

ಇಟಲಿಯಿಂದ ಮರಳಿದ್ದ ಯುವತಿಯ ಮಹೀಂದ್ರಾ ಥಾರ್ ಕಾರು ಅಪಘಾತ.
LIC ನೌಕರ ಸಂತೋಷ್ ಸಿಂಗ್ ಚೌಹಾಣ್ ರಸ್ತೆ ಅಪಘಾತದಲ್ಲಿ ಸಾವು.
ನಾನು ಮದ್ಯ ಸೇವಿಸಿರಲಿಲ್ಲ, ಕಾರು ವೇಗವಾಗಿ ಚಲಾಯಿಸುತ್ತಿರಲಿಲ್ಲ ಎಂದ ಆರೋಪಿ.
ನೋಯ್ಡಾ: 'ರಸ್ತೆ ತುಂಬಾ ಗುಂಡಿಗಳಿತ್ತು. ಭಯಕ್ಕೆ ಆಕ್ಸಲೇಟರ್ ತುಳಿದು ಬಿಟ್ಟೆ. ನಾನು ಮದ್ಯದ ಅಮಲಿನಲ್ಲಿ ಇರಲಿಲ್ಲ. ವೇಗವಾಗಿ ಗಾಡಿ ಚಲಾಯಿಸಿದ್ದರೆ, ಏರ್ ಬ್ಯಾಗ್ ಓಪನ್ ಆಗಿರುತ್ತಿತ್ತು' ಹೀಗೆಂದು ಮಾತನಾಡಿದ್ದು, ಕಾರು ಅಪಘಾತದಿಂದ ಎಲ್‌ಐಸಿ ನೌಕರನ ಸಾವಿಗೆ ಕಾರಣರಾದ 24 ವರ್ಷದ ಯುವತಿ ಗೀತಾ ಸಚನ್,
ದೀಪಾವಳಿ ಹಬ್ಬಕ್ಕಾಗಿ ಇಟಲಿಯಿಂದ ತವರೂರು ಕಾನ್ಪುರಕ್ಕೆ ಬಂದಿದ್ದ 24 ವರ್ಷದ ಯುವತಿ ಗೀತಾ ಸಚನ್, ಮಹೀಂದ್ರಾ ಥಾರ್ ಎಸ್‌ಯುವಿ ಕಾರಿನಲ್ಲಿ ಮನೆಗೆ ಮರಳುತ್ತಿದ್ದ ವೇಳೆ.. ಕಲ್ಯಾಣಪುರ ಪ್ರದೇಶದಲ್ಲಿ 55 ವರ್ಷದ ಎಲ್‌ಐಸಿ ನೌಕರ ಸಂತೋಷ್ ಸಿಂಗ್ ಚೌಹಾಣ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅವರನ್ನು ಸುಮಾರು 20 ಮೀಟರ್‌ಗಳವರೆಗೆ ಎಳೆದೊಯ್ದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದ ಘಟನೆ ಬೆಳಕಿಗೆ ಬಂದಿತ್ತು. ಸದ್ಯ ಈ ಬಗ್ಗೆ ಆರೋಪಿ ಮಾತನಾಡಿದ್ದಾರೆ.
'ರಸ್ತೆ ಪೂರ್ತಿ ಗುಂಡಿಗಳಿದ್ದವು. ನಾವು ಸಾಮಾನ್ಯವಾಗಿ ಆ ಮಾರ್ಗದಲ್ಲಿ ಹೋಗುವುದನ್ನು ತಪ್ಪಿಸುತ್ತೇವೆ. ನಾನು ಕಾರು ಚಲಾಯಿಸುತ್ತಿದ್ದಾಗ, ಎಡಭಾಗದಿಂದ ಯಾರೋ ಬರುವುದನ್ನು ಕಂಡು ನಾನು ಗಾಬಗೊಂಡು ಬಲಕ್ಕೆ ತಿರುಗಿಸಿದೆ. ನಾನು ಆ ರೀತಿ ತಿರುಗಿಸಿದಾಗ, ಆ ದಿಕ್ಕಿನಲ್ಲಿ ಇಬ್ಬರು ಮಹಿಳೆಯರು ಪ್ರಯಾಣಿಸುತ್ತಿದ್ದರು. ಅವರನ್ನು ತಪ್ಪಿಸಲು ನಾನು ಮತ್ತೆ ಎಡಕ್ಕೆ ತಿರುಗಿಸಿದೆ, ಆದರೆ ಅಷ್ಟರೊಳಗೆ ಮೃತ ಎಲ್‌ಐಸಿ ನೌಕರ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ' ಎಂದು ಆಕೆ ಹೇಳಿಕೊಂಡಿದ್ದಾಳೆ.
ಗಾಬರಿಯಲ್ಲಿ ನಾನು ಬ್ರೇಕ್ ಬದಲಿಗೆ ಆಕ್ಸಿಲರೇಟರ್ ಒತ್ತಿದೆ. ನನ್ನ ಕಾರು ಅವರಿಗೆ ಗುದ್ದಿ, ನಂತರ ಬೇರೆ ಯಾವುದೋ ವಸ್ತುವಿಗೆ ಡಿಕ್ಕಿ ಹೊಡೆಯಿತು. ನಾನು ಮದ್ಯದ ಅಮಲಿನಲ್ಲಿ ಇರಲಿಲ್ಲ. ಅಕಸ್ಮಾತ್ ನಾನು ವೇಗವಾಗಿ ಗಾಡಿ ಚಲಾಯಿಸುತ್ತಿದ್ದರೆ ಕಾರಿನ ಏರ್ ಬ್ಯಾಗ್ ತೆರದುಕೊಳ್ಳುತ್ತಿತ್ತು .ಆದರೆ ಅವು ತೆರೆದುಕೊಂಡಿಲ್ಲ, ಏಕೆಂದರೆ ಕಾರು ವೇಗವಾಗಿ ಚಲಿಸುತ್ತಿರಲಿಲ್ಲ ಎಂದು ಆಕೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಮೃತ ಸಂತೋಷ್ ಸಿಂಗ್ ಚೌಹಾಣ್ ಅವರು ತಮ್ಮ ಪತ್ನಿಗೆ ಸೀರೆ ಖರೀದಿಸಲು ತೆರಳಿ ವಾಪಸ್ ಮನೆಗೆ ಬರುತ್ತಿದ್ದರು. ಅವರು ತಮ್ಮ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿದ್ದಾಗ ಥಾರ್ ಎಸ್‌ಯುವಿ ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಸಂತೋಷ್ ಸಿಂಗ್ ಚೌಹಾಣ್ ಹಾಗೂ ಅವರ ಸ್ಕೂಟರ್ ಸುಮಾರು 20 ಮೀಟರ್‌ಗಳವರೆಗೆ ಎಳೆದುಕೊಂಡು ಹೋಗಿ, ಪ್ರೊಫೆಸರ್ ಕೈಲಾಶ್ ಅವರ ಮನೆಯ ಮೇಲೆ ಹಾಗೂ ಅನಿತಾ ಮಹೇವನ್ ಎಂಬವರ ಮನೆಯ ಗಡಿ ಗೋಡೆ ಡಿಕ್ಕಿ ಹೊಡೆದು ನಿಂತಿತ್ತು ಎನ್ನಲಾಗಿದೆ.
ಆರೋಪಿಯ ಪರ ವಕೀಲ ಅಡ್ವೋಕೇಟ್ ಅನಂತ್ ಕುಮಾರ್ ಶರ್ಮಾ ಮಾತನಾಡಿ, ಇದು ಕೇವಲ ಒಂದು ಅಪಘಾತ. ತಮ್ಮ ಕಕ್ಷಿದಾರರಿಗೆ ಯಾರನ್ನೂ ಕೊಲ್ಲುವ ಯಾವುದೇ ಉದ್ದೇಶವಿರಲಿಲ್ಲ. ಆರೋಪಿಗೆ ಮೃತರಾಗಲಿ ಅಥವಾ ಅವರ ಸಂಬಂಧಿಕರಾಗಲಿ ಯಾರೂ ಪರಿಚಯವಿರಲಿಲ್ಲ. ರಸ್ತೆಗಳಲ್ಲಿ ಗುಂಡಿಗಳಿರುವುದು ಮತ್ತು ಸರಿಯಾದ ಬೀದಿ ದೀಪಗಳಿಲ್ಲದಿರುವ ಕಾರಣದಿಂದ ಈ ಅಪಘಾತ ಸಂಭವಿಸಿದೆ. ಪೊಲೀಸರು ತಪ್ಪು ಸೆಕ್ಷನ್‌ಗಳನ್ನು ಹಾಕಿದ್ದರು. ಹೀಗಾಗಿ ರಿಮಾಂಡ್ ಅರ್ಜಿಯನ್ನು ತಿರಸ್ಕರಿಸಲಾಗಿದ್ದು, 25,000 ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಮುಚ್ಚಳಿಕೆಯ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ" ಎಂದು ವಕೀಲರು ತಿಳಿಸಿದ್ದಾರೆ, (ಏಜೆನ್ಸೀಸ್).