ಆರ್‌.ಜಿ.ಕರ್ ಅತ್ಯಾಚಾರ-ಕೊಲೆ ಪ್ರಕರಣ; ಸಂತ್ರಸ್ತೆ ಅಂತ್ಯಕ್ರಿಯೆಯಲ್ಲಿ ಅನುಮಾನ: ಟಿಎಂಸಿ ಮಾಜಿ ಶಾಸಕ ನಿರ್ಮಲ್ ಘೋಷ್ ಬಂಧನ | Nirmal Ghosh

ಟಿಎಂಸಿ ಮಾಜಿ ಶಾಸಕ ನಿರ್ಮಲ್ ಘೋಷ್
ಟಿಎಂಸಿ ಮಾಜಿ ಶಾಸಕ ನಿರ್ಮಲ್ ಘೋಷ್
Published on
ಕೋಲ್ಕತ್ತಾ: 2024ರಲ್ಲಿ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಕಿರಿಯ ವೈದ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಅವಸರದಿಂದ ಮಾಡಿದ ಆರೋಪದ ಮೇಲೆ ಗುರುವಾರ(ಆ. 13) ಟಿಎಂಸಿ ಮಾಜಿ ಶಾಸಕ ನಿರ್ಮಲ್ ಘೋಷ್(Nirmal Ghosh) ಅವರನ್ನು ಒಡಿಶಾದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ಮೃತ ವೈದ್ಯೆಯ ಎರಡನೇ ವರ್ಷದ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸುವೇಂದು ಅಧಿಕಾರಿ, ಸಂತ್ರಸ್ತೆಯ ಅಂತ್ಯಕ್ರಿಯೆಯ ಸುತ್ತಲಿನ ಸಂದರ್ಭಗಳ ಬಗ್ಗೆ ಅನುಮಾನವಿದ್ದು, ಆ ಕುರಿತು ಪ್ರತ್ಯೇಕ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಅದರ ಬೆನ್ನಲ್ಲೇ ಇಂದು ಮಾಜಿ ಶಾಸಕರ ಬಂಧನ ನಡೆದಿದೆ.
ಅಂತ್ಯಸಂಸ್ಕಾರದ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಮತ್ತು ಸಂಬಂಧಿತ ದಾಖಲೆಗಳಲ್ಲಿ ಸಂತ್ರಸ್ತೆಯ ಕುಟುಂಬದ ಸದಸ್ಯರ ಸಹಿಗಳು ಇಲ್ಲದಿರುವುದು ಸೇರಿದಂತೆ, ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿವೆ ಎಂದು ಸಿಎಂ ಅಧಿಕಾರಿ ಹೇಳಿದ್ದರು.


ಇನ್ನೂ ಎರಡನೇ ಬಾರಿಯ ಶವಪರೀಕ್ಷೆಯ ಸಾಧ್ಯತೆಯನ್ನು ತಡೆಯಲು ಮತ್ತು ಸಾಕ್ಷ್ಯಗಳನ್ನು ಮರೆಮಾಚಲು ತೃಣಮೂಲ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರ ಮೇಲ್ವಿಚಾರಣೆಯಲ್ಲಿ ಅನಗತ್ಯ ತರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಆರೋಪಿಸಿ ಸಂತ್ರಸ್ತೆಯ ತಂದೆ ನೀಡಿದ ದೂರಿನ ಆಧಾರದ ಎಫ್‌ಐಆರ್ ದಾಖಲಿಸಲಾಗಿದೆ.

31 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯೆ 2024 ಆಗಸ್ಟ್ 9ರಂದು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಬಳಿಕ ತನಿಖೆ ನಡೆಸಿದ್ದ ಪೊಲೀಸರು, ಆಕೆಯ ಮೇಲೆ ಹಿಂದಿನ ರಾತ್ರಿ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಹೇಳಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net