ನಾವು ಬಿಜೆಪಿ ಸೇರ್ಪಡೆಗೊಳ್ಳಲು ನಮ್ಮ ಮಗಳೇ ಕಾರಣ; ನ್ಯಾಯಕ್ಕಾಗಿ ಚುನಾವಣಾ ಅಖಾಡಕ್ಕಿಳಿದ ಆರ್‌ಜಿ ಕರ್ ಸಂತ್ರಸ್ತೆಯ ತಾಯಿ! | RG Kar Case

RG Kar Case | ಆರ್‌ಜಿ ಕರ್ ಪ್ರಕರಣದ ಸಂತ್ರಸ್ತೆಯ ಪಾಲಕರು
RG Kar Case | ಆರ್‌ಜಿ ಕರ್ ಪ್ರಕರಣದ ಸಂತ್ರಸ್ತೆಯ ಪಾಲಕರು
Published on
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪಾಣಿಹಟಿಯಲ್ಲಿ ಬುಧವಾರ ನಡೆದ ಎರಡನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜಿ ಕರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ತಂದೆ ಶೇಖರ್ ರಂಜನ್ ದೇಬ್ನಾಥ್ ಮತ ಚಲಾಯಿಸಿದರು. ಈ ವೇಳೆ ತಮ್ಮ ಕುಟುಂಬದ ಪರಿಸ್ಥಿತಿಯನ್ನು ವಿವರಿಸುತ್ತಾ ಕಣ್ಣೀರು ಹಾಕಿದ ಘಟನೆ ನೆರೆದಿದ್ದವರ ಮನ ಕಲಕಿತು.
ಸಂತ್ರಸ್ತೆಯ ತಾಯಿ ರತ್ನಾ ದೇಬ್ನಾಥ್ ಪ್ರಸ್ತುತ ಬಿಜೆಪಿ ಟಿಕೆಟ್‌ನಲ್ಲಿ ಪಾಣಿಹಟಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ತಮ್ಮ ಮಗಳ ಸಾವಿಗೆ ನ್ಯಾಯ ಕೋರಿ ಈ ಚುನಾವಣಾ ಹೋರಾಟಕ್ಕಿಳಿದಿದ್ದಾರೆ.
ಮತದಾನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶೇಖರ್ ರಂಜನ್ ದೇಬ್ನಾಥ್ ಭಾವುಕರಾದರು. ನಮ್ಮ ಮಗಳಿಗೆ ನ್ಯಾಯ ಸಿಗಲು ಈ ದಾರಿಯನ್ನು (ರಾಜಕೀಯ) ಆರಿಸಿಕೊಳ್ಳಬೇಕಾಗಿ ಬಂದಿದೆ. ಆದರೆ ನಾವು ಈ ಹೋರಾಟದಲ್ಲಿ ಗೆಲ್ಲುತ್ತೇವೆ ಮತ್ತು ನಮ್ಮ ಮಗಳಿಗೆ ಖಂಡಿತಾ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ. ನಾವು ಸಾರ್ವಜನಿಕರ ಬೆಂಬಲದೊಂದಿಗೆ ಇದ್ದೇವೆ ಎಂದು ನೋವಿನಿಂದ ನುಡಿದರು. ಸಂತ್ರಸ್ತೆಯ ತಾಯಿ, ಬಿಜೆಪಿ ಅಭ್ಯರ್ಥಿ ರತ್ನಾ ದೇಬ್ನಾಥ್ ತಮ್ಮ ಇಡೀ ಪ್ರಚಾರದುದ್ದಕ್ಕೂ ಮಹಿಳಾ ಸುರಕ್ಷತೆ ಮತ್ತು ನ್ಯಾಯದ ಪರವಾಗಿ ಧ್ವನಿ ಎತ್ತಿದ್ದಾರೆ. ಬುಧವಾರ ಬೆಳಿಗ್ಗೆ ಮತ ಚಲಾಯಿಸುವ ಮುನ್ನ ಮಾತನಾಡಿದ ಅವರು, ಜನರು ನಮ್ಮ ಪರವಾಗಿ ಮತ ಹಾಕುತ್ತಾರೆ, ನಾವು ಗೆದ್ದು ನ್ಯಾಯವನ್ನು ಪಡೆದೇ ತೀರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ದೇಶವನ್ನೇ ನಡುಗಿಸಿದ್ದ ಆರ್‌ಜಿ ಕರ್ ಪ್ರಕರಣ

2024 ರ ಆಗಸ್ಟ್ 9 ರಂದು ಕೋಲ್ಕತ್ತಾದ ಸರ್ಕಾರಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಆಕೆಯ ಶವ ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಪತ್ತೆಯಾದ ಬಳಿಕ, ಕೋಲ್ಕತ್ತಾ ಪೊಲೀಸರೊಂದಿಗೆ ಸಂಬಂಧ ಹೊಂದಿದ್ದ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ಎಂಬಾತನನ್ನು ಬಂಧಿಸಲಾಗಿತ್ತು.
ಈ ಘಟನೆಯು ಪಶ್ಚಿಮ ಬಂಗಾಳದ ಕಿರಿಯ ವೈದ್ಯರಿಂದ 42 ದಿನಗಳ ಸುದೀರ್ಘ ಮುಷ್ಕರಕ್ಕೆ ಕಾರಣವಾಯಿತು. ವೈದ್ಯಕೀಯ ವೃತ್ತಿಪರರ ಸುರಕ್ಷತೆಗಾಗಿ ನಡೆದ ಈ ಪ್ರತಿಭಟನೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದವು. ಕೊಲ್ಕತ್ತಾ ಹೈಕೋರ್ಟ್ ಆದೇಶದಂತೆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಲಾಗಿತ್ತು. ಇದೀಗ ಅದೇ ಪ್ರಕರಣದ ಸಂತ್ರಸ್ತೆಯ ಕುಟುಂಬವು ಚುನಾವಣಾ ಅಖಾಡದ ಮೂಲಕ ನ್ಯಾಯಕ್ಕಾಗಿ ಹೋರಾಡುತ್ತಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net