ಈ ಪ್ರಕರಣದ ಹಿನ್ನೆಲೆಯನ್ನು ಗಮನಿಸಿದರೆ, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಹೆಸರಿನಲ್ಲಿ ಕಾನೂನನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ‘ಸರ್ಕಾರಿ ಅನುದಾನದಲ್ಲಿ ನಡೆಯುತ್ತಿದ್ದ ರಸ್ತೆ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳಲು ನೀವೇನು ಸವೋಚ್ಚ ಅಧಿಕಾರಿಯೇ’ ಎಂದು ಪ್ರಶ್ನಿಸಿರುವ ನ್ಯಾಯಾಲಯ, ‘ಕಾಮಗಾರಿಗೆ ಅಡ್ಡಿಪಡಿಸುವುದು, ಕಾರ್ವಿುಕರನ್ನು ನಿಂದಿಸುವುದು, ಕರ್ತವ್ಯನಿರತ ಅಧಿಕಾರಿ ಮೇಲೆ ಹಲ್ಲೆ ಮಾಡುವುದು ಪ್ರತಿಭಟನೆಯಲ್ಲ, ಅಪರಾಧ’ ಎಂದು ಕಟುವಾಗಿ ಹೇಳಿದೆ. ಆರೋಪಿಗಳ ಪರ ವಕೀಲರು ‘ಇದು ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದಕ್ಕೆ ಹಾಕಲಾದ ಸುಳ್ಳು ಮೊಕದ್ದಮೆ’ ಎಂದು ವಾದಿಸಿದರೂ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಎರಡೂ ಎಫ್ಐಆರ್ನಲ್ಲಿರುವ ಗಂಭೀರ ಅಂಶಗಳನ್ನು ಮಾನ್ಯ ಮಾಡಿವೆ. ಭಾರತೀಯ ನ್ಯಾಯ ಸಂಹಿತೆ 2023ರಡಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು ಮತ್ತು ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿರುವ ಈ ಪ್ರಕರಣ ಆರ್ಟಿಐ ಕಾರ್ಯಕರ್ತರೆಂದು ಕರೆದುಕೊಳ್ಳುವ ಕೆಲವರ ದರ್ಪಕ್ಕೆ ಸಾಕ್ಷಿಯಾಗಿದೆ.