ಸತ್ತಿದ್ದು ನನ್ನ ಚಿಕ್ಕಪ್ಪ ಮಾತ್ರವಲ್ಲ...ಅಜಿತ್ ಪವಾರ್ ನಿಧನದ ಹಿಂದೆ ಪಿತೂರಿ ಶಂಕೆ ವ್ಯಕ್ತಪಡಿಸಿದ ರೋಹಿತ್! | Rohit Pawar

Rohit Pawar |  ಶಾಸಕ ರೋಹಿತ್ ಪವಾರ್
Rohit Pawar | ಶಾಸಕ ರೋಹಿತ್ ಪವಾರ್
Published on
ಮುಂಬೈ: ಇತ್ತೀಚಿನ ವಿಮಾನ ದುರಂತದಲ್ಲಿ ಕೊನೆಯುಸಿರೆಳೆದ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವಿನ ಕುರಿತಂತೆ ಅನುಮಾನ ವ್ಯಕ್ತಪಡಿಸಿರುವ ಅವರ ಸಂಬಂಧಿ ಮತ್ತು ಶಾಸಕ ರೋಹಿತ್ ಪವಾರ್ (Rohit Pawar), ವಾಯುಯಾನ ಅಧಿಕಾರಿಗಳ ಪಾತ್ರವನ್ನು ಪ್ರಶ್ನಿಸಿದ್ದಾರೆ.
ಮುಂಬೈನಲ್ಲಿ ಮಾತನಾಡಿದ ಶಾಸಕ ಪವಾರ್, ವಿಮಾನದ ಇಂಧನ ಟ್ಯಾಂಕ್ ತುಂಬಿತ್ತು ಎಂದು ವರದಿಗಳು ಹೇಳಿವೆ. ಹೀಗಿದ್ದಾಗ ಇಂಧನವನ್ನು ಸಾಗಿಸುವ ಕಾರ್ಯಾಚರಣೆಯ ಅವಶ್ಯಕತೆ ಇರಲಿಲ್ಲ, ಅಗತ್ಯವಿದ್ದರೆ ಹೈದರಾಬಾದ್‌ನಲ್ಲಿ ಇಂಧನ ತುಂಬಿಸಬಹುದಿತ್ತು ಎಂದರು.
ಕಳಪೆ ಗೋಚರತೆಯ ಹೊರತಾಗಿಯೂ ವಿಮಾನ ಕಾರ್ಯನಿರ್ವಹಿಸಿದ್ದು ಏಕೆ ಎಂಬುದರ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿರುವ ರೋಹಿತ್​, ಇಂತಹ ಪರಿಸ್ಥಿತಿಗಳಲ್ಲಿ ಹಾರಾಟ ನಡೆಸುವ ಅಗತ್ಯವಿರಲ್ಲ, ಪರ್ಯಾಯ ಲ್ಯಾಂಡಿಂಗ್ ಆಯ್ಕೆಗಳು ಸೀಮಿತವಾಗಿದ್ದು, ವಿಮಾನವು ಮುಂದುವರಿಯುವ ಬದಲು ಮುಂಬೈಗೆ ಹಿಂತಿರುಗಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಹೆಚ್ಚುವರಿ ಇಂಧನದೊಂದಿಗೆ ವಿಮಾನವನ್ನು ಉದ್ದೇಶಪೂರ್ವಕವಾಗಿ ಉರುಳಿಸಲಾಗಿದೆ ಎಂದು ಆರೋಪಿಸಿರುವ ಎನ್​ಸಿಪಿ ಶಾಸಕ, ಘಟನೆಯಲ್ಲಿ ಪೈಲಟ್​ನ್ನು ಬಳಸಿಕೊಂಡಿರಬಹುದು ಎಂದು ಹೇಳಿದರು.

ವಿಮಾನ ಯೋಜನೆ ಮತ್ತು ಗೋಚರತೆಯ ಕುರಿತು ಪ್ರಶ್ನೆಗಳು

ವಿಮಾನ ವೇಳಾಪಟ್ಟಿಯ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ (ಡಿಜಿಸಿಎ) ಮಾಹಿತಿ ನೀಡಲಾಗಿಲ್ಲ ಎಂದು ಆರೋಪಿಸಿರುವ ಪವಾರ್, 3,000 ಮೀಟರ್ ಗೋಚರತೆಯ ಪರಿಸ್ಥಿತಿಗಳಲ್ಲಿ ವಿಮಾನವು ಟೇಕ್ ಆಫ್ ಆಗುವ ಅಗತ್ಯವಿಲ್ಲ ಎಂದರು.
"ಗೋಪಿ" ಎಂಬ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿದ ಶಾಸಕ ರೋಹಿತ್​, ಅವರನ್ನು ವಿಎಸ್‌ಆರ್‌ಗೆ ಸಂಬಂಧಿಸಿದ ಹ್ಯಾಂಡ್ಲರ್ ಎಂದು ಕರೆದರು ಮತ್ತು ಈ ವ್ಯಕ್ತಿಯೇ ವಿಮಾನ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ತನಿಖಾ ಸಂಸ್ಥೆಗಳು ಭೌತಿಕ ದಾಖಲೆಗಳನ್ನು ಮಾತ್ರ ಅವಲಂಬಿಸುವ ಬದಲು ಇಮೇಲ್ ದಾಖಲೆಗಳನ್ನು ಪರಿಶೀಲಿಸಬೇಕೆಂದು ಪವಾರ್ ಒತ್ತಾಯಿಸಿದರು.

ಬ್ಲ್ಯಾಕ್​ ಬಾಕ್ಸ್

ವಿಮಾನದ ಬ್ಲ್ಯಾಕ್​ ಬಾಕ್ಸ್​ ನಾಶವಾಗಿದೆ ಎಂಬ ವರದಿಗಳ ಬಗ್ಗೆ ರೋಹಿತ್ ಪವಾರ್ ಅನುಮಾನ ವ್ಯಕ್ತಪಡಿಸಿದ್ದು, ಸುಮಾರು 1,100 ಡಿಗ್ರಿ ಸೆಲ್ಸಿಯಸ್ ತಾಪಮಾನ ಅಥವಾ ತೀವ್ರ ಒತ್ತಡಕ್ಕೆ ಒಡ್ಡಿಕೊಳ್ಳದ ಹೊರತು ಬ್ಲ್ಯಾಕ್​ ಬಾಕ್ಸ್​ ಹಾನಿಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ವಿಮಾನದ ರಚನೆಯು ಸುಮಾರು 635 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕರಗಬಹುದಾದರೂ, ಬ್ಲ್ಯಾಕ್​ ಬಾಕ್ಸ್​ನ್ನು ಎಂತಹ ಪರಿಸ್ಥಿತಿಗಳಲ್ಲೂ ಏನು ಹಾನಿಯಾಗದಂತೆ ವಿನ್ಯಾಸಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ವಿಮಾನವು 35 ಕೋಟಿ ರೂಪಾಯಿ ಮೌಲ್ಯದ್ದಾಗಿತ್ತು ಎಂದು ವರದಿಯಾಗಿದ್ದರೂ, ಪ್ರಸ್ತುತ ಅದರ ಮೌಲ್ಯ 10–15 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ, ಆದರೂ ಕೂಡ ಅದನ್ನು 210 ಕೋಟಿ ರೂಪಾಯಿಗಳಿಗೆ ವಿಮೆ ಮಾಡಲಾಗಿತ್ತು. ಮುಖ್ಯ ಪೈಲಟ್ ಭಾಗಿಯಾಗಿದ್ದಾರೆಯೇ ಮತ್ತು ಯಾವುದೇ ಆರ್ಥಿಕ ಉದ್ದೇಶವಿದೆಯೇ ಎಂದು ಪವಾರ್ ಪ್ರಶ್ನಿಸಿದರು.
ಲೇಯರ್‌ಜೆಟ್ ವಿಮಾನವನ್ನು ಭಾರತದಲ್ಲಿ ನೋಂದಾಯಿಸುವುದು ಬಹುಶಃ ಅಸಾಧ್ಯ, ಆದರೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಸಂಪರ್ಕಗಳ ಮೂಲಕ ನೋಂದಾಯಿಸಲಾಗಿದೆ ಮತ್ತು ವಿಐಪಿ ಬಳಕೆಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಪವಾರ್ ಆರೋಪಿಸಿದ್ದಾರೆ.
ವಿಮಾನವು 5,915 ಹಾರಾಟದ ಗಂಟೆಗಳನ್ನು ಪೂರ್ಣಗೊಳಿಸಿದೆ ಮತ್ತು ಕಡ್ಡಾಯ ಮಿತಿಗಳಿಗೆ ಇನ್ನೂ 85 ಗಂಟೆಗಳು ಮಾತ್ರ ಉಳಿದಿವೆ, ಆದರೆ ಮಿಷನ್​ 8,000 ಗಂಟೆಗಳ ಕಾರ್ಯಾಚರಣೆಯ ಅವಧಿಯನ್ನು ದಾಟಿದೆ ಎಂದು ಆರೋಪಿಸಿದ್ದು, ಇದು ಸುರಕ್ಷಿತ ಮಿತಿಗಳನ್ನು ಮೀರಿದೆ ಎಂದು ಹೇಳಿದರು.

ಕೇಂದ್ರ ಸಚಿವರ ರಾಜೀನಾಮೆಗೆ ಒತ್ತಾಯ

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡುರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಶಾಸಕ ಪವಾರ್ ಒತ್ತಾಯಿಸಿದ್ದು, ಸಚಿವರ ಮೇಲೆ ಯಾವುದೇ ನೇರ ಆರೋಪ ಮಾಡುತ್ತಿಲ್ಲ, ಆದರೆ ನಾಯ್ಡು ಮತ್ತು ವಿಎಸ್ಆರ್ ನಡುವೆ ನಿಕಟ ಸಂಬಂಧವಿದೆ ಎಂದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net