ಗಣರಾಜ್ಯೋತ್ಸವಕ್ಕೆ ಡ್ರೋನ್ ಭೀತಿ; ಈ ಮೂರು ರಾಜ್ಯಗಳ ಗಡಿಯಲ್ಲಿ ಹೈ ಅಲರ್ಟ್..Republic Day

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ
  • ಗಡಿ ಪ್ರದೇಶಗಳಲ್ಲಿ ಭದ್ರತಾ ಸಂಸ್ಥೆಗಳು ಉನ್ನತ ಮಟ್ಟದ ಎಚ್ಚರಿಕೆಯನ್ನು ನೀಡಿದೆ
  • ಇತ್ತೀಚಿನ ವರ್ಷಗಳಲ್ಲಿ ಗಡಿ ಭಾಗದಲ್ಲಿ ಡ್ರೋನ್ ಬಳಸಿ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳನ್ನು ಪೂರೈಸುವ ಪ್ರಕರಣಗಳು ಹೆಚ್ಚುತ್ತಿವೆ
  • ಗಡಿಯುದ್ದಕ್ಕೂ ಹಾರಾಡುವ ಸಂಶಯಾಸ್ಪದ ಡ್ರೋನ್​ಗಳನ್ನು ಪತ್ತೆಹಚ್ಚಲು ಭದ್ರತಾ ಅಧಿಕಾರಿಗಳಿಗೆ ಸೂಚನೆ
ನವದೆಹಲಿ: ದೇಶಾದ್ಯಂತ 77ನೇ ಗಣರಾಜ್ಯೋತ್ಸವದ (Republic Day) ಸಂಭ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿರುವ ಬೆನ್ನಲ್ಲೇ, ಗಡಿ ಪ್ರದೇಶಗಳಲ್ಲಿ ಭದ್ರತಾ ಸಂಸ್ಥೆಗಳು ಉನ್ನತ ಮಟ್ಟದ ಎಚ್ಚರಿಕೆಯನ್ನು ನೀಡಿದೆ. ಇದು ಗಡಿಯಾಚೆಗಿನ ಸಂಭಾವ್ಯ ಬೆದರಿಕೆಗಳನ್ನು ಎದುರಿಸುವ ಹಿನ್ನಲೆ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋನ್ ಚಟುವಟಿಕೆಗಳ ಮೇಲೆ ತೀವ್ರ ನಿಗಾ

ಇತ್ತೀಚಿನ ವರ್ಷಗಳಲ್ಲಿ ಗಡಿ ಭಾಗದಲ್ಲಿ ಡ್ರೋನ್ ಬಳಸಿ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳನ್ನು ಪೂರೈಸುವ ಪ್ರಕರಣಗಳು ಹೆಚ್ಚುತ್ತಿವೆ. ಆದರಿಂದ ಗಡಿಯುದ್ದಕ್ಕೂ ಹಾರಾಡುವ ಸಂಶಯಾಸ್ಪದ ಡ್ರೋನ್​ಗಳನ್ನು ಪತ್ತೆಹಚ್ಚಲು ಭದ್ರತಾ ಅಧಿಕಾರಿಗಳಿಗೆ ಕಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ. ವಿಶೇಷವಾಗಿ ಈ ಎಚ್ಚರಿಕೆಯು ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಹಾಗೂ ರಾಜಸ್ಥಾನದ ಗಡಿಗಳ ಮೇಲೆ ಕೇಂದ್ರೀಕರಿಸುತ್ತದೆ.
ಗುಪ್ತಚರ ಮಾಹಿತಿಯ ಪ್ರಕಾರ, ಭಯೋತ್ಪಾದಕರು ಕೇವಲ ಡ್ರೋನ್​ಗಳ ಮೇಲೆ ಮಾತ್ರ ಅವಲಂಬಿತವಾಗದೇ, ರೇಡಾರ್​ಗಳ ಕಣ್ಣುತಪ್ಪಿಸಲು ಪ್ಯಾರಾಗ್ಲೈಡರ್‌ಗಳು ಮತ್ತು ಹ್ಯಾಂಗ್ ಗ್ಲೈಡರ್‌ಗಳನ್ನು ಬಳಸಿ ಒಳನುಸುಳವ ಸಾಧ್ಯತೆ ಹೆಚ್ಚಿದೆ. ಆದಾಗ್ಯೂ, ಲಷ್ಕರ್-ಎ-ತೈಬಾ ಮತ್ತು ಕೆಲವು ಸಿಖ್ ಉಗ್ರಗಾಮಿ ಸಂಘಟನೆಗಳಂತಹ ಗುಂಪುಗಳು ದೊಡ್ಡ ಪ್ರಮಾಣದಲ್ಲಿ ಪ್ಯಾರಾಗ್ಲೈಡಿಂಗ್ ಉಪಕರಣಗಳು ಮತ್ತು ಸಂಬಂಧಿತ ಸಾಧನಗಳನ್ನು ಖರೀದಿಸಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಭದ್ರತಾ ಸಂಸ್ಥೆಗಳಿಗೆ ಗರಿಷ್ಠ ಜಾಗರೂಕತೆ ವಹಿಸಲು ಆದೇಶ!

ಭದ್ರತಾ ಪಡೆಗಳು ಸಂಪೂರ್ಣ ಜಾಗರೂಕರಾಗಿರುವಂತೆ ನಿರ್ದೇಶಿಸಲಾಗಿದ್ದು, ರೇಡಾರ್​ಗಳಿಗೆ ಸಿಗದಂತಹ ಸಣ್ಣ ಹಾರುವ ವಸ್ತುಗಳನ್ನು ಪತ್ತೆ ಹಚ್ಚಲು ಗಡಿ ಭಾಗಗಳಲ್ಲಿ ಸಂವೇದಕಗಳು ಮತ್ತು ಡ್ರೋನ್ ನಿರೋಧಕ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ. ಆಕಾಶದಲ್ಲಿ ಕಂಡುಬರುವ ಯಾವುದೇ ಅನುಮಾನಾಸ್ಪದ ಚಲನವಲನಗಳು ಕಂಡು ಬಂದರೆ,  ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ವಾಯುಪಡೆ ಮತ್ತು ಬಿಎಸ್ಎಫ್​ಗೆ ತಿಳಿಸಿದೆ.
ಏತನ್ಮಧ್ಯೆ, ದೆಹಲಿಯಲ್ಲಿ ಈ ಬಾರಿಯ ಗಣರಾಜ್ಯೋತ್ಸವ ಸಂಭ್ರಮವು ಕೇವಲ ಸೇನಾ ಶಕ್ತಿಯ ಪ್ರದರ್ಶನ ಮಾತ್ರವಲ್ಲದೆ, ತಾಂತ್ರಿಕ ಭದ್ರತೆಯ ಹೊಸ ಮೈಲಿಗಲ್ಲಿಗೂ ಸಾಕ್ಷಿಯಾಗಲಿದೆ. ದೇಶ ದ್ರೋಹದ ಕೃತ್ಯಗಳನ್ನು ತಡೆಯಲು ಪೊಲೀಸರು ಈ ಬಾರಿ AI-ಸಕ್ರಿಯಗೊಳಿಸಿದ ಸ್ಮಾರ್ಟ್ ಗ್ಲಾಸ್‌ಗಳನ್ನು ರಂಗಕ್ಕಿಳಿಸುತ್ತಿದ್ದಾರೆ.
ಇದು ಭಾರತೀಯ ಕಂಪನಿಯೊಂದು ತಯಾರಿಸಿದ ಸ್ಮಾರ್ಟ್​ ಗ್ಲಾಸ್​ಗಳಾಗಿದ್ದು, ಘೋಷಿತ ಅಪರಾಧಿಗಳು ಮತ್ತು ಶಂಕಿತರ ಪೊಲೀಸ್ ಡೇಟಾಬೇಸ್‌ಗೆ ನೈಜ ಸಮಯದಲ್ಲಿ ಲಿಂಕ್ ಮಾಡುತ್ತದೆ. ಇದು ನೆಲದ ಮೇಲಿನ ಸಿಬ್ಬಂದಿಗೆ ಜನದಟ್ಟಣೆಯ ಪ್ರದೇಶಗಳಲ್ಲಿ ವ್ಯಕ್ತಿಗಳನ್ನು ತಕ್ಷಣ ಗುರುತಿಸಲು ಸಹಾಯ ಮಾಡುತ್ತದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net