ಪಕ್ಷ ಬಿಡೋ ಮುನ್ನ ಸಂಸದ ಸ್ಥಾನಕ್ಕೆ ರಿಸೈನ್ ಮಾಡಿ!...ಬಂಡಾಯಗಾರರಿಗೆ ಸಂಜಯ್ ರಾವತ್ ನೇರ ಸವಾಲ್​ | Sanjay Raut

Sanjay Raut |  ರಾಜ್ಯಸಭಾ ಸದಸ್ಯ ಸಂಜಯ್ ರಾವತ್
Sanjay Raut | ರಾಜ್ಯಸಭಾ ಸದಸ್ಯ ಸಂಜಯ್ ರಾವತ್
Published on
ನವದೆಹಲಿ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಪಕ್ಷದಲ್ಲಿ ಮತ್ತೆ ಬಿರುಕು ಮೂಡಿದ್ದು, ಪಕ್ಷಾಂತರ ಮಾಡಲು ಯೋಚಿಸುತ್ತಿರುವ ಸಂಸದರು ಮೊದಲು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಹಿರಿಯ ನಾಯಕ ಸಂಜಯ್ ರಾವತ್ (Sanjay Raut) ಸವಾಲು ಹಾಕಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾವತ್, ಪಕ್ಷದ ನಾಯಕರು ಮತ್ತು ಲಕ್ಷಾಂತರ ಕಾರ್ಯಕರ್ತರು ಹಗಲಿರುಳು ಶ್ರಮಪಟ್ಟು ಈ ಸಂಸದರನ್ನು ಗೆಲ್ಲಿಸಿದ್ದಾರೆ. ಉದ್ಧವ್ ಠಾಕ್ರೆ ನಾಯಕತ್ವ ಹಾಗೂ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಿ ಗೆದ್ದಿರುವವರಿಗೆ ಈಗ ಪಕ್ಷದಲ್ಲಿ ಇರಲು ಇಷ್ಟವಿಲ್ಲದಿದ್ದರೆ, ಮೊದಲು ತಮ್ಮ ಸ್ಥಾನ ಬಿಟ್ಟು ಹೊರಹೋಗಲಿ ಎಂದು ಆಕ್ರೋಶ ಹೊರಹಾಕಿದರು. ಈ ವೇಳೆ ಶಿವಸೇನಾ (ಯುಬಿಟಿ) ಪಕ್ಷದ ಒಟ್ಟು 9 ಲೋಕಸಭಾ ಸಂಸದರ ಪೈಕಿ ಕೇವಲ ಮೂವರು (ಅರವಿಂದ್ ಸಾವಂತ್, ಅನಿಲ್ ದೇಸಾಯಿ ಮತ್ತು ರಾಜಾಭಾವಿ ವಾಜೆ) ಮಾತ್ರ ಉಪಸ್ಥಿತರಿದ್ದರು.

ತಾಯಿಯ ಹೆಸರಲ್ಲಿ ಆಣೆ ಪ್ರಮಾಣ ಮಾಡಿದ್ದ ಸಂಸದರು!

ಈಗಾಗಲೇ ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದು ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ ರಾವತ್, ಜೂನ್ 14 ರಂದು ನಡೆದ ಪಕ್ಷದ ಸಂಸದರ ಸಭೆಯಲ್ಲಿ ಎಲ್ಲರೂ ಉದ್ಧವ್ ಠಾಕ್ರೆ ಅವರಿಗೆ ನಿಷ್ಠರಾಗಿರುವುದಾಗಿ ಭರವಸೆ ನೀಡಿದ್ದರು. ಕೆಲವರಂತೂ ಸಾಯಿಬಾಬಾ, ಭವಾನಿ ಮಾತೆ ಮತ್ತು ತಮ್ಮ ತಾಯಿಯ ಹೆಸರಿನಲ್ಲಿ ಆಣೆ ಪ್ರಮಾಣ ಮಾಡಿ ಪಕ್ಷ ನಿಷ್ಠೆ ವ್ಯಕ್ತಪಡಿಸಿದ್ದರು. ಈಗಲೂ ನಮ್ಮ ಸಂಸದರು ನಮ್ಮೊಂದಿಗೇ ಇದ್ದಾರೆ ಎಂದು ನಾನು ನಂಬುತ್ತೇನೆ. ಒಂದು ವೇಳೆ ಯಾರಾದರೂ ನಂಬಿಕೆ ದ್ರೋಹ ಮಾಡಿದರೆ ಅದನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂದು ಎಚ್ಚರಿಸಿದರು.
ಸಂಜಯ್ ರಾವತ್ ಅವರ ಹೇಳಿಕೆಯನ್ನು ಬೆಂಬಲಿಸಿದ ಸಂಸದ ಅರವಿಂದ್ ಸಾವಂತ್, ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಪಕ್ಷವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು. ಯಾವೊಬ್ಬ ಸಂಸದನೂ ಪಕ್ಷ ಬಿಟ್ಟಿರುವ ಬಗ್ಗೆ ನಮಗೆ ನಿಖರ ಮಾಹಿತಿ ಇಲ್ಲ. ನಮ್ಮ ಸಂಸದರೆಲ್ಲರೂ ಉದ್ಧವ್ ಠಾಕ್ರೆ ಅವರೊಂದಿಗೆ ಇದ್ದಾರೆ ಎಂಬ ವಿಶ್ವಾಸ ನಮಗಿದೆ. ಕೇವಲ ಮುಂಜಾಗ್ರತಾ ಕ್ರಮವಾಗಿ ನಾವು ಈ ಹೆಜ್ಜೆ ಇಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಪ್ರತಿ ಸಂಸದನಿಗೆ 50 ಕೋಟಿ ರೂ. ಆಫರ್!

ತಮ್ಮ ಹಳೆಯ ಆರೋಪವನ್ನು ಪುನರುಚ್ಚರಿಸಿದ ರಾಜ್ಯಸಭಾ ಸಂಸದ ರಾವತ್, ಮಹಾರಾಷ್ಟ್ರದ ಸಂಸದರನ್ನು ಸೆಳೆಯಲು ಭಾರಿ ಹಣದ ಆಮಿಷ ಒಡ್ಡಲಾಗುತ್ತಿದೆ ಎಂದಿದ್ದಾರೆ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಪಕ್ಷಾಂತರ ಮಾಡಲು ಪ್ರತಿ ಸಂಸದನಿಗೆ ತಲಾ 50 ಕೋಟಿ ರೂಪಾಯಿ ಆಫರ್ ನೀಡಲಾಗಿದೆ. ಅಷ್ಟೇ ಅಲ್ಲದೆ, ಕೆಲವು ನಾಯಕರಿಗಾಗಿ ಚಾರ್ಟರ್ಡ್ ವಿಮಾನಗಳ (ವಿಶೇಷ ಖಾಸಗಿ ವಿಮಾನ) ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net