ಕಿಂಗ್ ಯಾರೋ ಗೊತ್ತಿಲ್ಲ, ಆದ್ರೆ ಕಿಂಗ್‌ಮೇಕರ್ಸ್ ಇವರೇ.. ಈ ಪಕ್ಷಗಳ ಕೈಯಲ್ಲಿದೆ ಸ್ಟಾಲಿನ್-ಎಡಪ್ಪಾಡಿ ಭವಿಷ್ಯ! | Tamil Nadu Election

Tamil Nadu Election |  ತಮಿಳುನಾಡಿನ ವಿವಿಧ ಪಕ್ಷಗಳ ಚಿಹ್ನೆಗಳು
Tamil Nadu Election | ತಮಿಳುನಾಡಿನ ವಿವಿಧ ಪಕ್ಷಗಳ ಚಿಹ್ನೆಗಳು
Published on
ನವದೆಹಲಿ: ತಮಿಳುನಾಡು ವಿಧಾನಸಭಾ ಚುನಾವಣೆ ಕುತೂಹಲವನ್ನು ಹೆಚ್ಚಿಸಿದ್ದು, ಆಡಳಿತೂಢ ಡಿಎಂಕೆ ಮತ್ತು ವಿಪಕ್ಷ ಎಐಎಡಿಎಂಕೆ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ನಟ ವಿಜಯ್​ ನೇತೃತ್ವದ ಟಿವಿಕೆ ಜೊತೆಗೆ ಈ ಬಾರಿ ಸಣ್ಣ ಪ್ರಾದೇಶಿಕ ಪಕ್ಷಗಳು ಕೂಡ ಬಾರಿ ಸದ್ದು ಮಾಡುತ್ತಿದ್ದು, ಅವೆಲ್ಲಾ ಫಲಿತಾಂಶವನ್ನು ಬದಲಿಸುವ ಸಾಮರ್ಥ್ಯ ಹೊಂದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಪಿಎಂಕೆ (PMK): ಅನ್ಬುಮಣಿ ರಾಮದಾಸ್ ನೇತೃತ್ವದ ಪಟ್ಟಾಲಿ ಮಕ್ಕಳ್ ಕಚ್ಚಿ (PMK) ಪ್ರಸ್ತುತ ಎನ್‌ಡಿಎ (NDA) ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾಗಿದ್ದು, ಈ ಬಾರ 18 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಉತ್ತರ ತಮಿಳುನಾಡಿನ ಪ್ರಬಲ ವನ್ನಿಯಾರ್ ಸಮುದಾಯದ ಮೇಲೆ ಪಿಎಂಕೆ ಅತಿ ಹೆಚ್ಚು ಪ್ರಭಾವ ಹೊಂದಿದೆ.
ಮಹಿಳಾ ಸುರಕ್ಷತೆಯ ವಿಷಯದಲ್ಲಿ ಡಿಎಂಕೆ ಸರ್ಕಾರವನ್ನು ಟೀಕಿಸುತ್ತಿರುವ ರಾಮದಾಸ್, ಎನ್‌ಡಿಎ ಮೈತ್ರಿಕೂಟವು 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತೀವ್ರ ಸ್ಪರ್ಧೆಯಿರುವ ಕ್ಷೇತ್ರಗಳಲ್ಲಿ ಜಾತಿ ಆಧಾರಿತ ಮತಗಳನ್ನು ಕ್ರೋಢೀಕರಿಸುವ ಇವರ ಸಾಮರ್ಥ್ಯ ಎನ್‌ಡಿಎಗೆ ಪ್ಲಸ್​ ಪಾಯಿಂಟ್​.
ವಿಸಿಕೆ (VCK): ತೊಲ್ ತಿರುಮಾವಲವನ್ ನೇತೃತ್ವದ ವಿದುತಲೈ ಚಿರುತೈಗಲ್ ಕಚ್ಚಿ (VCK) ಡಿಎಂಕೆ ಮೈತ್ರಿಕೂಟದ ಪಾಲುದಾರ ಪಕ್ಷ. ದಲಿತ ಸಮುದಾಯಗಳಲ್ಲಿ ಬಲವಾದ ನೆಲೆ ಹೊಂದಿರುವ ವಿಸಿಕೆ, ಉತ್ತರ ಜಿಲ್ಲೆಗಳಲ್ಲಿ ಪಿಎಂಕೆ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡುತ್ತದೆ ಎನ್ನುವುದು ಅನೇಕರ ವಿಶ್ಲೇಷಣೆ. ತಳ ಸಮುದಾಯಗಳ ಬೆಂಬಲವನ್ನು ಡಿಎಂಕೆ ಮೈತ್ರಿಕೂಟಕ್ಕೆ ತಂದುಕೊಡುವಲ್ಲಿ ಈ ಪಕ್ಷದ ಪಾತ್ರ ನಿರ್ಣಾಯಕವಾಗಿದೆ.
ಎಂಡಿಎಂಕೆ (MDMK): ವೈಕೊ ನೇತೃತ್ವದ ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (MDMK) ಈ ಬಾರಿ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೂ ಡಿಎಂಕೆ ಜೊತೆಗಿನ ಸ್ನೇಹ ಮುಂದುವರಿಸಿದೆ. ಕೆಲವು ಕ್ಷೇತ್ರಗಳಲ್ಲಿ ಎಂಡಿಎಂಕೆ ಅಭ್ಯರ್ಥಿಗಳು ಡಿಎಂಕೆಯ ಉದಯ ಸೂರ್ಯ ಚಿಹ್ನೆಯಡಿಯಲ್ಲೇ ಸ್ಪರ್ಧಿಸುತ್ತಿದ್ದಾರೆ. ವೈಕೊ ಪ್ರಭಾವ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮತಗಳ ಬಲವರ್ಧನೆಗೆ ಸಹಾಯ ಮಾಡಲಿದೆ.
ಎನ್‌ಟಿಕೆ (NTK): ಸೀಮನ್ ನೇತೃತ್ವದ ನಾಮ್ ತಮಿಳರ್ ಕಚ್ಚಿ (NTK) ಯಾವುದೇ ಮೈತ್ರಿ ಇಲ್ಲದೆ ಎಲ್ಲಾ 234 ಸ್ಥಾನಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದು, ತಮಿಳು ಅಸ್ಮಿತೆ, ಕೃಷಿ ಮತ್ತು ವಿಕೇಂದ್ರೀಕೃತ ಆಡಳಿತದ ಘೋಷಣೆಗಳೊಂದಿಗೆ ಯುವ ಮತದಾರರನ್ನು ಸೆಳೆಯುತ್ತಿದೆ. ಈ ಪಕ್ಷವು ಅತಿ ಹೆಚ್ಚು ಸ್ಥಾನ ಗೆಲ್ಲದಿದ್ದರೂ, ಪ್ರಮುಖ ಮೈತ್ರಿಕೂಟಗಳ ಮತಗಳನ್ನು ವಿಭಜಿಸುವ ಮೂಲಕ ಅನೇಕ ಕ್ಷೇತ್ರಗಳ ಫಲಿತಾಂಶವನ್ನು ಅದಲುಬದಲು ಮಾಡುವ ಶಕ್ತಿ ಹೊಂದಿದೆ.
ಡಿಎಮ್‌ಡಿಕೆ (DMDK): ದಿವಂಗತ ನಟ ವಿಜಯಕಾಂತ್ ಸ್ಥಾಪಿಸಿದ ಡಿಎಂಡಿಕೆ ಈಗ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದು, ಎಐಎಡಿಎಂಕೆ ಮೈತ್ರಿಕೂಟದ ಭಾಗವಾಗಿರುವ ಈ ಪಕ್ಷವು ಹಳೆಯ ವರ್ಚಸ್ಸನ್ನು ಕಳೆದುಕೊಂಡಿದ್ದರೂ, ರಾಜ್ಯದ ಕೆಲವು ಭಾಗಗಳಲ್ಲಿ ಇನ್ನೂ ತನ್ನದೇ ಆದ ಸಣ್ಣ ಮತಬ್ಯಾಂಕ್ ಹೊಂದಿದೆ.

ಮಿತ್ರಪಕ್ಷಗಳ ತಂತ್ರಗಾರಿಕೆ

2016ರ ಚುನಾವಣೆಯಲ್ಲಿ ತೃತಿಯ ರಂಗ ಕೇವಲ 6% ಮತಗಳನ್ನು ಪಡೆದಿದ್ದರೂ, ಮತ ವಿಭಜನೆಯಾಗಿದ್ದರಿಂದ ಎಐಎಡಿಎಂಕೆ ಅಧಿಕಾರಕ್ಕೆ ಬರಲು ಸುಲಭವಾಯಿತು ಎನ್ನುವುದು ಅನೇಕ ರಾಜಕೀಯ ವಿಶ್ಲೇಷಕರ ಅಭಿಪ್ರಾಯ. 
ಡಿಎಂಕೆ ತಂತ್ರ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸುಮಾರು 20ಕ್ಕೂ ಹೆಚ್ಚು ಸಣ್ಣ ಪಾಲುದಾರರನ್ನು ಒಳಗೊಂಡ ಬೃಹತ್ ಮೈತ್ರಿಕೂಟ ರಚಿಸಿದ್ದು, ಸಣ್ಣ ಪಕ್ಷಗಳನ್ನು ತನ್ನ ಚಿಹ್ನೆಯಲ್ಲೇ ಸ್ಪರ್ಧಿಸುವಂತೆ ಮಾಡುವ ಮೂಲಕ ಬಿಗಿ ಹಿಡಿತ ಸಾಧಿಸಿದ್ದಾರೆ. ಇತ್ತ ಎಐಎಡಿಎಂಕೆ ಮತ್ತು ಬಿಜೆಪಿ ಒಳಗೊಂಡ ಎನ್‌ಡಿಎ ಕೂಡ ಪಿಎಂಕೆ ಮತ್ತು ಟಿಎಂಸಿಯಂತಹ ಜಾತಿ ಆಧಾರಿತ ಪಕ್ಷಗಳ ಮೇಲೆ ಅವಲಂಬಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ಮೂಲಕ ಡಿಎಂಕೆ ಪ್ರಾಬಲ್ಯವನ್ನು ಕುಗ್ಗಿಸಲು ಪ್ರಯತ್ನಿಸುತ್ತಿದ್ದಾರೆ. ಒಟ್ಟಾರೆಯಾಗಿ, ತಮಿಳುನಾಡಿನ ಈ ಬಾರಿಯ ಅಧಿಕಾರದ ಗದ್ದುಗೆಯನ್ನು ಏರುವಾಗ ಈ ಸಣ್ಣ ಪಕ್ಷಗಳು ಮೆಟ್ಟಿಲಾಗುತ್ತವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net