ಜನರಲ್ಲಿ ಜಂಗಲ್​ ರಾಜ್​ ಆತಂಕ ಇರುವವರೆಗೆ ಆರ್​ಜೆಡಿ ಅಧಿಕಾರಕ್ಕೆ ಬರಲ್ಲ : ಪ್ರಶಾಂತ್​ ಕಿಶೋರ್​ | Prashant Kishor

Prashant Kishor | ಪ್ರಶಾಂತ್​​ ಕಿಶೋರ್​ ( ಚಿತ್ರಕೃಪೆ ಪಿಟಿಐ)
Prashant Kishor | ಪ್ರಶಾಂತ್​​ ಕಿಶೋರ್​ ( ಚಿತ್ರಕೃಪೆ ಪಿಟಿಐ)
Published on
ಪಟನಾ: ಬಿಹಾರದ ಜನರಲ್ಲಿ ಜಂಗಲ್​ ರಾಜ್​ ಆತಂಕ ಇರುವವರೆಗೆ ಆರ್‌ಜೆಡಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಜನ್​ ಸುರಾಜ್​ ಪಕ್ಷದ ಮುಖ್ಯಸ್ಥ ಪ್ರಶಾಂತ್​​ ಕಿಶೋರ್​ ಭವಿಷ್ಯ ನುಡಿದಿದ್ದಾರೆ.
ಎನ್​ಡಿಟಿವಿಯೊಂದಿಗೆ ಮಾತನಾಡಿದ ಪ್ರಶಾಂತ್​, ಆರ್​ಜೆಡಿ ಈ ಚುನಾವಣೆಯಲ್ಲಿ ಕೇವಲ 25-35 ಸ್ಥಾನಗಳನ್ನು ಗೆಲ್ಲಬಹುದು ಎಂದು ನಾನು ಮೊದಲೇ ಹೇಳಿದ್ದೆ. ಕಾರಣ ಆರ್‌ಜೆಡಿಯ ಪ್ರಮುಖ ವೋಟ್​ ಬ್ಯಾಂಕ್​ ಎಂದರೆ ಅದು ಮುಸ್ಲಿಂ ಮತ್ತು ಯಾದವ್, ಅದನ್ನು ಬಿಟ್ಟರೆ ಅವರಿಗೆ ರಾಜ್ಯದಲ್ಲಿ ಹೆಚ್ಚಿನದನ್ನು ಪಡೆಯಲು ಸಾಧ್ಯವಿಲ್ಲ ಎಂದರು.
ಆರ್​ಜೆಡಿ ಕಳೆದ ಬಾರಿ ಅವರು 75 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಚಿರಾಗ್ ಪಾಸ್ವಾನ್​​ರ ಬಂಡಾಯದ ಕಾರಣದಿಂದಾಗಿ. 2020 ರ ಚುನಾವಣೆಯಲ್ಲಿ ಚಿರಾಗ್ ಪಾಸ್ವಾನ್ ಜೆಡಿಯು ಅಭ್ಯರ್ಥಿಗಳ ವಿರುದ್ಧ ತಮ್ಮ ಅಭ್ಯರ್ಥಿಗಳನ್ನು ಹೂಡಿದ್ದರಿಂದ, ಮತ ವಿಭಜನೆಯಾಗಿ ಅದು ತೇಜಸ್ವಿ ಪಕ್ಷಕ್ಕೆ ನೇರ ಲಾಭ ತಂದಿತ್ತು. ಒಂದೆರಡು ಚುನಾವಣೆಯನ್ನು ಬದಿಗಿಟ್ಟು ನೋಡುವುದಾದರೆ 2010 ರಿಂದ ಆರ್‌ಜೆಡಿ 25 ರಿಂದ 35 ಸ್ಥಾನಗಳಿಗೆ ಸೀಮಿತವಾಗಿದೆ ಎಂದರು.
ಮುಂಬರುವ ವರ್ಷಗಳಲ್ಲಿ ಆರ್‌ಜೆಡಿ ಮತ್ತೆ ಅಧಿಕಾರಕ್ಕೆ ಬರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಪಿಕೆ, ಜಂಗಲ್​ ರಾಜ್​ ಭಯ ಇರುವವರೆಗೆ, ಆ ಪಕ್ಷಕ್ಕೆ ಆ ಟ್ಯಾಗ್​ ಅಂಟಿಕೊಂಡಿರುವವರೆಗೆ ಅಧಿಕಾರಕ್ಕೆ ಬರುವುದು ತುಂಬಾ ಕಷ್ಟ. ಚುನಾವಣೆಯ ಸಮಯದಲ್ಲಿ ಆಡಳಿತರೂಢ ಸರ್ಕಾರದ ವಿರುದ್ಧ ಎಷ್ಟೆ ವಿರೋಧಿ ಅಲೆ ಇದ್ದರೂ ಜಂಗಲ್​ ರಾಜ್​ ಆತಂಕ ಅದನ್ನೆಲ್ಲಾ ತೊಡೆದುಹಾಕುತ್ತದೆ ಎಂದು ಹೇಳಿದರು.

ಬಿಹಾರ ಗೆಲ್ಲುವವರೆಗೂ ವಿಶ್ರಮಿಸುವುದಿಲ್ಲ

ನಾನು ಬಿಹಾರದಲ್ಲಿ ಏನನ್ನಾದರೂ ಸಾಧಿಸಿದ್ದರೆ, ಇಲ್ಲಿಂದ ಬೇರೆಡೆಗೆ ಹೋಗಲು ಚಿಂತನೆ ನಡೆಸಿದ್ದೆ. ಆದರೆ ಇಲ್ಲಿನ ಯುದ್ಧವನ್ನು ಗೆಲ್ಲಲು ಸಾಧ್ಯವಾಗದ ಕಾರಣ, ನನ್ನ ಸಂಪೂರ್ಣ ಗಮನವನ್ನು ರಾಜ್ಯದ ಮೇಲೆ ಹರಿಸಲಿದ್ದೇನೆ. ಕಳೆದ ಮೂರುವರೆ ವರ್ಷಗಳಿಂದ ಇಲ್ಲಿನ ರಾಜಕೀಯದಲ್ಲಿ ತೊಡಗಿಸಿಕೊಂಡಿರುವಂತೆಯೇ, ಭವಿಷ್ಯದಲ್ಲಿಯೂ ನಾನು ಅದನ್ನು ಮುಂದುವರಿಸುತ್ತೇನೆ. ಬಿಹಾರವನ್ನು ಗೆಲ್ಲದೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಪಕ್ಷ ನಡೆಸಲು ಅಗತ್ಯವಿದ್ದರೆ ಸಾರ್ವಜನಿಕರಿಂದ ಹಣ ಕೇಳುತ್ತೇವೆ. ಇದು ಇಲ್ಲಿಯವರೆಗೆ ಕೆಲಸ ಮಾಡುತ್ತಿದೆ ಮತ್ತು ಭವಿಷ್ಯದಲ್ಲಿಯೂ ಅದು ಹಾಗೆಯೇ ಮುಂದುವರಿಯುತ್ತದೆ. ನಮ್ಮಲ್ಲಿ ಹಣವಿಲ್ಲದಿದ್ದರೆ, ನಾವು ಕಡಿಮೆ ಹಣದೊಂದಿಗೆ ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಆದರೆ ನಾವು ಬಿಹಾರದ ಜನರನ್ನು ಕೈಬಿಡುವುದಿಲ್ಲ ಎಂದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net