ನನ್ನ ಮಗಳ ಜೀವ... ಬಿಜೆಪಿಯಿಂದ ಚುನಾವಣಾ ಕಣಕ್ಕಿಳಿದು ಸಿಎಂ ಮಮತಾಗೆ ಸೋಲುಣಿಸುವೆ!​ ಮೃತ ವೈದ್ಯೆಯ ತಾಯಿ ಶಪಥ

ಆರ್​ಜಿ ಕರ್​ ವೈದ್ಯಕೀಯ ಕಾಲೇಜಿನ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ
ಆರ್​ಜಿ ಕರ್​ ವೈದ್ಯಕೀಯ ಕಾಲೇಜಿನ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ
Published on

ಪ್ರಮುಖ ಮುಖ್ಯಾಂಶಗಳು

  • ಆರ್​ಜಿ ಕರ್​ ವೈದ್ಯಕೀಯ ಕಾಲೇಜಿನ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ
  • ಮಗಳ ಸಾವಿಗೆ ನ್ಯಾಯ ಕೊಡಿಸುವಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿಫಲ
  • ಆಕೆಯ ನನ್ನ ಪರಮ ಶತ್ರು! ಚುನಾವಣೆಯಲ್ಲಿ ಪ. ಬಂಗಾಳ ಸಿಎಂ ಅನ್ನು ಸೋಲಿಸುವೆ
  • ಮೃತ ಟ್ರೈನಿ ವೈದ್ಯೆಯ ತಾಯಿಯಿಂದ ಶಪಥ ನುಡಿ
ಕೋಲ್ಕತ: ಇಲ್ಲಿನ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಚಾರಕ್ಕೆ ಬಲಿಯಾದ ಯುವ ಟ್ರೈನಿ ವೈದ್ಯೆ ತಾಯಿಯ ಬಿಸಿ ಕಣ್ಣೀರು ಇನ್ನೂ ಆರಿಲ್ಲ ಎನ್ನುವುದಕ್ಕೆ ಅವರ ಶಪಥದ ನುಡಿಗಳೇ ಜ್ವಲಂತ ಸಾಕ್ಷಿ.

ದಿಕ್ಕು ತಪ್ಪಿಸಿದರೂ

ಮಗಳ ಮೇಲೆ ಅತ್ಯಾಚಾರವೆಸಗಿ, ಕೊಂದ ಪಾಪಿಗಳ ವಿರುದ್ಧ ದೀರ್ಘ ಕಾಲ ಬೀದಿಗೆ ಬಂದು ಪ್ರತಿಭಟನೆ ನಡೆಸಿದ ಸಾವಿರಾರು ಪಶ್ಚಿಮ ಬಂಗಾಳ ವೈದ್ಯರ ಜೊತೆಗೆ ಹೆಜ್ಜೆಯಿಟ್ಟ ಮೃತ ವೈದ್ಯೆಯ ತಾಯಿ ರತ್ನ ದೇಬ್ನಾಥ್, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಡೆಗೆ ತೀವ್ರ ಆಕ್ಷೇಪಣೆ ಹೊರಹಾಕಿದ್ದಾರೆ. ಪ್ರಕರಣದ ಹಾದಿಯನ್ನು ದಿಕ್ಕು ತಪ್ಪಿಸಲು ಹಾಗೂ ತಪ್ಪಿತಸ್ಥರನ್ನು ಬಚಾವ್​ ಮಾಡುವ ಕೆಲಸ ಸಿಎಂ ಮಮತಾರಿಂದ ಆಗಿದೆ ಎಂಬುದು ರತ್ನ ಅವರ ಗಂಭೀರ ಆರೋಪ. 

ತಾಯಿಯ ಬಿಸಿ ಕಣ್ಣೀರು

ಪ್ರಕರಣ ನಡೆದು ಎರಡು ವರ್ಷಗಳೇ ಆದರೂ ಯಾರು ಅಪರಾಧಿಗಳು ಎಂಬುದನ್ನು ಸ್ಪಷ್ಟವಾಗಿ ತೋರಿಸದ ಪ.ಬಂಗಾಳ ಸರ್ಕಾರದ ವಿರುದ್ಧ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮಗಳನ್ನು ಕಳೆದುಕೊಂಡ ರತ್ನ ಅವರ ಆಕ್ರಂದನಕ್ಕೆ ಲಕ್ಷಾಂತರ ವೈದ್ಯರು ದನಿಗೂಡಿಸಿದ್ದು ವಿಶೇಷ. ಈ ನಿಟ್ಟಿನಲ್ಲಿ, ಮಗಳ ಸಾವಿಗೆ ಸರಿಯಾದ ನ್ಯಾಯ ಒದಗಿಸಲು ಸಹಾಯ ಮಾಡದ ಮಮತಾ ಬ್ಯಾನರ್ಜಿ ವಿರುದ್ಧ ಸಿಡಿದೆದ್ದಿರುವ ರತ್ನ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಧುಮುಕಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.

ಮಮತಾ ಬ್ಯಾನರ್ಜಿಯೇ ನನ್ನ ಶತ್ರು

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನನ್ನ ಮುಖ್ಯ ಗುರಿ ಹಾಗೂ ಬದ್ಧ ಎದುರಾಳಿ ಎಂದು ಬಹಿರಂಗವಾಗಿ ಹೇಳಿದ್ದಾರೆ. ಪಾಪಿಗಳು ನನ್ನ ಮಗಳನ್ನು ಕಿತ್ತು ತಿಂದರು. ಅವಳ ಸಾವಿಗೆ ನ್ಯಾಯ ಸಿಗುವವರೆಗೂ ನಾನು ನನ್ನ ಕೂದಲನ್ನು ಬಾಚಿಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ದೇಬ್ನಾಥ್ ಅವರು ಬಿಜೆಪಿಯಿಂದ ಚುನಾವಣಾ ಕಣಕ್ಕಿಳಿಯುವುದಾಗಿ ತಿಳಿಸಿದ್ದು, ಶೀಘ್ರವೇ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಪಶ್ಚಿಮ ಬಂಗಾಳದ 294 ಸ್ಥಾನಗಳನ್ನು ಹೊಂದಿರುವ ವಿಧಾನಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 152 ಕ್ಷೇತ್ರಗಳನ್ನು ಒಳಗೊಂಡ ಮೊದಲ ಹಂತವು ಇದೇ ಏ.23ರಂದು ನಡೆಯಲಿದೆ. ಉಳಿದ 142 ಕ್ಷೇತ್ರಗಳನ್ನು ಒಳಗೊಂಡ ಎರಡನೇ ಹಂತವು ಏ.29ರಂದು ನಡೆಯಲಿದೆ. ಮತ ಎಣಿಕೆ ಮೇ 4ರಂದು ನಿಗದಿಯಾಗಿದೆ.
"ಮಮತಾ ಬ್ಯಾನರ್ಜಿ ಸಿಎಂ ಹಾಗೂ ಆರೋಗ್ಯ ಇಲಾಖೆಯ ಹೊಣೆಯನ್ನು ಸಹ ಹೊತ್ತಿಕೊಂಡಿದ್ದಾರೆ. ಹೀಗಿರುವಾಗ, ನನ್ನ ಮಗಳನ್ನು ಏಕೆ ಉಳಿಸಲಿಲ್ಲ?. ಪುತ್ರಿಗೆ ನ್ಯಾಯ ಸಿಗುವವರೆಗೆ ನಾನು ಕೂದಲು ಬಾಚಿಕೊಳ್ಳುವುದಿಲ್ಲ. ನಾಳೆಯೇ ನಾಮಪತ್ರ ಸಲ್ಲಿಸುತ್ತೇನೆ. ಜನರು ನನ್ನನ್ನು ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಮತ್ತು ಮಮತಾ ಬ್ಯಾನರ್ಜಿ ಸೋಲುವುದನ್ನು ನೋಡಲು ಹಂಬಲಿಸುತ್ತಿದ್ದಾರೆ. ಬ್ಯಾನರ್ಜಿಯನ್ನು ಮಣಿಸುವುದೇ ನನ್ನ ದೊಡ್ಡ ಗುರಿ. ಆಕೆ ನನ್ನ ಪರಮ ಶತ್ರು ಎಂದು ದೇಬ್ನಾಥ್ ಭಾರೀ ಅಸಮಾಧಾನ ಹೊರಹಾಕಿದ್ದಾರೆ. 

ಏನಿದು ಅತ್ಯಾಚಾರ-ಕೊಲೆ ಪ್ರಕರಣ?

ಆಗಸ್ಟ್ 9, 2024ರಂದು, ಕೋಲ್ಕತದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೆಮಿನಾರ್ ಹಾಲ್​ನಲ್ಲಿ 31 ವರ್ಷದ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಘಟನೆ ಬೆಳಕಿಗೆ ಬಂದಿತು. ಈ ಅಪರಾಧವು ದೇಶಾದ್ಯಂತ ಭಾರಿ ಪ್ರತಿಭಟನೆಗಳಿಗೆ ಕಾರಣವಾಯಿತು. ಲಕ್ಷಾಂತರ ಸಂಖ್ಯೆಯಲ್ಲಿ ವೈದ್ಯರು ಮತ್ತು ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಆಗ್ರಹಿಸಿ, ಸರ್ಕಾರದ ವಿರುದ್ಧ ಹೋರಾಟ ನಡೆಸಿದರು. 
ಕೋಲ್ಕತ ಪೊಲೀಸರ ತನಿಖೆಯನ್ನು ನಿರ್ವಹಿಸಿದ ರೀತಿ ಕಂಡು ಸಿಡಿಮಿಡಿಗೊಂಡ ಹೈಕೋರ್ಟ್, ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿತು. ಪ್ರಸ್ತುತ ಈ ಕೇಸ್​ ನ್ಯಾಯಾಲಯಗಳ ಮೂಲಕ ಸಾಗುತ್ತಿದ್ದರೂ, ಸಿಬಿಐ ಪ್ರಕರಣ ಕೈಗೆತ್ತಿಕೊಂಡ ದಿನದಿಂದ ಇಲ್ಲಿಯವರೆಗೆ ಹಲವರನ್ನು ವಿಚಾರಣೆ ನಡೆಸಿ, ಪ್ರಮುಖ ಆರೋಪಿಗಳನ್ನು ಬಂಧಿಸಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net