ನನಗೇ ಹೀಗಾದ್ರೆ ಸಾಮಾನ್ಯ ಜನರ ಗತಿಯೇನು...? 3 ದೇಶಗಳಲ್ಲಿ ಭಾರತ ಪ್ರತಿನಿಧಿಸಿದ್ದ ಮಾಜಿ ರಾಯಭಾರಿಗೆ ಪೌರತ್ವ ಸಾಬೀತುಪಡಿಸೋ ಸವಾಲು! | Navdeep Suri

Navdeep Suri | 3 ದೇಶಗಳಲ್ಲಿ ಭಾರತ ಪ್ರತಿನಿಧಿಸಿದ್ದ ಮಾಜಿ ರಾಯಭಾರಿಗೆ ಪೌರತ್ವ ಸಾಬೀತುಪಡಿಸೋ ಸವಾಲು!
Navdeep Suri | 3 ದೇಶಗಳಲ್ಲಿ ಭಾರತ ಪ್ರತಿನಿಧಿಸಿದ್ದ ಮಾಜಿ ರಾಯಭಾರಿಗೆ ಪೌರತ್ವ ಸಾಬೀತುಪಡಿಸೋ ಸವಾಲು!
Published on

ಯುಎಇ ಹಾಗೂ ಈಜಿಪ್ಟ್ ಸೇರಿದಂತೆ ಹಲವು ದೇಶಗಳಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ರಾಜತಾಂತ್ರಿಕ ಅಧಿಕಾರಿ ನವದೀಪ್ ಸೂರಿ (Navdeep Suri) ಅವರು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯ ಬಗ್ಗೆ ತಮಗಾದ ಕಹಿ ಅನುಭವವನ್ನು ಹಂಚಿಕೊಳ್ಳುವ ಮೂಲಕ ಭಾರತೀಯ ಚುನಾವಣಾ ಆಯೋಗದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ನವದೀಪ್ ಸೂರಿ, ದೇಶವನ್ನು ಮೂರು ಪ್ರಮುಖ ರಾಷ್ಟ್ರಗಳಲ್ಲಿ ಪ್ರತಿನಿಧಿಸಿದ್ದರೂ ಸಹ, ತಮ್ಮ ಪೌರತ್ವವನ್ನು ಸಾಬೀತುಪಡಿಸಲು ನಿರ್ದಿಷ್ಟವಲ್ಲದ ದಾಖಲೆಗಳನ್ನು ಕೇಳಲಾಗುತ್ತಿದೆ ಎಂದು ತಮ್ಮ ಬೇಸರ ಹೊರಹಾಕಿದ್ದಾರೆ.

ಸಾಮಾನ್ಯ ಪ್ರಜೆಯ ಗತಿಯೇನು..?

ಆಸ್ಟ್ರೇಲಿಯಾದಲ್ಲಿ ಭಾರತದ ಹೈಕಮಿಷನರ್ ಆಗಿಯೂ ಸೇವೆ ಸಲ್ಲಿಸಿರುವ ನವದೀಪ್ ಸೂರಿ, ಪಂಜಾಬ್‌ನಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಎದುರಾದ ತೊಡಕುಗಳನ್ನು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ. ಪಂಜಾಬ್‌ನಲ್ಲಿ ಎಸ್‌ಐಆರ್‌ನೊಂದಿಗಿನ ನನ್ನ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ. ಬೂತ್ ಮಟ್ಟದ ಅಧಿಕಾರಿಯ ಬಳಿ ಹೋಗಿ, ವೋಟರ್ ಐಡಿ ಮತ್ತು ದಾಖಲೆಗಳನ್ನು ಸಲ್ಲಿಸಿದೆ. ಎಲ್ಲವೂ ಸರಿಯಾಗಿದೆ ಎಂದು ಅವರು ನನಗೆ ಭರವಸೆ ನೀಡಿದ್ದರು. ಆದರೆ ಇಂದು ಸ್ವಯಂಸೇವಕರೊಬ್ಬರಿಂದ ಸಂದೇಶ ಬಂದಿದ್ದು, 2003 ರ ಎಸ್‌ಐಆರ್ ದಾಖಲೆಗಳೊಂದಿಗೆ ನನ್ನ ಕೆಲವು ವಿವರಗಳು ಹೊಂದಾಣಿಕೆಯಾಗುತ್ತಿಲ್ಲ ಎಂದು ತಿಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಬಿಎಲ್‌ಒ ಅವರೊಂದಿಗೆ ಮಾತನಾಡಿದಾಗ, ನೋಟಿಸ್ ಸ್ವೀಕರಿಸಲು ಬರುವಂತೆ ಹಾಗೂ ಭಾರತೀಯ ಪ್ರಜೆ ಎಂದು ನಿರೂಪಿಸಲು ಇತರ ದಾಖಲೆಗಳೊಂದಿಗೆ ಮತ್ತೆ ಹಾಜರಾಗುವಂತೆ ಸೂಚಿಸಲಾಯಿತು ಎಂದು ಸೂರಿ ಹೇಳಿದ್ದಾರೆ. 2003 ರಲ್ಲಿ ನಾನು ಭಾರತದಲ್ಲಿ ಇರಲಿಲ್ಲ ಎಂದು ಉತ್ತರಿಸಿದಾಗ, ಅವರು ಪೌರತ್ವದ ಪುರಾವೆಯಾಗಿ ಪಾಸ್‌ಪೋರ್ಟ್ ತರುವಂತೆ ಕೇಳಿದ್ದಾರೆ. ಮೂರು ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ನಂತರವೂ ನನ್ನ ಪೌರತ್ವವನ್ನು ಸಾಬೀತುಪಡಿಸಲು ನನಗೆ ಇಷ್ಟೊಂದು ತೊಂದರೆಯಾದರೆ, ದೇಶದ ಸಾಮಾನ್ಯ ಪ್ರಜೆಯ ಗತಿಯೇನು..? ಇದನ್ನೇ ನಾವು ಜೀವನ ಸುಲಭಗೊಳಿಸುವುದು ಎನ್ನಬೇಕೇನೋ ಎಂದು ಮಾಜಿ ರಾಯಭಾರಿ ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ.

ಎಸ್​​ಐಆರ್​ ಹಿನ್ನಲೆ!

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಮೊದಲ ಬಾರಿಗೆ ಕಳೆದ ವರ್ಷ ಜೂನ್‌ನಲ್ಲಿ ಬಿಹಾರದಲ್ಲಿ ಜಾರಿಗೆ ತರಲಾಯಿತು. ಈ ಪರಿಶೀಲನಾ ಅಭಿಯಾನದ ನಂತರ, ಮೃತಪಟ್ಟವರು ಸೇರಿದಂತೆ ಸುಮಾರು 60 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಇದಾದ ಬಳಿಕ, ಪಶ್ಚಿಮ ಬಂಗಾಳದಲ್ಲೂ ವಿಧಾನಸಭೆ ಚುನಾವಣೆಗೂ ಮುನ್ನ ಬರೋಬ್ಬರಿ 90 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ರದ್ದುಪಡಿಸಲಾಯಿತು.
ಎಸ್‌ಐಆರ್ ನಿಯಮಾವಳಿಗಳ ಪ್ರಕಾರ, 2002 ಅಥವಾ 2003 ರ ಚುನಾವಣಾ ಪಟ್ಟಿಯಲ್ಲಿ ಹೆಸರಿಲ್ಲದ ಮತದಾರರು, ಆ ಹಳೆಯ ದಾಖಲೆಗಳಲ್ಲಿ ಹೆಸರಿರುವ ತಮ್ಮ ಕುಟುಂಬದವರೊಂದಿಗೆ ಸಂಬಂಧವನ್ನು ನಿರೂಪಿಸುವ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿತ್ತು. ಆರಂಭದಲ್ಲಿ ಕೇಂದ್ರ ಚುನಾವಣಾ ಆಯೋಗವು ಪರಿಶೀಲನೆಗಾಗಿ 11 ಪ್ರಕಾರದ ದಾಖಲೆಗಳನ್ನು ಸ್ವೀಕಾರಾರ್ಹ ಎಂದು ನಿಗದಿಪಡಿಸಿತ್ತು. ಆದರೆ, ಈ ಪಟ್ಟಿಯಿಂದ ಆಧಾರ್ ಕಾರ್ಡ್ ಅನ್ನು ಹೊರಗಿಡಲಾಗಿತ್ತು.
ದಾಖಲೆಗಳ ಪಟ್ಟಿಯಿಂದ ಆಧಾರ್ ಹೊರಗಿಟ್ಟಿದ್ದಕ್ಕೆ ಎದುರಾದ ತೀವ್ರ ವಿರೋಧದ ನಂತರ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಜೆಗಳ ಸಾಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯುವ ಪ್ರಮುಖ ಆದೇಶ ನೀಡಿತು. ಇದರ ಬೆನ್ನಲ್ಲೇ ಚುನಾವಣಾ ಆಯೋಗವು ತನ್ನ ಮಾನ್ಯ ದಾಖಲೆಗಳ ಪಟ್ಟಿಯನ್ನು ವಿಸ್ತರಿಸಿ, ಆಧಾರ್ ಕಾರ್ಡ್‌ ಅನ್ನು ಸಹ ಪರಿಶೀಲನಾ ಪುರಾವೆಯಾಗಿ ಸೇರ್ಪಡೆಗೊಳಿಸಿತು. ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಮತ್ತು ನವೀಕರಿಸುವ ಸಂಪೂರ್ಣ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆಯಾದರೂ, ಆ ಅಧಿಕಾರವು ಸ್ವೇಚ್ಛಾಚಾರದ್ದಾಗಿರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಆಯೋಗದ ಪ್ರತಿಯೊಂದು ಕ್ರಮವೂ ಪಾರದರ್ಶಕತೆ ಮತ್ತು ನೈಸರ್ಗಿಕ ನ್ಯಾಯದ ತತ್ವಗಳಿಗೆ ಅನುಗುಣವಾಗಿಯೇ ಇರಬೇಕು ಎಂದು ನ್ಯಾಯಾಲಯ ಪ್ರತಿಪಾದಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net