ಬಿಹಾರದಲ್ಲಿ ಆರ್​ಜೆಡಿ-ಕಾಂಗ್ರೆಸ್ ಸೋಲು: ಬಿಜೆಪಿ, ಚುನಾವಣೆ ಆಯೋಗದ ಪಿತೂರಿ ಎಂದ ಅಶೋಕ್ ಗೆಹ್ಲೋಟ್

ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್
ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್
Published on

ಪ್ರಮುಖ ಮುಖ್ಯಾಂಶಗಳು

  • ಬಿಹಾರ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ ಭರ್ಜರಿ ಗೆಲುವು
  • ಬಿಜೆಪಿ ಮತ್ತು ಚುನಾವಣೆ ಆಯೋಗ ಪಿತೂರಿ ಎಂದು ಗೆಹ್ಲೋಟ್ ಆರೋಪ
  • ಮತದಾನದವರೆಗೂ ಮಹಿಳೆಯರಿಗೆ ತಲಾ 10,000 ಸಾವಿರ ನಗದು ಪಾವತಿ
ಜೈಪುರ: ಬಿಹಾರ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ್ದು, ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ(RJD-Congress) ಹೀನಾಯವಾಗಿ ಸೋಲನ್ನು ಅನುಭವಿಸಿದೆ. ಇದು ಬಿಜೆಪಿ ಮತ್ತು ಚುನಾವಣೆ ಆಯೋಗ ಪಿತೂರಿ ಎಂದು ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.
ಜೈಪುರದಲ್ಲಿ ಈ ಕುರಿತು ಮಾತನಾಡಿರುವ ಅವರು, ಬಿಹಾರ ಚುನಾವಣೆ ಫಲಿತಾಂಶ ನಿರಾಶೆ ತಂದಿದೆ. ಆದರೆ ಬಿಹಾರದ ಚುನಾವಣಾ ಪ್ರಚಾರದಲ್ಲಿ ಮಾದರಿ ನೀತಿ ಸಂಹಿತೆಯ ಹೊರತಾಗಿಯೂ ಮತದಾನದವರೆಗೂ ಮಹಿಳೆಯರ ಖಾತೆಗಳಿಗೆ ತಲಾ 10,000 ಸಾವಿರ ನಗದು ಪಾವತಿ, ಪಿಂಚಣಿ ಸೇರಿ ಹಲವು ಸವಲತ್ತುಗಳನ್ನು ನಿರಂತರವಾಗಿ ವಿತರಿಸಲಾಗುತ್ತಿತ್ತು. ಇದನ್ನೇ ರಾಹುಲ್ ಗಾಂಧಿ ಮತಗಳ್ಳತ ಎನ್ನುವುದು ಎಂದಿದ್ದಾರೆ.
2023ರಲ್ಲಿ ನಡೆದ ರಾಜಸ್ಥಾನ ವಿಧಾನಸಭೆ ಚುನಾವಣೆ ಸಮಯದಲ್ಲಿ ನೀತಿ ಸಂಹಿತೆ ಜಾರಿಗೆ ಬಂದ ಕ್ಷಣದಿಂದಲೇ ಒಂದು ಯೋಜನೆಯಡಿ ಮೊಬೈಲ್ ಫೋನ್‌ಗಳ ವಿತರಣೆ ಮತ್ತು ಪಿಂಚಣಿ ವಿತರಣೆಯನ್ನು ನಿಲ್ಲಿಸಲಾಯಿತು. ಆದರೆ ಬಿಹಾರದಲ್ಲಿ ಚುನಾವಣೆ ಆಯೋಗ ಮೂಕ ಪ್ರೇಕ್ಷಕನಾಗಿತ್ತು. ಮಧ್ಯ ಪ್ರವೇಶ ಮಾಡಿ ಅದನ್ನು ನಿಲ್ಲಿಸಲಿಲ್ಲ. ಆಡಳಿತ ಪಕ್ಷದೊಂದಿಗೆ ಅದು ಒಪ್ಪಂದ ಮಾಡಿಕೊಂಡಿತ್ತು ಎಂದು ಹೇಳಿದ್ದಾರೆ.
ಕಾಂಗ್ರೆಸ್-ಆರ್​ಜೆಡಿ ಬಳಿ ಹಣವಿಲ್ಲ. ಆದರೆ ಬಿಜೆಪಿ ಚುನಾವಣಾ ಬಾಂಡ್ ಮೂಲಕ ಸಾಕಷ್ಟು ಹಣವನ್ನು ಸಂಗ್ರಹಿಸಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯವನ್ನುಂಟು ಮಾಡಿದೆ. ರಾಷ್ಟ್ರದ ಒಳತಿಗಾಗಿ ಕಾಂಗ್ರೆಸ್ ಅಗತ್ಯವಿದೆ. ಅದರ ಸಿದ್ದಾಂತ ಅಗತ್ಯವಿದೆ ಎಂದು ತಿಳಿಸಿದ್ದಾರೆ, (ಏಜೆನ್ಸಿಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net