ಈಸ್ಟರ್ನ್ ಫ್ರಂಟಿಯರ್ ರೈಫಲ್ಸ್​ಗೆ ಮರುಜೀವ: 1,000 ಗೂರ್ಖಾ ಯುವಕರ ನೇಮಕಾತಿಗೆ ಸಿಎಂ ಸುವೇಂದು ಮೆಗಾ ಪ್ಲಾನ್! Suvendu Adhikari

ಈಸ್ಟರ್ನ್ ಫ್ರಂಟಿಯರ್ ರೈಫಲ್ಸ್​ಗೆ ಮರುಜೀವ: 1,000 ಗೂರ್ಖಾ ಯುವಕರ ನೇಮಕಾತಿಗೆ ಸಿಎಂ ಸುವೇಂದು ಮೆಗಾ ಪ್ಲಾನ್!
ಈಸ್ಟರ್ನ್ ಫ್ರಂಟಿಯರ್ ರೈಫಲ್ಸ್​ಗೆ ಮರುಜೀವ: 1,000 ಗೂರ್ಖಾ ಯುವಕರ ನೇಮಕಾತಿಗೆ ಸಿಎಂ ಸುವೇಂದು ಮೆಗಾ ಪ್ಲಾನ್!
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಶಸ್ತ್ರ ಪೊಲೀಸ್ ಪಡೆಯ ಐತಿಹಾಸಿಕ ವಿಭಾಗವಾದ ಈಸ್ಟರ್ನ್ ಫ್ರಂಟಿಯರ್ ರೈಫಲ್ಸ್ (EFR) ಪಡೆಗೆ ಮರುಜೀವ ನೀಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಡಾರ್ಜಿಲಿಂಗ್ ಜಿಲ್ಲೆಯ ಕರ್ಸಿಯಾಂಗ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ(Suvendu Adhikari), ಶೀಘ್ರದಲ್ಲೇ ಈಸ್ಟರ್ನ್ ಫ್ರಂಟಿಯರ್ ರೈಫಲ್ಸ್ ಪಡೆಗೆ 1,000 ಕ್ಕೂ ಹೆಚ್ಚು ಗೂರ್ಖಾ ಯುವಕರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಘೋಷಿಸಿದ್ದಾರೆ. ಬಂಗಾಳದ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಈ ನಿರ್ಧಾರವು ಉತ್ತರ ಬಂಗಾಳದ ಗೂರ್ಖಾ ಸಮುದಾಯದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
ದೇಶದ ರಕ್ಷಣೆಗಾಗಿ ಗೂರ್ಖಾ ಸೈನಿಕರು ನೀಡಿದ ಬಲಿದಾನ ಮತ್ತು ಶೌರ್ಯವನ್ನು ಕೊಂಡಾಡಿದ ಮುಖ್ಯಮಂತ್ರಿಗಳು, ಮುಂಬರುವ ತಿಂಗಳುಗಳಲ್ಲಿ 1,000 ಕ್ಕೂ ಹೆಚ್ಚು ಗೂರ್ಖಾ ಯುವಕರನ್ನು ಈಸ್ಟರ್ನ್ ಫ್ರಂಟಿಯರ್ ರೈಫಲ್ಸ್‌ಗೆ ನೇಮಕ ಮಾಡಲಾಗುವುದು. ವಿಶೇಷವೆಂದರೆ ಈ ಉದ್ಯೋಗಗಳಲ್ಲಿ ಶೇ. 30 ರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಎಂದು ಪ್ರಕಟಿಸಿದ್ದಾರೆ.

ಏನಿದು ಈಸ್ಟರ್ನ್ ಫ್ರಂಟಿಯರ್ ರೈಫಲ್ಸ್ (EFR)?

ಈಸ್ಟರ್ನ್ ಫ್ರಂಟಿಯರ್ ರೈಫಲ್ಸ್ (EFR) ಎಂಬುದು ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ಐತಿಹಾಸಿಕ ಸಶಸ್ತ್ರ ಪೊಲೀಸ್ ಪಡೆಯಾಗಿದೆ. ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಆಡಳಿತದ ಅವಧಿಯಲ್ಲೇ ಸ್ಥಾಪನೆಗೊಂಡಿದ್ದ ಈ ವಿಶೇಷ ಪಡೆಯು ಡಾರ್ಜಿಲಿಂಗ್ ಬೆಟ್ಟದ ಗೂರ್ಖಾ ಸಮುದಾಯದೊಂದಿಗೆ ಆಳವಾದ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಸಂಬಂಧವನ್ನು ಹೊಂದಿದೆ. ಆಂತರಿಕ ಭದ್ರತೆ, ಪ್ರತ್ಯೇಕತಾವಾದಿ ಹಾಗೂ ನಕ್ಸಲ್ ನಿಗ್ರಹ ಮತ್ತು ಗಡಿ ರಕ್ಷಣೆಯಲ್ಲಿ ಈ ಪಡೆ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಜಾಗತಿಕ ಮಹಾಯುದ್ಧಗಳು ಹಾಗೂ 1971 ರ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಈ ಗೂರ್ಖಾ ಪಡೆ ಅಪ್ರತಿಮ ಸಾಹಸ ಪ್ರದರ್ಶಿಸಿ ಡಾರ್ಜಿಲಿಂಗ್ ಬೆಟ್ಟದ ಕಿರೀಟ ಎಂದೇ ಪ್ರಸಿದ್ಧಿ ಪಡೆದಿತ್ತು.

ಮಮತಾ ಸರ್ಕಾರದ ವಿರುದ್ಧ ಸಿಎಂ ಆಕ್ರೋಶ

ಹಿಂದಿನ ಮಮತಾ ನೇತೃತ್ವದ TMC ಸರ್ಕಾರವು ಈ ಐತಿಹಾಸಿಕ ಪಡೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಕೇವಲ ಎರಡು ಬೆಟಾಲಿಯನ್‌ಗಳಿಗೆ ಸೀಮಿತಗೊಳಿಸಿತ್ತು ಎಂದು ಸಿಎಂ ಸುವೇಂದು ಆರೋಪಿಸಿದ್ದಾರೆ. ಹಿಂದಿನ ಸರ್ಕಾರವು ರಾಜಕೀಯ ದ್ವೇಷಕ್ಕಾಗಿ ಈಸ್ಟರ್ನ್ ಫ್ರಂಟಿಯರ್ ರೈಫಲ್ಸ್‌ನ ಹೊಸ ನೇಮಕಾತಿಯನ್ನು ಸಂಪೂರ್ಣವಾಗಿ ತಡೆಹಿಡಿದಿತ್ತು. ಆ ಮೂಲಕ ಗೂರ್ಖಾ ಯುವಕರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳಲಾಗಿತ್ತು ಎಂದು ಕಿಡಿಕಾರಿದ್ದಾರೆ.
ದಶಕಗಳಿಂದ ಗೂರ್ಖಾ ಕುಟುಂಬಗಳ ಜೀವನೋಪಾಯ ಮತ್ತು ಗೌರವದ ಸಂಕೇತವಾಗಿದ್ದ ಈ ಪಡೆಗೆ ಹೊಸ ರಕ್ತ ತುಂಬುವ ಮೂಲಕ ಉತ್ತರ ಬಂಗಾಳದ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಯನ್ನು ಸುಧಾರಿಸುವುದು ಸರ್ಕಾರದ ಗುರಿಯಾಗಿದೆ ಎಂದು ಸುವೇಂದು ತಿಳಿಸಿದ್ದಾರೆ.

ಬಿಜೆಪಿ ಸಂಸದ ರಾಜು ಬಿಸ್ತಾ ತೃಪ್ತಿ; ಗೂರ್ಖಾ ನೆಲದಲ್ಲಿ ಸಂಭ್ರಮ

ಈಸ್ಟರ್ನ್ ಫ್ರಂಟಿಯರ್ ರೈಫಲ್ಸ್ ಪಡೆಯ ಪುನಶ್ಚೇತನಕ್ಕಾಗಿ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಧ್ವನಿ ಎತ್ತಿದ್ದ ಡಾರ್ಜಿಲಿಂಗ್‌ನ ಬಿಜೆಪಿ ಸಂಸದ ರಾಜು ಬಿಸ್ತಾ, ಮುಖ್ಯಮಂತ್ರಿಗಳ ಈ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. 2010 ರಿಂದೀಚೆಗೆ ಈ ಪಡೆಯಲ್ಲಿ ಯಾವುದೇ ಹೊಸ ನೇಮಕಾತಿ ನಡೆದಿರಲಿಲ್ಲ. ಸುಮಾರು 2,000 ಕ್ಕೂ ಹೆಚ್ಚು ರೈಫಲ್‌ಮನ್ ಹುದ್ದೆಗಳು ಖಾಲಿ ಬಿದ್ದಿದ್ದರೂ ಹಿಂದಿನ ಟಿಎಂಸಿ ಸರ್ಕಾರ ಇಲಾಖೆಯನ್ನು ಮುಚ್ಚಲು ಸಂಚು ರೂಪಿಸಿತ್ತು. ಆದರೆ ಈಗ ಮುಖ್ಯಮಂತ್ರಿ ಸುವೇಂದು ಈ ಐತಿಹಾಸಿಕ ನಿರ್ಧಾರದಿಂದ ಗೂರ್ಖಾ ಸಮುದಾಯಕ್ಕೆ ನ್ಯಾಯ ಸಿಕ್ಕಿದೆ ಎಂದು ರಾಜು ಬಿಸ್ತಾ Xನಲ್ಲಿ ಬರೆದುಕೊಂಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗಳ ದೃಷ್ಟಿಯಿಂದಲೂ ಗೂರ್ಖಾ ಸಮುದಾಯವನ್ನು ತಲುಪಲು ಈ ನಿರ್ಧಾರವು ಆಡಳಿತಾರೂಢ ಬಿಜೆಪಿಗೆ ದೊಡ್ಡ ರಾಜಕೀಯ ಅಸ್ತ್ರವಾಗಿ ಪರಿಣಮಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net