ಲಾಲೂ 'ಪರಿ-ವಾರ್​'! ; ರಾಜಕೀಯ ಮತ್ತು ಕುಟುಂಬದಿಂದ ದೂರ ಉಳಿಯುತ್ತೇನೆ ಎಂದ ಪುತ್ರಿ ರೋಹಿಣಿ, ಕಾರಣವೇನು..? | Rohini Acharya

Rohini Acharya | ಲಾಲು ಯಾದವ್​ ಮತ್ತು ಪುತ್ರಿ ರೋಹಿಣಿ ಆಚಾರ್ಯ (ಸಂಗ್ರಹ ಚಿತ್ರ)
Rohini Acharya | ಲಾಲು ಯಾದವ್​ ಮತ್ತು ಪುತ್ರಿ ರೋಹಿಣಿ ಆಚಾರ್ಯ (ಸಂಗ್ರಹ ಚಿತ್ರ)
Published on
ಪಟನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ಲಾಲು ಯಾದವ್ ಪುತ್ರಿ ರೋಹಿಣಿ ಆಚಾರ್ಯ, ರಾಜಕೀಯದಿಂದ ದೂರ ಉಳಿದು, ಕುಟುಂಬದೊಂದಿಗೂ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಶನಿವಾರ ( ನವೆಂಬರ್​ 15) ತಿಳಿಸಿದ್ದಾರೆ. 
ತಮ್ಮ ಎಕ್ಸ್​​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರೋಹಿಣಿ ಆಚಾರ್ಯ, ನಾನು ರಾಜಕೀಯವನ್ನು ತೊರೆಯುತ್ತಿದ್ದೇನೆ ಮತ್ತು ನನ್ನ ಕುಟುಂಬವನ್ನು ತ್ಯಜಿಸುತ್ತಿದ್ದೇನೆ. ಸಂಜಯ್ ಯಾದವ್ ಮತ್ತು ರಮೀಜ್ ನನ್ನನ್ನು ಕೇಳಿಕೊಂಡಿದ್ದು ಇದನ್ನೇ, ಈಗ ನಾನು ಎಲ್ಲಾ ಆಪಾದನೆಯನ್ನು ಹೊರುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿರುವ ರೋಹಿಣಿ ಆಚಾರ್ಯ, 2024 ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಸರನ್ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ರಾಜೀವ್ ಪ್ರತಾಪ್ ರೂಡಿ ವಿರುದ್ಧ ಸೋಲನುಭವಿಸಿದರು. ಬಿಹಾರ ಚುನಾವಣೆಗೆ ಕೆಲ ದಿನಗಳ ಮೊದಲು ರೋಹಿಣಿ, ತಂದೆ ಲಾಲು ಯಾದವ್ ಮತ್ತು ಸಹೋದರ ತೇಜಸ್ವಿ ಯಾದವ್ ಅವರನ್ನು ತಮ್ಮ ಎಕ್ಸ್​ ಖಾತೆಯಿಂದ ಅನ್‌ಫಾಲೋ ಮಾಡಿದ್ದರು.
2022 ರಲ್ಲಿ ರೋಹಿಣಿ ಆಚಾರ್ಯ ತಮ್ಮ ತಂದೆಗೆ ಮೂತ್ರಪಿಂಡ ದಾನ ಮಾಡಿದ್ದಾರೆ ಎಂದು ಸಾಕಷ್ಟು ಸುದ್ದಿಯಾಗಿತ್ತು. ಅವರು ಆ ರೀತಿ ಮಾಡಿಲ್ಲ ಎನ್ನುವ ವದಂತಿಗಳು ಕೂಡ ಹಬ್ಬಿದ್ದವು. ಇದಕ್ಕೆ ಅವರ ಸಹೋದರ ತೇಜಸ್ವಿ ಆಪ್ತ ಸಂಜಯ್​ ಸಿಂಗ್​ ಕಾರಣ ಎನ್ನುವುದು ಲಾಲೂ ಪುತ್ರಿಯ ಆರೋಪ.
ಬಿಹಾರ ಅಧಿಕಾರ ಯಾತ್ರೆಯ ಸಂದರ್ಭದಲ್ಲಿ ಸಂಜಯ್ ಯಾದವ್ ಪಕ್ಷದಲ್ಲಿ ಅತಿಕ್ರಮಣ ನಡೆಸಿದ್ದಾರೆ ಎಂದು ಆರೋಪಿಸಿ, ರೋಹಿಣಿ ಆಚಾರ್ಯ ಪರೋಕ್ಷ ವಾಗ್ದಾಳಿ ನಡೆಸಿದ್ದರು, ಆರ್‌ಜೆಡಿ ಬಸ್‌ನ ಮುಂದಿನ ಸೀಟಿನಲ್ಲಿ ಸಂಜಯ್ ಯಾದವ್ ಕುಳಿತಿರುವ ಫೋಟೋಗೆ ರೋಹಿಣಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ ವೈಯಕ್ತಿಕ ಹಗರಣವೊಂದರಲ್ಲಿ ಲಾಲೂ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್​​ರನ್ನು ಆರ್‌ಜೆಡಿಯಿಂದ ಉಚ್ಛಾಟಿಸಿದ ಬಳಿಕ ಕುಟುಂಬದಲ್ಲಿನ ಒಡಕಾಗಿದ್ದು, ಸದ್ಯ ರೋಹಿಣಿ ಆಚಾರ್ಯರ ಈ ನಿರ್ಧಾರ ಅದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ. ತೇಜಸ್ವಿ ಆಪ್ತ, ರಾಜ್ಯಸಭಾ ಸಂಸದ ಸಂಜಯ್ ಯಾದವ್​​ರ ಈ ಅತಿರೇಕದ ವರ್ತನೆಯಿಂದ ಭುಗಿಲೆದ್ದ ಈ ಅಸಮಧಾನದ ಕಿಡಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಿಸಿದೆ.

ಸಂಜಯ್ ಯಾದವ್ ವಿರುದ್ಧ ರೋಹಿಣಿ ಆಚಾರ್ಯ ವಾಗ್ದಾಳಿ

ಲಾಲು ಯಾದವ್ ಕುಟುಂಬದಲ್ಲಿ ಸಂಜಯ್ ಕುರಿತಾದ ಅಸಮಾಧಾನ ಹೆಚ್ಚಾಗುತ್ತಿದ್ದು, ಇತ್ತೀಚಿನ ಆರ್‌ಜೆಡಿಯ ಟಿಕೆಟ್ ಹಂಚಿಕೆ ಮತ್ತು ಆಂತರಿಕ ನಿರ್ಧಾರಗಳಲ್ಲಿ ಸಂಜಯ್ ಹಸ್ತಕ್ಷೇಪ ಹೆಚ್ಚುತ್ತಿದೆ ಎಂದು ಅನೇಕರು ಆರೋಪಿಸುತ್ತಲೇ ಇದ್ದಾರೆ. ಈಗಾಗಲೇ ಪಕ್ಷದಿಂದ ಹೊರಹಾಕಲ್ಪಟ್ಟ ತೇಜ್, ಕುಟುಂಬ ಮತ್ತು ಆರ್‌ಜೆಡಿಯಿಂದ ದೂರವಾಗಲು ಸಂಜಯ್ ಕಾರಣ ಎಂದಿದ್ದಾರೆ. 
ಬಿಜೆಪಿ ಪ್ರತಿಕ್ರಿಯೆ... 
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ತೇಜಸ್ವಿ ಯಾದವ್ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ತಮ್ಮ ಮಗಳು ಮತ್ತು ಹಿರಿಯ ಮಗನೊಂದಿಗಿನ ಸಂಬಂಧವನ್ನೇ ತ್ಯಾಗ ಮಾಡಿದೆ ಎಂದು ಲೇವಡಿ ಮಾಡಿದೆ. ಲಾಲು ಯಾದವ್‌ಗೆ ತನ್ನ ಮೂತ್ರಪಿಂಡವನ್ನೇ ದಾನ ಮಾಡಿ, ಅವರ ಜೀವವನ್ನು ಉಳಿಸಿದ ಮಗಳನ್ನು ಈಗ ಕುಟುಂಬ ಮತ್ತು ಪಕ್ಷ ಎರಡರಿಂದಲೂ ಹೊರ ಹಾಕಲಾಗಿದೆ. ಇಂದು ಅವರು( ರೋಹಿಣಿ) ಎಷ್ಟು ನೋವನ್ನು ಅನುಭವಿಸುತ್ತಿರಬಹುದು..? ಸಹೋದರನನ್ನು ಹೊರಹಾಕಿದ ಬಳಿಕ, ಈಗ ಸಹೋದರಿಗೂ ಅದೇ ಪರಿಸ್ಥಿತಿ ಎದುರಾಗಿದೆ ಎಂದು ಬಿಹಾರ ಬಿಜೆಪಿ ನಾಯಕ ನೀರಜ್ ಕುಮಾರ್ ಆರೋಪಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net