ್ಷಿಣ ಪರ್ಯಾಯ ದ್ವೀಪಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ಎಚ್ಚರಿಸಿದೆ.
ಜೂನ್ ಪ್ರಾರಂಭವಾದ ನಂತರ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಗುಜರಾತ್ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳು, ಮಹಾರಾಷ್ಟ್ರ, ತೆಲಂಗಾಣ, ಹಿಮಾಚಲ ಪ್ರದೇಶ ಮತ್ತು ತಮಿಳುನಾಡಿನ ಪ್ರತ್ಯೇಕ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ಅಲೆಯ ದಿನಗಳನ್ನು ನಿರೀಕ್ಷಿಸಲಾಗಿದೆ ಎಂದು ಐಎಂಡಿ ತಿಳಿಸಿದೆ.

IMD ಯ ಹಿಂದಿನ ಮುನ್ಸೂಚನೆ

ಭಾರತೀಯ ಹವಾಮಾನ ಇಲಾಖೆಯು (IMD) ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆ ಮಾಡಿದ್ದ ಮುಂಗಾರು ಋತುವಿನ ಮೊದಲ ಹಂತದ ದೀರ್ಘಾವಧಿ ಮುನ್ಸೂಚನೆಯಲ್ಲಿಯೇ, ಈ ವರ್ಷ ಭಾರತದಲ್ಲಿ "ಸಾಮಾನ್ಯಕ್ಕಿಂತ ಕಡಿಮೆ" ಮಾನ್ಸೂನ್ ಮಳೆಯಾಗುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿತ್ತು. ಪ್ರಸಕ್ತ ವರ್ಷದಲ್ಲಿ ದೀರ್ಘಾವಧಿಯ ಸರಾಸರಿ ಶೇ 92 ರಷ್ಟು ಮಳೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಈ ಮುನ್ಸೂಚನೆಯು +/-5 ಪ್ರತಿಶತದಷ್ಟು ದೋಷದ ಅಂತರವಿದೆ ಎಂದು ಐಎಂಡಿ ತಿಳಿಸಿದೆ.
1971-2020ರ ಅವಧಿಯಲ್ಲಿ ದೇಶಾದ್ಯಂತ ಋತುಮಾನದ ಮಳೆಯ ಎಲ್‌ಪಿಎ 87 ಸೆಂ.ಮೀ ಎಂದು ಎಚ್‌ಟಿ ಈ ಹಿಂದೆ ವರದಿ ಮಾಡಿತ್ತು.
ಆದಾಗ್ಯೂ, ಐಎಂಡಿ ಬಿಡುಗಡೆ ಮಾಡಿದ ಪ್ರಾದೇಶಿಕ ವಿತರಣೆಯು, ಈಶಾನ್ಯ, ವಾಯುವ್ಯ ಮತ್ತು ದಕ್ಷಿಣ ಪರ್ಯಾಯ ದ್ವೀಪದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ದೇಶದ ಅನೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಸೂಚಿಸುತ್ತದೆ. ಈ ಹಿಂದೆ ಊಹಿಸಿದ್ದಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯು ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿರುವ ಭಾರತಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇರುತ್ತದೆ.
ಕೃಷಿ ಸಚಿವಾಲಯದ ಪ್ರಕಾರ, ಭಾರತದ ಒಟ್ಟು ಕೃಷಿ ಪ್ರದೇಶದ ಶೇಕಡಾ 51 ರಷ್ಟು ಭಾಗ ಹಾಗೂ ಒಟ್ಟು ಕೃಷಿ ಉತ್ಪಾದನೆಯ ಶೇಕಡಾ 40 ರಷ್ಟು ಪಾಲು ಸಂಪೂರ್ಣವಾಗಿ ಮಳೆಯಾಶ್ರಿತವಾಗಿದೆ. ದೇಶದ ಶೇಕಡಾ 47 ರಷ್ಟು ಜನಸಂಖ್ಯೆಯು ಇಂದಿಗೂ ತಮ್ಮ ದೈನಂದಿನ ಜೀವನೋಪಾಯಕ್ಕಾಗಿ ನೇರವಾಗಿ ಕೃಷಿ ರಂಗವನ್ನೇ ಅವಲಂಬಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆಯ ಪ್ರಮಾಣ ಕುಂಠಿತಗೊಂಡರೆ ಅದು ನೇರವಾಗಿ ಗ್ರಾಮೀಣ ಭಾರತದ ಆರ್ಥಿಕ ಶಕ್ತಿಯ ಮೇಲೆ ನೇರ ಪರಿಣಾಮ ಬೀರಲಿದೆ.
ಭಾರತವು ಕೊನೆಯ ಬಾರಿಗೆ ಸಾಮಾನ್ಯಕ್ಕಿಂತ ಕಡಿಮೆ ಮಳೆಯನ್ನು 2023 ರಲ್ಲಿ ಪಡೆಯಿತು, ಇದು ಎಲ್ ನಿನೋ ವರ್ಷವೂ ಆಗಿದ್ದರಿಂದ ಮಾನ್ಸುನ್​ ಋತುವಿನಲ್ಲಿ ದೇಶಾದ್ಯಂತ ಒಟ್ಟಾರೆಯಾಗಿ ಮಳೆಯು ಅದರ ಎಲ್​ಪಿಎಯ ಶೇ.94 ರಷ್ಟಿತ್ತು.
ಮಾನ್ಸೂನ್ ಮಿಷನ್ ಕ್ಲೈಮೇಟ್ ಫೋರ್ಕಾಸ್ಟ್ ಸಿಸ್ಟಮ್ (ಎಂಎಂಸಿಎಫ್ಎಸ್) ಪ್ರಕಾರ, ಮಾನ್ಸೂನ್ ಋತುವಿನಲ್ಲಿ, ವಿಶೇಷವಾಗಿ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಎಲ್ ನಿನೊ ಪರಿಸ್ಥಿತಿಗಳು ಸ್ಥಾಪನೆಯಾಗುವ ಸಾಧ್ಯತೆಯಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net