ನಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರೈತರಿಗೆ ಉಚಿತ ವಿದ್ಯುತ್​, ಬೆಳೆಗಳಿಗೆ ಬೆಂಬಲ ಬೆಲೆ, ಮಹಿಳೆಯರಿಗೆ 30000 ರೂ ಆರ್ಥಿಕ ನೆರವು: ತೇಜಸ್ವಿ ಯಾದವ್​ Tejashwi Yadav

Tejashwi Yadav ತೇಜಸ್ವಿ ಯಾದವ್​
Tejashwi Yadav ತೇಜಸ್ವಿ ಯಾದವ್​
Published on

ಪ್ರಮುಖ ಮುಖ್ಯಾಂಶಗಳು

  • ಮಹಾಘಟಬಂದನ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 30 ಸಾವಿರ ಆರ್ಥಿಕ ನೆರವು: ತೇಜಸ್ವಿ ಯಾದವ್​
  • ಮಾಯ್​ ಬಹಿನ್​ ಮಾನ್​ ಯೋಜನೆ ಅಡಿಯಲ್ಲಿ ಮಹಿಳೆಯರ ಖಾತೆಗೆ 30 ಸಾವಿರ ರೂ.ಗಳನ್ನ ಜಮಾ ಮಾಡುತ್ತೇನೆ
  • ಸ್ವ-ಉದ್ಯೋಗ ಉಪಕ್ರಮದಡಿ 25 ಲಕ್ಷ ಮಹಿಳೆಯರ ಬ್ಯಾಂಕ್​ ಖಾತೆಗಳಿಗೆ ತಲಾ 10 ಸಾವಿರ ರೂ.ಗಳನ್ನು ಜಮಾ
  • ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಪುನಃ ನೀಡಲಾಗುತ್ತದೆ
ಬಿಹಾರ: ಬಿಹಾರದಲ್ಲಿ ಮಹಾಘಟಬಂದನ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 30 ಸಾವಿರ ಆರ್ಥಿಕ ನೆರವನ್ನು ನೀಡಲಾಗುವುದು ಎಂದು ಮೈತ್ರಿಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಮಂಗಳವಾರ (ನ.04) ಭರವಸೆ ನೀಡಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಪ್ರಚಾರ ಅಂತಿಮ ಹಂತಕ್ಕೆ ಬಂದಿದ್ದು, ಈ ವೇಳೆ ತೇಜಸ್ವಿ ಯಾದವ್​ ಪತ್ರಕಾಗೋಷ್ಟಿಯಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಕರ ಸಂಕ್ರಾಂತಿ ದಿನ ಮಾಯ್​ ಬಹಿನ್​ ಮಾನ್​ ಯೋಜನೆ ಅಡಿಯಲ್ಲಿ ಮಹಿಳೆಯರ ಖಾತೆಗೆ 30 ಸಾವಿರ ರೂ.ಗಳನ್ನ ಜಮಾ ಮಾಡುತ್ತೇನೆ ಎಂದು ತೇಜಸ್ವಿ ತಿಳಿಸಿದ್ದಾರೆ. ಆರ್​ಜೆಡಿ ಮತ್ತು ಕಾಂಗ್ರೆಸ್​ ಜಂಟಿ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಮೈ ಬಹಿನ್ ಮಾನ್ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ದುರ್ಬಲ ಹೊಂದಿದ ಹಾಗೂ ಹಿಂದುಳಿದ ಸಮುದಾಯಗಳ ಮಹಿಳೆಯರಿಗೆ ತಿಂಗಳಿಗೆ 2,500 ರೂಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.
ನಿತೀಶ್​ ಕುಮಾರ್​ ನೇತೃತ್ವದ ಸರ್ಕಾರವು ತನ್ನ ಉದ್ಯಮಶೀಲತೆ ಮತ್ತು ಸ್ವ-ಉದ್ಯೋಗ ಉಪಕ್ರಮದಡಿ 25 ಲಕ್ಷ ಮಹಿಳೆಯರ ಬ್ಯಾಂಕ್​ ಖಾತೆಗಳಿಗೆ ತಲಾ 10 ಸಾವಿರ ರೂ.ಗಳನ್ನು ಜಮಾ ಮಾಡುವುದಾಗಿ ಘೋಷಿಸಿದ ಕೆಲ ದಿನಗಳ ಬಳಿಕ ಮಹಾಮೈತ್ರಿಕೂಟ ಈ ತಂತ್ರ ಹೆಣೆದಿದೆ.
ಬಿಹಾರ ಮತದಾರರು ಎನ್​ಡಿಎ ಸರ್ಕಾರದ ನೀತಿಯಿಂದ ಬೇಸತ್ತಿದ್ದು, ಬದಲಾವಣೆಯ ಬಯಸುತ್ತಿದ್ದಾರೆ ಎಂದರು.
ರಾಜ್ಯದ ರೈತರಿಗೆ ನೀರಾವರಿಗಾಗಿ ಉಚಿತ ವಿದ್ಯುತ್ ಮತ್ತು ಪ್ರಮುಖ ಬೆಳೆಗಳಿಗೆ ಹೆಚ್ಚಿನ ಬೆಲೆಗಳನ್ನು ನೀಡಲಾಗುತ್ತದೆ ಎಂದ ಯಾದವ್​, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, MSP ಜೊತೆಗೆ ಭತ್ತದ ಬೆಳೆಗಳಿಗೆ ಕ್ವಿಂಟಾಲ್‌ಗೆ 300 ರೂ. ಬೋನಸ್ ಹಾಗೂ ಗೋಧಿಗೆ ಕ್ವಿಂಟಾಲ್‌ಗೆ 400 ರೂ. ಬೋನಸ್ ನೀಡಲಾಗುವುದು ಎಂದರು.
ಮಹಾಘಟಬಂದನ್ ಪ್ರಣಾಳಿಕೆಯ ಪ್ರಮುಖ ಬದ್ಧತೆಗಳನ್ನು ಪುನರುಚ್ಚಿಸಿದ ಯಾದವ್​ ತಮ್ಮ ಪಕ್ಷವು ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಪುನಃ ನೀಡುವುದಾಗಿ ಹೇಳಿದರು. ಹಾಗೆಯೇ ಆರೋಗ್ಯ ಕಾರ್ಯಕರ್ತರನ್ನು ಅವರ ಊರಿನಿಂದ 70 ಕಿಮೀ ಒಳಗೆ ನಿಯೋಜಿಸಲಾಗುವುದು ಎಂದು ಭರವಸೆ ನೀಡಿದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net