ಎಐ ಆಧಾರಿತ ಹ್ಯಾಕಿಂಗ್ ಹೆಚ್ಚಳ: ವೆಬ್​ಸೈಟ್​ಗಳ ಭದ್ರತೆಗೆ ಬೆದರಿಕೆ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಸೈಬರ್ ಅಪರಾಧಿಗಳು ದುರುಪಯೋಗಪಡಿಸಿಕೊಳ್ಳುತ್ತಿರುವುದು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ. ಹಿಂದೆ ಸೈಬರ್ ದಾಳಿ ನಡೆಸಲು ತಾಂತ್ರಿಕ ಪರಿಣತಿ ಮತ್ತು ಹೆಚ್ಚಿನ ಸಮಯ ಅಗತ್ಯವಿತ್ತು. ಈಗ ಎಐ ಬಳಸಿ ಆ ಕೃತ್ಯವನ್ನು ಕೆಲವೇ ನಿಮಿಷಗಳಲ್ಲಿ ಮಾಡಬಹುದು! ಬ್ಯಾಂಕ್​ಗಳ ಗ್ರಾಹಕರ ಮಾಹಿತಿ ಕಳವು, ವೆಬ್​ಸೈಟ್​ಗಳ ಭದ್ರತಾ ಲೋಪಗಳ ದುರ್ಬಳಕೆ, ನಕಲಿ ಸಂದೇಶಗಳ ಮೂಲಕ ವಂಚನೆ ಸೇರಿದಂತೆ ಹಲವು ಅಪರಾಧಗಳಿಗೆ ಎಐ ಬಳಕೆ ಹೆಚ್ಚಾಗುತ್ತಿದೆ.
ಎಐ ಆಧಾರಿತ ಹ್ಯಾಕಿಂಗ್ ಹೆಚ್ಚಳ: ವೆಬ್​ಸೈಟ್​ಗಳ ಭದ್ರತೆಗೆ ಬೆದರಿಕೆ
WEB
Published on: 

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಸೈಬರ್ ಅಪರಾಧಿಗಳು ದುರುಪಯೋಗಪಡಿಸಿಕೊಳ್ಳುತ್ತಿರುವುದು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ. ಹಿಂದೆ ಸೈಬರ್ ದಾಳಿ ನಡೆಸಲು ತಾಂತ್ರಿಕ ಪರಿಣತಿ ಮತ್ತು ಹೆಚ್ಚಿನ ಸಮಯ ಅಗತ್ಯವಿತ್ತು. ಈಗ ಎಐ ಬಳಸಿ ಆ ಕೃತ್ಯವನ್ನು ಕೆಲವೇ ನಿಮಿಷಗಳಲ್ಲಿ ಮಾಡಬಹುದು! ಬ್ಯಾಂಕ್​ಗಳ ಗ್ರಾಹಕರ ಮಾಹಿತಿ ಕಳವು, ವೆಬ್​ಸೈಟ್​ಗಳ ಭದ್ರತಾ ಲೋಪಗಳ ದುರ್ಬಳಕೆ, ನಕಲಿ ಸಂದೇಶಗಳ ಮೂಲಕ ವಂಚನೆ ಸೇರಿದಂತೆ ಹಲವು ಅಪರಾಧಗಳಿಗೆ ಎಐ ಬಳಕೆ ಹೆಚ್ಚಾಗುತ್ತಿದೆ.

ಇಂಟರ್​ನೆಟ್ ಬಳಕೆ ಹೆಚ್ಚಾದಂತೆ ಬ್ಯಾಂಕ್ ಖಾತೆ, ವೈಯಕ್ತಿಕ ವಿವರ, ಹಣಕಾಸಿನ ವಹಿವಾಟು ಸೇರಿದಂತೆ ನಮ್ಮ ಬದುಕಿನ ಬಹುತೇಕ ಎಲ್ಲ ಮಾಹಿತಿಯೂ ಡಿಜಿಟಲ್ ವ್ಯವಸ್ಥೆಯನ್ನು ಅವಲಂಬಿಸಿದೆ. ಇದರಿಂದ ಅನುಕೂಲ ಹೆಚ್ಚಿದೆಯಾದರೂ, ಮಾಹಿತಿ ಕಳವು ಮತ್ತು ಆನ್​ಲೈನ್ ವಂಚನೆಯ ಅಪಾಯವೂ ಹೆಚ್ಚಿದೆ. ಈಗ ಈ ಅಪಾಯಕ್ಕೆ ಕೃತಕ ಬುದ್ಧಿಮತ್ತೆ ಹೊಸ ಆಯಾಮ ನೀಡಿದೆ. ಹ್ಯಾಕರ್​ಗಳು ಎಐ ನೆರವಿನಿಂದ ಕಂಪ್ಯೂಟರ್ ವ್ಯವಸ್ಥೆಗಳಲ್ಲಿನ ಲೋಪಗಳನ್ನು ಪತ್ತೆ ಹಚ್ಚುವುದು, ದಾಳಿ ನಡೆಸಲು ಬೇಕಾದ ತಂತ್ರಾಂಶ ರೂಪಿಸುವುದು ಮತ್ತು ಕದ್ದ ಮಾಹಿತಿ ವಿಶ್ಲೇಷಿಸುವುದನ್ನು ವೇಗವಾಗಿ ಮಾಡುತ್ತಿದ್ದಾರೆ. ಇತ್ತೀಚೆಗೆ ದಕ್ಷಿಣ ಕೊರಿಯಾದ ಹಲವು ಹಣಕಾಸು ಸಂಸ್ಥೆಗಳ ಮೇಲೆ ನಡೆದ ಸೈಬರ್ ದಾಳಿಗಳಲ್ಲಿ ಎಐ ಆಧಾರಿತ ಸಾಧನ ಬಳಸಿರುವುದನ್ನು ಅಮೆರಿಕದ ಸೈಬರ್ ಭದ್ರತಾ ಸಂಸ್ಥೆ ಕ್ಲೌಡ್​ಸ್ಟ್ರೈಕ್ ಪತ್ತೆ ಹಚ್ಚಿದೆ. ಆರ್ಟೆಕ್ಸ್ ಎಂಬ ಎಐ ಸಾಧನದ ನೆರವಿನಿಂದ ದಾಳಿಕೋರರು ಹಲವು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಭಾರತೀಯ ಬ್ಯಾಂಕ್​ಗಳ ಗ್ರಾಹಕರ ಮಾಹಿತಿ ಕಳವು ಮತ್ತು ಡಿಜಿಟಲ್ ಪ್ರಮಾಣಪತ್ರ ಸೇವೆಗಳ ಮೇಲಿನ ದಾಳಿಗಳೂ ಸೈಬರ್ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಎಐ ತಂತ್ರಜ್ಞಾನವನ್ನು ರಕ್ಷಣೆಗಾಗಿ ಬಳಸುವಷ್ಟೇ ಸುಲಭವಾಗಿ ಅಪರಾಧಗಳಿಗೂ ಬಳಸಲಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಸಂಸ್ಥೆಗಳು ಮತ್ತು ಸಾರ್ವಜನಿಕರು ಯಾವ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿಯುವುದು ಅತ್ಯಗತ್ಯವಾಗಿದೆ.

ಅನನುಭವಿಗಳಿಗೂ ಸುಲಭವಾಗುತ್ತಿರುವ ದಾಳಿ

ಈ ಹಿಂದೆ ಸಂಕೀರ್ಣ ಸೈಬರ್ ದಾಳಿ ನಡೆಸಲು ಪೋ›ಗ್ರಾಮಿಂಗ್, ಕಂಪ್ಯೂಟರ್ ಜಾಲಗಳ ಕಾರ್ಯವಿಧಾನ ಮತ್ತು ಭದ್ರತಾ ವ್ಯವಸ್ಥೆಗಳ ಬಗ್ಗೆ ಆಳವಾದ ಜ್ಞಾನ ಅಗತ್ಯವಿತ್ತು. ಆದರೆ ಈಗ ಕೆಲವು ಎಐ ಸಾಧನಗಳು ತಾಂತ್ರಿಕ ಕೆಲಸಗಳ ಹಲವು ಹಂತಗಳನ್ನು ಸರಳಗೊಳಿಸುತ್ತಿವೆ. ಇದರಿಂದ ಅನುಭವಿ ಹ್ಯಾಕರ್​​​ಗಳ ಸಾಮರ್ಥ್ಯ ಹೆಚ್ಚುವುದಷ್ಟೇ ಅಲ್ಲದೆ, ಕಡಿಮೆ ಅನುಭವ ಹೊಂದಿ ರುವವರೂ ಅಪಾಯಕಾರಿ ಪ್ರಯತ್ನಗಳನ್ನು ನಡೆಸುವುದು ಸುಲಭವಾಗುತ್ತಿದೆ. ಕಡಿಮೆ ಅವಧಿಯಲ್ಲಿ ಹಲವು ಸಂಸ್ಥೆಗಳಿಗೆ ದಾಳಿ ನಡೆಸಲು ಅವಕಾಶ ಸಿಗುತ್ತಿದೆ. ಆದರೆ ಎಐ ಸ್ವತಃ ಹ್ಯಾಕಿಂಗ್ ನಡೆಸುವುದಿಲ್ಲ. ದಾಳಿಕೋರರು ಗುರಿಯನ್ನು ಆಯ್ಕೆ ಮಾಡುತ್ತಾರೆ. ಎಐ ಕೆಲವು ತಾಂತ್ರಿಕ ಕೆಲಸಗಳನ್ನು ವೇಗಗೊಳಿಸುತ್ತದೆ.

ಎಐ ಹ್ಯಾಕಿಂಗ್ ಎಂದರೇನು?

ಕಂಪ್ಯೂಟರ್, ಮೊಬೈಲ್, ಬ್ಯಾಂಕ್​ಗಳ ಜಾಲ ಅಥವಾ ವೆಬ್​ಸೈಟ್​ಗಳಲ್ಲಿರುವ ಭದ್ರತಾ ಲೋಪಗಳನ್ನು ಬಳಸಿಕೊಂಡು ಅನುಮತಿಯಿಲ್ಲದೆ ಒಳನುಗ್ಗುವುದಕ್ಕೆ ಹ್ಯಾಕಿಂಗ್ ಎನ್ನುತ್ತಾರೆ. ಇಂತಹ ದಾಳಿಗಳನ್ನು ರೂಪಿಸಲು, ವೇಗಗೊಳಿಸಲು ಅಥವಾ ಸ್ವಯಂಚಾಲಿತವಾಗಿ ನಡೆಸಲು ಕೃತಕ ಬುದ್ಧಿಮತ್ತೆಯನ್ನು ಬಳಸಿದಾಗ ಅದನ್ನು ‘ಎಐ ಆಧಾರಿತ ಹ್ಯಾಕಿಂಗ್’ ಎನ್ನಬಹುದು. ಸಾಮಾನ್ಯವಾಗಿ ಹ್ಯಾಕರ್​ಗಳು ವ್ಯವಸ್ಥೆಯಲ್ಲಿರುವ ದೋಷಗಳನ್ನು ಪತ್ತೆಹಚ್ಚಲು, ಅವುಗಳನ್ನು ಬಳಸಿಕೊಳ್ಳುವ ತಂತ್ರಾಂಶ ಬರೆಯಲು ಮತ್ತು ರಕ್ಷಣಾ ವ್ಯವಸ್ಥೆಗಳನ್ನು ತಪ್ಪಿಸಲು ಸಾಕಷ್ಟು ತಾಂತ್ರಿಕ ಜ್ಞಾನ ಹೊಂದಿರಬೇಕು. ಈಗ ಈ ಕೆಲಸಗಳಲ್ಲಿ ಎಐ ಸಾಧನಗಳು ನೆರವಾಗುತ್ತವೆ. ಯಾವ ದೋಷವನ್ನು ಮೊದಲು ಪರೀಕ್ಷಿಸಬೇಕು, ಯಾವ ರೀತಿಯ ಕೋಡ್ ಬಳಸಬೇಕು, ಯಾವ ಮಾಹಿತಿ ಮುಖ್ಯ ಎಂಬುದನ್ನು ತಿಳಿಯಲು ಅವುಗಳ ಸಹಾಯ ಪಡೆಯಲಾಗುತ್ತಿದೆ. ಸೈಬರ್ ಭದ್ರತಾ ಸಂಸ್ಥೆ ಒಪ್ಸ್​ವಾಟ್​ನ ವಿಶ್ಲೇಷಣೆಯ ಪ್ರಕಾರ, ಎಐ ನೆರವಿನಿಂದ ದಾಳಿಕೋರರು ದುರುದ್ದೇಶದ ತಂತ್ರಾಂಶ ರೂಪಿಸುವುದು, ನಕಲಿ ಸಂದೇಶಗಳನ್ನು ಸಿದ್ಧಪಡಿಸುವುದು ಮತ್ತು ಕಂಪ್ಯೂಟರ್ ವ್ಯವಸ್ಥೆಗಳಲ್ಲಿನ ದೋಷ ಪತ್ತೆಹಚ್ಚುವುದನ್ನು ವೇಗಗೊಳಿಸಬಹುದು. ಹಿಂದೆ ಅನುಭವಿ ತಂತ್ರಜ್ಞರ ನೆರವು ಅಗತ್ಯವಿತ್ತು. ಈಗ ಕಡಿಮೆ ಅನುಭವ ಹೊಂದಿರುವವರೂ ದಾಳಿ ನಡೆಸುವುದು ಎಐನಿಂದ ಸುಲಭವಾಗಿದೆ.

ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆ

ವೈಯಕ್ತಿಕ ಬಳಕೆದಾರರು ಕೆಲವು ಸರಳ ಮುನ್ನೆಚ್ಚರಿಕೆಗಳ ಮೂಲಕ ಅಪಾಯವನ್ನು ಕಡಿಮೆ ಮಾಡಬಹುದು. ಬ್ಯಾಂಕ್ ಖಾತೆಗಳಿಗೆ ಬಲವಾದ, ವಿಭಿನ್ನ ಪಾಸ್​ವರ್ಡ್​ಗಳನ್ನು ಬಳಸಬೇಕು. ಸಾಧ್ಯವಾದಲ್ಲಿ ಎರಡು ಹಂತದ ದೃಢೀಕರಣ ವ್ಯವಸ್ಥೆಯನ್ನು ಸಕ್ರಿಯಗೊಳಿಸಬೇಕು. ಅಪರಿಚಿತ ಲಿಂಕ್​ಗಳನ್ನು ತೆರೆಯಬಾರದು; ಸಂದೇಶದಲ್ಲಿ ಬಂದ ಕಡತಗಳನ್ನು ಪರಿಶೀಲಿಸದೆ ಡೌನ್​ಲೋಡ್ ಮಾಡಬಾರದು. ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು ಕರೆ ಮಾಡುವವರು ವೈಯಕ್ತಿಕ ವಿವರ, ಪಾಸ್​ವರ್ಡ್, ಒಟಿಪಿ ಅಥವಾ ಪಿನ್ ಕೇಳಿದರೆ ನೀಡಬಾರದು. ಪರಿಚಿತ ವ್ಯಕ್ತಿಯ ಧ್ವನಿಯಲ್ಲಿ ಹಣ ಕೇಳುವ ಕರೆ ಬಂದರೂ, ಬೇರೆ ಸಂಪರ್ಕ ಮಾರ್ಗದ ಮೂಲಕ ಅವರ ಗುರುತನ್ನು ಖಚಿತಪಡಿಸಿಕೊಳ್ಳಬೇಕು. ಎಐ ಮೂಲಕ ಧ್ವನಿ ನಕಲು ಸಾಧ್ಯವಾದ್ದರಿಂದ ಧ್ವನಿ ಪರಿಚಿತವಾಗಿದೆ ಎಂಬ ಕಾರಣಕ್ಕೆ ನಂಬುವುದು ಸುರಕ್ಷಿತವಲ್ಲ. ಬ್ಯಾಂಕ್ ವಹಿವಾಟುಗಳ ಸಂದೇಶಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು. ಖಾತೆಯಲ್ಲಿ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಬ್ಯಾಂಕ್​ಗೆ ಮಾಹಿತಿ ನೀಡಬೇಕು. ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂಬ ಸುದ್ದಿ ಬಂದಾಗ ಗಾಬರಿಗೊಂಡು ಪ್ರತಿಕ್ರಿಯಿಸುವ ಬದಲು ಅಧಿಕೃತ ಮೂಲಗಳಿಂದ ಮಾಹಿತಿ ಪಡೆದು, ಅಗತ್ಯವಿದ್ದರೆ ಪಾಸ್​ವರ್ಡ್ ಬದಲಿಸುವುದು ಮತ್ತು ಬ್ಯಾಂಕ್​ನ ಸಲಹೆ ಪಡೆಯುವುದು ಸೂಕ್ತ. ಎಐ ತಂತ್ರಜ್ಞಾನದಿಂದ ಸೈಬರ್ ಅಪರಾಧಗಳ ವೇಗ ಮತ್ತು ವ್ಯಾಪ್ತಿ ಹೆಚ್ಚುವ ಅಪಾಯವಿದೆ. ಆದ್ದರಿಂದ ಬ್ಯಾಂಕ್​ಗಳು, ಕಂಪನಿಗಳು, ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕರು ತಮ್ಮ ಡಿಜಿಟಲ್ ಭದ್ರತೆಯನ್ನು ನಿರಂತರವಾಗಿ ಪರಿಶೀಲಿಸುವುದು ಅಗತ್ಯ.

ಬ್ಯಾಂಕ್​​ಗಳ ಮೇಲೆ ದಾಳಿ

ಎಐ ಹ್ಯಾಕಿಂಗ್​ನ ಅಪಾಯಕ್ಕೆ ಇತ್ತೀಚಿನ ಉದಾಹರಣೆ ದಕ್ಷಿಣ ಕೊರಿಯಾದ ಹಣಕಾಸು ಸಂಸ್ಥೆಗಳ ಮೇಲಿನ ಸೈಬರ್ ದಾಳಿ. 2026ರ ಸೆಪ್ಟೆಂಬರ್ ಅಂತ್ಯದಿಂದ ಅಕ್ಟೋಬರ್ ಆರಂಭದವರೆಗೆ ಹಲವು ಹಣಕಾಸು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡ ದಾಳಿಗಳನ್ನು ಕ್ಲೌಡ್​ಸ್ಟ್ರೈಕ್ ಪತ್ತೆಹಚ್ಚಿದೆ. ಈ ದಾಳಿಯಲ್ಲಿ, ಚೀನಾದಲ್ಲಿ ಅಭಿವೃದ್ಧಿಪಡಿಸಲಾದ ಆರ್ಟೆಕ್ಸ್ ಎಂಬ ಓಪನ್​ಸೋರ್ಸ್ ಎಐ ಸಾಧನವನ್ನು ದೊಡ್ಡ ಲ್ಯಾಂಗ್ವೇಜ್ ಮಾಡೆಲ್​ಗಳೊಂದಿಗೆ ಬಳಸಲಾಗಿತ್ತು. ದಾಳಿಕೋರರು ವಿವಿಧ ಸಂಸ್ಥೆಗಳ ವ್ಯವಸ್ಥೆಗಳಿಗೆ ಒಳನುಗ್ಗಿ ಮಾಹಿತಿ ಹೊರತೆಗೆದಿರುವುದಕ್ಕೆ ಪುರಾವೆಗಳು ಸಿಕ್ಕಿವೆ. ಆದರೆ ದಾಳಿಯಿಂದ ಎಷ್ಟು ಸಂಸ್ಥೆಗಳಿಗೆ ಎಷ್ಟು ನಷ್ಟವಾಗಿದೆ ಎಂಬುದರ ಖಚಿತ ಮಾಹಿತಿ ಸಿಕ್ಕಿಲ್ಲ. ದಕ್ಷಿಣ ಕೊರಿಯಾದ ಮಾಧ್ಯಮ ವರದಿಗಳಲ್ಲಿ ಸುಮಾರು 68,000 ಗ್ರಾಹಕರ ಮಾಹಿತಿ ಸೋರಿಕೆಯಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಈ ಸಂಖ್ಯೆಯನ್ನು ಎಲ್ಲ ಸಂಸ್ಥೆಗಳಿಗೂ ಅನ್ವಯಿಸುವ ಅಂತಿಮ ಅಂಕಿಅಂಶವೆಂದು ಪರಿಗಣಿಸಲಾಗದು. ಶಿನ್ಹಾನ್ ಬ್ಯಾಂಕ್ ಸುಮಾರು 25,000 ಗ್ರಾಹಕರ ಮಾಹಿತಿ ಸೋರಿಕೆ ಆಗಿದೆ ಎಂದಿದ್ದರೆ, ಕೆಬಿ ಕುಕ್​ವಿುನ್ ಬ್ಯಾಂಕ್ 119 ಗ್ರಾಹಕರಿಗೆ ಸಂಬಂಧಿಸಿದ ಮಾಹಿತಿ ಸೋರಿಕೆ ಆಗಿದೆ ಎಂದಿತ್ತು. ಹಲವು ಬ್ಯಾಂಕ್​ಗಳ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ಒಟ್ಟಾರೆ ಹಾನಿಯ ಪ್ರಮಾಣ ಇನ್ನೂ ಸ್ಪಷ್ಟವಾಗಿಲ್ಲ. ಈ ಪ್ರಕರಣದಲ್ಲಿ ಎಐ ಬಳಸಿದ ವ್ಯಕ್ತಿಯ ಗುರುತು ಅಧಿಕೃತವಾಗಿ ದೃಢಪಟ್ಟಿಲ್ಲ. ದಾಳಿಯ ವಿಧಾನ ಮತ್ತು ಬಳಕೆಯಾದ ಸಾಧನಗಳನ್ನು ಪರಿಶೀಲಿಸಿದ ಕ್ಲೌಡ್​ಸ್ಟ್ರೈಕ್, ದಾಳಿಕೋರ ಚೀನೀ ಭಾಷೆ ಬಳಸುವ ವ್ಯಕ್ತಿ ಮತ್ತು ಆರ್ಥಿಕ ಲಾಭ ಪಡೆಯುವುದು ಆತನ ಉದ್ದೇಶ ಎಂದಿದೆ.

ಭಾರತದ ಬ್ಯಾಂಕ್​ಗಳಿಗೂ ಶುರುವಾಗಿದೆ ಆತಂಕ

ಭಾರತದಲ್ಲೂ ಬ್ಯಾಂಕ್​ಗಳ ಗ್ರಾಹಕರ ಮಾಹಿತಿಯ ಸುರಕ್ಷತೆ ಬಗ್ಗೆ ಆತಂಕ ಮೂಡಿಸುವ ಘಟನೆ ನಡೆದಿದೆ. ಅ. 21ರಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ) ಷೇರುಪೇಟೆಗೆ ನೀಡಿದ ಮಾಹಿತಿಯಲ್ಲಿ, ತನ್ನ ಗ್ರಾಹಕರಿಗೆ ಸಂಬಂಧಿಸಿದ ಕೆಲವು ವೈಯಕ್ತಿಕ ವಿವರಗಳು ಡಾರ್ಕ್​ವೆಬ್​ನಲ್ಲಿ ಕಾಣಿಸಿಕೊಂಡಿರುವ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದೆ. ಅ. 16ರಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡದಿಂದ (ಸಿಇಆರ್​ಟಿ-ಇನ್) ಎಸ್​ಬಿಐಗೆ ಈ ಬಗ್ಗೆ ಎಚ್ಚರಿಕೆ ಬಂದಿತ್ತು. ಡಾರ್ಕ್​ವೆಬ್​ನಲ್ಲಿ ಲಭ್ಯವಿದ್ದ ಸುಮಾರು 3.75 ಲಕ್ಷ ದಾಖಲೆಗಳ ಪ್ರಾಥಮಿಕ ಪರಿಶೀಲನೆಯ ಬಳಿಕ 3,897 ಗ್ರಾಹಕರ ವೈಯಕ್ತಿಕ ಮಾಹಿತಿ ಹೊಂದಿರುವ ದಾಖಲೆಗಳು ಪತ್ತೆಯಾಗಿವೆ ಎಂದು ಬ್ಯಾಂಕ್ ದೃಢಪಡಿಸಿದೆ. ಸೋರಿಕೆಯಾಗಿರಬಹುದಾದ ಮಾಹಿತಿಯಲ್ಲಿ ಗ್ರಾಹಕರ ಹೆಸರು, ಮೊಬೈಲ್ ಸಂಖ್ಯೆ, ಜನ್ಮದಿನಾಂಕ, ಇ-ಮೇಲ್ ವಿಳಾಸ, ಮನೆಯ ವಿಳಾಸ, ಬ್ಯಾಂಕ್ ಶಾಖೆ ಮತ್ತು ಸಾಲದ ದಾಖಲೆಗಳು ಇವೆ. ಆದರೆ ಹ್ಯಾಕರ್​ಗಳು ಎಲ್ಲ ಗ್ರಾಹಕರ ಬ್ಯಾಂಕ್ ಖಾತೆಗಳಿಗೂ ಪ್ರವೇಶಿಸಿಲ್ಲ. ಎಸ್​ಬಿಐ ಸ್ವತಂತ್ರ ಸೈಬರ್ ಭದ್ರತಾ ಸಂಸ್ಥೆಯ ಮೂಲಕ ತನಿಖೆ ನಡೆಸುತ್ತಿದೆ. ತನ್ನ ಮುಖ್ಯ ಬ್ಯಾಂಕಿಂಗ್ ಕಾರ್ಯಾಚರಣೆ, ಹಣಕಾಸಿನ ಸ್ಥಿತಿ ಅಥವಾ ಸೇವೆಗಳ ನಿರಂತರತೆಯ ಮೇಲೆ ಈ ಘಟನೆಯಿಂದ ಪರಿಣಾಮವಾಗಿಲ್ಲ ಎಂದಿದೆ ಎಸ್​ಬಿಐ. ಮಾಹಿತಿ ಸೋರಿಕೆಯಾಗಿದೆ ಎಂದಾಕ್ಷಣ ಬ್ಯಾಂಕ್​ನ ಮುಖ್ಯ ವ್ಯವಸ್ಥೆಯನ್ನೇ ಹ್ಯಾಕ್ ಮಾಡಲಾಗಿದೆ ಎಂದು ತೀರ್ವನಿಸಲಾಗದು. ಗ್ರಾಹಕರ ಸಾಲದ ಅರ್ಜಿಗಳು, ಗುರುತಿನ ದಾಖಲೆಗಳು ಮತ್ತು ಇತರ ವಿವರಗಳು ಬ್ಯಾಂಕ್ ಹೊರಗಿನ ಸೇವಾ ಸಂಸ್ಥೆಗಳಲ್ಲಿಯೂ ಇರಬಹುದು. ಹೀಗಾಗಿ ಸೋರಿಕೆಯ ಮೂಲವನ್ನು ಪತ್ತೆ ಹಚ್ಚಲೆಂದೇ ತನಿಖೆ ಆರಂಭವಾಗಿದೆ.

ಹ್ಯಾಕರ್​ಗಳಿಗೆ ಎಐ ಹೇಗೆ ನೆರವಾಗುತ್ತದೆ?

  1. ಕಂಪನಿಯ ವೆಬ್​ಸೈಟ್ ಅಥವಾ ಕಂಪ್ಯೂಟರ್ ಜಾಲದಲ್ಲಿ ಹಳೆಯ ತಂತ್ರಾಂಶ, ದುರ್ಬಲ ಸಂರಚನೆ ಅಥವಾ ಸರಿಪಡಿಸದ ದೋಷಗಳಿದ್ದರೆ, ಅವುಗಳನ್ನು ಗುರುತಿಸಲು ಎಐ ನೆರವಾಗುತ್ತದೆ. ದಾಳಿಕೋರರು ನೂರಾರು ವ್ಯವಸ್ಥೆಗಳನ್ನು ನಿಮಿಷಾರ್ಧದಲ್ಲಿ ಪರಿಶೀಲಿಸಿ ದುರ್ಬಲ ವ್ಯವಸ್ಥೆಗಳ ಒಳಗೆ ನುಗ್ಗುತ್ತಾರೆ.

  2. ಕಂಪ್ಯೂಟರ್ ವ್ಯವಸ್ಥೆಗಳಿಗೆ ಹಾನಿ ಮಾಡುವ ಅಥವಾ ಮಾಹಿತಿಯನ್ನು ಕದಿಯುವ ತಂತ್ರಾಂಶದ ಕೆಲವು ಭಾಗಗಳನ್ನು ಬರೆಯಲು ಎಐ ಬಳಸಲಾಗುತ್ತದೆ. ದಾಳಿಯ ಸಂದರ್ಭಕ್ಕೆ ಅನುಗುಣವಾಗಿ ಕೋಡ್​ನಲ್ಲಿ ಬದಲಾವಣೆ ಮಾಡುವುದಕ್ಕೂ ಅದು ನೆರವಾಗುತ್ತದೆ.

  3. ಹಿಂದೆ ಭಾಷಾ ದೋಷಗಳಿಂದ ಕೂಡಿರುತ್ತಿದ್ದ ನಕಲಿ ಇ-ಮೇಲ್​ಗಳು ಈಗ ನೈಜ ಸಂದೇಶಗಳಂತೆ ಕಾಣುತ್ತವೆ. ವ್ಯಕ್ತಿಯ ಹೆಸರು, ಕೆಲಸದ ವಿವರ ಮತ್ತು ಸಂಸ್ಥೆಯ ಮಾಹಿತಿಯನ್ನು ಬಳಸಿ ನಿರ್ದಿಷ್ಟ ವ್ಯಕ್ತಿಯನ್ನು ಗುರಿಯಾಗಿಸುವ ಸಂದೇಶಗಳನ್ನು ಸಿದ್ಧಪಡಿಸಲಾಗುತ್ತದೆ. ಇಂತಹ ಸಂದೇಶಗಳು ಬ್ಯಾಂಕ್ ಅಧಿಕಾರಿಗಳಿಂದ ಅಥವಾ ಕಚೇರಿಯ ಹಿರಿಯ ಅಧಿಕಾರಿಗಳಿಂದ ಬಂದಂತೆ ಕಾಣುತ್ತವೆ.

  4. ಎಐ ನೆರವಿನಿಂದ ವ್ಯಕ್ತಿಯ ಧ್ವನಿಯನ್ನು ಹೋಲುವ ನಕಲಿ ಧ್ವನಿ ಸೃಷ್ಟಿಸಲಾಗುತ್ತದೆ. ಕೆಲ ಸಂದರ್ಭಗಳಲ್ಲಿ ವಿಡಿಯೊದಲ್ಲಿಯೂ ವ್ಯಕ್ತಿಯ ಮುಖ ಮತ್ತು ಮಾತುಗಳನ್ನು ಯಥಾವತ್ ನಕಲು ಮಾಡುತ್ತಾರೆ. ಇದನ್ನು ಬಳಸಿ ಉದ್ಯೋಗಿಗಳಿಗೆ ಹಣ ವರ್ಗಾಯಿಸುವಂತೆ ಅಥವಾ ಗೌಪ್ಯ ಮಾಹಿತಿ ನೀಡುವಂತೆ ವಂಚಕರು ಒತ್ತಡ ಹೇರುತ್ತಾರೆ.

  5. ದೊಡ್ಡ ಪ್ರಮಾಣದ ದಾಖಲೆಗಳಲ್ಲಿ ಯಾವ ಮಾಹಿತಿ ಹೆಚ್ಚು ಮೌಲ್ಯಯುತವಾಗಿದೆ ಎಂಬುದನ್ನು ವಿಶ್ಲೇಷಿಸಲು ಎಐ ಬಳಸುತ್ತಾರೆ. ಹೀಗೆ ಕದ್ದ ವೈಯಕ್ತಿಕ ವಿವರಗಳನ್ನು ಮುಂದಿನ ವಂಚನೆಗಳಿಗೂ ಬಳಸುವ ಅಪಾಯವಿರುತ್ತದೆ.

ಇದರಿಂದ ರಕ್ಷಣೆ ಹೇಗೆ?

ಸೈಬರ್ ಅಪರಾಧಿಗಳು ಎಐ ಬಳಸುತ್ತಿರುವಾಗ ಸಂಸ್ಥೆಗಳೂ ಎಐ ಆಧಾರಿತ ಭದ್ರತಾ ಸಾಧನಗಳನ್ನು ಬಳಸಬಹುದು. ಅನಧಿಕೃತ ಲಾಗಿನ್ ಪ್ರಯತ್ನಗಳು, ಮಾಹಿತಿ ವರ್ಗಾವಣೆ, ಅಪರಿಚಿತ ಸಾಧನಗಳಿಂದ ಪ್ರವೇಶ ಮತ್ತು ಅನುಮಾನಾಸ್ಪದ ಚಟುವಟಿಕೆಗಳನ್ನು ತ್ವರಿತವಾಗಿ ಗುರುತಿಸಲು ಇವು ನೆರವಾಗುತ್ತವೆ. ಆದರೆ ರಕ್ಷಣೆಗೆ ತಂತ್ರಜ್ಞಾನವೊಂದೇ ಸಾಕಾಗುವುದಿಲ್ಲ. ಕಂಪನಿಗಳು ತಮ್ಮ ತಂತ್ರಾಂಶವನ್ನು ನಿಯಮಿತವಾಗಿ ನವೀಕರಿಸಬೇಕು, ಭದ್ರತಾ ದೋಷಗಳನ್ನು ತಕ್ಷಣ ಸರಿಪಡಿಸಬೇಕು, ಉದ್ಯೋಗಿಗಳಿಗೆ ಅಗತ್ಯವಿರುವಷ್ಟು ಮಾತ್ರ ಸಿಸ್ಟೆಮ್ಲ್ಲಿ ಪ್ರವೇಶ ನೀಡಬೇಕು. ಪ್ರಮುಖ ಮಾಹಿತಿಯ ಸುರಕ್ಷಿತ ಪ್ರತಿಗಳನ್ನು ಪ್ರತ್ಯೇಕವಾಗಿ ಇರಿಸಬೇಕು. ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಪ್ರತಿಕ್ರಿಯಿಸುವ ವ್ಯವಸ್ಥೆ ಇರಬೇಕು. ಎಐ ಬಳಸುವ ಸಂಸ್ಥೆಗಳು ತಮ್ಮದೇ ಎಐ ವ್ಯವಸ್ಥೆಗಳ ಸುರಕ್ಷತೆಯನ್ನೂ ಪರಿಶೀಲಿಸಬೇಕು. ಹೊರಗಿನ ವ್ಯಕ್ತಿಗಳು ನೀಡುವ ತಪ್ಪು ಸೂಚನೆಗಳಿಂದ ಎಐ ವ್ಯವಸ್ಥೆಗಳು ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸುವ ಅಥವಾ ಅನುಮತಿಯಿಲ್ಲದೆ ಕೆಲಸ ಮಾಡುವ ಅಪಾಯವಿದೆ. ಹೀಗಾಗಿ ಎಐ ಸಾಧನಗಳಿಗೆ ಯಾವ ಮಾಹಿತಿಯನ್ನು ನೋಡಲು, ಯಾವ ಕೆಲಸ ಮಾಡಲು ಮತ್ತು ಯಾವ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂಬುದನ್ನು ಸ್ಪಷ್ಟವಾಗಿ ಕಂಪನಿಯ ವಿಶ್ವಾಸಾರ್ಹ ಸಿಬ್ಬಂದಿಯೇ ನಿಯಂತ್ರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net