Success Story: ಪೊಲೀಸ್ ಕೆಲಸ ಬಿಟ್ಟು 2 ವರ್ಷಗಳ ಬಳಿಕ ಅವರ ಜೀವನ ಹೇಗಿದೆ ಗೊತ್ತಾ?

Success Story
Success Story
Published on
ನವದೆಹಲಿ: ಜೀವನದಲ್ಲಿ ದೊಡ್ಡ ಸಾಧನೆ(Success Story) ಮಾಡಲು ಕೆಲವೊಮ್ಮೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಂತಹ ಒಂದು ನಿರ್ಧಾರದಿಂದಲೇ ದೆಹಲಿ ಪೊಲೀಸರ ಮಾಜಿ ಸಬ್‌ ಇನ್‌ಸ್ಪೆಕ್ಟರ್‌ ನಿಶಾಂತ್ ತೋಮರ್‌ ಅವರ ಜೀವನ ಸಂಪೂರ್ಣ ಬದಲಾಗಿದೆ. ಸುರಕ್ಷಿತ ಸರ್ಕಾರಿ ಉದ್ಯೋಗವನ್ನು ತೊರೆದು ಆಸ್ಟ್ರೇಲಿಯಾಕ್ಕೆ ತೆರಳಿದ ಅವರು ಇಂದು ಯಶಸ್ವಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಗುರುತಿಸಿಕೊಂಡಿದ್ದಾರೆ.
ದೆಹಲಿ ಪೊಲೀಸ್ ಇಲಾಖೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್ ಆಗಿದ್ದ ನಿಶಾಂತ್ ತೋಮರ್ 2023ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಆಸ್ಟ್ರೇಲಿಯಾದಲ್ಲಿ ಹೊಸ ಬದುಕು ಆರಂಭಿಸುವ ನಿರ್ಧಾರ ತೆಗೆದುಕೊಂಡಿದ್ದರು. ಆ ಸಮಯದಲ್ಲಿ ಅವರ ನಿರ್ಧಾರವನ್ನು ಹಲವರು ಟೀಕಿಸಿದ್ದರು. ಉತ್ತಮ ಸರ್ಕಾರಿ ಉದ್ಯೋಗ ಬಿಟ್ಟು ವಿದೇಶಕ್ಕೆ ಹೋಗುವುದು ದೊಡ್ಡ ಅಪಾಯ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು.

ಅನೇಕರು ಹುಚ್ಚುತನ ಎಂದಿದ್ದರು!

ನಿಶಾಂತ್ ತಮ್ಮ ಗುರಿಯಿಂದ ಹಿಂದೆ ಸರಿಯಲಿಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಜೀವನದ ಪಯಣವನ್ನು ಹಂಚಿಕೊಂಡ ಅವರು, "ನಾನು ತೆಗೆದುಕೊಂಡ ನಿರ್ಧಾರವನ್ನು ಅನೇಕರು ಹುಚ್ಚುತನ ಎಂದು ಭಾವಿಸಿದ್ದರು. ಆದರೆ ನಾನು ಭಾರತದಲ್ಲಿದ್ದ ಸುರಕ್ಷಿತ ಉದ್ಯೋಗವನ್ನು ಬಿಟ್ಟು ಅನಿಶ್ಚಿತತೆಗಳ ನಡುವೆಯೂ ಆಸ್ಟ್ರೇಲಿಯಾಕ್ಕೆ ಬಂದೆ" ಎಂದು ಹೇಳಿದ್ದಾರೆ.
ℹ️

ಯಶಸ್ವಿ ರಿಯಲ್ ಎಸ್ಟೇಟ್ ಏಜೆಂಟ್

ಆಸ್ಟ್ರೇಲಿಯಾಗೆ ಹೋದ ಬಳಿಕ ಎಲ್ಲವನ್ನೂ ಶೂನ್ಯದಿಂದ ಆರಂಭಿಸಬೇಕಾಯಿತು ಎಂದು ಅವರು ತಿಳಿಸಿದ್ದಾರೆ. ಹೊಸ ದೇಶ, ಹೊಸ ಪರಿಸರ ಮತ್ತು ಹೊಸ ಸವಾಲುಗಳ ನಡುವೆ ಬದುಕನ್ನು ಕಟ್ಟಿಕೊಳ್ಳುವುದು ಸುಲಭವಾಗಿರಲಿಲ್ಲ. ಆದರೂ ತಮ್ಮ ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೂಲಕ ಅವರು ಯಶಸ್ಸಿನತ್ತ ಹೆಜ್ಜೆ ಇಟ್ಟರು. ಇಂದು ನಿಶಾಂತ್ ಯಶಸ್ವಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದಾರೆ. ತಾವು ಸ್ವಂತ ಮನೆ ನಿರ್ಮಿಸಿಕೊಂಡಿರುವುದಷ್ಟೇ ಅಲ್ಲ, ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಅನೇಕ ಕುಟುಂಬಗಳ ಮನೆ ಕನಸನ್ನು ನನಸಾಗಿಸಲು ಸಹಕರಿಸುತ್ತಿದ್ದಾರೆ.

ಭಯ ಹುಟ್ಟಿಸುವ ನಿರ್ಧಾರಗಳೇ ಅವಕಾಶಗಳಿಗೆ ದಾರಿ!

ತಮ್ಮ ಯಶಸ್ಸಿನ ಬಗ್ಗೆ ಮಾತನಾಡಿದ ಅವರು, "ಇದು ಕೇವಲ ಅದೃಷ್ಟದಿಂದ ಬಂದ ಯಶಸ್ಸಲ್ಲ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದು, ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಮತ್ತು ಕಷ್ಟದ ಸಂದರ್ಭದಲ್ಲೂ ಧೈರ್ಯ ಕಳೆದುಕೊಳ್ಳದಿರುವುದೇ ನನ್ನ ಯಶಸ್ಸಿನ ಕಾರಣ" ಎಂದು ಹೇಳಿದ್ದಾರೆ. ಇದೇ ವೇಳೆ ಜೀವನದಲ್ಲಿ ಮುಂದೆ ಸಾಗಲು ಬಯಸುವವರಿಗೆ ಅವರು ಮಹತ್ವದ ಸಂದೇಶವೊಂದನ್ನೂ ನೀಡಿದ್ದಾರೆ. "ಕೆಲವೊಮ್ಮೆ ನಮಗೆ ಅತ್ಯಂತ ಭಯ ಹುಟ್ಟಿಸುವ ನಿರ್ಧಾರಗಳೇ ನಮ್ಮ ಜೀವನದ ಅತ್ಯುತ್ತಮ ಅವಕಾಶಗಳಿಗೆ ದಾರಿ ಮಾಡಿಕೊಡುತ್ತವೆ" ಎಂದು ಅವರು ಹೇಳಿದ್ದಾರೆ.
ನಿಶಾಂತ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರ ಮೆಚ್ಚುಗೆ ಗಳಿಸಿದೆ. ವಿದೇಶದಲ್ಲಿ ಹೊಸ ಬದುಕು ಆರಂಭಿಸಲು ಹೋರಾಟ ನಡೆಸುತ್ತಿರುವ ಅನೇಕ ಭಾರತೀಯರಿಗೆ ಅವರ ಕಥೆ ಸ್ಫೂರ್ತಿಯಾಗಿದೆ. ವಿಡಿಯೋಗೆ ಈಗಾಗಲೇ 67 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಸುಮಾರು 1,800 ಲೈಕ್ಸ್‌ಗಳು ಬಂದಿವೆ.
ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಆಸ್ಟ್ರೇಲಿಯಾದಲ್ಲಿ ಯಾವ ಕೋರ್ಸ್ ಮಾಡಿದರು, ಹೇಗೆ ಉದ್ಯೋಗ ಪಡೆದುಕೊಂಡರು ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇನ್ನೂ ಹಲವರು ಅವರ ಧೈರ್ಯ ಮತ್ತು ಸಾಧನೆಯನ್ನು ಮೆಚ್ಚಿ ಶುಭ ಹಾರೈಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net