

ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಬುಧವಾರ (ನ.11) ರಾತ್ರಿ ಸಿನಿಮೀಯ ಶೈಲಿಯ ಭೀಕರ ಕೊಲೆಯೊಂದು ನಡೆದಿದ್ದು, ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಜೋಬ್ನರ್‌ನ ಕುಖ್ಯಾತ ರೌಡಿಶೀಟರ್ ವಿಜಯ್ ಬಜಿಯಾ ಎಂಬಾತನನ್ನು ಶಸ್ತ್ರಸಜ್ಜಿತ ಗ್ಯಾಂಗ್ ಬೆನ್ನಟ್ಟಿ, ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿದೆ. ಜೈಪುರದ ಕರ್ಧನಿ ಪೊಲೀಸ್ ಠಾಣಾ ವ್ಯಾಪ್ತಿಯ ಜಗದಂಬಾ ನಗರದಲ್ಲಿ ಈ ಘಟನೆ ನಡೆದಿದೆ.
ಡಿಸಿಪಿ ಪ್ರಶಾಂತ್ ಕಿರಣ್ ನೀಡಿರುವ ಮಾಹಿತಿಯ ಪ್ರಕಾರ, ವಿಜಯ್ ಬಜಿಯಾ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಜೋಬ್ನರ್‌ನಿಂದ ಜೈಪುರದತ್ತ ತಮ್ಮ ಟೊಯೋಟಾ ಫಾರ್ಚುನರ್ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಕ್ಯಾಂಪರ್ ವಾಹನದಲ್ಲಿ ಬಂದ 4 ರಿಂದ 6 ಮಂದಿ ದುಷ್ಕರ್ಮಿಗಳ ತಂಡ ಜಗದಂಬಾ ನಗರದಲ್ಲಿ ಬಜಿಯಾ ಅವರ ಕಾರನ್ನು ಅಡ್ಡಗಟ್ಟಿದೆ.
ಹಂತಕರು ಕಳೆದ ಹಲವು ದಿನಗಳಿಂದ ಬಜಿಯಾ ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದೆ. ತಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಬಜಿಯಾ, ಹತ್ತಿರದ ವಸತಿ ಪ್ರದೇಶಗಳ ಸಂದಿಗಳಲ್ಲಿ ಕಾರು ನುಗ್ಗಿಸಿ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ.
ಆದರೆ, ಬಿಡದ ದುಷ್ಕರ್ಮಿಗಳು ತಮ್ಮ ಕ್ಯಾಂಪರ್ ವಾಹನವನ್ನು ಬಜಿಯಾ ಅವರ ಫಾರ್ಚುನರ್ ಕಾರಿಗೆ ಜೋರಾಗಿ ಡಿಕ್ಕಿ ಹೊಡೆಸಿದ್ದಾರೆ. ಕಾರು ನಿಲ್ಲುತ್ತಿದ್ದಂತೆ ಬಜಿಯಾ ಅವರನ್ನು ಹೊರಗೆ ಎಳೆದು ಕಬ್ಬಿಣದ ರಾಡ್ ಸೇರಿದಂತೆ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಜಿಯಾ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.
ಈ ಭೀಕರ ಹತ್ಯೆಯ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನಾ ಸ್ಥಳದ ವಿಡಿಯೋ ಎದೆ ನಡುಗಿಸುವಂತಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಜಿಯಾ ಅವರ ತಲೆಬುರುಡೆಯೊಳಗೆ ಕೊಡಲಿ ಸಿಕ್ಕಿಕೊಂಡಿರುವ ಭಯಾನಕ ದೃಶ್ಯ ವಿಡಿಯೋದಲ್ಲಿ ಕಂಡುಬಂದಿದೆ. ಹತ್ಯೆ ಮಾಡಿದ ದುಷ್ಕರ್ಮಿಗಳು ಕೂಡ ಜೋಬ್ನರ್ ಮೂಲದವರೇ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ವಿಜಯ್ ಬಜಿಯಾ ಜೋಬ್ನರ್ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳಿದ್ದವು. ಎರಡು ಗುಂಪುಗಳ ನಡುವೆ ಹಳೆಯ ಕ್ರಿಮಿನಲ್ ಕೇಸ್ ಒಂದಕ್ಕೆ ಸಂಬಂಧಿಸಿದಂತೆ ದೀರ್ಘಕಾಲದಿಂದ ದ್ವೇಷವಿತ್ತು ಎನ್ನಲಾಗಿದೆ. ಇದೇ ದ್ವೇಷದ ಹಿನ್ನೆಲೆಯಲ್ಲಿ ಎದುರಾಳಿ ಗ್ಯಾಂಗ್ ಸಂಚು ರೂಪಿಸಿ ಈ ಕೃತ್ಯ ಎಸಗಿದೆ ಎಂದು ಶಂಕಿಸಲಾಗಿದೆ. ಸ್ಥಳೀಯರು ಇದನ್ನು ಗ್ಯಾಂಗ್ ವಾರ್ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕರ್ಧನಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕನ್ವಾಟಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಲೆ ಬಳಿಕ ಜೈಪುರದಾದ್ಯಂತ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದು, ಎಲ್ಲೆಡೆ ಚೆಕ್‌ಪೋಸ್ಟ್‌ಗಳನ್ನು ಹಾಕಿ ನಾಕಾಬಂದಿ ವಿಧಿಸಿದ್ದಾರೆ. ಪರಾರಿಯಾಗಿರುವ ಹಂತಕರನ್ನು ಹೆಡೆಮುರಿ ಕಟ್ಟಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತನಿಖೆ ತೀವ್ರಗೊಂಡಿದೆ, (ಏಜೆನ್ಸೀಸ್).